ನಾಳೆ, ನಾಡಿದ್ದು ಮೆಟ್ರೋ ಸಂಚಾರ ವ್ಯತ್ಯಯ

ಬೆಂಗಳೂರು: ಟ್ರಿನಿಟಿ ನಿಲ್ದಾಣ ಬಳಿ ಮೆಟ್ರೋ ಮಾರ್ಗದ ಕಂಬದ ಮೇಲಿನ ಅಡ್ಡತೊಲೆ ದುರಸ್ತಿ ಹಿನ್ನೆಲೆಯಲ್ಲಿ ಶುಕ್ರವಾರ (ಡಿ.28) ರಾತ್ರಿ 8ರಿಂದ ಡಿ.30ರವರೆಗೆ ನಾಯಂಡಹಳ್ಳಿ- ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ಮಹಾತ್ಮಾ ಗಾಂಧಿ ರಸ್ತೆಯಿಂದ ಇಂದಿರಾನಗರ ನಿಲ್ದಾಣವರೆಗೆ ರೈಲು ಸೇವೆ ಸ್ಥಗಿತಗೊಳ್ಳಲಿದೆ.

ಪ್ರಸ್ತುತ ಯಾವುದೇ ಅಪಾಯ ಸಂಭವಿಸಬಾರದು ಎನ್ನುವ ದೃಷ್ಟಿಯಿಂದ ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ಕಬ್ಬಿಣದ ಕಂಬಗಳಿಂದ ಮೆಟ್ರೋ ಮಾರ್ಗಕ್ಕೆ ಆಧಾರ ನೀಡಲಾಗಿದೆ. ಶುಕ್ರವಾರ ರಾತ್ರಿ ಹೈಡ್ರಾಲಿಕ್ ಯಂತ್ರದ ಮೂಲಕ ಬೀಮ್ ಮೇಲೆತ್ತಿ ಹನಿಕೂಂಬ್ (ಕಾಂಕ್ರೀಟ್ ಒಳಗಿನ ಟೊಳ್ಳು ಪ್ರದೇಶ) ಕಾಣಿಸಿಕೊಂಡ ಜಾಗಕ್ಕೆ ಗ್ರೌಟಿಂಗ್ (ದ್ರವ ರೂಪದ ಕಾಂಕ್ರೀಟ್ ತುಂಬಿಸುವುದು) ಮಾಡಲಾಗುತ್ತದೆ. ಇದು ಒಣಗಿದ ನಂತರ ಬೇರಿಂಗ್ ಇರುವ ಪ್ರದೇಶದಲ್ಲೇ ಇರಿಸಲಾಗುತ್ತದೆ. ನಂತರ ಹನಿಕೂಂಬ್ ಸಮಸ್ಯೆ ಪೂರ್ತಿಯಾಗಿ ಪರಿಹಾರವಾಗಿದೆಯೇ ಎನ್ನುವುದನ್ನು ಪರೀಕ್ಷಿಸಲಾಗುತ್ತದೆ.

ಕಾಮಗಾರಿಗೆ 18ರಿಂದ 24 ಗಂಟೆ ಅವಧಿ ಬೇಕಿರುವುದರಿಂದ ಮೆಟ್ರೋ ಸಂಚಾರ ಸ್ಥಗಿತಗೊಳಿಸವುದು ಅನಿವಾರ್ಯ ಎಂದು ಬಿಎಂಆರ್​ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್ ತಿಳಿಸಿದರು. ಕಾಮಗಾರಿ ಮೇಲೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ) ತಜ್ಞರು ನಿಗಾ ವಹಿಸುತ್ತಿದ್ದು, ಅಂತಿಮ ಕಾಮಗಾರಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಡಿ.28 ರಾತ್ರಿ 7.30ರ ನಂತರ ನಾಯಂಡಹಳ್ಳಿಯಿಂದ ಮೆಟ್ರೋ ರೈಲು ಎಂ.ಜಿ. ರಸ್ತೆವರೆಗಷ್ಟೇ ಇರಲಿದೆ. ಬೈಯಪ್ಪನಹಳ್ಳಿಯಿಂದ ರಾತ್ರಿ 7.45ರ ನಂತರ ಇಂದಿರಾನಗರದವರೆಗಷ್ಟೇ ಸಂಚರಿಸಲಿದೆ. ಹೀಗಾಗಿ ಡಿ.28 ರಾತ್ರಿ 8 ರಿಂದ ಡಿ.30ರವರೆಗೂ ಎಂ.ಜಿ. ರಸ್ತೆ- ಟ್ರಿನಿಟಿ- ಹಲಸೂರು- ಇಂದಿರಾನಗರ ನಿಲ್ದಾಣಗಳ ನಡುವೆ ರೈಲು ಸಂಚಾರವಿರುವುದಿಲ್ಲ. ಡಿ.31ರ ಮುಂಜಾನೆ 5ರಿಂದ ಪೂರ್ಣ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭವಾಗಲಿದೆ ಎಂದು ನಿಗಮ ತಿಳಿಸಿದೆ. ಬೈಯಪ್ಪನಹಳ್ಳಿಯಿಂದ ಇಂದಿರಾನಗರ ಹಾಗೂ ಮೈಸೂರು ರಸ್ತೆಯಿಂದ ಎಂ.ಜಿ. ರಸ್ತೆವರೆಗೆ 6 ರಿಂದ 15 ನಿಮಿಷಕ್ಕೊಮ್ಮೆ ರೈಲು ಸಂಚಾರವಿರಲಿದೆ.

ಪ್ರಯಾಣಿಕರಿಗೆ ಉಚಿತ ಫೀಡರ್ ಸೇವೆ

ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಉಚಿತ ಫೀಡರ್ ಸೇವೆ ದೊರೆಯಲಿದೆ. ಕಬ್ಬನ್ ಪಾರ್ಕ್​ನಿಂದ ಬೈಯಪ್ಪನಹಳ್ಳಿಗೆ 28ರ ರಾತ್ರಿ 8ರಿಂದ 11ರವರೆಗೆ ಬಸ್ ಸೇವೆ ಇರಲಿದೆ. 29, 30ರಂದು ಇಡೀ ದಿನ ಸೇವೆ ಸಿಗಲಿದೆ. ಪ್ರಯಾಣ ವೆಚ್ಚವನ್ನು ಬಿಎಂಆರ್​ಸಿಎಲ್ ಭರಿಸಲಿದೆ.