ಕುಡಿವ ನೀರಿನ ಸಮಸ್ಯೆ ಸರಿಪಡಿಸಿ

ನಾಲತವಾಡ: ಪಟ್ಟಣದಲ್ಲಿ 15 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗತೊಡಗಿದೆ. ಕೃಷ್ಣಾ ನದಿಯಿಂದ ಸದ್ಯ ನೀರು ಪೂರೈಸುವ ವ್ಯವಸ್ಥೆ ತುಂಬಾ ಹಳೆಯದಾಗಿದ್ದು ಗುಣಮಟ್ಟ ಕಳೆದುಕೊಂಡಿದೆ. ಈಗಿನ ಜನಸಂಖ್ಯೆಗೆ ಅನುಗುಣವಾಗಿ ನೀರು ಕೊಡಲು ಆಗುತ್ತಿಲ್ಲ. ಹೀಗಾಗಿ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಹೊಸದಾಗಿ ಕುಡಿವ ನೀರು ಪೂರೈಕೆ ವ್ಯವಸ್ಥೆ ಜಾರಿಗೊಳಿಸಲು ನೂತನ ಯೋಜನೆ ರೂಪಿಸಬೇಕು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್‌ನಲ್ಲಿ ಶುಕ್ರವಾರ ಗ್ರಾಮಸ್ಥರಿಂದ ಕುಡಿವ ನೀರಿನ ಅಹವಾಲು ಆಲಿಸಿದ ನಂತರ ಸಮಸ್ಯೆ ಬಗೆಹರಿಸಲು ಪಪಂ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ಹಾಗೂ ಪಪಂ ಆಡಳಿತಾಧಿಕಾರಿ, ತಹಸೀಲ್ದಾರ್ ವಿನಯಕುಮಾರ ಪಾಟೀಲರನ್ನು ಸ್ಥಳಕ್ಕೆ ಕರೆಸಿ ಅನೌಪಚಾರಿಕ ಮಾತುಕತೆ ನಡೆಸಿ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು.

ಅಧಿಕಾರಿಗಳು 2-3 ದಿನಗಳಲ್ಲಿ ಜನರಿಗೆ ವ್ಯವಸ್ಥೆ ಸರಿಪಡಿಸಿ ಕೃಷ್ಣಾ ನದಿಯಿಂದ ಕುಡಿವ ನೀರು ಕೊಡಬೇಕು. ಅಥವಾ ನೀರಿನ ಸಮಸ್ಯೆ ಇರುವ ವಾರ್ಡ್‌ಗಳಲ್ಲಿ ಟ್ಯಾಂಕರ್ ಮೂಲಕವಾದರೂ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಗೋಲ್ಮಾಲ್ ಸಂಶಯ, ತನಿಖೆಗೆ ಸೂಚನೆ
ಪಟ್ಟಣಕ್ಕೆ ಕುಡಿವ ನೀರು ಪೂರೈಸುವ ಜಾಕ್‌ವೆಲ್‌ನಲ್ಲಿ ಅಳವಡಿಸಿದ 25 ಎಚ್‌ಪಿ ಮೋಟಾರ್ ಪಂಪ್ ಸುಟ್ಟಿದ್ದರೂ ಸಂಬಂಧಿಸಿದ ಗುತ್ತಿಗೆದಾರನಿಗೆ ಲಕ್ಷಾಂತರ ರೂ. ಗುತ್ತಿಗೆ ಮೊತ್ತ ಪಾವತಿಸಿದ ಆರೋಪ ಸಭೆಯಲ್ಲಿ ಕೇಳಿಬಂತು. ಇದಕ್ಕೆ ಸ್ಪಂದಿಸಿದ ಶಾಸಕರು ಗುತ್ತಿಗೆ ಕೆಲಸಕ್ಕೆ ಸಂಬಂಧಿಸಿದ ದಾಖಲೆ ತರಿಸಿ ಪರಿಶೀಲಿಸಿದರು. ಅದರಲ್ಲಿನ ಮಾಹಿತಿಗಳು, ವರದಿಗಳು ಒಂದಕ್ಕೊಂದು ತಾಳೆ ಇಲ್ಲದ್ದನ್ನು ಕಂಡು ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು. ತನಿಖೆಯಲ್ಲಿ ಗೋಲ್ಮಾಲ್ ನಡೆಸಿದ್ದು ಸಾಬೀತಾದರೆ ಪಂಪ್ ಅಳವಡಿಸಿದ ಗುತ್ತಿಗೆದಾರರ ಗದಗನ ಜನರಲ್ ಇಂಜಿನಿಯರಿಂಗ್ ಕಂಪನಿ ಹಾಗೂ ಸುಳ್ಳು ವರದಿ ನೀಡಿದ ಬಾದಾಮಿಯ ಥರ್ಡ್ ಪಾರ್ಟಿ ಇನ್ಸ್‌ಪೆಕ್ಷನ್ ಕಂಪನಿ ಸನ್ಮಿತ್ರ ಟೆಕ್ನಾಲಜಿಕಲ್ ಕಾರ್ಪೋರೇಷನ್‌ನವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಶಾಸಕರು ಸೂಚಿಸಿದರು.

ರೈಲ್ವೆ ಬಳಕೆದಾರರ ಸಲಹಾ ಮಂಡಳಿ ನಿರ್ದೇಶಕ ಎಂ.ಎಸ್. ಪಾಟೀಲ, ಎಪಿಎಂಸಿ ನಿರ್ದೇಶಕ ಪ್ರಭು ಡೇರೇದ, ಬಿಜೆಪಿ ಧುರೀಣರಾದ ಮುತ್ತುಸಾಹುಕಾರ ಅಂಗಡಿ, ಬಾಬು ಡಿಗ್ಗಿ, ಪವಾಡಬಸ್ಸು ದೇಶಮುಖ, ಮಹಾಂತೇಶ ಗಂಗನಗೌಡರ, ಖಾಜಾಹುಸೇನಿ ಎತ್ತಿನಮನಿ, ಪಪಂ ಸದಸ್ಯ ಭೀಮಣ್ಣ ಗುರಿಕಾರ, ಹೆಸ್ಕಾಂ ಸೆಕ್ಷನ್ ಅಧಿಕಾರಿ ರುದ್ರಸ್ವಾಮಿ ಹಿರೇಮಠ, ಜಗದೀಶ ಕೆಂಭಾವಿ, ಬಸಣ್ಣ ವಡಿಗೇರಿ, ಗುರುನಾಥ ಡಿಗ್ಗಿ, ಸಿದ್ದಣ್ಣ ಕಟ್ಟಿಮನಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *