ಮರಣ ಬಳಿಕವೂ ಸಂತ್ರಸ್ತೆಯರ ಗುರುತು ಬಹಿರಂಗಪಡಿಸುವಂತಿಲ್ಲ

ನವದೆಹಲಿ: ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾದ ಬಾಲಕಿಯರು ಅಥವಾ ಮಹಿಳೆಯರ ಹೆಸರನ್ನು ಅವರ ಮರಣ ಬಳಿಕವೂ ಬಹಿರಂಗಪಡಿಸದಂತೆ ಸುಪ್ರೀಂಕೋರ್ಟ್ ಮಾಧ್ಯಮಗಳಿಗೆ ನಿರ್ದೇಶನ ನೀಡಿದೆ.

ಸಂತ್ರಸ್ತೆಯರ ಹೆಸರನ್ನು ಬಹಿರಂಗ ಪಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್, ಸಂತ್ರಸ್ತೆಯರ ವಿವರವನ್ನು ಗೌಪ್ಯ ಆಗಿರಿಸುವ ಭಾರತೀಯ ದಂಡಸಂಹಿತೆ 228-ಎ ವಿಧಿಯನ್ನು ಮರು ಪರಿಶೀಲಿಸುವುದಾಗಿ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ್ ಮತ್ತು ದೀಪಕ್ ಗುಪ್ತಾ ಅವರಿದ್ದ ನ್ಯಾಯಪೀಠ ಹೇಳಿತ್ತು. ಪಾಲಕರು ಅನುಮತಿಸಿದರೆಂದು ಸಂತ್ರಸ್ತೆಯ ಹೆಸರನ್ನು ಮಾಧ್ಯಮಗಳಲ್ಲಿ ಬಹಿರಂಗ ಪಡಿಸುವುದು ಎಷ್ಟು ಸರಿ? ಮುಂದೆ ಆಕೆ ಕಳಂಕ ಹೊತ್ತು ಜೀವನ ನಡೆಸಬೇಕಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಪಾಲಕರು ಬಡವರಾಗಿದ್ದರೆ, ಹಣದಾಸೆಗಾಗಿ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಲು ಸಮ್ಮತಿಸುವ ಸಾಧ್ಯತೆ ಇರುತ್ತದೆ ಎಂದೂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ.

ಕಥುವಾದಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆ ಮೃತಪಟ್ಟಿದ್ದಳು. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿತ್ತು. ದೇಶಾದ್ಯಂತ ಪ್ರತಿಭ ಟನೆಯೂ ವ್ಯಕ್ತವಾಗಿತ್ತು. ಬಹುತೇಕ ಮಾಧ್ಯಮಗಳು ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಿದ್ದವು. ಇಂತಹ ಸಂದರ್ಭದಲ್ಲಿ ವರದಿ ಪ್ರಕಟಿಸದಂತೆ ಮಾಧ್ಯಮಗಳನ್ನು ನಿರ್ಬಂಧಿಸುವುದು ಪತ್ರಿಕಾ ಸ್ವಾತಂತ್ರ್ಯ ಮತ್ತು ನಾಗರಿಕ ಸಮಾಜದ ಸ್ವಾತಂತ್ರ್ಯ ಹರಣ ಮಾಡಿದಂತೆ ಎಂದು ಪ್ರಕರಣದ ಅಮಿಕಸ್ ಕ್ಯೂರಿ, ವಕೀಲೆ ಇಂದಿರಾ ಜೈಸಿಂಗ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರು ಐಪಿಸಿ 228-ಎ ವಿಧಿ ಕುರಿತು ಸುಪ್ರೀಂಗೆ ಮನವಿ ಸಲ್ಲಿಸಿದ್ದರು.