More

  ಕುಶಾಲನಗರಕ್ಕೆ ನಮ್ಮ ಕ್ಲಿನಿಕ್

  ಮಡಿಕೇರಿ:

  ಕೊಡಗಿನಲ್ಲಿ ಮತ್ತೊಂದು ನಮ್ಮ ಕ್ಲಿನಿಕ್ ಕಾರ್ಯಾರಂಭಕ್ಕೆ ಭರದ ಸಿದ್ಧತೆ ನಡೆದಿದೆ. ಕುಶಾಲನಗರದಲ್ಲಿ ಸೋಮವಾರ (ನ.೨೭) ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನಮ್ಮ ಕ್ಲಿನಿಕ್ ಉದ್ಘಾಟಿಸಲಿದ್ದಾರೆ. ವಿರಾಜಪೇಟೆಯಲ್ಲಿ ಕಳೆದ ವರ್ಷ ಆರಂಭವಾದ ನಮ್ಮ ಕ್ಲಿನಿಕ್ ಯಶಸ್ವಿಯಾಗಿ ನಡೆಯುತ್ತಿದ್ದು, ಸ್ಥಳೀಯರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

  ಜನ ಸಾಮಾನ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಈ ಹಿಂದಿನ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ನಮ್ಮ ಕ್ಲಿನಿಕ್ ಯೋಜನೆ ಘೋಷಿಸಿತ್ತು. ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆ ಅಂದಿನ ಬಸವರಾಜ ಬೊಮ್ಮಾಯಿ ಅಧಿಕಾರಕ್ಕೆ ಬಂದು ಒಂದು ವ?ರ್ ಪೂರೈಸಿದ ನೆನಪಿಗೆ ಕಳೆದ ವರ್ಷ ಜು. ೨೮ರಿಂದ ಬೆಂಗಳೂರಿನಲ್ಲಿ ಸಾಂಕೇತಿಕವಾಗಿ ಆರಂಭಿಸಲಾಗಿತ್ತು. ದೆಹಲಿ ಆರೋಗ್ಯ ಸೇವೆಯಲ್ಲಿ ಭಾರಿ ಸದ್ದು ಮಾಡಿದ್ದ ಮೊಹಲ್ಲಾ ಕ್ಲಿನಿಕ್ ಮಾದರಿಯಲ್ಲಿ ರಾಜ್ಯದಲ್ಲೂ ನಮ್ಮ ಕ್ಲಿನಿಕ್ ಯೋಜನೆಯನ್ನು ಜಾರಿಗೆ ತರಲಾಗಿತ್ತು.

  ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತಾಗಿ ನಗರ, ಪಟ್ಟಣಗಳ ವಾರ್ಡ್ ಮಟ್ಟದಲ್ಲಿ ಆರೋಗ್ಯ ಸೇವೆ ನೀಡುವ ಕೇಂದ್ರವೇ ನಮ್ಮ ಕ್ಲಿನಿಕ್. ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ಜನರಿಗೆ ಸ್ಥಳೀಯವಾಗಿಯೇ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಈ ಕ್ಲಿನಿಕ್ ರಾಜ್ಯಾದ್ಯಂತ ಆರಂಭಿಸಲಾಗಿದೆ.

  ಬೆಂಗಳೂರಿನ ಎಲ್ಲ ೨೪೩ ವಾರ್ಡ್ ಮತ್ತು ಇತರ ಜಿಲ್ಲೆಗಳ ೧೯೫ ಸ್ಥಳ ಸೇರಿದಂತೆ ರಾಜ್ಯದ ಒಟ್ಟು ೪೩೮ ಕಡೆ ನಮ್ಮ ಕ್ಲಿನಿಕ್ ಆರಂಭಿಸುವ ಬಗ್ಗೆ ೨೦೨೨-೨೩ನೇ ಸಾಲಿನ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಘೋಷಿಸಿದ್ದರು. ಈ ಸಂದರ್ಭದಲ್ಲಿ ಕೊಡಗಿನ ವಿರಾಜಪೇಟೆಯಲ್ಲೂ ನಮ್ಮ ಕ್ಲಿನಿಕ್ ಆರಂಭವಾಗಿತ್ತು. ಇದೀಗ ಕುಶಾಲನಗರದಲ್ಲಿ ಜಿಲ್ಲೆಯ ೨ನೇ ನಮ್ಮ ಕ್ಲಿನಿಕ್ ಸೇವೆ ಶುರುವಾಗುತ್ತಿದೆ.

  ವಿಕೇಂದ್ರಿಕೃತ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಮತ್ತು ಸುಧಾರಿತ ಸಮುದಾಯ ಆರೋಗ್ಯ ಪ್ರಕ್ರಿಯೆಗಳನ್ನು ಕೊಳಗೇರಿ ಮತ್ತು ಕೊಳಗೇರಿ ಸ್ವರೂಪದ ಪ್ರದೇಶಗಳಲ್ಲಿ ವಿಶೇಷವಾಗಿ ನೀಡಲು, ದುರ್ಬಲ ವರ್ಗದ ಜನಸಂಖ್ಯೆ ಇರುವ ಪ್ರದೇಶದಲ್ಲಿ ಆರೋಗ್ಯ ಸೇವೆಗಾಗಿ, ಸಾರ್ವಜನಿಕ ಆರೋಗ್ಯದ ಮೇಲೆ ಕಣ್ಗಾವಲು ಇಡಲು, ಸಮುದಾಯದ ಸಹಭಾಗಿತ್ವ ಉತ್ತೇಜಿಸಲು ಹಾಗೂ ಆರೋಗ್ಯ ಸೇವೆಗಳು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿಸಲು ನಮ್ಮ ಕ್ಲಿನಿಕ್ ಬಳಸಿಕೊಳ್ಳಲಾಗುತ್ತಿದೆ.

  ನಮ್ಮ ಕ್ಲಿನಿಕ್‌ಗಳ ನಿರ್ವಹಣೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಷಿಕ ೩೬.೪೫ ಲಕ್ಷ ರೂ. ಮತ್ತು ಇತರ ಕಡೆಗಳಲ್ಲಿ ೩೪.೪೬ ರೂ. ಅಂದಾಜು ವೆಚ್ಚ ಆಗಲಿದೆ. ಈ ಮೊತ್ತದಲ್ಲಿ ಸಿಬ್ಬಂದಿ ವೇತನ, ಕ್ಲಿನಿಕ್ ನಿರ್ವಹಣೆ, ಖಾಸಗಿ ಕಟ್ಟಡವಾಗಿದ್ದರೆ ಬಾಡಿಗೆ ಸೇರಿದಂತೆ ಎಲ್ಲವನ್ನೂ ನಿರ್ವಹಣೆ ಮಾಡಬೇಕಾಗುತ್ತದೆ.

  ನಮ್ಮ ಕ್ಲಿನಿಕ್ ಸ್ವರೂಪ
  ಬೆಳಗ್ಗೆ ೯ ಗಂಟೆಯಿಂದ ಸಂಜೆ ೪.೩೦ರವರೆಗೆ ನಮ್ಮ ಕ್ಲಿನಿಕ್ ತೆರೆದಿರುತ್ತದೆ. ಒಬ್ಬರು ವೈದ್ಯ, ಒಬ್ಬ ನರ್ಸ್, ಒಬ್ಬ ಲ್ಯಾಬ್ ಟೆಕ್ನೀಷಿಯನ್, ಹಾಗೂ ಒಬ್ಬ ಡಿ ಗ್ರೂಪ್ ಸಿಬ್ಬಂದಿ ಇಲ್ಲಿ ಇರುತ್ತಾರೆ. ಉಚಿತ ತಪಾಸಣೆ ಮತ್ತು ಉಚಿತ ಔ?ಧ ವಿತರಣೆ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ. ಒಟ್ಟು ೧೨ ರೀತಿಯ ಆರೋಗ್ಯ ಸೇವೆಗಳು ಮತ್ತು ೧೪ ವಿಧದ ಪ್ರಯೋಗ ನಡೆಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಬೇಕಿದ್ದರೆ ಇ-ಸಂಜೀವಿನಿ ಮತ್ತು ಟೆಲಿ ಕೌನ್ಸೆಲಿಂಗ್ ವ್ಯವಸ್ಥೆಯೂ ಇರುತ್ತದೆ. ಕುಶಾಲನಗರದಲ್ಲಿ ಕುಶಾಲನಗರ-ಮೈಸೂರು ರಾಷ್ಟ್ರೀಯ ಹೆದ್ದಾರಿ ೨೭೫ರ ಬದಿಯಲ್ಲಿ ದಂಡಿನ ಪೇಟೆ ಬಳಿ ಮುನ್ಸಿಪಾಲಿಟಿ ಕ್ವಾಟ್ರಸ್‌ನಲ್ಲಿ ನಮ್ಮ ಕ್ಲಿನಿಕ್‌ನ ಕಾರ್ಯನಿರ್ವಹಿಸಲಿದೆ.

  ನ.೨೭ರಿಂದ ಕುಶಾಲನಗರದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ. ತಾಲೂಕು ಕೇಂದ್ರವಾಗಿರುವ ಕುಶಾಲನಗರದಲ್ಲಿ ಹಾಲಿ ಇರುವ ಸಮುದಾಯ ಆರೋಗ್ಯ ಕೇಂದ್ರದ ಮೇಲೆ ಇದರಿಂದ ಒತ್ತಡ ಕಡಿಮೆ ಆಗುವ ನಿರೀಕ್ಷೆ ಇದೆ. ಸ್ಥಳೀಯವಾಗಿ ಗುಣಮಟ್ಟದ ಆರೋಗ್ಯ ಸೌಲಭ್ಯ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ಕಾರ್ಯಾಚರಿಸಲಿದೆ. ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡಲಾಗುವುದು.
  ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

  ಕುಶಾಲನಗರದಲ್ಲಿ ನಮ್ಮ ಕ್ಲಿನಿಕ್ ಆರಂಭಿಸುವ ನಿರ್ಧಾರ ತೆಗೆದುಕೊಂಡಿರುವ ಶಾಸಕ ಡಾ. ಮಂತರ್ ಗೌಡ ಅವರ ನಡೆ ಸ್ವಾಗತಾರ್ಹ. ತಾಲೂಕು ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರ ಮೇಲಿನ ಒತ್ತಡ ಕಡಿಮೆ ಮಾಡಲು ಇಂಥ ಒಂದು ಕ್ಲಿನಿಕ್‌ನ ಅಗತ್ಯ ಕುಶಾಲನಗರಕ್ಕೆ ಇತ್ತು. ಸ್ಥಳೀಯರಿಗೆ ಇದರಿಂದ ಹೆಚ್ಚಿನ ಪ್ರಯೋಜನ ಆಗಲಿದೆ.
  ವಿ.ಪಿ. ಶಶಿಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕುಶಾಲನಗರ

  ಕುಶಾಲನಗರ ನಮ್ಮ ಕ್ಲಿನಿಕ್‌ಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿದೆ. ಈಗಾಗಲೇ ಪತ್ರಿಕಾ ಜಾಹೀರಾತು ನೀಡಲಾಗಿದೆ. ವೈದ್ಯರ ನೇಮಕಾತಿ ಆಗಬೇಕಿದ್ದು, ಅಲ್ಲಿಯ ತನಕ ನಿಯೋಜನೆ ಆಧಾರದಲ್ಲಿ ಬೇರೆ ವೈದ್ಯರನ್ನು ನಮ್ಮ ಕ್ಲಿನಿಕ್‌ಗೆ ಕಳುಹಿಸಲಾಗುವುದು. ಪೂರ್ಣ ಪ್ರಮಾಣದಲ್ಲಿ ಅಲ್ಲಿ ನಮ್ಮ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ.
  ಡಾ. ಕೆ.ಎಂ. ಸತೀಶ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ, ಕೊಡಗು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts