ಸಮರ್ಪಕ ಕುಡಿಯುವ ನೀರು ಪೂರೈಸಿ

ನಾಲತವಾಡ: ಪಟ್ಟಣದ 13ನೇ ವಾರ್ಡಿನಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸಬೇಕೆಂದು ಆಗ್ರಹಿಸಿ ಮಹಿಳೆಯರು ಪಪಂ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪಪಂ ಮೇಲ್ದರ್ಜೆಗೇರಿಸಿರುವುದು ನಮಗೇನು ಸುಖವಾಗಿಲ್ಲ, ಈ ಮೊದಲು ಗ್ರಾಪಂ ವತಿಯಿಂದ ನೀರು ಪೂರೈಸುವಾಗ ಎಂದೂ ತೊಂದರೆಯಾಗಿಲ್ಲ. ಈಗ ನಾಲ್ಕು ವರ್ಷಗಳಿಂದಲೂ ನಮ್ಮ ಓಣಿಯಲ್ಲಿ ನೀರಿನ ಸಮಸ್ಯೆ ಉದ್ಭಸುತ್ತಿದೆ ಎಂದು ದೂರಿದರು.

ಅಧಿಕಾರಿಗೆ ತರಾಟೆ
11 ಗಂಟೆಯಾದರೂ ಕಚೇರಿಗೆ ಬಾರದ ಪಪಂ ಸಿಒ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರಲ್ಲದೆ, ಮೊದಲು ಕಚೇರಿಗೆ ಆಗಮಿಸಿ ಸಮಸ್ಯೆ ಪರಿಹರಿಸಬೇಕೆಂದು ಮಹಿಳೆಯರು ಪಟ್ಟು ಹಿಡಿದು ಸ್ಥಳದಲ್ಲೇ ಬಿಡಾರ ಹೂಡಿದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪಪಂ ಸಿಒ ಮಾರುತಿ ನಡುವಿನಕೇರಿ ಅವರನ್ನು ಪ್ರತಿಭಟನಾಕಾರರು ಸುತ್ತುವರಿದು ಕುಡಿಯುವ ನೀರಿನ ಸಮಸ್ಯೆ ಗಮನಕ್ಕೆ ತಂದರು. ಆಗ ಮಾತನಾಡಿದ ಸಿಒ, ನೀರಿನ ಸಮಸ್ಯೆ ನಿವಾರಿಸಲು ಟೆಂಡರ್ ಕರೆಯಲಾಗಿದ್ದು, ಯಾರೂ ಬರುತ್ತಿಲ್ಲ. ಶೀಘ್ರ ವಾರ್ಡ್‌ಗೆ ಸಿಬ್ಬಂದಿ ಕಳುಹಿಸಿ ನೀರಿನ ಸಮಸ್ಯೆ ಕುರಿತು ಮಾಹಿತಿ ಪಡೆಯಲಾಗುವುದು. ಮತ್ತು ಗುಮ್ಮಿಗಳಿಗೆ ಸಂಪರ್ಕ ಕೊಡಿಸಲಾಗುವುದೆಂದು ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ನಿವಾಸಿಗಳಾದ ಈಶ್ವರ್ ಡಿಗ್ಗಿ, ಸಂಜು ಜೋಶಿ, ಈರಮ್ಮ ಹುಲಗಬಾಳ, ಅಂಬ್ರಮ್ಮ ತಾಳಿಕೋಟ, ಗೌರಮ್ಮ ಬಾಗೇವಾಡಿ, ಭಾರತಿ ಕುಲಕರ್ಣಿ, ರೇಣುಕಾ ಹೊಸೂರ, ಯಲ್ಲಮ್ಮ ಕ್ಷತ್ರಿ, ಮಮತಾ ಮುಲ್ಲಾ ಹಾಗೂ ಪ್ರಭಾವತಿ ಹಾವರಗಿ ಇದ್ದರು.

Leave a Reply

Your email address will not be published. Required fields are marked *