More

    ಪಬ್ಲಿಕ್ ಅಲ್ಲ, ಸಾಮಾನ್ಯ ಮೌಲ್ಯಾಂಕನ; 7ನೇ ತರಗತಿ ಪರೀಕ್ಷೆ ಹೆಸರು ಬದಲಿಸಲು ನಿರ್ಧಾರ

    ಪಬ್ಲಿಕ್ ಅಲ್ಲ, ಸಾಮಾನ್ಯ ಮೌಲ್ಯಾಂಕನ; 7ನೇ ತರಗತಿ ಪರೀಕ್ಷೆ ಹೆಸರು ಬದಲಿಸಲು ನಿರ್ಧಾರಬೆಂಗಳೂರು: ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆಯ ಹೆಸರು ಬದಲು ಮಾಡಲು ನಿರ್ಧರಿಸಿದ ರಾಜ್ಯ ಸರ್ಕಾರ, ‘ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ’ ಅಂತ ಮಾರ್ಚ್ ವೇಳೆಗೆ ರಾಜ್ಯಾದ್ಯಂತ ಎಕ್ಸಾಂ ನಡೆಸಲು ತೀರ್ವನಿಸಿದೆ. 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಕುರಿತು ಅಧಿಕಾರಿಗಳು, ಶಿಕ್ಷಣ ತಜ್ಞರೊಂದಿಗೆ ಸಭೆ ನಡೆಸಿದ ಬಳಿಕ ಅಂತಿಮವಾಗಿ ಪರೀಕ್ಷೆ ಸ್ವರೂಪ ಬದಲು ಮಾಡಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಅತಂಕ ಇರಬಾರದೆಂಬ ಕಾರಣಕ್ಕೆ ಹೆಸರು ಬದಲಾವಣೆ ಮಾಡಿದ್ದು, ಇದರಲ್ಲಿ ಯಾವುದೇ ಉತ್ತೀರ್ಣ ಮತ್ತು ಅನುತ್ತೀರ್ಣ ಎಂದಿರುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ತಿಳಿಸಿದರು.

    ಶಿಕ್ಷಕರ ಸದನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ತರಗತಿಯ ಹಂತದ ಪರೀಕ್ಷೆ. ಮಾರ್ಚ್ ವೇಳೆಗೆ ನಡೆಯಲಿದ್ದು, ವಿದ್ಯಾರ್ಥಿಗಳನ್ನು ಸಿದ್ದಗೊಳಿಸಲು ಶಿಕ್ಷಕರಿಗೆ ತಿಳಿಸಲಾಗಿದೆ. ಈಗಾಗಲೇ ಬೆಳಗಾವಿ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದೆ. ಕಲಬುರಗಿ, ವಿಜಯಪುರದಂತಹ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ತುಂಬಾ ಹಿಂದುಳಿದಿದ್ದಾರೆ. ಇವರಿಗೆ ವಿಶೇಷ ಮಾರ್ಗದರ್ಶನ ನೀಡಲು ಈ ಪರೀಕ್ಷೆ ಸಹಾಯ ಮಾಡಲಿದೆ ಎಂದರು.

    ರಿಪೋರ್ಟ್ ಕಾರ್ಡ್: ಸಮಗ್ರ ನಿರಂತರ ಮೌಲ್ಯಮಾಪನ (ಸಿಸಿಇ) ಮಾದರಿಯಲ್ಲಿ ಈಗಾಗಲೇ ಶಾಲಾ ಹಂತದಲ್ಲಿ ಪರೀಕ್ಷೆ ನಡೆಯುತ್ತಿವೆ. ಇದರ ಭಾಗವಾಗಿ ಎಸ್ಸೆಸ್ಸೆಲ್ಸಿ ಮಂಡಳಿಯಲ್ಲಿರುವ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆಎಸ್​ಕ್ಯೂಎಎಸಿ) ಈ ಪರೀಕ್ಷೆ ನಡೆಸಲಿದೆ. ಡಯಟ್ ಕೇಂದ್ರಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲಾ ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸಿ ರಿಪೋರ್ಟ್ ಕಾರ್ಡ್ ಸಿದ್ಧಮಾಡಿ ಪ್ರತಿ ವಿದ್ಯಾರ್ಥಿಗಳಿಗೆ ನೀಡುತ್ತೇವೆ ಎಂದು ಸಚಿವರು ಹೇಳಿದರು. ಈ ಪರೀಕ್ಷೆಯಲ್ಲಿ ಎಷ್ಟು ಅಂಕಗಳಿಗಿರಬೇಕು? ಎಂಬ ಅಂಶವನ್ನು ಲೆಕ್ಕಚಾರ ಮಾಡುತ್ತಿದ್ದೇವೆ. ವಿದ್ಯಾರ್ಥಿ ತೆಗೆದ ಅಂಕದ ಮೇಲೆ ಯಾವ ಕಡೆ ಹೆಚ್ಚು ಪೋಕಸ್ ಮಾಡಬೇಕೆಂಬುದನ್ನು ಶಿಕ್ಷಕರು ತಿಳಿದು ಹೆಚ್ಚಿನ ಅವಧಿ ಬೋಧನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ ಎಂದರು.

    ಪಬ್ಲಿಕ್ ವಿವಾದ

    7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುತ್ತೇನೆಂದು ಅಕ್ಟೋಬರ್​ನಲ್ಲಿ ಶಿಕ್ಷಣ ಸಚಿವರು ಮೊದಲ ಬಾರಿಗೆ ಹೇಳಿಕೆ ನೀಡಿದ್ದರು. ಇದಕ್ಕೆ ಪರ-ವಿರೋಧ ವ್ಯಕ್ತವಾಯಿತು. ಆನಂತರ ಆರ್​ಟಿಇ ನಿಯಮ ಪ್ರಕಾರ, ಪಬ್ಲಿಕ್ ಪರೀಕ್ಷೆ ನಡೆಸುವಂತಿಲ್ಲವೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹೆಸರು ಬದಲಾಯಿಸಿ ಶಾಲಾ ಹಂತದಲ್ಲಿ ಪರೀಕ್ಷೆ ಮಾಡಲು ನಿರ್ಧರಿಸಿದೆ.

    ಸೈಕಲ್ ವರದಿ

    ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ವಿತರಿಸಿರುವ ಸೈಕಲ್ ಜೋಡಣೆಯಲ್ಲಿ ವ್ಯತ್ಯಾಸ ಕಂಡು ಬಂದಿರುವುದು ತಜ್ಞರ ಸಮಿತಿ ವರದಿಯಲ್ಲಿ ಉಲ್ಲೇಖವಾಗಿದೆ. ಇದರ ಆಧಾರದ ಮೇಲೆ ತಾಂತ್ರಿಕ ಸಮಿತಿ ರಚನೆ ಮಾಡಿ ವರದಿ ಪಡೆದಿದ್ದೇವೆ. ಟೆಂಡರ್​ನಲ್ಲಿ ಹೇಳಿದ್ದಂತೆ ಸೈಕಲ್ ಜೋಡಣೆ ಮಾಡದಿರುವುದರಿಂದ ವಿತರಿ ಸಿದ ಕಂಪನಿ ವಿರುದ್ಧ ದಂಡ ವಿಧಿಸಲು ಸರ್ಕಾರವನ್ನು ಕೇಳಿದ್ದೇವೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್ ಹೇಳಿದರು.

    ಸಹಾಯವಾಣಿ

    ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರ ಕುಂದುಕೊರತೆ ನೀಗಿಸುವ ಉದ್ದೇಶದಿಂದ ಅವರ ಅಹವಾಲು ಸ್ವೀಕರಿಸಲು ಸಹಾಯವಾಣಿ ತೆರೆಯಲು ತೀರ್ವನಿ ಸಲಾಗಿದ್ದು, ಮಾರ್ಚ್ 31ರೊಳಗೆ ಅನುಷ್ಠಾನಕ್ಕೆ ಬರಲಿದೆ. ಸಹಾಯವಾಣಿ ಆರಂಭಗೊಂಡ ತಕ್ಷಣ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಬಂದ ದೂರುಗಳನ್ನು ಪರಿಶೀಲಿಸಿ, ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್​ಕುಮಾರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts