ನಾಲತವಾಡ: ಸಮೀಪದ ಬಿಜ್ಜೂರ-ಖಾನಿಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಸಮಯ ಪ್ರಜ್ಞೆ ಮರೆತ ಪರಿಣಾಮ ಶಿಕ್ಷಕರೊಬ್ಬರೆ ಮಕ್ಕಳಿಗೆ ಶುಕ್ರವಾರ ಪ್ರಾರ್ಥನೆ ಮಾಡಿಸಿದ್ದು ಕಂಡುಬಂತು.
ಶಿಕ್ಷಣ ಇಲಾಖೆ ನಿಯಮದಂತೆ ಎಲ್ಲ ಶಿಕ್ಷಕರು ಬೆಳಗ್ಗೆ 9.45 ಅಥವಾ 10 ಗಂಟೆಗೆ ಉಪಸ್ಥಿತರಿರುವ ನಿಯಮವಿದೆ. 10.15 ಗಂಟೆಗೆ ಪ್ರಾರ್ಥನೆ ಸಮಯವಿದೆ. ಆದರೆ, ಬಿಜ್ಜೂರ-ಖಾನಿಕೇರಿ ಶಾಲೆಯಲ್ಲಿ ಮಾತ್ರ 10.28 ಗಂಟೆ ಮೀರಿದರೂ ಒಬ್ಬ ಶಿಕ್ಷಕರ ಹೊರತು ಮುಖ್ಯಶಿಕ್ಷಕರಾಗಲಿ ಅಥವಾ ಸಹ ಶಿಕ್ಷಕರಾಗಲಿ ಶುಕ್ರವಾರ ಆಗಮಿಸಿರಲಿಲ್ಲ.
ಹಲವು ವರ್ಷಗಳಿಂದಲೂ ಮುಖ್ಯಗುರು ಹಾಗೂ ಶಿಕ್ಷಕರು ಸಮಯ ಪಾಲನೆ ಮಾಡುತ್ತಿಲ್ಲ. ಕೆಲವು ಶಿಕ್ಷಕರು ತಮ್ಮ ವೈಯಕ್ತಿಕ ಲಾಭದ ವ್ಯವಹಾರದಲ್ಲಿ ತೊಡಗಿಕೊಂಡಿದ್ದು, ಮನ ಬಂದಂತೆ ಶಾಲೆಗೆ ಬರುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದರು.
ಬಲವಾದ ಆರೋಪ: ಶಾಲೆಯಲ್ಲಿ ಹಲವು ಶಿಕ್ಷಕರು ಇರುವುದೆ ಇಲ್ಲ, ಇನ್ನು ಹಲವು ಶಿಕ್ಷಕರು ಸಮಯಕ್ಕೆ ಸರಿಯಾಗಿ ಬರುತ್ತಾರೆ. ಆದರೆ, ಪ್ರಾರ್ಥನೆ ವೇಳೆ ಎಲ್ಲ ಶಿಕ್ಷಕರು ಉಪಸ್ಥಿತರಿವುದು ಅಪರೂಪ ಎಂದು ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಸತ್ಯಾಂಶ ಬಿಚ್ಚಿಟ್ಟರು. ಬಿಸಿಯೂಟ ಬಡಿಸುವ ವೇಳೆ ತಮ್ಮನ್ನು ಬಳಸಿಕೊಳ್ಳುತ್ತಾರೆ. ಅಡುಗೆ ಮಾಡುವ ವೇಳೆ ತಲೆಗೆ ಧರಿಸಿಕೊಳ್ಳುವ ಕ್ಯಾಪ್ ಕೊಟ್ಟರೂ ಅಡುಗೆಯವರು ಬಳಸುತ್ತಿಲ್ಲ. ಒಮ್ಮೊಮ್ಮೆ ಆಹಾರದಲ್ಲಿ ಕೂದಲು ಕಂಡು ಬಂದಿವೆ ಎಂದು ಆರೋಪಿಸಿದರು.
ಎಲ್ಲ ಶಿಕ್ಷಕರಿಗೆ ಹೇಳಿ ಸಾಕಾಗಿದೆ. ಹಲವು ಶಿಕ್ಷಕರು ಸಮಯ ಪಾಲನೆ ಮಾಡುತ್ತಿಲ್ಲ. ಅಂತಹವರ ವೇತನ ತಡೆಗೆ ಪತ್ರ ಬರೆಯುವ ಸಿದ್ಧತೆ ಮಾಡಿಕೊಂಡಿದ್ದೇನೆ. ಈ ಶಾಲೆ ಅವ್ಯವಸ್ಥೆ ಕುರಿತು ಬಿಇಒ ಗಮನಕ್ಕೆ ತರುತ್ತೇನೆ.
– ವಿ.ಎನ್. ನವಲಿ ಸಿಆರ್ಪಿ ರಕ್ಕಸಗಿ