ಪೂಜಾರಿ ಕಾಲಿಗೆ ಮೂರನೇ ಬಾರಿ ನಮಿಸಿದ ನಳಿನ್!

ವಿಜಯವಾಣಿ ಸುದ್ದಿಜಾಲ ಮಂಗಳೂರು
ಸೋಮವಾರ ನಾಮಪತ್ರ ಸಲ್ಲಿಸಲಿರುವ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಭಾನುವಾರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದೇ ವೇಳೆ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು.
ದೇವರು ಒಳ್ಳೆಯದು ಮಾಡಲಿ, ಇವರ ಎದುರು ಜಾಸ್ತಿ ಬೇಡ, ಉಳಿದದ್ದು ಇನ್ನೊಮ್ಮೆ ಹೇಳುತ್ತೇನೆ ಎಂದು ಕ್ಯಾಮರಾಗಳ ಸಮ್ಮುಖದಲ್ಲಿ ಪೂಜಾರಿ ಆಶೀರ್ವದಿಸಿದರು.
ಪ್ರತಿ ಬಾರಿಯ ಚುನಾವಣೆಯಲ್ಲೂ ನಾಮಪತ್ರ ಸಲ್ಲಿಕೆಗೆ ಮೊದಲು ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡುವ ನಳಿನ್ ಈ ಬಾರಿಯೂ ನಾರಾಯಣ ಗುರುಗಳಿಗೆ ಪೂಜೆ ಹಾಗೂ ಗೋಕರ್ಣನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಗೋಕರ್ಣನಾಥನ ಮೇಲಿದ್ದ ಮಲ್ಲಿಗೆ ಹೂವು ಮತ್ತು ದಾಸವಾಳ ಹೂ ಬಿದ್ದದ್ದು ನಳಿನ್ ಹಾಗೂ ಬೆಂಬಲಿಗರಿಗೆ ಖುಷಿಯನ್ನುಂಟು ಮಾಡಿತು.
ಈ ವೇಳೆ ಮಾತನಾಡಿದ ನಳಿನ್, ಜನಾರ್ದನ ಪೂಜಾರಿ ನಮ್ಮಂಥವರಿಗೆ ಆದರ್ಶ ವ್ಯಕ್ತಿ. ಭ್ರಷ್ಟಾಚಾರ ರಹಿತವಾದ ನೇರ ನಡೆ ನುಡಿಯ ರಾಜಕಾರಣಿ. ಅವರನ್ನು ನಾನು ಬಹಳ ಗೌರವದಿಂದ ಕಂಡವ. 2009ರ ಚುನಾವಣೆ ವೇಳೆ ಅವರ ವಿರುದ್ಧವೇ ಸ್ಪರ್ಧಿಸಿದರೂ ಅವರ ಆಶೀರ್ವಾದ ಪಡೆದಿದ್ದೆ. ಒಳ್ಳೆದಾಗಲೆಂದು ಆಶೀರ್ವದಿಸಿದ್ದರು, ಈಗಲೂ ಆಶೀರ್ವಾದ ಮಾಡಿದ್ದಾರೆ, ಮೂರನೇ ಬಾರಿ ಅವರ ಆಶೀರ್ವಾದದಿಂದ ಗೆಲ್ಲುವೆ ಎಂದರು.
ಈ ವೇಳೆ ಶಾಸಕ ವೇದವ್ಯಾಸ ಕಾಮತ್, ಮುಖಂಡರಾದ ಯೋಗೀಶ್ ಭಟ್, ರವಿಶಂಕರ ಮಿಜಾರು, ಹರಿಕೃಷ್ಣ ಬಂಟ್ವಾಳ, ಪ್ರೇಮಾನಂದ ಶೆಟ್ಟಿ ಮತ್ತಿತರರಿದ್ದರು.

ಮಿಥುನ್ ರೈ ಒಳ್ಳೆಯ ಅಭ್ಯರ್ಥಿ,ಆದ್ರೆ ನಾನು ನಿಂತರೂ ಗೆಲ್ಲಲ್ಲ..!
ಇನ್ನು ಎರಡು ಚುನಾವಣೆಯಲ್ಲಿ ದೇಶದಲ್ಲಿ ಮೋದಿಯವರೇ ಬರೋದು… ಅವರೇ ಗೆಲ್ಲುತ್ತಾರೆ. ಪರಿಸ್ಥಿತಿ ಹಾಗಿದೆ.. ಇಲ್ಲಿ ನಾನು ನಿಂತರೂ ಗೆಲ್ಲುವುದಿಲ್ಲ ಎಂದು ಹೇಳುವ ಮೂಲಕ ಜನಾರ್ದನ ಪೂಜಾರಿ ಅಚ್ಚರಿಗೊಳಿಸಿದರು.
ಸುದ್ದಿಗಾರರೊಂದಿಗೆ ಅವರು, ಕಾಂಗ್ರೆಸ್‌ನ ಮಿಥುನ್ ರೈ ಒಳ್ಳೆಯ ಅಭ್ಯರ್ಥಿ, ಆದ್ರೆ ಕಾಂಗ್ರೆಸ್‌ಗೆ ಈಗ ಪರಿಸ್ಥಿತಿ ಒಳ್ಳೆಯದಿಲ್ಲ. ಹೈಕಮಾಂಡ್ ಹೇಳಿದರೆ ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರಕ್ಕೂ ತೆರಳುತ್ತೇನೆ ಎಂದರು. ಆದರೆ ಇದರ ಜತೆಯಲ್ಲೇ ಮೋದಿಯವರಿಗೆ ಅವರ ಅಭಿವೃದ್ಧಿಯೇ ಪ್ಲಸ್ ಪಾಯಿಂಟ್. ಅವರು ದೇಶದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಆರೋಪಗಳು ಯಾರ ಮೇಲೂ ಬರಬಹುದು, ಅವರ ಮೇಲೆಯೂ ಬಂದಿದೆ, ನನ್ನ ಮೇಲೆಯೂ ಬಂದಿದೆ, ಚುನಾವಣೆ ವೇಳೆಗೆ ಇದು ಸಾಮಾನ್ಯ ಎಂದರು.