More

    ಮಹಿಳಾ ಸುರಕ್ಷತೆ ಸಂಕಲ್ಪಕ್ಕೆ ನಮೋ

    ಬೆಂಗಳೂರಿನಂತಹ ನಗರಗಳಲ್ಲಿ ಸವಾಲುಗಳು ಸಾಕಷ್ಟಿವೆ. ಇಲ್ಲಿ ರೀಚ್ ಜೊತೆಗೆ ಸ್ಪೀಡ್ ಅನ್ನೂ ನಾವು ಅನುಸರಿಸಬೇಕಾಗುತ್ತದೆ. ಇವು ಇಲ್ಲದಿದ್ದರೆ ಪೊಲೀಸಿಂಗ್ ವಿಫಲವಾಗುತ್ತದೆ. ಇವೆರಡನ್ನೂ ಸಾಧಿಸಬೇಕೆಂದರೆ ತಂತ್ರಜ್ಞಾನ ಹೊರತಾಗಿ ಬೇರೆ ಮಾರ್ಗ ಇಲ್ಲ. ತಂತ್ರಜ್ಞಾನದ ನೆಪದಲ್ಲಿ ಸ್ತ್ರೀ ಸಂಕುಲದ ಮೇಲೆ ನಡೆಯುತ್ತಿದ್ದ ತಾಂತ್ರಿಕ ದೌರ್ಜನ್ಯಕ್ಕೂ ಈಗ ತೆರೆಬೀಳುತ್ತಿದೆ.
    ಮಹಿಳಾ ಸುರಕ್ಷತೆ ಸಂಕಲ್ಪಕ್ಕೆ ನಮೋ

    ನಗರವೊಂದು ಸುರಕ್ಷಿತ ಎನಿಸಿಕೊಳ್ಳಬೇಕೆಂದರೆ, ಅಲ್ಲಿನ ಮಹಿಳೆಯರು, ಮಕ್ಕಳು ಸೇರಿದಂತೆ ನಗರವಾಸಿಗಳೆಲ್ಲರಿಗೂ ಸುಭದ್ರತೆಯ ಭಾವ ಮೂಡಬೇಕು. ಸ್ತ್ರೀ ದೌರ್ಜನ್ಯದಿಂದ ರಕ್ಷಣೆ, ಸಾರ್ವಜನಿಕರ ಸುರಕ್ಷತೆ, ಮಕ್ಕಳ ಸಂರಕ್ಷಣೆಗೆ ಅಗತ್ಯವಾದಂಥ ಪೊಲೀಸ್ ವ್ಯವಸ್ಥೆ, ವೈದ್ಯಕೀಯ ಹಾಗೂ ಕಾನೂನು ನೆರವು ಲಭ್ಯವಾಗಬೇಕು. ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಇದನ್ನು ಸಾಧಿಸುವ ನಿಟ್ಟಿನಲ್ಲಿ ರೂಪುಗೊಂಡಿರುವುದೇ ‘ಸೇಫ್ ಸಿಟಿ’ ಯೋಜನೆ.

    ಸೇಫ್ ಸಿಟಿ ಪ್ರಾಜೆಕ್ಟ್ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು. ಭವಿಷ್ಯದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನೂ ಸಮರ್ಥವಾಗಿ ಎದುರಿಸಲು ಸಜ್ಜುಗೊಳಿಸುವಂಥ ಯೋಜನೆಯಿದು. 60:40 ಅನುಪಾತದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನಿರ್ಭಯಾ ನಿಧಿಯಿಂದ ಒಟ್ಟು 667 ಕೋಟಿ ರೂ. ಒದಗಿಸುವ ಮೂಲಕ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿವೆ. ಸೇಫ್ ಸಿಟಿ ಯೋಜನೆ ಜಾರಿಯಾಗುತ್ತಿರುವ ದೇಶದ 8 ನಗರಗಳಲ್ಲಿ ಬೆಂಗಳೂರು ಕೂಡ ಒಂದು.

    ಈ ಯೋಜನೆಯ ಭಾಗವಾಗಿ ಬೆಂಗಳೂರಿನ ಆಯಕಟ್ಟಿನ ಸ್ಥಳಗಳನ್ನು ಗುರುತಿಸಿ, 7,500ರಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಅವುಗಳ ನಿರ್ವಹಣೆಗೆಂದೇ ಸುಸಜ್ಜಿತ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಪ್ರಾರಂಭಿಕ ಹಂತದಲ್ಲಿ ನಗರಾದಾದ್ಯಂತ 4,100 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಬೆಂಗಳೂರು ನಗರದ ಎಲ್ಲಾ ಕಾನೂನು-ಸುವ್ಯವಸ್ಥೆ ಡಿಸಿಪಿ ಕಚೇರಿ ಮತ್ತು 96 ಪೊಲೀಸ್ ಠಾಣೆಗಳಲ್ಲಿ ಕ್ಯಾಮರಾಗಳ ನೇರ ವೀಕ್ಷಣೆ ಸಾಧ್ಯ. ಇಷ್ಟೇ ಅಲ್ಲದೆ, ನಗರದ ಆಯ್ದ 30 ಸ್ಥಳಗಳಲ್ಲಿ ಸೇಫ್ಟಿ ಐಲ್ಯಾಂಡ್​ಗಳನ್ನು ಸ್ಥಾಪಿಸಲಾಗಿದೆ. ಸಾಮಾನ್ಯ ಕಾನೂನು ಸುವ್ಯವಸ್ಥೆಯ ಮೇಲೆ ನಿಗಾ ಇಡಲು 8 ಡ್ರೋನ್​ಗಳನ್ನೂ ನಿಯೋಜಿಸಲಾಗಿದೆ. 400 ಬಾಡಿವೋರ್ನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 6 ಮೊಬೈಲ್ ಫೊರೆನ್ಸಿಕ್ ವ್ಯಾನ್, ರಾಣಿ ಚೆನ್ನಮ್ಮ ಪಡೆಯನ್ನೂ ರಚಿಸಲಾಗಿದ್ದು, ಇವೆಲ್ಲ ಇಲ್ಲದಿದ್ದರೆ ಬೆಂಗಳೂರಿನಂತಹ ದೊಡ್ಡ ನಗರ ಸುರಕ್ಷಿತವಾಗಿರಲು ಸಾಧ್ಯವಿಲ್ಲ.

    ಪೊಲೀಸರ ಸಂಖ್ಯೆ ಎಷ್ಟೇ ಇದ್ದರೂ, ಎಷ್ಟೇ ತಂಡಗಳನ್ನು ರಚಿಸಿದರೂ ಅವರೆಲ್ಲ ಸಂವೇದನಾಶೀಲರಾಗಿ ಯೋಚಿಸುವುದೂ ಮುಖ್ಯವಾಗುತ್ತದೆ. ಹೀಗಾಗಿ ಸೂಕ್ತ ತರಬೇತಿ ನೀಡುತ್ತಿರುವುದು ಗಮನಾರ್ಹ. ನಗರ ಪೊಲೀಸರ ಕಾರ್ಯವೈಖರಿಯಲ್ಲಿ ಆಮೂಲಾಗ್ರ ಬದಲಾವಣೆ ಮತ್ತು ಸುಧಾರಣೆ ತರಲಾಗಿರುವುದು ಸಮಾಧಾನಕರ ವಿಷಯ. ನಾಲ್ಕುಚಕ್ರಗಳ ವಾಹನಗಳು, ದ್ವಿಚಕ್ರ ವಾಹನಗಳನ್ನು ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್​ನೊಂದಿಗೆ ಜೋಡಿಸುವ ಕೆಲಸ ಪೂರ್ಣಗೊಂಡಿದೆ. ಅನಾಲಿಸಿಸ್ ಮಾಡುವ ಸಾಫ್ಟ್​ವೇರನ್ನೂ ಇದಕ್ಕೆ ಸಂರ್ಪಸಲಾಗಿದೆ. ಇದರಿಂದ ಕಳ್ಳತನವಾದ ವಾಹನಗಳ ಪತ್ತೆ, ಕಳ್ಳರ ಪತ್ತೆ ಸುಲಭ. ಜೊತೆಗೆ, 112 (ಇಆರ್​ಎಸ್​ಎಸ್) ಸಹಾಯವಾಣಿಯ ಮೂಲಕ ಹೊಯ್ಸಳ ಗಸ್ತುವಾಹನಗಳನ್ನು ನಿಯೋಜಿಸಿ, ಸಾರ್ವಜನಿಕರ ಕರೆಗಳಿಗೆ ತುರ್ತಾಗಿ ಸ್ಪಂದಿಸಲಾಗುತ್ತಿದೆ ಎಂಬುದು ಜನರಿಗೆ ನೆಮ್ಮದಿ ತರುವ ಸಂಗತಿ.

