ಸಿಬಿಐ ಮುಖ್ಯಸ್ಥರಾಗಿ ಮತ್ತೆ ಅಧಿಕಾರ ಸ್ವೀಕರಿಸಿದ ನಾಗೇಶ್ವರ್‌ ರಾವ್‌

ನವದೆಹಲಿ: ಸಿಬಿಐನ ಆಂತರಿಕ ಕಚ್ಚಾಟದ ಹಿನ್ನೆಲೆಯಲ್ಲಿ ಹೈಡ್ರಾಮಗಳಿಗೆ ಸಾಕ್ಷಿಯಾಗಿದ್ದ ಸಿಬಿಐಗೆ ಇಂದು ಮತ್ತೆ ಹಂಗಾಮಿ ನಿರ್ದೇಶಕರಾಗಿ ಹೆಚ್ಚುವರಿ ನಿರ್ದೇಶಕ ಎಂ. ನಾಗೇಶ್ವರರಾವ್‌ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಅಲೋಕ್‌ ವರ್ಮಾರನ್ನು ಕಡ್ಡಾಯ ರಜೆಗೆ ಕಳುಹಿಸಿದ ಬಳಿಕ ಮಧ್ಯಂತರ ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದ ನಾಗೇಶ್ವರ್‌ ರಾವ್‌ ಅವರು ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ಮರಳಿದ್ದ ಅಲೋಕ್‌ ವರ್ಮಾರನ್ನು ಸಿಬಿಐ ಪ್ರಧಾನ ಕಚೇರಿಗೆ ವೈಯಕ್ತಿಕವಾಗಿ ಸ್ವಾಗತಿಸಿದ್ದರು.

ಆದರೆ, ಸುಪ್ರೀಂ ತೀರ್ಪಿನ 48 ಗಂಟೆಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಸಮಿತಿ ಸಭೆಯಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿ ಅಗ್ನಿಶಾಮಕ ವಿಭಾಗದ ಡಿಐಜಿ ಹುದ್ದೆಗೆ ವರ್ಗಾಯಿಸಿತ್ತು.

ಈ ಬೆನ್ನಲ್ಲೇ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ 1986 ರ ಬ್ಯಾಚ್ ಒಡಿಶಾ ಕ್ಯಾಡರ್ ಐಪಿಎಸ್‌ ಅಧಿಕಾರಿ ರಾವ್ ಅವರನ್ನು ಮತ್ತೆ ಸಿಬಿಐ ನಿರ್ದೇಶಕರನ್ನಾಗಿ ನೇಮಿಸಿ ಸರ್ಕಾರದ ಆದೇಶ ಹೊರಡಿಸಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *