ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಸಮೀಪ ನಿರ್ಮಾಣ ಮಾಡಲು ಕಾರಣಕರ್ತರಾದ ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಹೆಸರಿಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಒತ್ತಾಯಿಸಿದರು.
ನಗರದ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಬುಧವಾರ ನಡೆದ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಬೆಂಬಲಿಗರ ಸಭೆಯಲ್ಲಿ ಮಾತನಾಡಿ, ಯರಗೋಳ್ ಡ್ಯಾಂ ನಿರ್ಮಾಣವಾಗಲು ಶ್ರೀನಿವಾಸಗೌಡ ಮೂಲ ಕಾರಣರಾಗಿದ್ದಾರೆ. ಸರ್ಕಾರಗಳ ಮೇಲೆ ಒತ್ತಡ ತಂದು ಯೋಜನೆ ಅನುಷ್ಠಾನಕ್ಕೆ ತಂದ ಗೌಡರು ಮನೆ ಮಾತಾಗಿದ್ದಾರೆ ಎಂದರು.
2006-2007ರಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು. ಮಧ್ಯದಲ್ಲಿ ಕೇವಲ ಪೈಪ್‌ಲೈನ್ ಕಾಮಗಾರಿ ಕೆಲಸ ಸ್ಥಗಿತಗೊಂಡಿತ್ತು. ಆನಂತರ ಅಧಿಕಾರಕ್ಕೆ ಬಂದ ಶ್ರೀನಿವಾಸಗೌಡರು ಸರ್ಕಾರಗಳ ಮೇಲೆ ಒತ್ತಡ ತಂದು ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಿ ಲೋಕಾರ್ಪಣೆಗೆ ಸಿದ್ಧಗೊಳಿಸಿದರು. ಡ್ಯಾಂ ನಿರ್ಮಾಣಕ್ಕೆ ಕಾಂಗ್ರೆಸ್ ಕೊಡುಗೆ ಶೂನ್ಯ ಎಂದು ಆರೋಪಿಸಿದರು.
ವಾಲೂರಿನ ವಾರ್ಕಂಡೇಯ ಜಲಾಶಯ ಕೋಡಿ ಹರಿದಾಗ ಯರಗೋಳ್ ಮೂಲಕ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿರುವ ಲೋಕೋಪಯೋಗಿ ಇಲಾಖೆಯ ಜೆ.ಇ.ಪಾಪೇಗೌಡ, ತ್ಯಾಗರಾಜ್ ಈ ಬಗ್ಗೆ ಶ್ರೀನಿವಾಸಗೌಡ ಗಮನಕ್ಕೆ ತಂದರು. ಶಾಸಕರಾಗಿದ್ದ ಕೆ.ಶ್ರೀನಿವಾಸಗೌಡರು ಸ್ಥಳ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದರು. ತಾಂತ್ರಿಕ ದೋಷದಿಂದ ನನೆಗುದಿಗೆ ಬಿದ್ದ ಕಾಮಗಾರಿಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ತೊಡಕುಗಳನ್ನು ನಿವಾರಣೆ ಮಾಡಿದರು. ಅವರ ಪ್ರಯತ್ನದಿಂದ ಯೋಜನೆ ಪೂರ್ಣಗೊಂಡಿದ್ದು ಡ್ಯಾಂಗೆ ಕೆಎಸ್‌ಜಿ ಎಂದು ಹೆಸರಿಡಬೇಕು ಎಂದು ಮನವಿ ಮಾಡಿದರು.
ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ವರ್ಧಿಸಲು ಕೆ.ಶ್ರೀನಿವಾಸಗೌಡ ತಮ್ಮ ಸ್ಥಾನವನ್ನು ತ್ಯಾಗ ಮಾಡಿದರು. ಆದರೆ ಬದಲಾದ ರಾಜಕೀಯದಿಂದಾಗಿ ಇಲ್ಲಿ ಬೇರೆಯವರು ಅಧಿಕಾರಕ್ಕೆ ಬರಬೇಕಾಯಿತು. ಇಂತಹ ವ್ಯಕ್ತಿಗಳನ್ನು ರಾಜಕೀಯವಾಗಿ ವಂಚನೆ ಮಾಡಿರುವ ಕಾಂಗ್ರೆಸ್ ಸರ್ಕಾರ ಗೌಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಇರುವುದು ವಿಷಾದಕರ ಸಂಗತಿ ಎಂದರು.
ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷ ಮೂರಂಡಹಳ್ಳಿ ಗೋಪಾಲ್, ಅಣ್ಣಹಳ್ಳಿ ಪಂಚಾಯಿತಿ ವಾಜಿ ಅಧ್ಯಕ್ಷ ನಾಗರಾಜ್, ನಗರಸಭೆ ವಾಜಿ ಸದಸ್ಯ ವೆಂಕಟೇಶ್‌ಪತಿ, ಮುಖಂಡರಾದ ಉರುಗಿಲಿ ರುದ್ರಸ್ವಾಮಿ, ಚೋಳಘಟ್ಟ ಸೀನಪ್ಪ, ಆಟೋ ನಾರಾಯಣಸ್ವಾಮಿ, ಹೋಟೆಲ್ ರಾಮು ಮತಿತರರು ಹಾಜರಿದ್ದರು.