    ಪ್ರಧಾನಿ ಮೋದಿಯವರ ಕನಸನ್ನು ಸಾಕಾರಗೊಳಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಉತ್ತರಪ್ರದೇಶದ ಲಕ್ನೋದಲ್ಲಿ ಪ್ರಧಾನಿ ಮೋದಿಯವರು ಇತ್ತೀಚೆಗೆ ಪೊಲೀಸ್ ಟೆಕ್ನಾಲಜಿ ಮಿಷನ್ ಲೋಕಾರ್ಪಣೆಗೊಳಿಸಿದ್ದಾರೆ. ಮುಂಬರುವ 20 ವರ್ಷಗಳಲ್ಲಿ ಎದುರಾಗಬಹುದಾದ ಎಲ್ಲ ಬಗೆಯ ಸವಾಲುಗಳನ್ನೂ ಅರ್ಥಮಾಡಿಕೊಂಡು ಈಗಲೇ ಪೊಲೀಸರಿಗೆ ಅದನ್ನು ಎದುರಿಸುವಂಥ ತರಬೇತಿ ನೀಡುವುದೇ ಈ ಮಿಷನ್​ನ ಧ್ಯೇಯ. ಇದಕ್ಕಾಗಿ 20 ವರ್ಷಗಳ ಮಾರ್ಗಸೂಚಿ ತಯಾರಿಸಲಾಗಿದೆ, ಪ್ರತಿ ವರ್ಷ ಅದರ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಈ ಇಡೀ ವ್ಯವಸ್ಥೆಯ ಆಧಾರದಲ್ಲಿ ಪೊಲೀಸ್ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಂಡು, ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುವುದು, ಅಪರಾಧ ತಡೆಗೆ ಇಂಥ ತಂತ್ರಜ್ಞಾನಗಳ ಬಳಕೆ, ನಾಗರಿಕರಿಗೆ ನ್ಯಾಯ ಒದಗಿಸುವ ಮತ್ತು ಅಪರಾಧಿಗಳನ್ನು ಶಿಕ್ಷಿಸುವ ಕೆಲಸವನ್ನು ಈ ಮಿಷನ್ ಮಾಡುತ್ತಿದೆ ಎಂಬ ವಿವರಗಳು ಲಭ್ಯವಾಗಿವೆ. ಈ ಯೋಜನೆಯಿಂದಾಗಿ, ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ಹೊತ್ತಿಗೆ ದೇಶದ ಪೊಲೀಸ್ ವ್ಯವಸ್ಥೆಯು ವಿಶ್ವದ ಅತಿ ಶ್ರೇಷ್ಠ ಪೊಲೀಸ್ ವ್ಯವಸ್ಥೆಯಾಗಿ ರೂಪುಗೊಳ್ಳಲಿದೆ ಎನ್ನುವ ವಿಶ್ವಾಸವನ್ನು ಅನೇಕ ತಜ್ಞರು ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನಂತಹ ನಗರಗಳಲ್ಲಿ ಸವಾಲುಗಳು ಸಾಕಷ್ಟಿವೆ. ಇಲ್ಲಿ ರೀಚ್ ಜೊತೆಗೆ ಸ್ಪೀಡ್ ಅನ್ನೂ ಅನುಸರಿಸಬೇಕಾಗುತ್ತದೆ. ಇವು ಇಲ್ಲದಿದ್ದರೆ ಪೊಲೀಸಿಂಗ್ ವಿಫಲವಾಗುತ್ತದೆ. ಇವೆರಡನ್ನೂ ಸಾಧಿಸಬೇಕೆಂದರೆ ತಂತ್ರಜ್ಞಾನ ಹೊರತಾಗಿ ಬೇರೆ ಯಾವ ಮಾರ್ಗವೂ ಇಲ್ಲ. ಪ್ರಸ್ತುತ ನಾವು ಅನೇಕ ಪ್ರಕಾರಗಳ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಅದು ಗ್ರಾಮೀಣವೂ ಆಗಿರಬಹುದು, ನಗರ, ಪಟ್ಟಣ, ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸವಾಲುಗಳೂ ಆಗಿರಬಹುದು. ನಮ್ಮ ಈ ನಗರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸವಾಲು ಎದುರಾಗುವ ಸಾಧ್ಯತೆಯೇನಿಲ್ಲ ಎಂದು ಕೆಲವರು ಯೋಚಿಸಬಹುದು. ಆದರೆ, ಈ ಯೋಚನೆ ತಪ್ಪು. ಈಗ ಪ್ರತ್ಯೇಕತಾವಾದ, ಉಗ್ರವಾದ ಇವೆಲ್ಲ ಆನ್​ಲೈನ್​ನಲ್ಲೇ ನಡೆಯುತ್ತಿವೆ, ಅವುಗಳನ್ನು ಬೇರುಮಟ್ಟದಿಂದ ಕಿತ್ತುಹಾಕಬೇಕಿದೆ. ಇದನ್ನು ಸಾಧಿಸಬೇಕೆಂದರೆ ಮುನ್ನೆಚ್ಚರಿಕಾ ಮತ್ತು ಸಕ್ರಿಯ ದೃಷ್ಟಿಕೋನ ಬೇಕು. ಜೊತೆಗೆ ತಂತ್ರಜ್ಞಾನದ ದೃಷ್ಟಿಯಿಂದಲೂ ಮುಂದಡಿಯಿಡಬೇಕು.

