ಕಡೇಮನುಗನಹಳ್ಳಿ ಗ್ರಾಮಕ್ಕೆ ಕಾಲೇಜು ಮಂಜೂರು

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಕಡೇಮನುಗನಹಳ್ಳಿ ಪ್ರೌಢಶಾಲೆ ಕಟ್ಟಡದಲ್ಲಿ ಪಿಯು ಕಾಲೇಜು ಆರಂಭಿಸಲು ಹಾಗೂ ವಿದ್ಯಾರ್ಥಿ ನಿಲಯ ನಿರ್ಮಿಸಿಕೊಡಲು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಕ್ರಮ ವಹಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದರು.

ಕಡೇಮನುಗನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಹಿಂದೆ ಗ್ರಾಮಕ್ಕೆ ಪ್ರೌಢಶಾಲೆ, ಪಶು ಆಸ್ಪತ್ರೆ ಮಂಜೂರು ಮಾಡಿಸಿದ್ದೆ. ಇದೀಗ ಪಿಯು ಕಾಲೇಜು ಹಾಗೂ ವಿದ್ಯಾರ್ಥಿ ನಿಲಯ ತೆರೆಯಲು ಶ್ರಮಿಸುತ್ತೇನೆ. ಪ್ರತಿಯೊಬ್ಬರೂ ಹೈನುಗಾರಿಕೆ ಅವಲಂಬಿಸಿ ಜೀವನ ನಿರ್ವಹಣೆಗೆ ದಾರಿ ಮಾಡಿಕೊಳ್ಳಿ ಎಂದು ರೈತರಿಗೆ ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಶಾಸಕ ಎಚ್.ವಿಶ್ವನಾಥ್ ಮಾತನಾಡಿ, ತಾಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬಿಸುವ 100 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ ರೂಪಿಸಲಾಗಿದೆ. ಈಗಾಗಲೆ ಚಿಲ್ಕುಂದ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 11 ಕೋಟಿ ರೂ ಹಾಗೂ ರಸ್ತೆಗಳ ಅಭಿವೃದ್ಧಿಗೆ 40 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಗ್ರಾಮದ ಕುಮಾರಸ್ವಾಮಿ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಲು ಮುಖ್ಯಮಂತ್ರಿ ಜತೆ ಚರ್ಚಿಸಿ ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು.

ತಡೆಗೋಡೆ ನಿರ್ಮಿಸಿ: ಈ ಭಾಗದಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷ ಮಿತಿಮೀರಿದೆ. ಕಷ್ಟ ಪಟ್ಟು ಬೆಳೆ ತೆಗೆದರೂ ವನ್ಯಜೀವಿಗಳ ದಾಳಿಯಿಂದ ರೈತ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ. ಅರಣ್ಯದಂಚಿನಲ್ಲಿ ರೈಲ್ವೆ ಕಂಬಿ ತಡೆಗೋಡೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಅರಣ್ಯದಂಚಿನ ರೈತರಿಗೆ ಸಾಗುವಳಿ ಮಂಜೂರು ಮಾಡಬೇಕು, ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖಂಡ ಬಾಲಕೃಷ್ಣ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮೈಮುಲ್ ನಿರ್ದೇಶಕರಾದ ಕೆ.ಎಸ್.ಕುಮಾರ್, ದ್ರಾಕ್ಷಾಯಣಿ, ತಾಪಂ ಸದಸ್ಯೆ ರೂಪಾನಂದೀಶ್, ಡೇರಿ ಅಧ್ಯಕ್ಷೆ ಬಾನುಮತಿರಾಮಕೃಷ್ಣೇಗೌಡ, ಕಾರ್ಯದರ್ಶಿ ವನಜಾಕ್ಷಿರವಿಕುಮಾರ್, ಗ್ರಾಪಂಅಧ್ಯಕ್ಷೆ ಶೀಲಾರಾಜು, ಉಪಾಧ್ಯಕ್ಷೆ ಸಾವಿತ್ರಮ್ಮ, ಶ್ರೀನಿವಾಸೇಗೌಡ, ಎಪಿಎಂಸಿ ಸದಸ್ಯ ಸ್ವಾಮಿಗೌಡ, ಮೈಮುಲ್ ಉಪವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ, ವಿಸ್ತರಣಾಧಿಕಾರಿ ಗೌತಮ್‌ಬಸವಲಿಂಗಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ಮಹದೇವೇಗೌಡ ಮತ್ತಿತರರು ಹಾಜರಿದ್ದರು.