ನಕಲಿ ಪತ್ರಕರ್ತನ ಬಂಧನ

ಹೊನ್ನಾವರ: ರಾಜ್ಯಮಟ್ಟದ ಟಿವಿ ಚಾನೆಲ್​ನ ವರದಿಗಾರ ಎಂದು ಹೇಳಿ ಯಾಮಾರಿಸುತ್ತಿದ್ದ ಯುವಕನೊಬ್ಬನನ್ನು ಹೊನ್ನಾವರ ಪಿಎಸ್​ಐ ಸಂತೋಷ ಕಾಯ್ಕಿಣಿ ನೇತೃತ್ವದ ತಂಡ ಗುರುವಾರ ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

ನಾನು ವರದಿಗಾರ ಎಂದು ಹೇಳಿಕೊಂಡು ಓಡಾಡುತ್ತಿದ್ದ ಮೂಲತಃ ಅಂಕೋಲಾ ಮೂಲದ ಲೂಯಿಸಿ ಎಂಬಾತನನ್ನು ಪೊಲೀಸರು ಗೇರುಸೊಪ್ಪಾದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಲಾಟೆ ನಡೆಯುತ್ತಿದೆ ಗೇರುಸೊಪ್ಪಾಗೆ ಬನ್ನಿ ಎಂದು ಪೊಲೀಸರನ್ನು ಕರೆಸಿಕೊಂಡಿದ್ದ. ಈ ವೇಳೆ ಯುವತಿಯೊಬ್ಬಳ ಜತೆ ಇದ್ದ ಲೂಯಿಸ್ ಪೊಲೀಸರು ಬರುತ್ತಿದ್ದಂತೆ ಯಾರಿಗೋ ಕರೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ವೇಳೆ ಪೊಲೀಸರು ಲೂಯಿಸ್ ಬೈಕ್ ಅನ್ನು ತಪಾಸಣೆ ಮಾಡಿದಾಗ ‘ನಾನು ರಾಜ್ಯಮಟ್ಟದ ಚಾನೆಲ್​ನ ವರದಿಗಾರ. ನೀವೆಲ್ಲ ನಾನು ಹೇಳಿದ ಹಾಗೆ ನಡೆದುಕೊಳ್ಳಬೇಕು’ ಎಂದಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು ಎಲ್ಲ ಚಾನೆಲ್ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಅಂತ ವ್ಯಕ್ತಿ ಅಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಖಚಿತಪಡಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಕುರಿತು ಪ್ರಕರಣ ದಾಖಲಿಸಿಕೊಂಡು ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.