ಮೋದಿ ಖಂಡಿತ ಮುಯ್ಯಿ ತೀರಿಸ್ತಾರೆ…

ಇದೇನಿದು?

ಎಂದೂ ಟೀವಿಯ ಮುಂದೆ ಕೂರದ ನಾನು ನಿನ್ನೆ ಬೆಳಗಿನ ಜಾವದ ತನಕ ಕೂತಿದ್ದೆ. ಕರುಳು ಹೊರಳುತ್ತಿದ್ದವು. ನನಗೆ ಕಾಶ್ಮೀರ ಹೊಸದಲ್ಲ.It is a beautiful land. ಪಾಕಿಸ್ತಾನಕ್ಕೆ ನಾಲ್ಕು ಸಲ ಹೋಗಿ ಬಂದಿದ್ದೇನೆ. ನನ್ನ ಆತ್ಮೀಯ ಮೇಜರ್ ಪುರುಷೋತ್ತಮನ್​ರನ್ನು ಇದೇ ಉಗ್ರರು ಶ್ರೀನಗರದ ಸೇನಾಕೇಂದ್ರದಲ್ಲೇ ಕೊಂದುಹಾಕಿದರು. ಅಲ್ಲಿ ನನ್ನ ಸ್ನೇಹಿತರಿದ್ದಾರೆ. ರಾಜೀವ್ ಗಾಂಧಿ ಹಂತಕರಾದ ಶುಭಾ ಮತ್ತು ಶಿವರಾಸನ್​ರನ್ನು ಬೆಂಗಳೂರಿನ ಕೋಣನಕುಂಟೆ ತನಕ ಬಂದು ಬೇಟೆಯಾಡಿದ ರಾಧಾ ವಿನೋದರಾಜ್ ನನ್ನ ಗೆಳೆಯರು. ಅವರು ಕಾಶ್ಮೀರದ ಪೊಲೀಸ್ ಮುಖ್ಯಸ್ಥರಾಗಿದ್ದಾಗ ಅವರೊಂದಿಗೆ ಶ್ರೀನಗರ್​ನ ಅವರ ಕ್ವಾರ್ಟರ್ಸಿನಲ್ಲಿದ್ದೆ. ಅಲ್ಲಿನ ದಾಲ್ ಲೇಕ್​ನಲ್ಲಿ ಗಂಟೆಗಟ್ಟಲೆ ವಿಹರಿಸಿದ್ದೆ. ಕಾಶ್ಮೀರದ ವಿಶಿಷ್ಟ ಸೊಪು್ಪ, ಅದ್ಭುತ ಕುರಿಮಾಂಸ ಎರಡನ್ನೂ ಅಲ್ಲಿನ ಹಿಂದೂ ಪಂಡಿತರ ಮನೆಯಲ್ಲಿ ತಿಂದು ಚಪ್ಪರಿಸಿದೆ. ನೆನಪಿರಲಿ, ಅಲ್ಲಿ ಹಿಂದೂ ಪಂಡಿತರು ಮಾಂಸ ತಿನ್ನುತ್ತಾರೆ. ‘ಹಮ್ಕೋ ಶಿವ್​ಜೀ ನೇ ಆಜ್ಞಾ ದಿಯಾ ಹೈ’ ಅಂತಾರೆ.

ನಾನು 1999 ಜುಲೈನಲ್ಲಿ ಹೆಗಲಿಗೆ ಚಿಕ್ಕ ಕ್ಯಾಮರಾ ಕಟ್ಟಿಕೊಂಡು ಕಾರ್ಗಿಲ್ ಬೆಟ್ಟಸಾಲು ಹತ್ತುತ್ತಿದ್ದಾಗ ಮೇಲಿನಿಂದ ನಮ್ಮ ಯೋಧರ ಶವದ ಪೆಟ್ಟಿಗೆಗಳು ಇಳಿದುಬರುತ್ತಿದ್ದರೆ ಕಣ್ಣಲ್ಲಿ ಚಕ್ರತೀರ್ಥ. ಈಗ ಟೀವಿಗಳಲ್ಲಿ-ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಅನೇಕ ಹುಡುಗ ಹುಡುಗಿಯರಿಗೆ ಆಗ ಕಾರ್ಗಿಲ್ ಎಂದರೆ ಬಾಚಣಿಕೆಯೋ, ಟೂತ್​ಪೇಸ್ಟೋ ಎಂಬುದು ಬಹುಶಃ ಗೊತ್ತಿರಲಿಕ್ಕಿಲ್ಲ. ಅಲ್ಲಿ ಮೊಟ್ಟಮೊದಲ ಪರ್ವತ (Peak)ದ ಹೆಸರು ಟೋಲೊಲಿಂಗ್. ಅದರ ನೆತ್ತಿಯ ಮೇಲೆ ಅಡಗಿದ್ದ ಉಗ್ರ ಹಾಗೂ ಪಾಕ್ ಸೈನಿಕರಲ್ಲಿ ಕೆಲವರನ್ನು ಕೊಂದು, ಉಳಿದವರನ್ನು ಅಲ್ಲಿಂದ ಗದುಮಿದ ನಮ್ಮ ಬೆಟಾಲಿಯನ್​ನ ಕರ್ನಲ್ ರವೀಂದ್ರನಾಥ್ ಕನ್ನಡಿಗರು, ದಾವಣಗೆರೆಯವರು. ‘ಸರ್, ನಾನು ರವಿ ಬೆಳಗೆರೆ ಅಂತ…’ ಅನ್ನುತ್ತಿದ್ದಂತೆಯೇ ‘ಏ ಬನ್ರೀ… ಕರ್ನಾಟಕದಲ್ಲಿ ರವಿ ಬೆಳಗೆರೆ ಯಾರಿಗೆ ಗೊತ್ತಿಲ್ಲ!’ ಎಂದು ಕೈಕುಲುಕಿ ಆತ್ಮೀಯವಾಗಿ ಮಾತನಾಡಿ ತಮ್ಮ ಗೆಲುವಿನ ಅನುಭವ ಹಂಚಿಕೊಂಡಿದ್ದರು. ಅಂದು ನಾವು ನಿಂತು ಮಾತಾಡಿದ ಜಾಗದ ಹೆಸರು ಬೆಟ್ಟಸಾಲಿನ ಮಧ್ಯದ ಮೊಘಲ್​ಪುರ ಬೇಸ್.

ಮುಂದೆ ಕರ್ನಲ್ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಗೊಂಡರು. ನಾನು ‘ಹಿಮಾಗ್ನಿ’ ಕಾದಂಬರಿ ಬರೆಯಲು ಸಿದ್ಧವಾಗುತ್ತಿದ್ದೆ. ಕೊಂಚ ಅನಾರೋಗ್ಯವಾಗಿ ‘ಅನುಗ್ರಹ ವಿಠಲ’ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೆ. ವಿನಂತಿಯ ಮೇರೆಗೆ ಅಲ್ಲಿಗೇ ಬಂದ ಕರ್ನಲ್ ಕಾದಂಬರಿಗೆ ಬೇಕಾದ ಅನೇಕ inputs ಕೊಟ್ಟರು. ‘ಹಿಮಾಗ್ನಿ’ಯನ್ನು ಅವರಿಗೇ ಅರ್ಪಿಸಿದೆ. Unfortunately, ಅದಾದ ಕೆಲವೇ ದಿನಗಳಿಗೆ ಕರ್ನಲ್ ರವೀಂದ್ರನಾಥ್ ಹೃದಯಾಘಾತದಿಂದ ತೀರಿಕೊಂಡರು. We lost our hero.

ಅದಾದ ಮೇಲೆ ನನ್ನ ಪಾಕಿಸ್ತಾನ್ ಯಾತ್ರೆಗಳು ಶುರುವಾದವು. ಒಂದೆರಡಲ್ಲ, ನಾಲ್ಕು ಸಲ. ಮೊದಲು ಕಾಂಗೋ ದೇಶದಲ್ಲಿ ಐವತ್ತು ಸಾವಿರ ಲಂಚ ಕೊಟ್ಟು ‘ಕಾಂಗೋದಲ್ಲಿ ಹುಟ್ಟಿದ ಭಾರತೀಯ- Mr. Mohammad Rafi’ ಅಂತ fake passport ಮಾಡಿಸಿಕೊಂಡು ಎರಡು ಸಲ ಪಾಕಿಸ್ತಾನಕ್ಕೆ ಹೋದೆ. ನಿಜಕ್ಕೂ ಪ್ರಯಾಣಿಸುವಾಗ, ತಿರುಗಾಡುವಾಗ ಹೆದರಿಕೆಯಿಂದಾಗಿ ಜೀವ ಬಾಯಿಗೆ ಬಂದಂತಾಗುತ್ತಿತ್ತು. ಅಕಸ್ಮಾತ್ ಸಿಕ್ಕಿಹಾಕಿಕೊಂಡರೆ you are gone. ಅಲ್ಲಿನ ಕೋಟ್ ಲಕಪತ್ ಜೈಲಿನಲ್ಲಿ ಹದಿನೈದಿಪ್ಪತ್ತು ವರ್ಷ ಕೊಳೆಯಬೇಕಾಗುತ್ತದೆ. ಆಯಸ್ಸಿಗೆ ಸುಸ್ತಾದರೆ ಅಲ್ಲೇ ಗುಡ್​ಬೈ! ಮುಂದೆ ಎರಡು ಸಲ ಅಧಿಕೃತವಾಗಿ ಎಸ್.ಎಂ. ಕೃಷ್ಣ ಅವರೊಂದಿಗೆ ಇಸ್ಲಾಮಾಬಾದ್, ರಾವಳಪಿಂಡಿ, ಲಾಹೋರ್​ಗಳಿಗೆ ಹೋಗಿಬಂದೆ.

ಪಾಕಿಸ್ತಾನ ಬಡಪ್ರಜೆಗಳನ್ನು ಹೊಂದಿದ, ಹೊಣೆಗೇಡಿ ನಾಯಕರು ಮತ್ತು ಮತೀಯ ಮುಖಂಡರನ್ನು ಹೊಂದಿರುವ ಮೂರ್ಖರಾಷ್ಟ್ರ. ಅಲ್ಲ, ಇಡೀ ಜಗತ್ತು ದ್ವೇಷಿಸುತ್ತಿದ್ದ ಒಸಾಮಾ ಬಿನ್ ಲಾಡೆನ್​ನನ್ನು ಅಬೋತಾಬಾದ್​ನಲ್ಲಿ ಮಿಲಿಟರಿ ಕಾಲೇಜಿನ ಪಕ್ಕದಲ್ಲೇ ಇಟ್ಟುಕೊಂಡು ಸಾಕಿದ ರಾಷ್ಟ್ರ. ನೂರಾರು ಭಾರತೀಯರನ್ನು ಬಾಂಬಿಟ್ಟು ಕೊಂದು ಪರಾರಿಯಾದ ದಾವೂದ್ ಇಬ್ರಾಹಿಂ, ಛೋಟ ಶಕೀಲ್, ಟೈಗರ್ ಮೆಮೊನ್​ಗಳನ್ನು ಸಾಕುತ್ತಿದೆ, ಇಂದಿಗೂ. ಅವರೇ ಹೇಳಿಕೊಂಡಂತೆ ಅದು ಇಸ್ಲಾಮಿಕ್ ರಾಷ್ಟ್ರ. ಆದರೆ ನಾನು ಇಸ್ಲಾಮಾಬಾದ್​ನಲ್ಲಿ ಎರಡು ದಿನದಲ್ಲಿ ನೋಡಿದ್ದು hardly ನಾಲ್ಕಾರು ಬುರ್ಖಾ. ಕರಾಚಿಯಲ್ಲಿ ಭಯಾನಕವೆಂಬಷ್ಟು ದೊಡ್ಡ ವೇಶ್ಯಾ ವಠಾರಗಳಿವೆ, ಹೆಂಡದ ಹೊಳೆಯೇ ಹರಿಯುತ್ತದೆ. ಇದೆಲ್ಲವೂ ಇಸ್ಲಾಂ ಪ್ರಕಾರ ನಿಷಿಧ್ಧ. ಅಲ್ಲಿ ಎಲ್ಲವೂ ಚಲ್ತಾ ಹೈ! ಪ್ರತೀ ರಾಜಕೀಯ ನಾಯಕನಿಗೂ ಎರಡೆರಡು ಪಾಸ್​ಪೋರ್ಟ್​ಗಳಿವೆ. ಅವರ ನಿಜವಾದ ತವರು ಇಂಗ್ಲ್ಲೆಂಡ್. ಕೋಟ್ಯಂತರ ಪೌಂಡ್ ಕಾಳಧನ ಇರಿಸಿದ್ದಾರೆ. ಈ ವಿಷಯದಲ್ಲಿ ನಮ್ಮ ಲೀಡರುಗಳೇನೂ ಕಡಿಮೆ ಇಲ್ಲ. ಆದರೆ ಇವರು ರಕ್ತಬಾಕರಲ್ಲ.

ನೋಡಿ, ಈಗಿಂದೀಗ್ಗೆ ಮೋದಿ ಪಾಕ್ ವಿರುದ್ಧ ಯುದ್ಧ ಸಾರಬೇಕು ಎಂದು ಆವೇಶದಿಂದ ಅರಚುವವರಿದ್ದಾರೆ. Not easy. ಹಿಂದೆ 1972ರಲ್ಲಿ ಜರ್ಮನಿಯ ಮ್ಯೂನಿಕ್​ನಲ್ಲಿ ಮುಸ್ಲಿಂ ಉಗ್ರರು ಹನ್ನೊಂದು ಇಸ್ರೇಲಿ ಒಲಂಪಿಕ್ ಪಟುಗಳನ್ನು ಅಪಹರಿಸಿ ಸುಮಾರು ಇನ್ನೂರ ಎಪ್ಪತೆôದು ಅರಬ್ ಉಗ್ರರನ್ನು ಇಸ್ರೇಲ್​ನ ಜೈಲುಗಳಿಂದ ಬಿಡುಗಡೆ ಮಾಡಬೇಕೆಂದು ಬೇಡಿಕೆ ಇಟ್ಟರು. ಇಸ್ರೇಲ್ ಅಧ್ಯಕ್ಷೆ ಗೋಲ್ಡಾ ಮೇರ್ ಸುತರಾಂ ಒಪ್ಪಲಿಲ್ಲ. ಉಗ್ರರು ಹನ್ನೊಂದು ಇಸ್ರೇಲಿ ಒಲಂಪಿಕ್ ಪಟುಗಳನ್ನು ಬರ್ಬರವಾಗಿ ಕೊಂದುಹಾಕಿದರು. No problem ಅಂದಳು ಗಟ್ಟಿಗಿತ್ತಿ ಗೋಲ್ಡಾ ಮೇರ್. ಇಡೀ ಇಸ್ರೇಲ್ ಆಕೆಯನ್ನು ‘ನಿರ್ದಯಿ’ ಅಂತ ದೂಷಿಸಿತು, ಶಪಿಸಿತು. ಆಕೆ ಪ್ರತಿಕ್ರಿಯಿಸಲಿಲ್ಲ.

ಆದರೆ ಸದ್ದಿಲ್ಲದೆ ಮೊಸಾದ್​ನ ಐವರು ಅಧಿಕಾರಿಗಳನ್ನು ಕರೆದು ‘ನಮ್ಮವರನ್ನು ಅಪಹರಿಸಿ ಕೊಂದ ಹುಂಬ ಉಗ್ರರನ್ನು ಮರೆತುಬಿಡಿ. ಆದರೆ ಮ್ಯೂನಿಕ್​ನ ಆ ನರಮೇಧವನ್ನು plan ಮಾಡಿ ನಮ್ಮ ಹನ್ನೊಂದು ಪಟುಗಳನ್ನು ಕೊಲ್ಲಿಸಿದ master mindನ ಪತ್ತೆಮಾಡಿ, ಅವರಿದ್ದಲ್ಲಿಗೇ ಹೋಗಿ, pin pointed ಆಗಿ, ಆರಿಸಿ ಆರಿಸಿ ಒಬ್ಬೊಬ್ಬರನ್ನೇ ಕೊಂದುಬಿಡಿ. Counter terrorismನಲ್ಲಿ ನೀವು ನಿಷ್ಣಾತರು. ನಿಮಗೆ ಹಣ, ಆಯುಧ, ಎಲ್ಲಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯ ಕೊಡುತ್ತೇನೆ. kill them all ಅಂದಳು. ಆಕೆ ಹೇಳಿದುದನ್ನು ಮೊಸಾದ್ ಅಧಿಕಾರಿಗಳು ಅಕ್ಷರಶಃ ಪಾಲಿಸಿದರು. ಎಲ್ಲ master plannersನ ಕೊಂದುಹಾಕಿದರು. ಇಸ್ರೇಲ್ ಅಂದ್ರೆ ಅದು. ಮೊಸಾದ್ ಅಂದ್ರೆ ಅದು. ಪ್ರತೀಕಾರವೆಂದರೆ ಹಾಗೆ! ಮೋದಿ ಅಂಥದ್ದೇನನ್ನೋ ಮಾಡಬೇಕು, ಮಾಡುತ್ತಾರೆ.

ಈ ಬಗ್ಗೆ ಮೊಸಾದ್ ಅಧಿಕಾರಿಯೇ ಬರೆದ ‘ವೆಂಜೆನ್ಸ್’ ಎಂಬ ಕೃತಿ ಬಂತು. ಅದನ್ನು ನಾನು ಭಾರತೀಯ ಪರಿಸ್ಥಿತಿಗೆ ಒಗ್ಗಿಸಿ, ಇಂಡಿಯನೈಸ್ ಮಾಡಿ ‘ಹಿಮಾಗ್ನಿ’ ಎಂಬ ಐದುನೂರು ಪುಟಗಳ ಕಾದಂಬರಿ ಬರೆದೆ. ಟೆರರಿಸಂನ ಹೇಗೆ ಸದೆಬಡಿಯಬೇಕು ಅಂತ ಅರ್ಥವಾಗಬೇಕಾದರೆ ನೀವೊಮ್ಮೆ ‘ಹಿಮಾಗ್ನಿ’ ಓದಬೇಕು. ಈ ಅಂಕಣವನ್ನು ನೀವು ಓದುತ್ತಿರುವ ಹೊತ್ತಿಗೆ ನಾನು ಪುಲ್ವಾಮಾದಲ್ಲಿರುತ್ತೇನೆ.

ಫಿರ್ ಮಿಲೇಂಗೆ!

(ಲೇಖಕರು ಹಿರಿಯ ಪತ್ರಕರ್ತರು)

2 Replies to “ಮೋದಿ ಖಂಡಿತ ಮುಯ್ಯಿ ತೀರಿಸ್ತಾರೆ…”

  1. ಬರಹಗಾರನ ಬಗ್ಗೆ ಎಂಥ ನೆಗೆಟಿವ್ ಅಭಿಪ್ರಾಯ ಇದ್ದೂ ನಿರರ್ಗಳವಾಗಿ ಓದಿಸಿಕೊಳ್ಳುವ ಒಬ್ಬನೇ ಬರಹಗಾರ ಎಂದರೇ ರವಿ ಬೆಳಗೆರೆ 👌.

  2. ರವಿ ಬೆಳಗೆರೆಯವರೇ, ತಮ್ಮ ಜ್ಞಾನ ಮತ್ತು ಪರ್ಯಟನೆಯ ಹವ್ಯಾಸ ತುಂಬಾ ಶ್ಲಾಘನೀಯವಾಗಿದೆ. ತಾವು ನಮ್ಮ ದೇಶಕ್ಕಾದ ಅನ್ಯಾಯಗಳನ್ನು ಬಹಳ ಹತ್ತಿರದಿಂದ ಕಂಡಿದ್ದೀರಿ ಮತ್ತು ಆತ್ಮೀಯರನ್ನು ಕಳೆದುಕೊಂಡು ಆ ನೋವನ್ನೂ ಅನುಭವಿಸಿದ್ದೀರಿ. ನೀವು ಏನೇ ಹೇಳಿ ಬುದ್ಧಿವಂತರ ಕೈಯಲ್ಲಿ ಅಧಿಕಾರವಿದ್ದರೆ, ಸ್ವಲ್ಪ ಮೆರೆಯಬಹುದು ಆದರೆ ಮೂರ್ಖರ ಕೈ ಬಿಡುವುದಿಲ್ಲ, ಅದೇ ಮೂರ್ಖರ ಕೈಯಲ್ಲಿ ಅಧಿಕಾರ ಕೊಡಿ, ಉಳಿದವರನ್ನಷ್ಟೇ ಅಲ್ಲ ತಮ್ಮನ್ನೂ ಸೇರಿಸಿಕೊಂಡು ಸರ್ವನಾಶ ಮಾಡಿಬಿಡುತ್ತಾರೆ.
    ದಯವಿಟ್ಟು ತಮ್ಮ ಪುಲ್ವಾಮಾ ಸಂದರ್ಶನದ ಬಗ್ಗೆ ಮಾಹಿತಿಯನ್ನು ಲೇಖನದ ರೂಪದಲ್ಲಿ ತಮ್ಮ ಓದುಗರಿಗೆ ಆದಷ್ಟು ಬೇಗ ತಲುಪಿಸಿಕೊಡಿ. – ಗುಂಜ್ಮ೦ಜ (GUNJMANJA)

Comments are closed.