More

    ಸಂಕಟ ಜೊತೆಯಾಯಿತೆಂದು ಅಳುತ್ತ ಕೂರಬಾರದು…

    ಸಂಕಟ ಜೊತೆಯಾಯಿತೆಂದು ಅಳುತ್ತ ಕೂರಬಾರದು...ನನಗೆ ಕೆಲಸ ಸಿಗುತ್ತದೆ..

    ಅಂಥದೊಂದು ನಂಬಿಕೆ ಸಂದರ್ಶನಕ್ಕೆ ಹೋಗುವ ಎಲ್ಲರಿಗೂ ಇರುತ್ತದೆ. ಯಾಕೆಂದರೆ, ಅವರ ಬಳಿ ಆ ನೌಕರಿ ಪಡೆಯಲು ಅಗತ್ಯವಿರುವ ಸರ್ಟಿಫಿಕೇಟ್​ಗಳಿರುತ್ತವೆ. ಶಿಫಾರಸು ಪತ್ರವಿರುತ್ತದೆ, ಅನುಭವ ಜತೆಗಿರುತ್ತದೆ. ನೌಕರಿ ಸಿಗುವುದೇ ಗ್ಯಾರಂಟಿ ಎನ್ನುವುದಾದರೆ ಒಂದಿಷ್ಟು ಲಂಚ ಕೊಡಲು ಅವರ ಮನಸ್ಸೂ ಒಪ್ಪಿಕೊಂಡಿರುತ್ತದೆ. ಅದಕ್ಕಿಂತ ಮುಖ್ಯವಾಗಿ ಒಂದು ಹೊಸ ಕೆಲಸಕ್ಕೆ ಸೇರಲೇಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಅವರಿಗೆ ಇದ್ದೇ ಇರುತ್ತದೆ. ಆದರೆ, ಏನೆಲ್ಲ ಪ್ರಯತ್ನ ಮಾಡಿದರೂ ನೌಕರಿ ಸಿಗುವುದಿಲ್ಲ!

    ಇದೇ ಮಾತನ್ನು ಒಂದು ಹೊಸ ಉದ್ಯಮ ಆರಂಭಿಸುವವರಿಗೂ ಹೇಳಬಹುದು. ಆ ಉದ್ದಿಮೆ ಚಿಕ್ಕದಿರಬಹುದು, ದೊಡ್ಡದೂ ಆಗಿರಬಹುದು. ಈ ಎರಡೂ ಸಂದರ್ಭದಲ್ಲಿ ಅವರು ಸಾಲ ಮಾಡಿರುತ್ತಾರೆ. ಹತ್ತು ಮಂದಿಯ ಸಲಹೆ ಪಡೆದಿರುತ್ತಾರೆ. ಜ್ಯೋತಿಷಿಗಳ ಬಳಿ ಶಾಸ್ತ್ರ ಕೇಳಿರುತ್ತಾರೆ. ಲಕ್ಷ್ಮೀದೇವಿಯ ಪೂಜೆ ನಡೆಸಿರುತ್ತಾರೆ. ಸಂಕಟ ಬರದಿರಲಿ ಎಂದು ಯಂತ್ರ ಹೊಡೆಸಿರುತ್ತಾರೆ. ಹರಕೆ ಕಟ್ಟಿಕೊಂಡಿರುತ್ತಾರೆ. ಅದಕ್ಕಿಂತ ಮುಖ್ಯವಾಗಿ-ತಮ್ಮ ಗೆಳೆಯರು, ಬಂಧುಗಳು, ಆಪ್ತೇಷ್ಟರ ಸಲಹೆ ಕೇಳಿರುತ್ತಾರೆ. ಎದುರಾಳಿಗಳ ತಾಕತ್ತು ತಿಳಿದಿರುತ್ತಾರೆ. ಏನೇ ಆದರೂ ಸರಿ, ಈ ವ್ಯವಹಾರದಲ್ಲಿ ಸೋಲಬಾರದು ಮತ್ತು ಸೋಲಲೇಬಾರದು ಎಂದುಕೊಂಡಿರುತ್ತಾರೆ, ನಿಜ. ಆದರೆ ಬಹುದೊಡ್ಡ ನಿರೀಕ್ಷೆಯ ವ್ಯವಹಾರ ಕೈಕೊಡುತ್ತದೆ. ಸಂಕಟ ಜತೆಯಾಗುತ್ತದೆ.

    ಇಂಥ ಸಂದರ್ಭದಲ್ಲಿ ಹೆಚ್ಚಿನವರು ಡಿಪ್ರೆಶನ್​ಗೆ ಒಳಗಾಗುತ್ತಾರೆ. ಗೋಳೋ ಎಂದು ಅಳುತ್ತಾರೆ. ಯಾರನ್ನೋ ದೂಷಿಸುತ್ತಾರೆ. ಹಣೆಬರಹ ಎಂದು ಕೈಯಾಡಿಸುತ್ತಾರೆ. ಗ್ರಹಗತಿ ಚೆನ್ನಾಗಿರಲಿಲ್ಲವೇನೋ ಎಂದು ನಿಡುಸುಯ್ಯುತ್ತಾರೆ. ಹಿಂದೆಯೇ ಯಾರನ್ನೋ ಅನುಮಾನಿಸುತ್ತಾರೆ. ಮತ್ತೆ ಜ್ಯೋತಿಷದ ಮೊರೆ ಹೋಗುತ್ತಾರೆ. ಕಡೆಗೆ, ಒಂದು ಕೆಲಸ ಪಡೆಯಲು; ಒಂದು ವ್ಯಾಪಾರ ಆರಂಭಿಸಲು ಅದೆಷ್ಟು ಕಷ್ಟಪಟ್ಟೆನಲ್ಲ ಎಂದು ಆಪ್ತರೊಂದಿಗೆ ಹೇಳಿಕೊಂಡು ಬಿಕ್ಕಳಿಸಿ ಅಳುತ್ತಾರೆ.

    ಇಂಥವರನ್ನು ನೀವು ಸೆಂಟಿಮೆಂಟಲ್ ಫೂಲ್ಸ್ ಎನ್ನಬಹುದು. ಸಂಕಟ ಕೈಹಿಡಿದಾಗ ಎಲ್ರೂ ಮಾಡುವುದೇ ಹೀಗೆ ಅನ್ನಬಹುದು. ಹಾಗೆ ಅಳುವುದು ಹೇಡಿಗಳ ಲಕ್ಷಣ ಎಂದು ತೀರ್ಪು ಕೊಡಬಹುದು. ಅಥವಾ ‘ಕರ್ಮಣ್ಯೇವಾಧಿಕಾರಸ್ತೆ’ ಎಂದು ವೇದಾಂತದ ಮಾತಾಡಬಹುದು. ಹಾಗೆ ಹೇಳುವುದು ಒಂದು ರೀತಿಯಲ್ಲಿ ಸರಿಯೂ ಇರಬಹುದು. ಆದರೆ, ಇಂಥ ತೀರ್ಪಗಳಿಂದ ನೊಂದವರ ಸಂಕಟ ಪರಿಹಾರವಾಗುವುದಿಲ್ಲ. ಅವರ ನೋವು ಕಡಿಮೆಯಾಗುವುದಿಲ್ಲ. ಸವಾಲು ಎದುರಿಸುವ ಚೈತನ್ಯವೇ ಅವರಿಗೆ ಬರುವುದಿಲ್ಲ. ಹಾಗಾದರೆ ಏನು ಮಾಡಬೇಕು ಅಂದಿರಾ?

    ಕೈ ಜಗ್ಗಿದ ಸೋಲನ್ನು ಸಾಕ್ಸು ಕಳಚಿದಷ್ಟೇ ಬೇಗ ಮರೆತು ಬಿಡಬೇಕು. ಕೊಡುವವನಿಗೆ ಇರೋದು ಒಂದೇ ನೌಕರಿ. ಆದರೆ ಕೇಳುವವನಿಗೆ ಸಾವಿರ! ಈ ಕೆಲಸ ಸಿಗದಿದ್ದರೆ ಕತ್ತೆಬಾಲ. ನನ್ನ ಸಾಮರ್ಥ್ಯಕ್ಕೆ ಇದರಪ್ಪನಂಥ ಕೆಲಸ ಸಿಗಬೇಕು ಮತ್ತು ಸಿಕ್ಕೇ ಸಿಗುತ್ತೆ ಎಂಬ ನಿರ್ಧಾರದೊಂದಿಗೆ ಹೆಜ್ಜೆ ಮುಂದಿಡಬೇಕು. ವ್ಯಾಪಾರದಲ್ಲಿ ಲಾಸ್ ಆದಾಗಲೂ ಅಷ್ಟೆ. ನಷ್ಟವಾಗಿಲ್ಲ ಒಂದು ಸಣ್ಣ ಅಶಿಸ್ತು, ಉಡಾಫೆ, ಒಂದಿಷ್ಟು ಮೈಮರೆವು, ಅನುಭವದ ಕೊರತೆ ಇತ್ಯಾದಿ ಕಾರಣ ಇರುತ್ತದೆಯೇ ಹೊರತು ಗ್ರಹಗತಿಯೋ, ದೋಷವೋ, ಮಂತ್ರದ ಕಾಟವೋ, ಇನ್ನೊಂದೋ ಖಂಡಿತ ಇರುವುದಿಲ್ಲ. ಒಂದು ಸೋಲಿನಿಂದ- ಹೇಗೆ ಮತ್ತು ಯಾಕೆ ಸೋತೆ ಎಂಬುದು ಗೊತ್ತಾಗುತ್ತದೆ ತಾನೇ? ನಂತರ ಆ ಸೋಲನ್ನೇ ಸೋಲಿಸುವ ನಿರ್ಧಾರದೊಂದಿಗೆ ಬಾಳುವುದಿದೆಯಲ್ಲ, ಅದುವೇ ಹೋರಾಟದ ಬದುಕು.

    ಸೋಲಿನ ಮಗ್ಗುಲಲ್ಲೇ ನಿಂತು ಹುಡುಕಿದರೆ ಗೆಲುವು ಖಂಡಿತ ಸಿಗುತ್ತದೆ. ನಿರಾಸೆಯ ಹಿಂದೆಯೇ ಬೇತಾಳದಂತೆ ನಡೆದು ಹೋದರೆ ನಿರೀಕ್ಷೆ ಖಂಡಿತ ಈಡೇರುತ್ತದೆ. ಇದಕ್ಕೆ ಉದಾಹರಣೆಯಾಗಿ ಒಂದು ಕಥೆಯಿದೆ. ಕೇಳಿ; ಒಂದೂರು. ಅಲ್ಲಿ ನಾಲ್ವರು ಗೆಳೆಯರು, ಎಲ್ಲರೂ ಮಹತ್ವಾಕಾಂಕ್ಷಿಗಳೇ. ಅದೊಮ್ಮೆ ನಾಲ್ವರೂ ಹೊಳೆದಂಡೆಗೆ ಹೋದರು. ಅಲ್ಲಿ ಒಂದು ಸೀಬೆ ಮರವಿತ್ತು. ಎಲ್ಲರೂ ನೋಡುತ್ತಿದ್ದಾಗ ಒಬ್ಬ ಮೆಲ್ಲನೆ ನಡೆದುಹೋಗಿ ಒಂದು ಸೀಬೆಹಣ್ಣು ಕಿತ್ತು ತಂದ. ಅಲ್ಲಿದ್ದುದು ಅದೊಂದೇ. ಉಳಿದ ಮೂವರಿಗೂ ನಿರಾಶೆಯೋ ನಿರಾಶೆ. ಎರಡನೆಯವ ಸುಮ್ಮನಿರಲಿಲ್ಲ. ಒಂದೇ ಒಂದು ಹಣ್ಣಿರುವುದಕ್ಕೆ ಹೇಗೆ ಸಾಧ್ಯ? ಅಲ್ಲೇ ಇನ್ನೊಂದಿರಬೇಕು ಅಂದುಕೊಂಡ. ಆ ನಂಬಿಕೆಯಲ್ಲೇ ನಡೆದವನಿಗೆ ಹಣ್ಣು ಸಿಕ್ಕಿಯೂ ಬಿಟ್ಟಿತು. ಉಳಿದ ಇಬ್ಬರಿದ್ದರಲ್ಲ? ಅವರಿಗೆ ಒಂಥರಾ ಸಂಕಟ, ಅಸಮಾಧಾನ. ಛೆ, ನಾವು ಪಾಪಿಗಳು. ಅದಕ್ಕೆ ನಮಗೆ ಹಣ್ಣು ಸಿಗಲಿಲ್ಲ ಅಂದರು. ಈ ಎರಡನೇ ಗೆಳೆಯ ‘ಒಂದ್ಸಲ ಹುಡುಕಿ ನೋಡಿ, ಖಂಡಿತ ನಿಮಗೂ ಸಿಕ್ಕೇ ಸಿಗುತ್ತೆ’ ಎಂದ. ಈ ಇಬ್ಬರು ಒಂದು ಚಿಕ್ಕ ಅನುಮಾನದಿಂದಲೇ ಹುಡುಕುತ್ತ ಹೋದರೆ- ಅವರಿಬ್ಬರಿಗೂ ಒರಿಜಿನಲ್ ಎಂಬಂಥ ಸೀಬೆಹಣ್ಣು ಸಿಕ್ಕುಬಿಟ್ಟವು!

    ಸುಮ್ಮನೇ ಒಮ್ಮೆ ಯೋಚಿಸಿ, ಆ ನಾಲ್ವರು ಗೆಳೆಯರ ಪೈಕಿ ಕಡೆಯ ಇಬ್ಬರು- ‘ಛೆ, ನಮ್ಮ ಗ್ರಹಗತಿ ಚೆನ್ನಾಗಿರಲಿಲ್ಲ. ನಮಗೆ ಅದೃಷ್ಟವಿರಲಿಲ್ಲ. ನಾವು ಎದ್ದ ಗಳಿಗೆಯೇ ಸರಿ ಇಲ್ಲ’ ಎಂದೆಲ್ಲ ಭಾವಿಸಿ ನಡೆದು ಬಂದಿದ್ದರೆ ಹಣ್ಣು ಸಿಗುತ್ತಿತ್ತಾ? ಇಲ್ಲ, ಖಂಡಿತ ಸಿಗುತ್ತಿರಲಿಲ್ಲ. ಮುಂದೆ ಅದೇ ಕಾರಣವಾಗಿ, ತಾವು ನಿರಾಶಾವಾದಿಗಳೆಂದು ಆ ಇಬ್ಬರು ಭಾವಿಸುವ ಅಪಾಯವಿರುತ್ತಿತ್ತು. ಅಷ್ಟೇ ಅಲ್ಲ, ಮುಂದೆ ಬಹುಶಃ ಅವರಿಗೆ ನೋವೇ ಜತೆಯಾಗುತ್ತಿತ್ತು. ಒಂದೊಂದೇ ಅವಕಾಶ ತಪ್ಪಿಹೋದಂತೆಲ್ಲ ಅಳುವೇ ಅವರ ಜತೆಗಿರುತ್ತಿತ್ತು.

    ಹೌದಲ್ಲ, ಇದನ್ನು ಮತ್ತಷ್ಟು ಎಳೆಯುವುದು ಬೇಡ ಎನಿಸುತ್ತಿದೆ. ಬದುಕಿನಲ್ಲಿ ಆಶಾವಾದಿಯಾದವರಿಗೆ ಅನಂತ ಅವಕಾಶಗಳು ಸಿಕ್ಕೇ ಸಿಗುತ್ತವೆ. ಒಂದಲ್ಲ, ಹತ್ತು ಕಡೆಗಳಲ್ಲಿ ನೌಕರಿ ಮಾಡಿದ ನಂತರವೂ ಸಂಭ್ರಮದಿಂದ ಸಡಗರದಿಂದ ಬದುಕಬಹುದು ಎಂಬುದಕ್ಕೆ ಅದೆಷ್ಟೋ ಮಂದಿ ಸಾಕ್ಷಿಯಾಗಿ ಸಿಗುತ್ತಾರೆ. (ಅಂಥವರ ಲಿಸ್ಟಿನಲ್ಲಿ ಬಹುಶಃ ನಾನೂ ಇದ್ದೇನೆ!) ಅಂದ ಮೇಲೆ ಚಿಂತೆ ಯಾಕೆ?

    ಸಂಕಟಗಳಿಗೆ ಗೋಲಿ ಹೊಡೆಯಿರಿ. ಸಂಭ್ರಮದ ಕೈ ಹಿಡಿದು ನಡೆಯಿರಿ. ನೋವುಗಳ ಅಧ್ಯಾಯ ಇಂದಿಗೇ ಮುಗಿಯಲಿ. ನಾಳೆಯಿಂದ ಬದುಕಿಡೀ ನಲಿವು ನಿಮ್ಮೊಂದಿಗಿರಲಿ. ಚಿಯರ್ಸ್.

    ಹರ್ಕಾ ಪರ್ಕಾ ಕೆಲಸಗಳನ್ನು ಮುಗಿಸಲೆಂದೇ ಒಂದು ರಜೆ ಹಾಕಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts