ಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಕ ಮಾಡಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಮುಖ್ಯಮಂತ್ರಿ ಬಳಿ ಇದ್ದು, ಇದನ್ನು ಬೇರೊಬ್ಬರಿಗೆ ನೀಡುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮಾಜಿ ಶಾಸಕ ಶಶೀಲ್ ನಮೋಶಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣ ಗೊಂದಲದ ಗೂಡಾಗಿದ್ದು ಶಿಕ್ಷಕರ ಸಮಸ್ಯೆ ತಕ್ಷಣ ಬಗೆಹರಿಸುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ ಶಿಕ್ಷಕರ ವರ್ಗಾವಣೆ ಪ್ರಾಧ್ಯಾಪಕರ ನೇಮಕಾತಿ, ಅತಿಥಿ ಉಪನ್ಯಾಸಕರ ಸಮಸ್ಯೆ ನಿವಾರಣೆಗಳಾಗದೇ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ ಎಂದು ದೂರಿದ್ದಾರೆ.
ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಎನ್. ಮಹೇಶ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಶಿಕ್ಷಣ ಇಲಾಖೆಯಲ್ಲಿ ಎಲ್ಲವೂ ಗೊಂದಲಮಯವಾಗಿದೆ. ಇಲಾಖೆ ಮುಖ್ಯಮಂತ್ರಿಗಳ ಬಳಿಯೇ ಇದ್ದರೂ ಸಹ ಅನಾಥ ಸ್ಥಿತಿಗೆ ತಲುಪಿದೆ. ಸಿಎಂಗೆ ಬಹಳಷ್ಟು ಖಾತೆಗಳಿರುವುದರಿಂದ ಶಿಕ್ಷಣ ಇಲಾಖೆ ನಿರ್ವಹಿಸಲು ಸಾಧ್ಯವಾಗದೆ ಶಿಕ್ಷಕರ ವರ್ಗಾವಣೆ ಈ ವರ್ಷ ಗೊಂದಲದ ಗೂಡಾಗಿದೆ ಎಂದಿದ್ದಾರೆ.
ಶಿಕ್ಷಣ ಇಲಾಖೆಯನ್ನು ಸಮರ್ಪಕವಾಗಿ ನಿಭಾಯಿಸಬಲ್ಲವರು ಸಮ್ಮಿಶ್ರ ಸರ್ಕಾರದಲ್ಲಿದ್ದರೂ, ಯಾವ ಕಾರಣಕ್ಕಾಗಿ ಮುಖ್ಯಮಂತ್ರಿ ಇದನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೊ ತಿಳಿಯುತ್ತಿಲ್ಲ. ಶೈಕ್ಷಣಿಕ ಅವಧಿ ಪ್ರಾರಂಭವಾಗಿ ಮುಗಿಯುವ ಹಂತ ತಲುಪಿದರೂ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಈ ಇಲಾಖೆ ಸಮರ್ಪಕವಾಗಿ ನಿಭಾಯಿಸಲು ಯಾರು ಇಲ್ಲ ಎನ್ನುವ ಮನೋಭಾವ ನಿಮ್ಮಲ್ಲಿದೆ ಎಂದೆನ್ನಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಗೂ ಸಹ ಇಲ್ಲಿಯವರೆಗೂ ಪ್ರಭಾರಿ ನಿರ್ದೇಶಕರನ್ನೇ ಮುಂದುವರಿಸಲಾಗುತ್ತಿದೆ. ಪೂರ್ಣಾವಧಿ ನಿರ್ದೇಶಕರನ್ನು ನೇಮಿಸಿ ಉನ್ನತ ಶಿಕ್ಷಣ ಇಲಾಖೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದ್ದಾರೆ.