ಒಂದೇ ವಿನಂತಿ, ಮೊದಲು ಗ್ಲಾಸು ಕೆಳಗಿಡಿ

ಚಿಯರ್ಸ್!

ಒಂದು ನಸುಗತ್ತಲೆಯ ಇಳಿಸಂಜೆಯಲ್ಲಿ, ಬಾರ್​ನ ಮಬ್ಬು ಬೆಳಕಿನಲ್ಲಿ ಇಬ್ಬರು ಗೆಳೆಯರು, ಗ್ಲಾಸಿಗೆ ಗ್ಲಾಸು ತಾಕಿಸುತ್ತಾರಲ್ಲ? ಅವರಿಗೆ ಗೊತ್ತಿರುವುದಿಲ್ಲ. ಇದೇ ಬಾಟಲಿ ಅವರನ್ನು ಭಯಾನಕವಾಗಿ ಕೊಂದುಬಿಡುತ್ತದೆ. ನಾನು ನನ್ನ ಇಬ್ಬರು ಭಾವಮೈದುನಂದಿರನ್ನು ಕಳೆದುಕೊಂಡಿದ್ದೇನೆ: ‘ಗುಂಡಿಗೆ ಬಲಿ’. ನನ್ನ ಮೊದಲ ಪತ್ನಿ ಲಲಿತಾಳ ತಮ್ಮ ಅನಂತ ತುಂಬ ಸಹೃದಯಿ. ಇಬ್ಬರು ಮಕ್ಕಳ ತಂದೆ. ಒಳ್ಳೆಯ ಚಿತ್ರಕಲಾವಿದ. Drama artist. ಅವನು ಮೊದಲ ಬಾರಿ ‘ಚಿಯರ್ಸ್’ ಹೇಳಿದ್ದು ನನ್ನೊಂದಿಗೆ. ಆತ ಎಂಥ ಒಳ್ಳೆ ಸ್ಟೆನೋ ಅಂದರೆ, ಆ ಪರಿ ಕುಡಿದರೂ ಅವನ ಮಲ್ಟಿನ್ಯಾಷನಲ್ ಕಂಪನಿ ಕ್ರಮ ಕೈಗೊಳ್ಳಲಿಲ್ಲ. ಚೆನ್ನಾಗಿ ನೋಡಿಕೊಂಡಿತು. ಕುಡಿತ ಬಿಡಿಸಲು ಪ್ರಯತ್ನಿಸಿದರು. ಕೆಲಸಕ್ಕೆ ಬರದಿದ್ದರೂ ಸಂಬಳ ಕೊಟ್ಟರು. ವಿಸ್ಕಿಯೇ ಸಿಗದ ಜಾಗಕ್ಕೆ ಟ್ರಾನ್ಸ್​ಫರ್ ಮಾಡಿದರು. ಅನಂತ ಬದಲಾಗಲಿಲ್ಲ. ಅವನು ಬೆಂಗಳೂರಿಗೆ ಬರುವ ಮುನ್ನ ಬಳ್ಳಾರಿಯಲ್ಲಿದ್ದ. ಅದೊಂದು ದಿನ ಯಾರೋ ಫೋನ್ ಮಾಡಿದರು ನನ್ನ ಪತ್ನಿ ಲಲಿತೆಗೆ. ‘ಅಮ್ಮಾ, ನಿಮ್ಮ ತಮ್ಮ ಮೂರು ದಿನದಿಂದ ಮನೆಗೆ ಬೀಗ ಹಾಕಿಲ್ಲ. ಅವರು ಬೀದಿಬೀದಿ ತಿರುಗುತ್ತಿದ್ದಾರೆ. ಮೈಮೇಲೆ ಬಟ್ಟೆ ಇಲ್ಲ. nude. ಏನಾದರೂ ಮಾಡಿ’ ಅಂತ ಹೇಳಿದರು.

ಲಲಿತೆ ಮಾತೃಹೃದಯಿ. ಅವಳಿಗೆ ಅನಂತ ಪ್ರಾಣಪ್ರಿಯ. ಬಳ್ಳಾರಿಗೆ ಸಂಬಂಧಿಸಿದಂತೆ ಏನೇ ಸಮಸ್ಯೆ ಬಂದರೂ, ಅವಳು ನನ್ನ ಜೀವದ ಗೆಳೆಯ, ಅವಳ ತಮ್ಮನಂಥ ಸುರೇಶ್ ಶೆಟ್ಟಿಗೆ ಫೋನ್ ಮಾಡುತ್ತಾಳೆ. ‘ಅಕ್ಕಾ, ನಂಗೆ ಬಿಡಿ’ ಅಂದವನೇ ಜೀಪು ಒಯ್ದು ಅನಂತನಿಗೆ ಬೆಡ್​ಷೀಟ್ ಸುತ್ತಿ ಆಸ್ಪತ್ರೆಗೆ ಒಯ್ದ. ಆ ಸ್ಥಿತಿಯಲ್ಲಿ ಚಿಕಿತ್ಸೆ ಮಾಡಿಸಿದರೆ ಅವನು ಏನಂದ ಗೊತ್ತೆ? ‘ಏಯ್, ನಾನ್ಯಾರು ಗೊತ್ತಾ? ರವಿ ಬೆಳಗೆರೆ ಬ್ರದರ್-ಇನ್-ಲಾ! ಚೇಷ್ಟೆ ಮಾಡ್ತೀಯಾ?’ ಅಂದ.

ಕುಡಿತ ಹಾಗೆ ಮಾತಾಡಿಸುತ್ತದೆ! ತಪ್ಪು ಅವನದಲ್ಲ.

ಆಮೇಲೆ ಬೆಂಗಳೂರಿಗೆ ವರ್ಗಾ ಆಗಿ ಬಂದ. ಅವನು ನಮ್ಮ ಮನೆಗೆ ಬಂದರೆ ನನ್ನ ಮಕ್ಕಳಿಗೆ ಖುಷಿಯೋ ಖುಷಿ. ಅವನು ನಗೆಯ ಮೂಟೆ. ಲಲಿತೆ ಅವನನ್ನು ಹೊಟ್ಟೆಯಲ್ಲಿ ಹುಟ್ಟಿದ ಮಗನಂತೆ ನೋಡಿಕೊಂಡಳು. ಪ್ರತೀ ತಿಂಗಳು ಅನಂತ ಒಂದು ಲಕ್ಷ ರೂಪಾಯಿ ಸಾಲಮಾಡಿಕೊಂಡು ಬರುತ್ತಿದ್ದ. ಲಲಿತೆ ‘ಇದೊಂದ್ಸಲ ತೀರಿಸಿ’ ಅನ್ನುತ್ತಿದ್ದಳು. ನಾನು ತೀರಿಸುತ್ತಿದ್ದೆ. ಅವನ ಮಗಳನ್ನು ಐದು ವರ್ಷ ಮನೆಯಲ್ಲಿಟ್ಟುಕೊಂಡು ಓದಿಸಿದೆ. ನನ್ನ ಮಗಳು ಚೇತನಾ ಅವಳಿಗೆ ನೌಕರಿ ಕೊಡಿಸಿದಳು.

ಆದರೆ ಅನಂತ ಕುಡಿತ ಬಿಡಲೇ ಇಲ್ಲ. ಅದೊಮ್ಮೆ ಕುಡಿದು ಗಾಡಿಯಿಂದ ಬಿದ್ದು ಕಾಲು ಮುರಿದುಕೊಂಡ. ಲಲಿತೆ ಚಿಕಿತ್ಸೆ ಕೊಡಿಸಿದಳು. But, ಅನಂತ ಕುಡಿತ ಬಿಡಲಿಲ್ಲ. ಇನ್ನೊಮ್ಮೆ ಯಾರದೋ ಗಾಡಿಯಲ್ಲಿ ಕುಳಿತು, ಆಯತಪ್ಪಿ ಬಿದ್ದು ಸೊಂಟದ ಮೂಳೆ ಮುರಿದುಕೊಂಡ. ‘ಅಕ್ಕಾ, ನಾನು ನಿನ್ನ ಮನೇಲಿರ್ತೀನಿ ಕಣೇ’ ಅಂತ ಗೋಗರೆದ. ಮನೇಲಿ ಇಟ್ಟುಕೊಂಡರೆ ನಾನೇನಾದರೂ ಅಂತೀನೇನೋ ಅಂದುಕೊಂಡು ಲಲಿತೆ ‘ಬೇಡ, ಹೆಂಡತಿ-ಮಕ್ಕಳ ಜೊತೆಗಿರು’ ಅಂದಳು. Actually, ಅವನಿದ್ದಿದ್ದರೆ ನನಗೆ ಏನೂ ಅಭ್ಯಂತರವಿರಲಿಲ್ಲ. ನಮ್ಮ ಮನೆಯಲ್ಲಿ ನಾವು ಅನೇಕರನ್ನು ಸಾಕಿದ್ದೇವೆ. ಇವತ್ತಿಗೂ ಅರ್ಹರನ್ನು ಸಾಕುತ್ತಿದ್ದೇವೆ. ನಾವು ಸಾಕಿದವರು ಓದಿ, topperಗಳಾಗಿ ಹೊರಬಿದ್ದಿದ್ದಾರೆ. ನಾನು ಸಾಕಿದ ಒಬ್ಬ ಹಿಂದುಳಿದ ವರ್ಗದ ಹುಡುಗ ಇವತ್ತು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸರ್ಜನ್ ಆಗಿದ್ದಾನೆ. ಅನೇಕರು ಅಮೆರಿಕಕ್ಕೆ ಹೋಗಿದ್ದಾರೆ. ಒಬ್ಬ ಅನಂತ ನನಗೆ ವಜ್ಜೆಯಾಗುತ್ತಿದ್ದನಾ?

ಆದರೆ ಅನಂತ ಕುಡಿತ ಬಿಡಲಿಲ್ಲ. ಅದೊಂದು ದಿನ ಕುಂಟುತ್ತಾ ಹೋಗಿ ಮನೆ ಹತ್ತಿರದ ಅಂಗಡಿಯಿಂದ ರಮ್ ತಂದುಕೊಂಡ. ಸೋಫಾ ಮೇಲೆ ಕೂತು ಟೀವಿಯಲ್ಲಿ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದ. ಮಧ್ಯದಲ್ಲಿ fresh roomಗೆ ಹೋದವನು ಜಲಬಾಧೆ ಮುಗಿಸಿ ಹೊರಬಂದನಂತೆ. ಅವನ ಹೆಂಡತಿ ಪ್ರಕಾರ ಬಚ್ಚಲಿನಿಂದ ಹಾಲ್​ಗೆ ಜಂಪ್ ಮಾಡಿ ಬಿದ್ದು ಸತ್ತುಹೋದನಂತೆ! That’s the end.

ಅಷ್ಟು ಚೆಂದದ ಜೀವಿ ಕುಡಿಕುಡಿದು ಸಾಯಬೇಕೆ? ನಿಮಗೆ ಗೊತ್ತಿರಲಿ: ಇದು ಸಭ್ಯರಿಗೆ, ಒಳ್ಳೆಯವರಿಗೆ, ಸೌಮ್ಯ ಸ್ವಭಾವದವರಿಗೇ ಬಿಡಲಾಗದ ಚಟವಾಗಿ ಅಂಟಿಕೊಳ್ಳುತ್ತದೆ. ದುಷ್ಟರಿಗಲ್ಲ. ತುಂಬ ಒಳ್ಳೆಯವರೇ ಕುಡಿಕುಡಿದು, addict ಆಗಿ ಸಾಯುತ್ತಾರೆ. ಬೇಕಾ?

