ಅಂಧ್ರದಲ್ಲಿ ಎಚ್​ಡಿಕೆ, ನಾಯ್ಡು ಭೇಟಿ ; ಪ್ರಾದೇಶಿಕ ಪಕ್ಷಗಳ ಒಗ್ಗೂಡಿಕೆಗೆ ಮತ್ತೊಂದು ಹೆಜ್ಜೆ

ಅಮರಾವತಿ: ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಆಂಧ್ರ ಪ್ರದೇಶದ ವಿಜಯವಾಡಕ್ಕೆ ಭೇಟಿ ನೀಡಿರುವ ಕರ್ನಾಟಕ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರನ್ನು ಆಂಧ್ರದ ಮುಖ್ಯಮಂತ್ರಿ ಎನ್​. ಚಂದ್ರಬಾಬು ನಾಯ್ಡು ಅವರು ಭೇಟಿಯಾಗಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮತ್ತು ಲೋಕಸಭೆ ಚುನಾವಣೆಗೆ ಒಟ್ಟಾಗಿ ಹೋಗುವ ಕುರಿತು ಚರ್ಚೆ ನಡೆಸಿದ್ದಾರೆ.

ಪ್ರಾದೇಶಿಕ ಪಕ್ಷಗಳೆಲ್ಲವೂ ಒಂದೇ ವೇದಿಕೆಯಡಿ ಈ ಬಾರಿಯ ಲೋಕಸಭೆ ಚುನಾವಣೆ ಎದುರಿಸುವ ಕುರಿತು ಮತ್ತು ಕೇಂದ್ರದಲ್ಲಿ ಪ್ರತ್ಯೇಕ ಶಕ್ತಿಯಾಗಿ ಹೊರಹೊಮ್ಮುವ ಕುರಿತು ಕರ್ನಾಟಕದ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಮತ್ತು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ಭೇಟಿ ವೇಳೆ ಚರ್ಚಿಸಿದ್ದಾರೆ ಎಂದು ಆಂಧ್ರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.

ಜತೆಗೆ, 40 ನಿಮಿಷಗಳ ಸೀಮಿತ ಅವಧಿಗೆ ನಡೆದ ಈ ಚರ್ಚೆ ಮುಂದಿನ ದಿನಗಳಲ್ಲಿ ವಿಸ್ತೃತ ರೂಪ ಪಡೆದುಕೊಳ್ಳುವ ಅಗತ್ಯವಿದೆ ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕನಕ ದುರ್ಗೆ ದರ್ಶನ ಪಡೆಯಲು ಮತ್ತು ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಂಧ್ರ ಪ್ರವಾಸದಲ್ಲಿದ್ದಾರೆ.