ಕೆಜಿಎಫ್ ಹಾದಿಯಲ್ಲಿ ನಾಗತಿಹಳ್ಳಿ ಸಿನಿಮಾ

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲೀಗ ಬಹುಭಾಷಾ ಪ್ರಯತ್ನಗಳು ಹೆಚ್ಚಾಗುತ್ತಿವೆ. ಮೂಲ ಕನ್ನಡ ಚಿತ್ರವನ್ನು ಹೊರ ರಾಜ್ಯಗಳಲ್ಲೂ ಆಯಾ ಪ್ರಾದೇಶಿಕ ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುವ ಕೆಲಸ ಚಾಲ್ತಿಯಲ್ಲಿದೆ. ಈಗ ಚಂದನವನದ ಮತ್ತೊಂದು ಸಿನಿಮಾ ಆ ಸಾಹಸಕ್ಕೆ ಕೈ ಹಾಕಿದೆ. ವಸಿಷ್ಠ ಸಿಂಹ ಮತ್ತು ಮಾನ್ವಿತಾ ಹರೀಶ್ ನಟನೆಯ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಕನ್ನಡದ ಜತೆಗೆ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ದೇಶಾದ್ಯಂತ ಬಿಡುಗಡೆ ಮಾಡುವ ಪ್ಲಾ್ಯನ್ ಹಾಕಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್. ‘ಕನ್ನಡದ ‘ಕೆಜಿಎಫ್’ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಅದೇ ಮಾದರಿಯಲ್ಲಿ ನಮ್ಮ ಚಿತ್ರವೂ ಪ್ಯಾನ್ ಇಂಡಿಯಾ ತೆರೆಕಾಣಲಿದೆ. ಎಲ್ಲೆಡೆ ಸಲ್ಲುವ ಕಥೆಯಾಗಿದ್ದರಿಂದ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕೆಲವರು ಸಿನಿಮಾ ತೆಗೆದುಕೊಳ್ಳಲು ಮನಸು ಮಾಡಿದ್ದಾರೆ. ಮಾತುಕತೆಯೂ ನಡೆದಿದೆ. ಶೀಘ್ರದಲ್ಲಿಯೇ ಅಧಿಕೃತ ಘೋಷಣೆ ಮಾಡಲಿದ್ದೇವೆ’ ಎನ್ನುವ ನಾಗತಿಹಳ್ಳಿ ಚಂದ್ರಶೇಖರ್, ಜುಲೈ ಆರಂಭದಲ್ಲಿ ಕನ್ನಡ ಅವತರಣಿಕೆಯ ಶೀರ್ಷಿಕೆ ಏನೆಂಬುದನ್ನು ಬಹಿರಂಗ ಪಡಿಸಲಿದ್ದಾರಂತೆ. ಅಷ್ಟೇ ಅಲ್ಲ, ಇಂಗ್ಲಿಷ್​ಗೂ ಸಿನಿಮಾ ಡಬ್ ಆಗಿದ್ದು, ವಿದೇಶಿ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಾಣಲಿದೆ. ‘ಭಾರತದಲ್ಲಿ ಹಲವು ಭಾಷೆಗಳಲ್ಲಿ ಸಿನಿಮಾ ತೆರೆಕಂಡರೆ, ವಿದೇಶಿ ಸಿನಿಮೋತ್ಸವಗಳಿಗಾಗಿ ಇಂಗ್ಲಿಷ್ ಅವತರಣಿಕೆ ಸಿದ್ಧಪಡಿಸಿಕೊಂಡಿದ್ದೇವೆ. ಅದಕ್ಕೆ ‘ಲ್ಯಾಟಿಟ್ಯೂಡ್ ಲ್ಯಾಂಗಿಟ್ಯೂಡ್’ ಎಂಬ ಶೀರ್ಷಿಕೆ ಅಂತಿಮಮಾಡಿದ್ದೇವೆ. ಚಿತ್ರದಲ್ಲಿ ಕನ್ನಡದ ಕಲಾವಿದರ ಜತೆಗೆ ಬ್ರಿಟಿಷ್ ನಟರೂ ಇದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಲಂಡನ್​ನಲ್ಲಾಗಿದೆ. ಇಂಗ್ಲಿಷ್ ಆಯ್ದುಕೊಳ್ಳಲು ಅದೂ ಮುಖ್ಯ ಕಾರಣ’ ಎಂಬುದು ಅವರ ಮಾತು.

ನಮ್ಮದು ಇಂಡಿಯನ್ ಕನ್ನಡ ಸಿನಿಮಾ. ಎಲ್ಲೆಡೆ ಸಲ್ಲುವ ಕಥೆ ಸಿನಿಮಾದಲ್ಲಿದೆ. ಹಾಗಾಗಿ ‘ಕೆಜಿಎಫ್’ ಮಾದರಿಯಲ್ಲಿ ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿಯಲ್ಲಿ ಬಿಡುಗಡೆ ಮಾಡಲಿದ್ದೇವೆ. ಆಯಾ ಭಾಷೆಗಳ ವಿತರಕರ ಜತೆ ಮಾತುಕತೆಯೂ ನಡೆದಿದೆ.

| ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕ

Leave a Reply

Your email address will not be published. Required fields are marked *