    ಮೋದಿ ಸರ್ಕಾರ ಇದಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿ ಮಾಡಿರುವುದು ನಮ್ಮೆದುರಿಗಿದೆ. ಸೈಬರ್ ಕ್ರೈಂಗಳ ರಿಯಲ್ ಟೈಂ ರಿಪೋರ್ಟಿಂಗ್, ಫೊರೆನ್ಸಿಕ್ ಪ್ರಯೋಗಶಾಲೆಗಳ ರಾಷ್ಟ್ರೀಯ ಜಾಲ, ಹ್ಯಾಕಥಾನ್ ಮೂಲಕ ಎಲ್ಲ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು, ಸೈಬರ್ ಜಾಗತಿಯನ್ನು ಪ್ರತಿಯೊಬ್ಬ ಯುವಜನತೆಗೂ ತಲುಪಿಸುವುದು ಇತ್ಯಾದಿ. ಆಂತರಿಕ ಸುರಕ್ಷತೆಯ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಇಷ್ಟೊಂದು ಕಾರ್ಯಕ್ರಮಗಳನ್ನು ಯಾವುದೇ ಸರ್ಕಾರ ಜಾರಿಮಾಡಿದ್ದನ್ನು ನಾನು ನೋಡಿಲ್ಲ.

    ಮೋದಿಜೀ ಪ್ರಧಾನಿ ಹುದ್ದೆಗೆ ಏರಿದ ಬಳಿಕ ದೇಶದಲ್ಲಿ ನೂರಾರು ಸಕಾರಾತ್ಮಕ ಬದಲಾವಣೆಗಳು ಆಗಿವೆ. ಆ ಪೈಕಿ ಒಂದು, ಸರ್ಕಾರ ಜಾರಿಗೆ ತಂದಿರುವ ಸಿಸಿಟಿಎನ್​ಎಸ್ ಜಾಲ. ಇದು ದೇಶದ ಪೊಲೀಸ್ ಠಾಣೆಗಳನ್ನು ಆನ್​ಲೈನ್ ಮೂಲಕ ಸಂಪರ್ಕ ಕಲ್ಪಿಸುತ್ತದೆ. ದೇಶದ ಶೇ.99.9ರಷ್ಟು ಪೊಲೀಸ್ ಠಾಣೆಗಳು ಈಗ ಆನ್​ಲೈನ್ ಆಗಿವೆ. ಉಳಿದ ಶೇ.0.1 ನಷ್ಟು ಏನಿವೆಯೋ, ಅವು ಕನೆಕ್ಟಿವಿಟಿ ಇರದ ಠಾಣೆಗಳು. ಸಿಸಿಟಿಎನ್​ಎಸ್ ದತ್ತಾಂಶದಲ್ಲಿ ಈಗ 30 ಕೋಟಿ ಪೊಲೀಸ್ ದಾಖಲೆಗಳು ಆನ್​ಲೈನ್​ನಲ್ಲಿ ಅಪ್​ಲೋಡ್ ಆಗಿವೆೆ. ಇದನ್ನು ಬಳಸಿಕೊಂಡು ನಾಗರಿಕ ಸೇವೆಗಳನ್ನೂ ನೀಡಲಾಗುತ್ತಿದೆ. ಇದರಡಿ ಬಂದಿರುವ ಕೋಟಿಗಟ್ಟಲೆ ದೂರುಗಳಿಗೆ ಪರಿಹಾರ ಒದಗಿಸಲಾಗಿದೆ.

    ಇದರಿಂದ ಏನು ಲಾಭ ಎಂದು ಯೋಚಿಸುತ್ತಿದ್ದೀರಾ? ನಾಗರಿಕ ಸೇವೆಯ ದೃಷ್ಟಿಯಲ್ಲಿ ಒಂದು ಉದಾಹರಣೆ ನೀಡುವುದಿದ್ದರೆ, ಒಬ್ಬ ವ್ಯಕ್ತಿ ಹಿಂದೆ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಿದರೆ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೃಢೀಕರಣ ಪ್ರಕ್ರಿಯೆ ನಡೆಯುತ್ತಿತ್ತು. ಆತನ ವಿರುದ್ಧ ಆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ಸಲ್ಲಿಕೆಯಾಗದೇ ಇದ್ದರೆ, ಆತನಿಗೆ ಸುಲಭವಾಗಿ ಪಾಸ್​ಪೋರ್ಟ್ ನೀಡಲಾಗುತ್ತಿತ್ತು. ಇದರಿಂದ, ಕ್ರಿಮಿನಲ್​ಗಳು ಕೂಡ ಸರಾಗವಾಗಿ ಪಾಸ್​ಪೋರ್ಸ್ ಪಡೆಯಬಹುದಿತ್ತು. ಆದರೆ, ಈಗ ಸಿಸಿಟಿಎನ್​ಎಸ್ ಜಾಲದಿಂದಾಗಿ, ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಿದ ವ್ಯಕ್ತಿಯ ವಿರುದ್ಧ ದೇಶದ ಯಾವ ಮೂಲೆಯಲ್ಲಿ ಕೇಸು ದಾಖಲಾಗಿದ್ದರೂ ಕ್ಷಣಮಾತ್ರದಲ್ಲಿ ಮಾಹಿತಿ ಸಿಗಲಿದೆ. ಕೇವಲ 3 ನಿಮಿಷಗಳಲ್ಲಿ ಆತನ ಇಡೀ ಜಾತಕ ಬಯಲಾಗಲಿದೆ.

    ಇನ್ನು, ನೀವು ಕಾರ್ ಕೊಳ್ಳಲು ಸೆಕೆಂಡ್ ಹ್ಯಾಂಡ್ ವಾಹನ ಡೀಲರ್ ಬಳಿ ಹೋಗುತ್ತೀರಿ ಎಂದಿಟ್ಟುಕೊಳ್ಳಿ. ಆತ ನಿಮಗೆ ಕಳ್ಳತನವಾದ ಕಾರನ್ನು ಸಾಗಹಾಕುತ್ತಾನೆ. ಈ ಸತ್ಯ ಅರಿಯದೇ ನೀವು ಖುಷಿಯಿಂದ ಕಾರನ್ನು ಮನೆಗೆ ಒಯ್ಯುತ್ತೀರಿ. ಒಂದು ದಿನ ಏಕಾಏಕಿ ಪೊಲೀಸರು ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಇಂಥ ಮುಜುಗರದ ಸ್ಥಿತಿಯನ್ನು ಈಗ ಎದುರಿಸಬೇಕಾಗಿಲ್ಲ. ನೀವು ಖರೀದಿಸಬಯಸುವ ವಾಹನದ ಚಾಸಿಸ್ ಸಂಖ್ಯೆಯನ್ನು ಆನ್​ಲೈನ್​ನಲ್ಲಿ ನಮೂದಿಸಿದರೆ ಆ ಕಾರು ಕಳ್ಳತನದ್ದೋ, ಇಲ್ಲವೋ ಎಂಬುದು ಎರಡೇ ನಿಮಿಷದಲ್ಲಿ ಗೊತ್ತಾಗುತ್ತದೆ. ಈ ತಂತ್ರಜ್ಞಾನದಿಂದಾಗಿ ನಾಗರಿಕರಿಗೂ ಅನುಕೂಲವಾಗಿದೆ, ಪೊಲೀಸರ ಹೊರೆಯೂ ತಗ್ಗಿದೆ.

    ದೇಶದಲ್ಲಿ ಎಷ್ಟು ಅಪರಾಧಿಗಳ ಬೆರಳಚ್ಚುಗಳನ್ನು ಪಡೆಯಲಾಗುತ್ತದೆಯೋ, ಅದೆಲ್ಲವನ್ನೂ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್​ಸಿಆರ್​ಬಿ)ದಲ್ಲಿ ಸಂಗ್ರಹಿಸಲಾಗುತ್ತಿರುವುದು ಮತ್ತೊಂದು ವಿಶೇಷ. ಈವರೆಗೆ ಇಂಥ 1 ಕೋಟಿಗೂ ಅಧಿಕ ಬೆರಳಚ್ಚುಗಳ ಸಂಗ್ರಹ ಪೂರ್ಣಗೊಂಡಿದೆ ಎಂಬ ಮಾಹಿತಿ ಇದೆ. ಒಟ್ಟಾರೆ 3 ಸಾವಿರ ಕೋಟಿಗೂ ಅಧಿಕ ಬೆರಳಚ್ಚುಗಳನ್ನು ಇದರಲ್ಲಿ ಸಂಗ್ರಹಿಸಬಹುದಂತೆ. ಉದಾಹರಣೆಗೆ- ಬೆಂಗಳೂರಿನಲ್ಲಿ ಯಾರದ್ದೋ ಮನೆಯಲ್ಲಿ ಕಳ್ಳತನ ಆಯಿತು ಎಂದಿಟ್ಟುಕೊಳ್ಳಿ. ಈವರೆಗೆ ಇದ್ದ ಪ್ರಕ್ರಿಯೆ ಹೇಗೆಂದರೆ- ಎಫ್​ಎಸ್​ಎಲ್​ನವರು ಬಂದು ಫಿಂಗರ್ ಪ್ರಿಂಟ್ ಪಡೆಯಬೇಕು, ಬೆರಳಚ್ಚು ಆಧಾರದಲ್ಲಿ ವ್ಯಕ್ತಿಯನ್ನು ಹಿಡಿಯಬೇಕು, ನಂತರ ಆ ಬೆರಳಚ್ಚು ಆತನಿಗೆ ಹೊಂದಾಣಿಕೆಯಾಗುತ್ತದೋ ಇಲ್ಲವೋ ಎಂಬುದನ್ನು ಪರೀಕ್ಷಿಸಬೇಕಿತ್ತು. ಆದರೆ, ಈಗ ಪ್ರತಿಯೊಬ್ಬ ಕ್ರಿಮಿನಲ್​ನ ಫಿಂಗರ್​ಪ್ರಿಂಟ್ ಕೂಡ ಎನ್​ಸಿಆರ್​ಬಿ ದತ್ತಾಂಶದಲ್ಲಿ ಸಂಗ್ರಹವಾಗುವ ಕಾರಣ, ಕೇವಲ 30 ಸೆಕೆಂಡುಗಳಲ್ಲಿ ಅದು ಯಾರ ಬೆರಳಚ್ಚು ಎಂಬುದನ್ನು ಪತ್ತೆಹಚ್ಚಲು