ನನ್ನ ಎರಡನೇ ಪತ್ನಿ ಯಶೋಮತಿ. ಅವಳ ಏಕೈಕ ತಮ್ಮ ನರೇಂದ್ರ. ನನಗಿಂತ ತುಂಬ ಚಿಕ್ಕವ. ಯಶೋಮತಿಯನ್ನು ನಾನು ಮದುವೆಯಾದಾಗ ಅವನು ವಿರೋಧಿಸಲಿಲ್ಲ. ನಮ್ಮಿಬ್ಬರ ಜಾತಿಗಳು ಬೇರೆ ಬೇರೆ. ಪ್ರೀತಿಸಿ ಮದುವೆಯಾಗಿದ್ದೇವೆ. ನಮ್ಮ ಮಗ ಹಿಮವಂತ. ನರೇಂದ್ರನೂ ಪ್ರೀತಿಸಿ ಮದುವೆಯಾದ. ಅದು ಕೂಡ intercaste ಮದುವೆ. ಒಳ್ಳೆಯ ಹುಡುಗಿ. ಮಗು ಹುಟ್ಟಿದ: ಪ್ರಯಾಗ್! ನರೇಂದ್ರ ಒಳ್ಳೆಯ ಶಿಲ್ಪಿ. ತುಂಬ ಚೆಂದನೆಯ ಶಿಲ್ಪ ಕೆತ್ತುತ್ತಿದ್ದ. ಚೆಂದಗೆ ದುಡಿಯುತ್ತಿದ್ದ. ಒಬ್ಬರಿಗೆ ಒಂದು ಸಲ ಕೆಟ್ಟ ಮಾತಾಡಿದವನಲ್ಲ. ಅವನ ತಂದೆ ದೈವಸಮಾನರು. ತಾಯಿ, ನನಗೆ ಅಮ್ಮ.

ಎಲ್ಲ ಚೆನ್ನಾಗಿತ್ತು. ಆದರೆ one fine day, ನರೇಂದ್ರ ಕೈಲಿ ಗ್ಲಾಸು ಹಿಡಿದು ‘ಚಿಯರ್ಸ್’ ಅಂದ. ಗ್ಲಾಸು ಎತ್ತಿಕೊಂಡ. ಕೆಳಕ್ಕೆ ಇಡಲೇ ಇಲ್ಲ. ಎಷ್ಟು ಕುಡಿದನೆಂದರೆ, ಎರಡು ಸಲ ಆಸ್ಪತ್ರೆಗೆ ಸೇರಿಸಿದೆವು. ಅವನ ಲಿವರ್ ಕೊಳೆತುಹೋಯಿತು. ಒಮ್ಮೆ ಲಿವರ್ ತುಂಡರಿಸಿದರೆ ಮತ್ತೆ ಬೆಳೆಯುತ್ತೆ. But, ಒಮ್ಮೆ ಒಂಚೂರು ಕೊಳೆತರೆ, you are gone. ಬದುಕೋ ಅವಕಾಶವೇ ಇಲ್ಲ. ನರೇಂದ್ರ ನಿಸ್ಸಹಾಯಕನಾಗಿ ಅಳುತ್ತ ಅಳುತ್ತ ಸತ್ತುಹೋದ. ಬೇಕಾ?

Please, ಗ್ಲಾಸು ಕೆಳಗಿಡಿ. ಅಸಲು ಮುಟ್ಟಲೇಬೇಡಿ. ನಿಮಗೆ ಅಭ್ಯಾಸ ಬಿಡಲು ಸಾಧ್ಯವೇ ಆಗದಿದ್ದರೆ, helpless ಆಗಿದ್ದರೆ, ನೀವು ಡಾಕ್ಟರನ್ನು ಸಂರ್ಪಸಿ. ಉತ್ತರ ಕರ್ನಾಟಕದಲ್ಲಿ ನೀವಿದ್ದರೆ ಡಾ. ಆನಂದ್ ಪಾಂಡುರಂಗಿ ಅವರನ್ನು ಸಂರ್ಪಸಿ. ಅವರು ಧಾರವಾಡದ ಮಿಚಿಗನ್ ಕಾಂಪೌಂಡ್​ನಲ್ಲಿರುತ್ತಾರೆ. ಅಲ್ಲಿಗೆ ಹೋಗಿ. ಅವರ ಫೋನ್ ನಂಬರ್ 0836 2773878. ನೀವು ಬೆಂಗಳೂರಿನಲ್ಲಿದ್ದರೆ, ಜಯನಗರದ ‘ಮಾನಸ’ ಆಸ್ಪತ್ರೆಗೆ ಹೋಗಿ. ಅದರ ನಂಬರ್ 26565135. ನೀವು ಅವರ ಸಹಾಯ ತೆಗೆದುಕೊಳ್ಳಿ. ಒಂದಷ್ಟು ದಿನ ಚಿಕಿತ್ಸೆ ತಗೊಳ್ಳಿ. ಒಂದೇ ಒಂದು ಮಾತ್ರೆ ಈ ಚಟ ಬಿಡಿಸುತ್ತದೆ.

I request. ನಾನು ವರ್ಷಗಟ್ಟಲೆ ಕುಡಿದು ಹೈರಾಣಾಗಿ, ಬೇಸತ್ತು ಕಡೆಗೆ ಗ್ಲಾಸು ಕೆಳಗಿಟ್ಟು ಶಾಶ್ವತವಾಗಿ ಅದನ್ನು ಬಿಟ್ಟುಬಿಟ್ಟಿದ್ದೇನೆ. ಇವತ್ತು ನಾನು ಯಶಸ್ವಿ ಮನುಷ್ಯ. ಅದ್ಭುತವಾದ ಶಾಲೆ ನಡೆಸುತ್ತಿದ್ದೇನೆ. ಎಂಬತೆôದು ಪುಸ್ತಕ ಬರೆದಿದ್ದೇನೆ. ಹಣ ದುಡಿದಿದ್ದೇನೆ. ನಿಸ್ಸಹಾಯಕರನ್ನು ಸಾಕಿದ್ದೇನೆ. ಇದನ್ನೆಲ್ಲ ನೀವೂ ಮಾಡಬಹುದು.

Please, ಗ್ಲಾಸು ಕೆಳಗಿಡಿ.

(ಲೇಖಕರು ಹಿರಿಯ ಪತ್ರಕರ್ತರು)

One Reply to “ಒಂದೇ ವಿನಂತಿ, ಮೊದಲು ಗ್ಲಾಸು ಕೆಳಗಿಡಿ”

  1. ಬೆಳಗೆರೆಯವರೇ,
    ಕುಡಿತದಿಂದ ನಿವೃತ್ತಿಹೊಂದಿ, ಎಲ್ಲಾ ಕುಡುಕರಿಗೆ ಕುಡಿತವನ್ನು ಕೈ ಬಿಡಲು ಅತ್ಯುತ್ತಮ ಕರೆಯನ್ನು ನೀಡಿದ್ದೀರಿ. ಈ ಕುಡಿತ ಅದೇನು ಮೋಡಿ ಮಾಡುವುದೋ ಗೊತ್ತಿಲ್ಲ, ತರಕಾರಿ ತರುವಾಗ ಒಂದೆರಡು ರುಪಾಯಿಗೆ ಚೌಕಾಸಿ ಮಾಡುವ ಜನರು, ಬಾರಿಗೆ ಹೋಗಿ ಸಾವಿರಾರು ರೂಪಾಯಿ ತೆತ್ತು, ಯಾವ ಯಾವ ಚಿಂತೆಗಳಿಂದ ಮತ್ತು ನೋವುಗಳಿಂದ ಮುಕ್ತಿ ಹೊಂದಿ, ಅದ್ಯಾವುದೋ ಅಮಲಿನಲ್ಲಿ ತೇಲಾಡಲು ಬಯಸುವರೋ ಅವರವರಿಗೇ ಗೊತ್ತು. ಕೆಟ್ಟ ಕೆಲಸಗಳಿಗೆ ಹಳ್ಳದ ಕಡೆಗೆ ಎಷ್ಟು ಸುಲಭವಾಗಿ ನೀರು ಹರಿಯುವುದೋ ಅಷ್ಟೇ ರಭಸವಾಗಿ ಜನರು ಒಂದಾಗಿ ಮುನ್ನುಗ್ಗುತ್ತಾರೆ. ಆದರೆ ಒಂದು ಒಳ್ಳೆಯ ಕೆಲಸ ಮಾಡಬೇಕೆಂದರೆ, ಒಂದು ಉನ್ನತ ಶಿಖರ ಹತ್ತಿದಹಾಗೆ ಪ್ರಯಾಸದಾಯಕವಾಗಿರುತ್ತದೆ, ಕೊನೆಗೆ ಜೊತೆಗೆ ಯಾರೂ ಉಳಿದಿರುವುದಿಲ್ಲ. ಈ ಕುಡುಕರ ನಂಬಿದವರ ಮತ್ತು ಕೈ ಹಿಡಿದವರ ಬಗ್ಗೆ ಕನಿಕರ ಮತ್ತು ಸಂಕಟವಾಗುತ್ತದೆ. – ಗುಂಜ್ಮ೦ಜ (GUNJMANJA)

Comments are closed.