ಕೂಡ್ಲಿಗಿ: ತಾಲೂಕಿನ ನಾಗರಹುಣಸೆ ಗ್ರಾಮದ ಹೊಸೂರಿನಲ್ಲಿ ವಿದ್ಯುತ್ ಕಂಬ ಬಿರುಕು ಬಿಟ್ಟಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈಗ ಮಳೆಗಾಲ ಇರುವುದರಿಂದ ಬಿರುಗಾಳಿ ಬೀಸಿದರೆ ಬೀಳುವ ಸ್ಥಿತಿಯಲ್ಲಿದೆ. ಇದರಿಂದ ಕಂಬದ ಬಳಿ ಇರುವ ಮನೆಯ ನಿವಾಸಿಗಳು ಭಯದಿಂದ ಕಾಲ ಕಳೆಯುವಂತಾಗಿದೆ. ಗ್ರಾಮದ ಜನನಿಬಿಡ ಪ್ರದೇಶದಲ್ಲಿದ್ದು, ಇಲ್ಲಿಯೇ ಮಕ್ಕಳು ಆಟ ಆಡುತ್ತಾರೆ.
ಕಂಬ ಶಿಥಿಲಗೊಂಡು ಕಬ್ಬಿಣದ ರಾಡ್‌ಗಳು ಕಾಣಿಸುತ್ತಿವೆ. ಆಕಸ್ಮಿಕವಾಗಿ ವಿದ್ಯುತ್ ಪ್ರಸರಣವಾಗಿ ಅನಾಹುತವಾದರೆ ಯಾರು ಹೊಣೆ?. ಬಿರುಕು ಬಿಟ್ಟ ವಿದ್ಯುತ್ ಕಂಬವನ್ನು ಬದಲಿಸಿ ಬೇರೆಯದನ್ನು ಹಾಕಿಕೊಡಿ ಎಂದು ಸಾಕಷ್ಟು ಬಾರಿ ಸಂಬಂಧಿಸಿದ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವಹಿಸಿದ್ದಾರೆ. ಅನಾಹುತ ಸಂಭವಿಸುವ ಮುನ್ನವೇ ವಿದ್ಯುತ್ ಕಂಬ ಬದಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಯಿಸಿದ್ದಾರೆ.
ನಾಗರಹುಣಸೆ ಗ್ರಾಮದಲ್ಲಿ ವಿದ್ಯುತ್ ಕಂಬ ಶಿಥಿಲವಾದ ಬಗ್ಗೆ ಮಾಹಿತಿ ಇದೆ. ಅದು ಕಡಿದಾದ ಜಾಗದಲ್ಲಿ ಇರುವ ಕಾರಣ ಹೊಸ ಕಂಬ ತೆಗೆದುಕೊಂಡು ಹೋಗಲು ಆಗುತ್ತಿಲ್ಲ. ಆದ್ದರಿಂದ ಹಳೇ ಕಂಬದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಬೇರೆಡೆಯಿಂದ ಜನರಿಗೆ ವಿದ್ಯುತ್ ಪೂರೈಕೆಗೆ ಕ್ರಮವಹಿಲಾಗುವುದು.
ಶಿವಪ್ರಸಾದ್
ಶಾಖಾಧಿಕಾರಿ, ಗುಡೇಕೋಟೆ ಜೆಸ್ಕಾಂ ವಿಭಾಗ