ಸಾಧ್ಯ. ಮಹಿಳೆಯರ ರಕ್ಷಣೆಗೆ ಮೋದಿ ಸರ್ಕಾರ ಆದ್ಯತೆ ನೀಡಿರುವುದು ಸ್ಪಷ್ಟಗೋಚರ. ಮಹಿಳೆಯರ ವಿರುದ್ಧದ ಅಪರಾಧದ ತಡೆಗೆ ಇನ್ವೆಸ್ಟಿಗೇಷನ್ ಟ್ರಾ್ಯಕಿಂಗ್ ಸಿಸ್ಟಂ ಫಾರ್ ಸೆಕ್ಷುವಲ್ ಒಫೆನ್ಸ್ ಎಂಬ ಪ್ಲಾಟ್​ಫಾರಂ ಸ್ಥಾಪಿಸಲಾಗಿದೆ. 1930 ಎಂಬ ಸೈಬರ್ ವಂಚನೆ ಸಹಾಯವಾಣಿ ಆರಂಭಿಸಲಾಗಿದ್ದು, ಅದಕ್ಕೆ ಕರೆ ಮಾಡಿದ 30 ಸೆಕೆಂಡುಗಳ ಅಂತರದಲ್ಲಿ ಮೊಬೈಲ್ ಸೀಝå್ ಆಗುತ್ತದೆ, ಕಾರ್ಡ್ ಕೂಡ ಸ್ತಂಭನವಾಗುತ್ತದೆ. ಖಾತೆಯಿಂದ ಹಣ ಕದಿಯಲು ವಂಚಕರಿಗೆ ಸಾಧ್ಯವಾಗುವುದಿಲ್ಲ. ಇನ್ನು, ದೌರ್ಜನ್ಯ ನಡೆದರೆ ಪ್ಯಾನಿಕ್ ಬಟನ್ ಒತ್ತಿದರೆ ಕೂಡಲೇ ಕಂಟ್ರೋಲ್ ರೂಂಗೆ ಸಂಪರ್ಕ ದೊರೆಯುವ ವ್ಯವಸ್ಥೆ ಇದೆ. ಇವೆಲ್ಲ ಕ್ರಮಗಳಿಂದ ಜನರಲ್ಲಿ ಸುರಕ್ಷತಾ ಭಾವನೆ ಮೂಡಲು ಅನುವಾಗುತ್ತದೆ. ಒಟ್ಟಿನಲ್ಲಿ ದೇಶವಾಸಿಗಳ ಸುರಕ್ಷತೆಯ ಸಂಕಲ್ಪವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸದಾ ಒಂದು ಹೆಜ್ಜೆ ಮುಂದಿರುವುದು ಶ್ಲಾಘನೀಯ.

    (ಲೇಖಕರು ಖ್ಯಾತ ನೃತ್ಯಗಾರ್ತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts