ನಳಿನ್​ಗೆ ಮೋದಿ ಮೋಡಿ ಮೇಲೆ ಭರವಸೆ: ಮಿಥುನ್ ಚುರುಕಿನ ಪ್ರಚಾರ

| ವೇಣುವಿನೋದ್ ಕೆ.ಎಸ್. ಮಂಗಳೂರು

ಹಿಂದಿನಿಂದಲೂ ಕಾಂಗ್ರೆಸ್-ಬಿಜೆಪಿ ನೇರ ಹಣಾಹಣಿಯ ಈ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ತನ್ನ ಸಂಪ್ರದಾಯ ಮುರಿದು ಯುವ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿರುವುದು ರೋಚಕ ಫೈಟ್​ಗೆ ನಾಂದಿ ಹಾಡಿದೆ. ಮೊದಲಿನಿಂದಲೂ ಹಿರಿಯ ಕಾಂಗ್ರೆಸ್ ನಾಯಕರಾದ ಬಿ.ಜನಾರ್ದನ ಪೂಜಾರಿ ಹಾಗೂ ಎಂ.ವೀರಪ್ಪ ಮೊಯ್ಲಿ ನಿರಂತರವಾಗಿ ಸ್ಪರ್ಧಿಸುತ್ತ ಬಂದಿದ್ದ ಕ್ಷೇತ್ರದಲ್ಲಿ ಈ ಬಾರಿ ದಿಢೀರ್ ನಿರ್ಧಾರದ ಮೂಲಕ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈಗೆ ಟಿಕೆಟ್ ನೀಡಲಾಗಿದೆ.

ಮಾಜಿ ಸಚಿವ ಬಿ. ರಮಾನಾಥ ರೈ, ಬಿ.ಕೆ. ಹರಿಪ್ರಸಾದ್, ವಿನಯ ಕುಮಾರ್ ಸೊರಕೆಯಂಥವರಿದ್ದರೂ ಯುವ ಅಭ್ಯರ್ಥಿಗೆ ರಾಜ್ಯದಲ್ಲಿ ಟಿಕೆಟ್ ಸಿಗಬೇಕು ಎಂಬ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀರ್ಮಾನ ಮಿಥುನ್​ಗೆ ವರವಾಗಿದೆ. ಇದರಿಂದ ಕಾರ್ಯಕರ್ತರಿಗೆ ಅಚ್ಚರಿಯಷ್ಟೇ ಅಲ್ಲ, ಪ್ರಚಾರಕ್ಕೆ ಧುಮುಕುವ ಉತ್ಸಾಹವೂ ಉಂಟಾಯಿತು. ಆದರೆ ಈ ಉತ್ಸಾಹ- ಸಂಭ್ರಮ ಮತಗಳಿಕೆಗೆ ನೆರವಾಗಬಹುದೇ ಎಂಬ ವಿಶ್ಲೇಷಣೆ ಕಾಂಗ್ರೆಸ್ ನಾಯಕರಲ್ಲಿದೆ. 2014ರ ಚುನಾವಣೆಯಲ್ಲಿ ಮೋದಿ ಅಲೆಯೇರಿ 1.4 ಲಕ್ಷ ಮತಗಳ ಅಂತರದಲ್ಲಿ ಬಿ.ಜನಾರ್ದನ ಪೂಜಾರಿಯವರನ್ನು ನಳಿನ್ ಕುಮಾರ್ ಕಟೀಲ್ ಸೋಲಿಸಿದ್ದರು. ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ದಕ್ಷಿಣಕನ್ನಡದಲ್ಲಿ ಜಯಭೇರಿ ಬಾರಿಸಿ, ಎಂಟರಲ್ಲಿ 7 ಕ್ಷೇತ್ರಗಳನ್ನು ‘ಕೈ’ಯಿಂದ ಕಸಿದುಕೊಂಡಿತು. ಆಗಲೂ ಬಹುತೇಕ ಇದೇ ಮತಗಳ ಅಂತರವನ್ನು ಬಿಜೆಪಿ ಕಾಯ್ದುಕೊಂಡಿತ್ತು. ಒಂದು ವರ್ಷದಲ್ಲೀಗ ಲೋಕಸಭಾ ಚುನಾವಣೆ ಬಂದಿದೆ. ಈ ಬಾರಿ ‘ಮೋದಿ ಮತ್ತೊಮ್ಮೆ’ ಎಂಬ ಘೊಷಣೆಯೊಂದಿಗೆ ಬಿಜೆಪಿ ಪ್ರಚಾರ ಮಾಡುತ್ತಿದೆ. ಇದನ್ನು ಸಂಘ ಪರಿವಾರ ಹಿಂದೆಂದಿಗಿಂತಲೂ ವ್ಯವಸ್ಥಿತವಾಗಿ ಅಭ್ಯರ್ಥಿ ಘೊಷಣೆಗೆ ಮುನ್ನವೇ ಶುರು ಮಾಡಿದ್ದು, ಆಗಲೇ ಮನೆ ಮನೆ ಭೇಟಿ, ಕೀ ವೋಟರ್ಸ್ ಭೇಟಿ ಇತ್ಯಾದಿ ಮೂಲಕ ಜನರಿಗೆ ಮುಟ್ಟಿಸಿದೆ.

ಮೋದಿ ಪ್ರಚಾರ ಬಾಕಿ: ಪ್ರಚಾರದಲ್ಲಿ ಒಂದು ಘಟ್ಟ ತಲುಪಿರುವ ಬಿಜೆಪಿ ಈಗ ಕೊನೆಯ ಪಂಚ್ ಆಗಿ ಪ್ರಧಾನಿ ಮೋದಿ ಅವರ ಹೈ-ವೋಲ್ಟೇಜ್ ಪ್ರಚಾರಕ್ಕೆ ಕಾದಿದೆ. ಕಳೆದ ಚುನಾವಣೆಗಳಲ್ಲೂ ಮೋದಿ ಮಂಗಳೂರಿನಲ್ಲಿ ಪ್ರಚಾರ ಭಾಷಣ ಮಾಡಿದ್ದರು. ಈ ಬಾರಿ ಏ.13ರಂದು ಅವರು ಮಂಗಳೂರು ಕೇಂದ್ರ ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ.

ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಕೇಂದ್ರದಿಂದ ಕಳೆದ 5 ವರ್ಷಗಳಲ್ಲಿ 16,505 ಕೋಟಿ ರೂ. ವಿನಿಯೋಗಿಸಲಾಗಿದೆ.10 ವರ್ಷಗಳಲ್ಲಿ ಯಾವುದೇ ಕಪ್ಪುಚುಕ್ಕಿ ಇಲ್ಲದೆ ಜನಸೇವೆ ಮಾಡಲೆತ್ನಿಸಿದ್ದೇನೆ. ಮೋದಿ ಮೇಲೆ ಜನರಿಗೆ ಭರವಸೆ ಇದೆ. ಹಾಗಾಗಿ ಇನ್ನೊಮ್ಮೆ ಜನ ಮತ ಹಾಕುವ ವಿಶ್ವಾಸ ನನಗಿದೆ.

ನಳಿನ್​ಕುಮಾರ್ ಕಟೀಲ್ ಬಿಜೆಪಿ ಅಭ್ಯರ್ಥಿ

ವೈಫಲ್ಯದ ಆರೋಪ

ಎರಡು ಬಾರಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಕ್ಷೇತ್ರಕ್ಕೆ ಕೊಡುಗೆ ನೀಡಿಲ್ಲ ಎಂಬ ಆರೋಪಗಳನ್ನು ಕಾಂಗ್ರೆಸ್ ಮಾಡುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ಸುಧಾರಣೆ ಯೋಜನೆಯಲ್ಲಿ ಪಂಪ್​ವೆಲ್, ತೊಕ್ಕೊಟ್ಟು ಜಂಕ್ಷನ್​ಗಳಲ್ಲಿ ಮೇಲ್ಸೇತುವೆ ಯೋಜನೆ ಹಳ್ಳ ಹಿಡಿದಿರುವುದಕ್ಕೆ ಸಂಸದರೇ ಕಾರಣ ಎನ್ನುವ ಆರೋಪ ಸ್ವಪಕ್ಷೀಯರಿಂದಲೇ ಕೇಳಿಬಂದಿದೆ. ಹಿಂದಿನಿಂದಲೂ ಸಂಘಟನಾ ಚತುರ ಎನ್ನುವ ಹೆಗ್ಗಳಿಕೆ ಇದ್ದ ನಳಿನ್ ಕಾರ್ಯಕರ್ತರಿಗೆ ಬೇಕಾದ ಕೆಲಸ ಸರಿಯಾಗಿ ಮಾಡಿಸಿಕೊಡುವುದಿಲ್ಲ, ಹಾಗಾಗಿ ಅವರ ಪರ ಯಾಕೆ ಕೆಲಸ ಮಾಡಬೇಕೆಂಬ ಅಳಲು ಒಂದು ವರ್ಗದಿಂದ ಕೇಳಿ ಬಂದಿತ್ತು. ಕಳೆದ ಬಾರಿ ವಿಧಾನಸಭಾ ಚುನಾವಣೆಗೆ ಟಿಕೆಟ್ ವಂಚಿತರಾದ ಕೆಲವರು ಬಂಡಾಯ ಏಳಲು ಮುಂದಾದರೂ ಪಕ್ಷದ ವರಿಷ್ಠರ ಮಧ್ಯಪ್ರವೇಶದಿಂದ ಮೇಲ್ನೋಟಕ್ಕೆ ವಿಚಾರ ಥಂಡಾ ಆಗಿದೆ.

ಕಾಂಗ್ರೆಸ್ ಪ್ರಚಾರ ಚುರುಕು

ಕಾಂಗ್ರೆಸ್ ಅಭ್ಯರ್ಥಿ ಘೊಷಣೆ ತಡವಾದರೂ ಪ್ರಚಾರ ಚುರುಕಾಗಿದೆ. ಸ್ವತಃ ಅಭ್ಯರ್ಥಿಯೇ ವ್ಯವಸ್ಥಿತವಾಗಿ ಕ್ಷೇತ್ರವಾರು ಓಡಾಡುತ್ತಿದ್ದಾರೆ. ನಗರದಲ್ಲಿ ಜನರನ್ನು ಸೆಳೆಯಲು ಹೈಟೆಕ್ ಪ್ರಚಾರ ವಾಹನ ಬಂದಿದೆ. ಮೋದಿ ಪ್ರಧಾನಿಯಾಗಿ ಕಂಡಿರುವ ವೈಫಲ್ಯ ಪ್ರದರ್ಶಿಸಲಾಗುತ್ತಿದ್ದರೆ, ಇನ್ನೊಂದೆಡೆ ವಾಕ್ಚಾತುರ್ಯ ಇರುವ ತಂಡದವರು ಕಿರು ಭಾಷಣ ಮೂಲಕ ಮತದಾರರನ್ನು ತಲಪಲು ಪ್ರಯತ್ನಿಸುತ್ತಿದ್ದಾರೆ. ದಕ್ಷಿಣಕನ್ನಡದಲ್ಲಿ ಹುಟ್ಟಿರುವ ವಿಜಯ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡಾ ಜತೆ ವಿಲೀನ ಮಾಡಿರುವುದು, ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪಿಗೆ ಮಾರಲಾಗಿದೆ ಎನ್ನುವ ಬಿಜೆಪಿಗೆ ನೆಗೆಟಿವ್ ಆಗಬಲ್ಲ ಅಂಶಗಳಿಗೆ ಕಾಂಗ್ರೆಸ್ ಒತ್ತು ನೀಡುತ್ತಿದೆ.

ನಮಗೆ ಯಾರು ಎದುರಾಳಿ ಎನ್ನುವುದು ಮುಖ್ಯವಲ್ಲ, ಗೆಲ್ಲಲು ಬೇಕಾದ ಎಲ್ಲ ಕಾರ್ಯತಂತ್ರಗಳನ್ನೂ ರೂಪಿಸಿದ್ದೇವೆ. ಮುಖ್ಯವಾಗಿ 25 ವರ್ಷಗಳಲ್ಲಿ ಬಿಜೆಪಿ ಏನೆಂಬುದು ಜನರಿಗೆ ಅರ್ಥವಾಗಿದೆ. ಈ ಬಾರಿ ಜನ ಬದಲಾವಣೆ ಬಯಸಿ ನನಗೆ ಮತ ಹಾಕುವ ಭರವಸೆ ಇದೆ.

| ಮಿಥುನ್ ರೈ ಕಾಂಗ್ರೆಸ್ ಅಭ್ಯರ್ಥಿ

ಕ್ಷೇತ್ರದ ಸಮಸ್ಯೆಗಳೇನು?

ಮೂಲಸೌಕರ್ಯಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಲು ಎಲ್ಲ ಜನಪ್ರತಿನಿಧಿಗಳೂ ಹಿಂದಿನಿಂದಲೂ ವಿಫಲರಾಗಿರುವುದು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ, ಮಂಗಳೂರು ಹಳೇ ಬಂದರು ಅಭಿವೃದ್ಧಿಗೆ ಆದ್ಯತೆ ನೀಡದಿರುವುದು.

ಜೆಡಿಎಸ್, ಸಿಪಿಐಎಂ ಬೆಂಬಲ

ದಕ್ಷಿಣಕನ್ನಡದಲ್ಲಿ ನೆಲೆಯೇ ಇಲ್ಲದ ಜೆಡಿಎಸ್ ನಾಯಕರು ಮೈತ್ರಿ ನಿರ್ಣಯದಂತೆ ಬೆಂಬಲ ಘೊಷಿಸಿದ್ದರೆ, ಸಿಪಿಐಎಂ ಅಭ್ಯರ್ಥಿ ಇಳಿಸದೆ ಕಾಂಗ್ರೆಸ್ ಪರ ನಿಂತಿದೆ. ಆದರೆ ಮುಸ್ಲಿಂ ಕಟ್ಟರ್ ಪಂಥೀಯರು ಚುರುಕಾಗಿರುವ ಕೆಲವು ಪ್ರದೇಶಗಳಲ್ಲಿ ಎಸ್​ಡಿಪಿಐ ಗಣನೀಯ ಪ್ರಮಾಣದಲ್ಲಿ ಮತಗಳನ್ನು ಸೆಳೆಯುವ ಸಾಧ್ಯತೆ ಇದೆ.