ಸಂಸ್ಕೃತಿ ವಿಕೃತಿಗೊಳಿಸುವ ಪ್ರಯತ್ನ ಸಲ್ಲ

ಶಂಕರ ಈ.ಹೆಬ್ಬಾಳ ನಾಲತವಾಡ (ಹಾನಗಲ್ ಶ್ರೀಗುರು ಕುಮಾರೇಶ್ವರರ ಮಹಾಮಂಟಪ)
ಒಂದು ಸಂಸ್ಕೃತಿಯನ್ನು ವಿಕೃತಿಗೊಳಿಸುವ ಪ್ರಯತ್ನಗಳು ನಡೆಯಬಾರದು. ಅದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಚಿತ್ರದುರ್ಗ ಮುರಾಘಾಮಠದ ಶಿವಮೂರ್ತಿ ಮರುಘಾಶರಣರು ಹೇಳಿದರು.

ನಾಲತವಾಡದ ಮಹಾ ಶಿವಶರಣ ವೀರೇಶ್ವರ ಸಾಂಸ್ಕೃತಿಕ ವೇದಿಕೆಯಲ್ಲಿ ಮಹಾ ಶಿವಶರಣ ವೀರೇಶ್ವರ ಶರಣ ದಂಪತಿಗಳ ಶತಪುಣ್ಯಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಶರಣರ ಹಾದಿಯಲ್ಲಿ ನಡೆಯಬೇಕು. ಕೇಳಲು ಮಾತ್ರ ಶರಣರ ವಿಚಾರಗಳಿಲ್ಲ. ಜೀವನದಲ್ಲಿ ಅನುಸರಿಸಿದರೆ ಮಾತ್ರ ಅವುಗಳಿಗೆ ಅರ್ಥ ಬರುತ್ತದೆ. ಶರಣ ತತ್ತ್ವಕ್ಕೆ ವೀರೇಶ್ವರ ಶರಣರ ಹೃದಯ ಜೀವಬಿಟ್ಟಿದೆ. ಅವರೊಬ್ಬ ಒಂದು ಶಕ್ತಿಯಾಗಿದ್ದಾರೆ. ಜಾಗೃತಿಯನ್ನು ಮೂಡಿಸಿದ್ದಾರೆ. ಪರಿವರ್ತನೆ ತಂದಿದ್ದಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಬೋಧಿಸಿದ ಮಾನವೀಯ ಮೌಲ್ಯಗಳನ್ನು ಇಡಿ ಬದುಕಿನಲ್ಲಿ ಅನುಸರಣೆಗೆ ತಂದ ಕೀರ್ತಿ ನಾಲತವಾಡದ ಶರಣರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ವೀರೇಶ್ವರ ಶರಣರನ್ನು ಪಡೆದುಕೊಂಡಿರುವ ನೀವೇ ಧನ್ಯರು, ಅಗ್ನಿಕುಂಡದಲ್ಲಿ ಶರಣರು ಬಿದ್ದರು ಅವರಿಗೆ ಏನು ಆಗಲಿಲ್ಲ. ಅದು ಶರಣರ ಶಕ್ತಿ. ದೈವ ಶಕ್ತಿ ಶರಣರಲ್ಲಿ ಇರುತ್ತದೆ. ಅತಿಂದ್ರೀಯ ಶಕ್ತಿಯನ್ನು ಕೆಲವರು ಸ್ವಂತ ಲಾಭಕ್ಕೆ ಅದನ್ನು ಪ್ರಯೋಗಿಸುತ್ತಾರೆ. ಆದರೆ ವೀರೇಶ್ವರ ಶರಣರಲ್ಲಿ ಅತಿಂದ್ರೀಯ ಶಕ್ತಿ ಇದ್ದರು ಅವರು ಒಳ್ಳೆಯದಕ್ಕೆ ಉಪಯೋಗಿಸಿದ್ದಾರೆ ಎಂದರು.

ಮಾಜಿ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಮಾತನಾಡಿ, ನಾಲತವಾಡದಲ್ಲಿ ಶರಣರ ಚಿಂತನೆಯನ್ನು ಪ್ರವಚನದ ಮೂಲಕ ಸನ್ಮಾರ್ಗದಲ್ಲಿ ನಡೆಯುವ ಚಿಂತನೆಯನ್ನು ಡಾ.ಈಶ್ವರ ಮಂಟೂರ ಶರಣರು ಮಾಡಿದ್ದಾರೆ. ಶರಣರ ವಿಷಯ ಬಂದಾಗ ನಾಲತವಾಡದಲ್ಲಿ ದೊಡ್ಡವರು ಸಣ್ಣವರು, ಹಿಂದುಗಳು ಮುಸ್ಲಿಮರು, ಹರಿಜರು ಕಿರಿಯರು ಭಾವನೆ ಇಲ್ಲವಾಗಿದೆ. ಶರಣರನ್ನು ಮೂಢನಂಬಿಕೆಗಳಿಂದ ಕಳೆದುಕೊಂಡ ಈ ನಾಡು ಎಷ್ಟು ಬಡವಾಗಿದೆ ಎಂಬುದು ಯುವ ಪೀಳಿಗೆ ಅರ್ಥ ಮಾಡಿಕೊಳ್ಳಬೇಕಿದೆ. ವೀರೇಶ್ವರ ಶರಣರ ಶಬ್ದದಿಂದ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗುತ್ತೇವೆ. ಶರಣರ ಜೀವನ ಅರ್ಥೈಸಿಕೊಂಡವರು ನಾವು ಅವರಂತೆ ನಡೆದುಕೊಂಡಿಲ್ಲ. ವಿದ್ಯೆ ಮಾಡಿದಷ್ಟು ಬದಲಾವಣೆ ಯಾರೂ ಮಾಡಿಲ್ಲ. ಲೌಕಿಕ, ವ್ಯವಹಾರ ಜ್ಞಾನ ನೀಡಿದ್ದಾರೆ ಎಂದು ಹೇಳಿದರು.

ಕೂಡಲಸಂಗಮದ ಬಸವಮೃತ್ಯುಂಜಯ ಸ್ವಾಮೀಜಿ, ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ಡಾ.ಈಶ್ವರ ಮಂಟೂರ, ಲಿಂಗಸಗೂರು ವಿಜಯಮಹಾಂತೇಶ ಶಾಖಾ ಮಠದ ಸಿದ್ದಲಿಂಗ ಸ್ವಾಮೀಜಿ, ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಶಾಸಕಿ ನಂದಿನಿ ದೇಶಮುಖ, ಪ್ರಮುಖರಾದ ಶೀಲಪ್ರಭಾ ದೇಶಮುಖ, ಜಯಪ್ರಭಾ ದೇಶಮುಖ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಎಪಿಎಂಸಿ ಸದಸ್ಯ ಪ್ರಭು ಡೇರೆದ, ಪವಾಡಬಸ್ಸು ದೇಶಮುಖ, ಬಿ.ಎಚ್.ಮಾಗಿ ಇದ್ದರು.

ವೀರೇಶ ವಾಲಿ ಸಂಗಡಿಗರು ಪ್ರಾರ್ಥಿಸಿದರು. ಎಂ.ಬಿ.ಅಂಗಡಿ ಸ್ವಾಗತಿಸಿದರು. ಶರಣ ವೀರೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಚೇರ್ಮನ್ ಎಂ.ಎಸ್.ಪಾಟೀಲ ವರದಿ ವಾಚಿಸಿದರು. ರಾಘವೇಂದ್ರ ಗೂಳಿ, ಆರ್.ಎಂ.ಬಂಟನೂರ ಹಾಗೂ ರಾಜು ಹಾದಿಮನಿ ನಿರೂಪಿಸಿದರು.