ಕೆಪಿಎಲ್​ನಲ್ಲಿ 8.30 ಲಕ್ಷ ರೂ.ಗೆ ಅಭಿಮನ್ಯು ಮಿಥುನ್​ ಹರಾಜು; ಉತ್ತಪ್ಪಗೆ 7.90 ಲಕ್ಷ

ಬೆಂಗಳೂರು: ಕೆಪಿಎಲ್​-2018 ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ವೇಗಿ ಅಭಿಮನ್ಯು ಮಿಥುನ್​ಗೆ ಭರ್ಜರಿ ಬೇಡಿಕೆ ವ್ಯಕ್ತವಾಗಿದ್ದು, 8.30 ಲಕ್ಷ ರೂಪಾಯಿಗಳಿಗೆ ಹರಾಜಾಗಿದ್ದಾರೆ. ಇನ್ನು ಬಲಗೈ ಬ್ಯಾಟ್ಸ್​ಮನ್​ ರಾಬಿನ್​ ಉತ್ತಪ್ಪ 7.90 ಲಕ್ಷ ರೂಪಾಯಿಗಳಿಗೆ ಬಿಕರಿಯಾಗಿದ್ದಾರೆ.

ಅಭಿಮನ್ಯು ಮಿಥುನ್ ಶಿವಮೊಗ್ಗ ಲಯನ್ಸ್ ಪಾಲಾದರೆ, ಬೆಂಗಳೂರು ಬ್ಲಾಸ್ಟರ್ಸ್​ ತಂಡ ಉತ್ತಪ್ಪ ಅವರನ್ನು ಖರೀದಿಸಿತು.

ಇನ್ನು ಅಮಿತ್​ ವರ್ಮ 7.60 ಲಕ್ಷಕ್ಕೆ ಮೈಸೂರು ವಾರಿಯರ್ಸ್​ಗೆ, ಪ್ರದೀಪ್​ ಟಿ 6.50 ಲಕ್ಷ ರೂಗಳೊಂದಿಗೆ ಬಳ್ಳಾರಿ ತಂಡಕ್ಕೆ, ದಿಕ್ಷಾನ್ಶೂ ನೇಗಿ 4.10 ಲಕ್ಷಕ್ಕೆ ಬೆಳಗಾವಿ ತಂಡಕ್ಕೆ, ಪ್ರತೀಕ ಜೈನ್​ 4.30 ಲಕ್ಷಗಳೊಂದಿಗೆ ಮೈಸೂರು ವಾರಿಯರ್ಸ್​ ತಂಡಕ್ಕೆ, ಕೆ.ಪಿ. ಅಪ್ಪಣ್ಣ 3.85 ಲಕ್ಷಗಳೊಂದಿಗೆ ಬಿಜಾಪುರ ಬುಲ್ಸ್​ಗೆ ಮಾರಾಟವಾದರು.

ಕರ್ನಾಟಕ ಪ್ರೀಮಿಯರ್​ ಲೀಗ್​ನ 7ನೇ ಆವೃತ್ತಿ ಇದಾಗಿದ್ದು, ಇದರ ಹರಾಜು ಪ್ರಕ್ರಿಯೆ ಇಂದು ಬೆಳಗ್ಗೆ ಆರಂಭವಾಯಿತು. ಟೂರ್ನಿಯಲ್ಲಿ ಬೆಳಗಾವಿ ಪ್ಯಾಂಥರ್ಸ್​, ಬಿಜಾಪುರ ಬುಲ್ಸ್, ಬಳ್ಳಾರಿ ಟಸ್ಕರ್ಸ್​, ಬೆಂಗಳೂರು ಬ್ಲಾಸ್ಟರ್ಸ್​, ಹುಬ್ಬಳ್ಳಿ ಟೈಗರ್ಸ್​, ಮೈಸೂರು ವಾರಿಯರ್ಸ್​, ಶಿವಮೊಗ್ಗ ಲಯನ್ಸ್​ ಫ್ರಾಂಚೈಸಿ ಹೊಂದಿವೆ.

ಹರಾಜಿನ ಎ ಪೂಲ್​ನಲ್ಲಿ 20 ಆಟಗಾರರು, ಬಿ ಪೂಲ್​ನಲ್ಲಿ 224 ಆಟಗಾರರು ಹರಾಜಿಗೆ ಲಭ್ಯರಿದ್ದಾರೆ.