ನಮ್ದು-ಕೆ ಬಗ್ಗೆ ನಿಮ್ದುಕೆ ಗೊತ್ತಾ?

ನಮ್ದುಕೆ ಎಂಬುದು ನಮ್ಮೆಲ್ಲರಿಗೂ ಚಿರಪರಿಚಿತ. ತಿಳಿಹಾಸ್ಯ ಮಿಶ್ರಿತ ಧಾಟಿಯಲ್ಲಿ ಈ ಶಬ್ದವನ್ನು ಕರ್ನಾಟಕ ದಾದ್ಯಂತ ಬಳಸಲಾಗುತ್ತದೆ. ಇದೇ ಹೆಸರನ್ನಿಟ್ಟುಕೊಂಡು ಐದು ವರ್ಷಗಳಿಂದ ಒಂದು ತಂಡ ಕನ್ನಡದಲ್ಲಿ ಕಾಮಿಡಿ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದೆ. ಆದರೆ ಈ ತಂಡದ ‘ನಮ್ದು-ಕೆ’ ಅರ್ಥದಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ಅದೇನೆಂದರೆ, ಇದರ ಸಂಪೂರ್ಣ ಹೆಸರು ‘ನಮ್ದು ಕನ್ನಡ’ ಎಂದು.

|ಡಿ.ಎಸ್. ಶ್ರೀನಿಧಿ

ಸಮಯ ಯಾರ ನಿಲುಕಿಗೂ ಸಿಗದೇ ಓಡುವ ಚಕ್ರ. ಕಾಲಕ್ರಮೇಣ ಹೊಸ ಹೊಸ ಅನ್ವೇಷಣೆಗಳು, ಪ್ರಯೋಗಗಳು ನಮ್ಮ ಅಭಿರುಚಿಯನ್ನು ಬದಲಿಸುತ್ತವೆ. ನಡುಮನೆಯಲ್ಲಿ ಹುಟ್ಟಿದ ಜನಪದ ಕಲೆಯಿಂದ ಆರಂಭಿಸಿ, ನಾಟಕ ಕಂಪನಿಗಳೊಂದಾಗಿ, ಟೆಂಟು ಸಿನಿಮಾಗಳು ಮುಗಿದು, ಟೀವಿಯ ಠೀವಿಯೆದುರು ಎಲ್ಲರೂ ಮಂಕಾದರು ಎಂದೆಣಿಸುತ್ತಿರುವಾಗ, ಶುರುವಾಗಿದ್ದೇ ಇಂಟರ್​ನೆಟ್ ಎಂಬ ಮಾಯಾಜಾಲ.

ಈ ಮಾಯಾಜಾಲವನ್ನೇ ಆಧಾರವಾಗಿಟ್ಟುಕೊಂಡು ಕೆಲವು ಯುವಕರ ತಂಡ ‘ನಮ್ದು-ಕೆ’ ಎಂಬ ಯೂಟ್ಯೂಬ್ ಕಾಮಿಡಿ ಕಾರ್ಯಕ್ರಮವನ್ನು ನಡೆಸುತ್ತಿದೆ. ಚಲನಚಿತ್ರಗಳಲ್ಲಿ ಹಾಗೂ ಟಿ.ವಿಯಲ್ಲಿ ಬರುವ ಕಾಮಿಡಿ ದೃಶ್ಯ, ಡೈಲಾಗ್ ಹಾಗೂ ಕಾಮಿಡಿ ಕಾರ್ಯಕ್ರಮಗಳ ಚೌಕಟ್ಟಿನಲ್ಲಿ ಕನ್ನಡದ ಕಾಮಿಡಿಗಳನ್ನು ನೋಡುತ್ತಿರುವ ಕಾರಣ, ಇದಕ್ಕಿಂತ ಭಿನ್ನವಾಗಿ ಏನಾದರೂ ಮಾಡಬೇಕೆಂದು ಯೋಚನೆ ಮಾಡಿದ ಯುವಕರ ತಂಡಕ್ಕೆ ಹೊಳೆದದ್ದೇ ಇಂಟರ್​ನೆಟ್ ಕಾಮಿಡಿ. ಆದರೆ ಫೇಸ್​ಬುಕ್, ವಾಟ್ಸ್​ಆಪ್ ಮತ್ತು ಇನ್​ಸ್ಟಾಗ್ರಾಮ್ಳಲ್ಲಿ ಹಲವಾರು ಟ್ರೋಲ್ ತಂಡಗಳಿದ್ದು, ಇಲ್ಲಿ ಹಾಸ್ಯದ ವಿಡಿಯೋಗಳೂ ಸಿಗುತ್ತಿವೆ. ಅದಕ್ಕಿಂತಲೂ ಮಿಗಿಲಾಗಿ ಏನಾದರೂ ಕಾಮಿಡಿ ಕನ್ನಡಿಗರಿಗೆ ನೀಡಬೇಕು ಎಂಬ ಕಾರಣಕ್ಕೆ ‘ನಮ್ದು-ಕೆ’ ಎಂಬ ಯೂಟ್ಯೂಬ್ ಚಾನೆಲ್ ಶುರು ಮಾಡಲಾಗಿದೆ.

ಚಾನೆಲ್ ಹುಟ್ಟಿದ್ದು ಹೇಗೆ?

ಐದು ವರ್ಷಗಳ ಹಿಂದೆ ಇನ್ಪೋಸಿಸ್​ನ ಮೈಸೂರು ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರವಣ್ ನಾರಾಯಣ ಐತಾಳ್ ಎಂಬ ಹುಡುಗನಿಗೆ ನಟನೆಯ ಹುಚ್ಚು. ‘ನೀನ್ ನೋಡೋಕೆ ಚೆನ್ನಾಗಿಲ್ಲ’ ಎಂದು ಅವನನ್ನು ಹಲವು ಷಾರ್ಟ್​ಫಿಲಂಗಳಿಂದ ದೂರವಿಟ್ಟರು. ಆಗ ಶುರುವಾಗಿದ್ದೇ ಸ್ವಂತ ಯೂಟ್ಯೂಬ್ ಚಾನೆಲ್ ಮಾಡುವ ಆಸೆ. ಮಿತ್ರರಾಗಿದ್ದ ಸಂದೀಪ್ , ಜಗದೀಶ್ ಮತ್ತು ರಜತ್ ಜತೆಯಾದರು. ಹೀಗೆ ಶುರುವಾಗಿದ್ದೇ, ‘ನಮ್ದು-ಕೆ’, ನಮ್ದು-ಕನ್ನಡ!

2014 ಅಕ್ಟೋಬರ್ ತಿಂಗಳಿನಲ್ಲಿ ಶುರುವಾದ ಈ ಚಾನೆಲ್ ಇವತ್ತಿಗೆ ಎಪ್ಪತ್ತಕ್ಕೂ ಹೆಚ್ಚು ವಿಡಿಯೋಗಳನ್ನು ಮಾಡಿದೆ. ಹೊಸ ಹೊಸ ಪ್ರಯೋಗಗಳಿಗೆ ಒತ್ತು ನೀಡುವ ಇವರ ಎಲ್ಲ ವಿಡಿಯೋಗಳಲ್ಲಿ ಹಾಸ್ಯಕ್ಕೆ ಪ್ರಾಧಾನ್ಯ. ಮೊಕ್ಯುಮೆಂಟರಿ, ಕಾಮಿಡಿ ಸ್ಕೆಚ್​ಗಳು, ಫಿಲಂ ಸ್ಪೂಫ್​ಗಳು… ಇಂತಹ ವಿಡಿಯೋ ಮಾಡುವಲ್ಲಿ ತಂಡ ತನ್ನದೇ ಛಾಪು ಮೂಡಿಸಿದೆ. ತಂಡದ ಸದಸ್ಯರೆಲ್ಲ ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ ಮಾಡುವವರೇ ಆಗಿರುವ ಕಾರಣ ಈ ಚಾನೆಲ್ ವೀಕೆಂಡಿನಲ್ಲಿ ಮಾತ್ರ ಕೆಲಸ ಮಾಡುತ್ತದೆ. ತಂಡದ ನಟನಾ ವಿಭಾಗದಲ್ಲಿ ಹಲವು ಉತ್ಸಾಹಿ ಯುವಕ ಯುವತಿಯರಿದ್ದಾರೆ.

ಹಲವಾರು ಸದಸ್ಯರು ವೃತ್ತಿ ನಿಮಿತ್ತ ಹೊರ ಹೋಗಿದ್ದಾರೆ, ಹೊಸಬರು ಸೇರಿಕೊಂಡಿದ್ದಾರೆ, ಆದರೆ ‘ನಮ್ದು-ಕೆ’ ಮಾತ್ರ ನಿರಂತರವಾಗಿ ಸಾಗುತ್ತಿದೆ. ಮೊದಲೆಲ್ಲ ‘ಜೀರೋ ಬಜೆಟ್’ ವಿಡಿಯೋಗಳನ್ನು ಮಾಡುತ್ತಿದ್ದ ತಂಡ, ಕ್ರಿಯಾತ್ಮಕವಾಗಿ ಕೆಲಸ ಮಾಡಿದೆ. ಅಗ್ನಿ ಐಇಇಇ, ರೆಸಾರ್ಟ್ ರಾಜಕಾರಣ, ಗೇಮ್ ಆಫ್ ಲೋನ್ಸ್ , ಬ್ಯಾಚುಲರ್ ಸೀರೀಸ್ , ಕಪಲ್ಸ್ ಬಿ ಲೈಕ್ ಮುಂತಾದ ವಿಡಿಯೋಗಳು ಗಮನಾರ್ಹ ವೀಕ್ಷಣೆ ಕಂಡಿವೆ.

ಉಳಿದ ಭಾಷೆಗಳಲ್ಲಿ ಇಂತಹ ಯೂಟ್ಯೂಬ್ ವಿಡಿಯೋಗಳು ಹಲವಾರು ತಾಂತ್ರಿಕ ಮತ್ತು ವಿಭಿನ್ನ ದೃಷ್ಟಿಕೋನಗಳಲ್ಲಿ ಕೆಲಸ ಮಾಡುತ್ತವೆ. ಕನ್ನಡದಲ್ಲಿ ಇನ್ನೂ ಹಲವಾರು ಪ್ರಯೋಗಗಳು ಆಗಬೇಕಿವೆ. ಇಂದು ಇಂಟರ್​ನೆಟ್ ಮನರಂಜನೆಯಲ್ಲಿ ದೊಡ್ಡ ದೊಡ್ಡ ಕಂಪನಿಗಳು ಹಣ ಹೂಡುತ್ತಿವೆ. ಇವತ್ತಿನ ಸಂವಹನ ಕ್ರಾಂತಿಯ ಭಾಗವಾಗಿ ಮನರಂಜನೆಯ ಭಾಷೆ ಬದಲಾಗುತ್ತಿದೆ. ಹೀಗಿರುವ ಪರಿಸ್ಥಿತಿಯಲ್ಲಿ ಮೊದಲಿನಂತೆ ಕಡಿಮೆ ಹಣದಲ್ಲಿ ವಿಡಿಯೋಗಳನ್ನು ಮಾಡುವುದು ಕಷ್ಟಸಾಧ್ಯ. ಜನರ ನಿರೀಕ್ಷಣೆಯ ಗುಣಮಟ್ಟವನ್ನು ತಲುಪಲು ಹೆಚ್ಚಿನ ತಂತ್ರಜ್ಞಾನ ಮತ್ತು ಬಂಡವಾಳದ ಅವಶ್ಯಕತೆಯಿದೆ ಎನ್ನುತ್ತಾರೆ ಈ ತಂಡದ ಯುವಕರು.

ಕೇವಲ ನಮ್ದು-ಕೆ ತಂಡವೊಂದೇ ಅಲ್ಲದೆ ಹಲವಾರು ಹಿರಿ ಮತ್ತು ಕಿರುತೆರೆಯ ನಟರು ಕೂಡ ಇವರ ಜತೆ ಕೆಲಸ ಮಾಡಿದ್ದಾರೆ. ‘ಗೂಲ್ಟ್’ ಹಾಗೂ ‘ಒಂದಲ್ಲ ಎರಡಲ್ಲ’ ಚಿತ್ರಗಳ ತಂಡ, ‘ಮಗಳು ಜಾನಕಿ’ ಧಾರಾವಾಹಿಯ ರಾಕೇಶ್ ಮಯ್ಯ ಸೇರಿದಂತೆ ಹಲವಾರು ನಟರು ತಂಡದ ಜತೆಯಾಗಿದ್ದಾರೆ. ಹೀಗೆ ಜನರಿಗೆ ಪರಿಚಿತ ಮುಖಗಳೊಂದಿಗೆ ಕೆಲಸ ಮಾಡುವ ಮೂಲಕ ತಂಡಕ್ಕೆ ಕೂಡ ಹೆಸರು ಬರುತ್ತದೆ ಎಂಬುದು ತಂಡದ ಅಭಿಪ್ರಾಯ. ಇನ್ನೂ ಹೆಚ್ಚಿನ ಕ್ರಿಯಾತ್ಮಕ ಮತ್ತು ಮನರಂಜನೆಯ ಕಾರ್ಯಕ್ರಮಗಳನ್ನು ಮಾಡಬೇಕು ಎಂಬುದು ತಂಡದ ಆಶಯ.

ಸ್ಟ್ಯಾಂಡ್ ಅಪ್ ಕಾಮಿಡಿ ಪ್ರಯೋಗಾತ್ಮಕ ಯೋಜನೆಗಳು

‘ನಮ್ದು-ಕೆ’ ಹತ್ತಿರ ಹಲವಾರು ಹೊಸ ಹೊಸ ಪ್ರಯೋಗಾತ್ಮಕ ಯೋಜನೆಗಳಿವೆ. ಶ್ರವಣ್ ಐತಾಳ್ ಈಗಾಗಲೇ ಚಿತ್ರರಂಗದಲ್ಲಿ ತಮ್ಮ ಕೆಲಸ ಆರಂಭಿಸಿಯಾಗಿದೆ. ಉತ್ಸಾಹಿ ಯುವ ತಂಡಕ್ಕೆ ಹಲವು ಮಾರ್ಗದರ್ಶಿಗಳು ಕೂಡ ಇದ್ದಾರೆ. ಇಷ್ಟೆಲ್ಲದರ ಹೊರತಾಗಿ ತಂಡಕ್ಕೆ ಬೇಕಾಗಿರುವುದು ಕನ್ನಡಿಗರ ಹೆಚ್ಚಿನ ಪೋ›ತ್ಸಾಹ. ಒಂದು ಭಾಷೆಯ ಉಳಿವು ಮತ್ತು ಅಳಿವು, ಆ ಭಾಷೆಯ ಮಾಧ್ಯಮಗಳಲ್ಲಿ ನಡೆಯುವ ಪ್ರಯೋಗಾತ್ಮಕ ಪ್ರಯತ್ನಗಳ ಮೇಲೆ ಅವಲಂಬಿತವಾಗುರುತ್ತದೆ. ಸಾಹಿತ್ಯವಿರಲಿ, ಸಿನಿಮಾವಿರಲಿ, ಶಿಕ್ಷಣವಿರಲಿ, ಮತ್ತಿತರ ಮನರಂಜನೆಯಿರಲಿ, ಭಾಷೆಯು ಬದಲಾವಣೆ ಜತೆಗೆ ಸಾಗಲೇಬೇಕು. ನಮ್ಮ ಕನ್ನಡದಲ್ಲಿ ಕೂಡ ಇಂತಹ ಪ್ರಯತ್ನಗಳನ್ನು ನಾವು ಉತ್ತೇಜಿಸಬೇಕು.

ಫೇಸ್ಬುಕ್ ಮತ್ತು ಇನ್​ಸ್ಟಾಗ್ರಾಮ್ ವಿಳಾಸ:@namdu_k ಮಾಹಿತಿಗೆ  [email protected]

Leave a Reply

Your email address will not be published. Required fields are marked *