ಹನಗೋಡು: ಶಾಲಾ ಕೊಠಡಿಯೊಳಗೆ ಕುಳಿತು ಪರಿಸರದ ಬಗ್ಗೆ ಪಾಠ ಕೇಳುತ್ತಿದ್ದ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಮಂಗಳವಾರ ನಾಗರಹೊಳೆಯ ಪ್ರಕೃತಿಯ ಮಡಿಲಲ್ಲಿ ಪರಿಸರದ ಕೌತುಕಗಳನ್ನು ಕಂಡು ಸಂಭ್ರಮ ವ್ಯಕ್ತಪಡಿಸಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು ವನ್ಯಜೀವಿ ವಿಭಾಗವ ವತಿಯಿಂದ ಚಿಣ್ಣರ ವನದರ್ಶನ ಯೋಜನೆಯಡಿ ವಿದ್ಯಾರ್ಥಿಗಳನ್ನು ಮಂಗಳವಾರ ರಾಷ್ಟ್ರೀಯ ಉದ್ಯಾನಕ್ಕೆ ಕರೆದೊಯ್ದು ಪರಿಸರದ ಕುರಿತು ಮಾಹಿತಿ ನೀಡಲಾಯಿತು.
ನಂತರ, ಹುಣಸೂರು ನಗರದ ಕಲ್ ಬೆಟ್ಟದ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಹಾಗೂ ಅರಣ್ಯ ಇಲಾಖೆಯ ಕಚೇರಿ ಹಿಂಭಾಗದಲ್ಲಿ ಇಲಾಖೆ ವತಿಯಿಂದ ಬೆಳೆಸಿರುವ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ, ಹುಣಸೂರು ವನ್ಯಜೀವಿ ವಲಯದ ಆರ್‌ಎಫ್‌ಒ ಸುಬ್ರಮಣ್ಯ ವಿವಿಧ ಜಾತಿಯ ಸಸಿಗಳ ಮಾಹಿತಿ ನೀಡಿದರು. ಶ್ರೀಗಂಧ, ತೇಗ, ಬೀಟೆ, ಹೊನ್ನೆ, ಮತ್ತಿ, ನೆಲ್ಲಿಕಾಯಿ, ಬೂರಗ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ಪರಿಚಯಿಸಿ ಇವುಗಳ ಬಗ್ಗೆ ವೈಜ್ಞಾನಿಕ ಮಾಹಿತಿಗಳನ್ನು ಒದಗಿಸಿದರು. ಡಿಆರ್‌ಎಫ್‌ಒ ಪ್ರಮೋದ್, ಶಾಲಾ ಮುಖ್ಯಶಿಕ್ಷಕ ಕುಮಾರಸ್ವಾಮಿ, ಅರಣ್ಯ ರಕ್ಷಕ ಮಧು ಮತ್ತಿತರರಿದ್ದರು.
ವಿದ್ಯಾರ್ಥಿಗಳನ್ನು ಪರಿಸರ ಸ್ನೇಹಿ ನಾಗರಿಕರನ್ನಾಗಿಸುವ ಹಾಗೂ ಅರಣ್ಯಗಳು, ವನ್ಯಜೀವಿ ಸಂಕುಲ ಸಂರಕ್ಷಣೆ, ಮಾಲಿನ್ಯ ಮುಕ್ತ ಪರಿಸರದ ಭವಿಷ್ಯಕ್ಕೆ ಅರಣ್ಯಗಳ ಮಹತ್ವವನ್ನು ಮನದಟ್ಟು ಮಾಡಲು ಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ಚಿಣ್ಣರ ವನದರ್ಶನವೆಂಬ ಕಾರ್ಯಕ್ರಮ ಆಯೋಜಿಸಿದೆ. ಈ ಯೋಜನೆಯಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಪರಿಸರ ಪ್ರೇಮ ಮೂಡಲು ಸಹಕಾರಿ ಆಗಲಿದೆ.
*( ಸುಬ್ರಮಣ್ಯ, ಆರ್‌ಎಫ್‌ಒ, ಹುಣಸೂರು ವನ್ಯಜೀವಿ ವಲಯ