ಬೋಪಣ್ಣ ಪ್ರಥಮ ಕೊಡವ ಸುಪ್ರೀಂಕೋರ್ಟ್ ಜಡ್ಜ್ ?

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗಿನಿಂದ ಹಾಗೂ ಕೊಡವ ಜನಾಂಗದಿಂದ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಮೊದಲಿಗರೆಂಬ ಹೆಗ್ಗಳಿಕೆಗೆ ನ್ಯಾಯಮೂರ್ತಿ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರು ಭಾಜನರಾಗುವ ಸನಿಹದಲ್ಲಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿಗೆ ನೇಮಕಾತಿಗೆ ಶಿಫಾರಸು ಮಾಡುವ ಸಾಧ್ಯತೆ ಇದೆ.

ಪ್ರಸ್ತುತ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಗೌಹಾಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2018ನೇ ಇಸವಿ ಅಕ್ಟೋಬರ್ 29 ರಂದು ಅಧಿಕಾರ ಸ್ವೀಕರಿಸಿದ್ದರು. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ 2006ನೇ ಇಸವಿ ಜನವರಿ 6 ರಂದು ನೇಮಕಗೊಂಡು 12 ವರ್ಷ ಜವಾಬ್ದಾರಿ ನಿರ್ವಹಿಸಿದ್ದರು.

ಇವರು ಹೈಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಸೇವಾ ಹಿರಿತನದಲ್ಲಿ 36ನೇ ಶ್ರೇಯಾಂಕ ಹೊಂದಿದ್ದರು. ಕೊಡಗಿನ ಹಲವರು ವಿವಿಧ ನ್ಯಾಯಾಲಯಗಳಲ್ಲಿ ವಕೀಲರಾಗಿ, ಹೈಕೋರ್ಟ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಇದುವರೆಗೂ ಕೊಡಗಿನಿಂದ ಯಾರೊಬ್ಬರು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿರಲಿಲ್ಲ. ಆ ಕೊರತೆಯನ್ನು 59ರ ಪ್ರಾಯದ ನ್ಯಾ.ಬೋಪಣ್ಣ ನಿವಾರಿಸುವ ನಿರೀಕ್ಷೆಯಿದೆ.

ಗಿರಿಕಂದರಗಳ ಹಚ್ಚಹಸಿರಿನ ಪ್ರಕೃತಿ ಸೊಬಗು, ಜೀವನದಿ ಕಾವೇರಿ ಉಗಮ ಸ್ಥಾನ, ಪಶ್ಚಿಮಘಟ್ಟದ ಹೃದಯ ಭಾಗ ಎಂಬ ಕಾರಣಕ್ಕಾಗಿ ಕೊಡಗು ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಕ್ರೀಡೆ, ಸೇನೆಗೆ ಅಪಾರವಾದ ಕೊಡುಗೆ ನೀಡಿರುವ ಕೊಡಗು, ವಿವಿಧ ಕ್ಷೇತ್ರಗಳಲ್ಲಿ ದೇಶ, ವಿದೇಶದ ಗಮನ ಸೆಳೆಯುತ್ತಾ ಬಂದಿದೆ. ನ್ಯಾಯಮೂರ್ತಿ ಬೋಪಣ್ಣ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗುವುದರೊಂದಿಗೆ ಕೊಡಗಿನ ಮತ್ತು ಕೊಡವರ ಹಿರಿಮೆಗೆ ಮತ್ತೊಂದು ಗರಿ ಸಿಗಲಿದೆ.

ಕೊಡಗಿನ ಸಹಕಾರಿ ಕ್ಷೇತ್ರದಲ್ಲಿ ಶಾಶ್ವತ ನೆನಪು ಬಿಟ್ಟು ಹೋಗಿರುವ ಸಹಕಾರಿ ಧುರೀಣ, ವಿಧಾನ ಪರಿಷತ್ ಸದಸ್ಯರಾಗಿದ್ದ ಎ.ಎನ್. ಸೋಮಯ್ಯ ಅವರ ಪುತ್ರ ನ್ಯಾ. ಬೋಪಣ್ಣ. ಪ್ರಾಮಾಣಿಕ ನಡೆ, ನುಡಿ, ವಿಶ್ವಾಸಾರ್ಹತೆ ಮತ್ತು ಕಾರ್ಯವೈಖರಿ ಮೂಲಕ ಜನಮನ ಗೆದ್ದಿರುವ ನ್ಯಾಯಮೂರ್ತಿ.

ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಕೀಲರು ನ್ಯಾ.ಬೋಪಣ್ಣ ಬಗ್ಗೆ ಹೆಚ್ಚಿನ ಗೌರವ ಹೊಂದಿದ್ದಾರೆ. ಒಳ್ಳೆಯ ವ್ಯಕ್ತಿತ್ವದ ಯೋಗ್ಯ ವ್ಯಕ್ತಿ. ನ್ಯಾಯಾಧೀಶರಾಗಿ ತನ್ನ ಪಾಲಿನ ಕರ್ತವ್ಯವನ್ನು ಯಾವ ಲೋಪ ಇಲ್ಲದ್ದಂತೆ ನಿರ್ವಹಿಸುತ್ತಾ ಬಂದಿದ್ದಾರೆ. 12 ವರ್ಷ ಹೈಕೋರ್ಟ್ ನ್ಯಾಯಾಧೀಶರಾಗಿ ಅತ್ಯಂತ ಪಾರದರ್ಶಕ- ಪ್ರಾಮಾಣಿಕ ತೀರ್ಪು ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಎಂ.ಸಿ. ನಾಣಯ್ಯ ಮಾಜಿ ಕಾನೂನು ಸಚಿವ

ಗೋಣಿಕೊಪ್ಪಲು ಪ್ರೌಢಶಾಲೆಯಲ್ಲಿ ನನ್ನ ಸಹಪಾಠಿ. ಸುಪ್ರೀಂಕೋರ್ಟ್ ನ್ಯಾಯಾಧೀಶ ಸ್ಥಾನಕ್ಕೆ ಶಿಫಾರಸುಗೊಂಡಿರುವುದು ಕೊಡವ ಜನಾಂಗ ಮತ್ತು ಕೊಡಗಿಗೆ ಹೆಮ್ಮೆ ವಿಚಾರ. ನ್ಯಾಯಾಧೀಶರಾಗಿ ನೇಮಕಗೊಳ್ಳುವುದರ ಮೂಲಕ ಉತ್ತಮ ತೀರ್ಪು ನೀಡಿ ದೇಶದ ಗಮನ ಸೆಳೆಯುವಂತಾಗಲಿ.
ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ಸಹಪಾಠಿ, ತಿತಿಮತಿ

Leave a Reply

Your email address will not be published. Required fields are marked *