More

    ಅದು ರೈಲ್ವೆ ಕೌಂಟರಿನಲ್ಲಿ ನೀವು ಟಿಕೆಟ್ ಕೊಂಡ ಹಾಗೆ! ರವಿ ಬೆಳಗೆರೆ ಅಂಕಣ ‘ನಮ್ಮನಮ್ಮಲ್ಲಿ..’

    ಅದು ರೈಲ್ವೆ ಕೌಂಟರಿನಲ್ಲಿ ನೀವು ಟಿಕೆಟ್ ಕೊಂಡ ಹಾಗೆ! ರವಿ ಬೆಳಗೆರೆ ಅಂಕಣ ‘ನಮ್ಮನಮ್ಮಲ್ಲಿ..’ಹೊಸದೊಂದು ಇಸ್ತ್ರಿ ಪೆಟ್ಟಿಗೆಯನ್ನೋ, ವಾಷಿಂಗ್ ಮಷೀನನ್ನೋ ತೆಗೆದುಕೊಂಡಾಗ ಅದರ ಮೇಲೆ ‘ಇಂಥದ್ದು ಮಾಡಿರಿ: ಇದನ್ನು ಮಾಡಬೇಡಿರಿ’ ಅಂತ ಸ್ಟಿಕ್ಕರು ಅಂಟಿಸಿರುತ್ತಾರಲ್ಲ? ಮದುವೆ ಬಗ್ಗೆ ಹಾಗೆ ಇದಮಿತ್ಥಂ ಅಂತ ಮಾತನಾಡುವುದು, ಬರೆಯುವುದು ಸಾಧ್ಯವೇ ಇಲ್ಲ. ಮದುವೆಗಳು ಸ್ವರ್ಗದಲ್ಲಿ ಆಗುತ್ತವೆ ಅಂತಾರೆ. ಬದುಕುಗಳೇಕೆ ಈ ಪರಿ ನರಕಗಳಾಗಿರುತ್ತವೋ? ಛತ್ರಗಳೇಕೆ ಆ ಪರಿ ಫುಲ್ ಆಗಿರುತ್ತವೋ? ಕೆಲವರಿಗೆ ಮದುವೆಗಳೇ ಆಗುವುದಿಲ್ಲವಲ್ಲ? ಅವರಿಗೂ ಸ್ವರ್ಗಕ್ಕೆ ಸಂಬಂಧವೇ ಇಲ್ಲವಾ? ಸುಮ್ಮನೆ ಅವರಿವರು ಅಂತಾರೆ ಎಂಬ ಕಾರಣಕ್ಕೆ ನೀವೂ ಮದುವೆಯೆಂಬುದು ಋಣಾನುಬಂಧಕ್ಕೆ ಸಂಬಂಧಿಸಿದ್ದು ಅಂದುಕೊಳ್ಳಬೇಡಿ. ನನ್ನ ದೃಷ್ಟಿಯಲ್ಲಿ ಮದುವೆಯೆಂಬುದು ಆಕಸ್ಮಿಕವಾಗಲೀ, ಅದೃಷ್ಟವಾಗಲೀ, ಪೂರ್ವಜನ್ಮಕ್ಕೆ ಸಂಬಂಧಿಸಿದುದಾಗಲೀ ಖಂಡಿತ ಅಲ್ಲ. ಅದೊಂದು ಅನುಕೂಲ, ಒಂದು ಒಪ್ಪಂದ, ಕಲ್ಪಿಸಿಕೊಳ್ಳುವ ಬಾಂಧವ್ಯ, ಅಪ್ಪಟ ನಂಬಿಕೆ ಮತ್ತು ಲಾಂಗ್ ಲಾಂಗ್ ಹ್ಯಾಪಿ ಜರ್ನಿ. ಇದನ್ನೂ ಓದಿ: ನಮ್ಮನಮ್ಮಲ್ಲಿ..|ಅವನ ಅನುಮಾನ ಮತ್ತು ಇವಳ ಆತಂಕಗಳ ಮಧ್ಯೆ…

    ಚಿಕ್ಕಂದಿನಿಂದಲೇ ಮದುವೆ ಬಗ್ಗೆ ಮಕ್ಕಳಿಗೆ ಬುತ್ತಿ ಕಟ್ಟಿ ಕೊಡುವುದು ನಮ್ಮ ಭಾರತದ ಸಂಸ್ಕೃತಿಯಲ್ಲಿ ಮಾತ್ರ ಇದೆಯೇನೋಪ್ಪ. ‘ನಿನ್ನನ್ನ ಸರಿಯಾದವನೊಬ್ಬನ ಕೈಗಿಟ್ಟು ನಾನು ಕಣ್ಣು ಮುಚ್ಚಬೇಕು ನೋಡು’ ಅಂತ ಮಾತನಾಡುತ್ತಿರುತ್ತೇವೆ. ‘ನಿನ್ನ ಹೆಂಡತಿ ಬಂದ್ಮೇಲೆ ಹ್ಯಾಗೋ ಏನೋ?’ ಅನ್ನುತ್ತಿರುತ್ತೇವೆ. ಆದಷ್ಟೂ ಇಂಥ ಮಾತುಗಳನ್ನ ಅವೈಡ್ ಮಾಡಿ. ಮಕ್ಕಳು ನೀವಂದುದಕ್ಕಿಂತ ಬೇರೆ ರೀತಿಯಲ್ಲಿ ಅವುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ರಾಂಗ್ ಸಿಗ್ನಲ್ಸ್ ನಿಮ್ಮಿಂದ ಹೋಗದಿರಲಿ. ಅಷ್ಟು ಚಿಕ್ಕ ಮಕ್ಕಳಿಗೆ ಮದುವೆ ಬಗ್ಗೆ ಒಂದು ಕಲ್ಪನೆಯನ್ನು ಏಕೆ ಕೊಡುತ್ತೀರಿ? ಅಕ್ಕನ ಮಗಳಿಗೇ ಅಥವಾ ಮಾವನ ಮಗನಿಗೇ ಕೊಟ್ಟು ಮಾಡ್ತೀವಿ ಅಂತ ಅಪ್ಪಿತಪ್ಪಿ ಕೂಡ ಅನ್ನಬೇಡಿ. ರಕ್ತಸಂಬಂಧಿಗಳಲ್ಲಿ ಮದುವೆಗಳು ಸೂಕ್ತವಲ್ಲ. ಅದಕ್ಕಿಂತ ಮಿಗಿಲಾಗಿ ಒಬ್ಬ ವ್ಯಕ್ತಿ, ವಯಸ್ಸಿಗೆ ಬಂದ ಮೇಲೆ ತನ್ನ ಮದುವೆ ಬಗ್ಗೆ, ಬದುಕಿನ ಸಂಗಾತಿಯ ಬಗ್ಗೆ ತನ್ನದೇ ಆದ ಕಲ್ಪನೆ ಮೂಡಿಸಿಕೊಳ್ಳಬೇಕು. ವಿಸ್ತರಿಸಿಕೊಳ್ಳಬೇಕು. ‘ಯಾರನ್ನ ಬೇಕಾದರೂ ಪ್ರೀತ್ಸಿ ಮದುವೆಯಾಗು: ಮಾಂಸ ತಿನ್ನೋ ಜಾತಿಯವರನ್ನ ಮಾತ್ರ ಆಗಬೇಡ’ ಅನ್ನುತ್ತಿರುತ್ತಾರೆ ಹಿರಿಯರು.

    ಅದೇನೂ ಔದಾರ್ಯವಲ್ಲ. ಪ್ರೀತಿಸುವ ವಿಷಯದಲ್ಲಿ ಮಕ್ಕಳಿಗೆ ಸಲಹೆ, limitation, option- ಯಾವುದೂ ಕೊಡಬೇಡಿ. ಮಗಳು ಮದುವೆ ವಯಸ್ಸಿಗೆ ಬಂದಿದ್ದಾಳೆ ಅನ್ನಿಸಿದಾಗ ‘ನಿನ್ನ ಮದುವೆಗೆ ಅಂತ ಇಷ್ಟು ಹಣ ತೆಗೆದಿಟ್ಟಿದ್ದೇನೆ’ ಎಂಬ ಸಂಗತಿಯನ್ನು ಹೆಣ್ಣು ಮಗಳಿಗೆ ಮನವರಿಕೆ ಮಾಡಿಕೊಡಿ. ಇಲ್ಲದಿದ್ದರೆ, ತನ್ನ ಮದುವೆ ಅಥವಾ ಭವಿಷ್ಯದ ಬಗ್ಗೆ ತಂದೆ-ತಾಯಿ ಬೇಜವಾಬ್ದಾರಿಯಿಂದಿದ್ದಾರೆ ಎಂದು ಮಕ್ಕಳು ಅಂದುಕೊಳ್ಳುತ್ತಾರೆ. ‘ನಿನ್ನ ಮನಸ್ಸಿನಲ್ಲಿ ಯಾರಾದರೂ ಇದ್ದಾರಾ?’ ಎಂಬ ಪ್ರಶ್ನೆಯನ್ನು ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರನ್ನೂ ಕೇಳಬೇಕಾದ ಪ್ರಶ್ನೆಯೇ.

    ಇನ್ನು ಮದುವೆ ಮಾಡಿಕೊಳ್ಳುವ ವಿಷಯಕ್ಕೆ ಬಂದರೆ, ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಕೆಲವಿವೆ. ನಾವು ಮದುವೆಯಾಗಲಿಕ್ಕೆ ಅರ್ಹರಾ? ಈಗ ಅರ್ಹರಾ? ಮದುವೆಯಾಗುವ ಅವಶ್ಯಕತೆ ಇದೆಯಾ? ಈಗ ಇದೆಯಾ? ಓರಗೆಯವರೆಲ್ಲ ಮದುವೆಯಾದರಾದ್ದರಿಂದ ನಾನೂ ಆಗಬೇಕು ಅಂದುಕೊಳ್ಳುವವರೇ ಜಾಸ್ತಿ. ಓರಗೆಯವರಿಗೆ ಬದುಕಿನ ಗೋಲ್ ತಲುಪಿಕೊಳ್ಳುವುದು ತುಂಬ ಮುಖ್ಯ ಅನ್ನಿಸಿರುವುದಿಲ್ಲ. ಇದನ್ನೂ ಓದಿ: ನಮ್ಮನಮ್ಮಲ್ಲಿ: ಕಡು ದುಃಖಕ್ಕೂ ಒಂದು ಆಯುಷ್ಯ ಅಂತ ಇರುತ್ತೆ!

    ನಿಮಗೆ ಅನ್ನಿಸಿದ್ದರೆ, ತಕ್ಷಣಕ್ಕೆ ಮದುವೆಯಾಗಬೇಡಿ. ನೀವಂದುಕೊಂಡ ಗುರಿ ತಲುಪಿಕೊಳ್ಳಲು ನೆರವಾಗುವ ವ್ಯಕ್ತಿ ಅನ್ನಿಸಿದರೆ ತಕ್ಷಣ ಮದುವೆಯಾಗಿ! ಮದುವೆಯೆಂಬುದು ಭಯಂಕರ ‘ಟ್ರಿಕ್ಕಿ’ ಸಂಗತಿ. ಅದೊಂಥರಾ ರೈಲ್ವೆ ಕೌಂಟರಿನಲ್ಲಿ ಟಿಕೆಟ್ ತಗೊಂಡ ಹಾಗೆ. ನೀವು ಹಣ ಕೊಟ್ಟಿರಿ. ಆತ ಟಿಕೆಟ್ ಕೊಟ್ಟ. ‘ನೀವು ಕೊಟ್ಟಿಲ್ಲ’ ಅಂದುಬಿಟ್ಟರೆ, ಶುರು ರಾದ್ಧಾಂತ. ಮದುವೆಯೆಂಬುದೂ ಅಷ್ಟೆ. ಅದು ನಂಬಿಕೆಯ ನೆಲೆಗಟ್ಟಿನ ಮೇಲಷ್ಟೆ ನಿಲ್ಲುತ್ತದೆ. ಪರಸ್ಪರರಲ್ಲಿ ಉತ್ತಮ ನಂಬಿಕೆ ಮೊದಲ ಭೇಟಿಯಿಂದಲೇ ಕಟ್ಟಿಕೊಳ್ಳುತ್ತ ಹೋಗಬೇಕು.ಅದಕ್ಕಿರುವ ಅತ್ಯುತ್ತಮ ಮಾರ್ಗವೆಂದರೆ ಸುಳ್ಳು ಹೇಳಲೇಬಾರದು.

    ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬುದು ಶುದ್ಧ ಮೂರ್ಖ ಗಾದೆ. ಬಂಗಾರದಂಥ ಮದುವೆಯನ್ನು ಮುರಿದು ಹಾಕಲು ಒಂದೇ ಒಂದು ಸುಳ್ಳು ಸಾಕು. ‘ನಮ್ಮ ಹುಡುಗಿಯನ್ನು ಮದುವೆಯಾದರೆ ನಿನಗೆ ನೌಕರಿ ಕೊಡಿಸುತ್ತೇವೆ’ ಎಂಬುದು ಅತ್ಯಂತ ಅಪಾಯಕಾರಿ. ಏಕೆಂದರೆ, ನೌಕರಿಗಳು ಎಲ್ಲರ ವಿಷಯದಲ್ಲೂ ‘ಕೊಡಿಸಿದರೆ’ ಸಿಗುವಂಥದ್ದಲ್ಲ. ವರದಕ್ಷಿಣೆಯ ವಿಷಯವಾದರೂ ಅಷ್ಟೆ. ‘ಇಷ್ಟಿದೆ: ಇಷ್ಟು ಕೊಡುತ್ತೇವೆ’ ಅಂತ ಖಂಡ ತುಂಡವಾಗಿ ಮಾತಾಡಿಬಿಡಬೇಕು. ಮುಂದೆ ಯಾವಾಗಲೋ ಹೊಂದಿಸಿಕೊಡುತ್ತೇವೆ ಅಂದಿರಾ? ನಿಮ್ಮ ಹುಡುಗಿಯನ್ನು ಅಪಾಯಕ್ಕೆ ಸಿಲುಕಿಸಿದಿರಿ ಅಂತಲೇ ಅರ್ಥ. ವರದಕ್ಷಿಣೆಯನ್ನು ನಾವೆಲ್ಲ ವಿರೋಧಿಸುತ್ತೇವೆ, ನಿಜ. ಆದರೆ ಕೆಲವರಲ್ಲಿ ಮದುವೆಯೆಂಬುದು ಅನೇಕ ನಿರೀಕ್ಷೆಗಳನ್ನು ಉಂಟು ಮಾಡುತ್ತದೆ. ಅವರ ಕಮಿಟ್​ವೆುಂಟುಗಳಿರುತ್ತವೆ. ಅವರ ಅವಿವಾಹಿತ ತಂಗಿಯರಿರುತ್ತಾರೆ. ಪ್ರಾಮಿಸ್ ಮಾಡುವಾಗ ಅದೆಲ್ಲವನ್ನೂ ಯೋಚಿಸಿಯೇ ಮಾಡಿ. ಹುಡುಗರಾದರೂ ಅಷ್ಟೆ: ‘ನಿನ್ನ ತಾಯೀನ ನಾನು ನೋಡಿಕೊಳ್ತೇನೆ. ತಂಗೀಗೆ ನಾನು ಮದುವೆ ಮಾಡ್ತೇನೆ. ತಮ್ಮಂದಿರನ್ನ ನಾನು ಓದಿಸ್ತೇನೆ’ ಎಂಬಂಥ ಎಮೋಷನಲ್ ಆದ ಒಪ್ಪಂದಗಳನ್ನು ಆದಷ್ಟು ಅವೈಡ್ ಮಾಡಿ. ಇದನ್ನೂ ಓದಿ: ರವಿ ಬೆಳಗೆರೆ ನಮ್ಮನಮ್ಮಲ್ಲಿ ಅಂಕಣ: ಇರಲಿ ನಿಮ್ಮ ಬದುಕಿಗೊಬ್ಬ ಸಭ್ಯ ಆಂಟಿ!

    ನನಗೆ ಮೊದಲಿಂದಲೂ ಆದರ್ಶ ವಿವಾಹಗಳೆಂದರೆ ಅಲರ್ಜಿ, ಅಪನಂಬಿಕೆ. ವಿವಾಹವನ್ನೇ ಆದರ್ಶ ಎಂದು ನಂಬುವುದಾದರೆ ಪ್ರತಿ ಮದುವೆಯೂ ಆದರ್ಶದ ಮದುವೆಯೇ. ಆದರೆ ನನ್ನ ದೃಷ್ಟಿಯಲ್ಲಿ ಮದುವೆ ಎಂಬುದು ಒಪ್ಪಂದ, ಒಡಂಬಡಿಕೆ. ಅದರಲ್ಲಿ ಆದರ್ಶವೇನು ಬಂತು? ವಿಧವೆಯನ್ನು ಮದುವೆಯಾದೆ, ಅನಾಥೆಯನ್ನು ಮಾಡಿಕೊಂಡೆ, ಅಂಗವಿಕಲನನ್ನು ಮಾಡಿಕೊಂಡೆ, ಬಡವನ ಕೈ ಹಿಡಿದೆ fine.. ಅವೆಲ್ಲ ಆಯ್ಕೆಗಳು. ಒಬ್ಬ ಅನಾಥೆ ಮೇಲೆ ಪ್ರೀತಿ ಮೂಡಿದರೆ, ಬಡವನ ಬಗ್ಗೆ ಪ್ರೇಮ ಮೂಡಿದರೆ ಅವರನ್ನು ಆಗಿಬಿಡಿ. ಹುಡುಕಾಡಿ ಅಂಥವರನ್ನೇ ಆಗುತ್ತೇನೆ ಅಂತ ಹೊರಟರೆ ನಿಮ್ಮ ಚಿಂತನೆಯಲ್ಲಿ ಏನೋ ಯಡವಟ್ಟಿದೆ ಅಂತಲೇ ಅರ್ಥ.

    ಮದುವೆಯನ್ನೇ ಮಾಡಿಕೊಳ್ಳದೆ ಒಟ್ಟಿಗೆ ಬದುಕುವುದು (living together) ಕೂಡ ಇವತ್ತಿನ ಮಟ್ಟಿಗೆ ಕಾನೂನು ರೀತ್ಯಾ ಮದುವೆಯೆಂದೇ ಪರಿಗಣಿಸಲಾಗುತ್ತದೆ. ಅಂದಮೇಲೆ, ನಾವು ಸರಳವಾಗಿ ಮದುವೆಯಾದೆವು, ದೇವರ ಮುಂದೆ ತಾಳಿ ಕಟ್ಟಿದೆವು, ರಿಜಿಸ್ಟರ್ ಮದುವೆಯಾದೆವು ಅಂತೆಲ್ಲ ಮಾತಾಡುವುದರಲ್ಲಿ ಅರ್ಥವಿಲ್ಲ. ಮದುವೆ ಸರಳವಾಗಿದ್ದರೆ ಚೆಂದ. ಆದರೆ ಸಂಭ್ರಮವಿರದೆ ಹೋದರೆ ಸರಿಯಲ್ಲ. ಮದುವೆಯಲ್ಲಿ ಸಂಭ್ರಮವಿರಬೇಕು. ಬದುಕಿನಲ್ಲಿ ವಿಜೃಂಭಣೆಯಿರಬೇಕು. ಹದಿನೈದು ನಿಮಿಷಕ್ಕಿಂತ ಜಾಸ್ತಿ ಮುನಿಸಿಕೊಳ್ಳುವುದಿಲ್ಲ ಎಂಬುದು ಮದುವೆಯ ಮೂಲ ನಿಯಮವಾಗಿರಬೇಕು.

    ಪ್ರತಿ ಮುನಿಸೂ atleast, ಒಂದು ಮುತ್ತಿನಲ್ಲಿ ಮುಗಿಯಬೇಕು! ಚಿಯರ್ಸ್.

    (ಲೇಖಕರು ಹಿರಿಯ ಪತ್ರಕರ್ತರು)

    ಸಂಕಟ ಜೊತೆಯಾಯಿತೆಂದು ಅಳುತ್ತ ಕೂರಬಾರದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts