ಕೆಸಾಪುರದಲ್ಲಿ ಸಿಸಿ ರಸ್ತೆ ಕಾಮಗಾರಿ ಕಳಪೆ

ನಾಲತವಾಡ: ಆಲೂರ ಗ್ರಾಪಂ ವ್ಯಾಪ್ತಿಯ ಕೆಸಾಪುರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಸಿಸಿ ರಸ್ತೆ ಸಂಪೂರ್ಣ ಕಳಪೆಯಾಗಿದ್ದು ತನಿಖೆ ಮಾಡುವಂತೆ ಮೇಲಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಒತ್ತಾಯಿಸಿದ್ದರೂ ಸ್ಪಂದಿಸಿಲ್ಲ ಎಂದು ಮುಖಂಡ ಗುರುಸಿದ್ದಪ್ಪ ಗ್ಯಾನಪ್ಪ ಗೌಡರ ಆರೋಪಿಸಿದ್ದಾರೆ.

ನರೇಗಾ ಯೋಜನೆಯಡಿ 2018-19ನೇ ಸಾಲಿನಲ್ಲಿ ಅಂದಾಜು 4 ಲಕ್ಷ ರೂ. ವೆೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದೆ. ಉತ್ತಮ ಮರಳು, ಜಲ್ಲಿಕಲ್ಲು, ಸಿಮೆಂಟ್ ಬಳಸುವಂತೆ ತಿಳಿಸಿದ್ದರೂ ಸ್ಪಂದಿಸಲಿಲ್ಲ. ಆಲೂರ ಗ್ರಾಪಂನ ಸಂಬಂಧಿಸಿದ ಒಂಬಡ್ಸ್‌ಮನ್ ಬಿರಾದಾರ ಎಂಬುವರಿಗೆ ರಸ್ತೆ ನಿರ್ಮಾಣದತ್ತ ಗಮನ ಹರಿಸಿ ಎಂದು ಮನವಿ ಮಾಡಿಕೊಂಡರೂ ಉದ್ದಟತನ ತೋರಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮನವಿಗೆ ಬೆಲೆ ಇಲ್ಲ
ಬೇಕಾಬಿಟ್ಟಿ ರಸ್ತೆ ನಿರ್ಮಿಸಿದ್ದು ಕಾಮಗಾರಿ ವೇಳೆ ಸಂಬಂಧಿತ ಇಂಜಿನಿಯರ್ ಸ್ಥಳದಲ್ಲಿ ಇದ್ದಿಲ್ಲ. ಸದ್ಯ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ಗ್ರಾಪಂ ಸದಸ್ಯರು, ಪಿಡಿಒ, ಗುತ್ತಿಗೆದಾರ, ಇಂಜಿನಿಯರ್ ಬಿ.ಆರ್. ಚಾಂದಕೋಟಿ ಹಾಗೂ ಓಂಬಡ್ಸ್‌ಮನ್ ಹೊಂದಾಣಿಕೆ ಮಾಡಿಕೊಂಡು ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ.

ಈ ಕುರಿತು ತನಿಖೆ ಮಾಡಿ ಕ್ರಮ ಜರುಗಿಸುವಂತೆ ಕಳೆದ ಡಿ.27 ರಂದು ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ತೋರಿಕೆಗೆ ಮಾತ್ರ ಅಲ್ಲಲ್ಲಿ ಸಿಮೆಂಟ್ ಹಾಕಿ ಪುನಃ ನಿರ್ಮಿಸಿದ್ದೇವೆ ಎಂದು ಅರ್ಜಿದಾರರಿಗೆ ಧಮಕಿ ಹಾಕಿದ್ದಾರೆ ಎಂದು ಅರ್ಜಿದಾರ ಆರ್.ಜಿ. ಗೌಡರ ಮೇಲಧಿಕಾರಿಗಳ ಬೇಜವಾಬ್ದಾರಿ ಕುರಿತು ದೂರಿದ್ದಾರೆ.

Leave a Reply

Your email address will not be published. Required fields are marked *