ಅಣ್ಣ-ತಂಗಿ ಬಾಂಧವ್ಯಕ್ಕೆ ಪಂಚಮಿ ಮೆರುಗು

‘ನಾಗರಪಂಚಮಿ ನಾಡಿಗೆ ದೊಡ್ಡದು’ ಎನ್ನುವ ಮಾತಿದೆ. ಉತ್ತರ ಕರ್ನಾಟಕ ಭಾಗಕ್ಕಂತೂ ಇದು ದಿಟವಾಗಿ ಅನ್ವಯವಾಗುತ್ತದೆ. ಏಕೆಂದರೆ, ಶ್ರಾವಣ ಮಾಸದ ಅತಿ ಸುಂದರ ಸಮಯದಲ್ಲಿ ಹೆಣ್ಣುಮಕ್ಕಳು ತೌರಿಗೆ ಬರುವಂತೆ ಮಾಡುವ ಮೋಡಿಯ ಹಬ್ಬ ನಾಗರಪಂಚಮಿ. ಅಣ್ಣ- ತಂಗಿ ಬಾಂಧವ್ಯದ ಸಹೋದರತ್ವದ ಸಂಕೇತವಾಗಿರುವ ಈ ಹಬ್ಬವನ್ನು ತವರಿನಲ್ಲಿ ಆಚರಿಸುವುದೆಂದರೆ ಹೆಣ್ಣುಮಕ್ಕಳಿಗೆ ಹೆಮ್ಮೆಯ ಸಂಗತಿ.

| ಡಾ. ದೀಪಾ ಜೋಶಿ

ಹೆಣ್ಣುಮಕ್ಕಳ ಮನದಲ್ಲಿ ತಮ್ಮ ಸಹೋದರರ ಏಳ್ಗೆ, ಅವರ ಆಯುಷ್ಯ, ಉತ್ತಮ ಭವಿಷ್ಯದ ಬಗ್ಗೆ ಯಾವತ್ತೂ ಮೌನ ಪ್ರಾರ್ಥನೆಯೊಂದು ಇದ್ದೇ ಇರುತ್ತದೆ. ಆದರೆ, ಆ ಮೌನದ ಹಂಗನ್ನು ಹರಿದುಬಂದು, ಅತ್ಯಂತ ಸಂಭ್ರಮದಿಂದ ತವರಿನಲ್ಲಿ ನಲಿದಾಡುತ್ತ ಹಬ್ಬವನ್ನೂ, ಸಹೋದರತ್ವದ ಬಾಂಧವ್ಯವನ್ನೂ ಸವಿಯುವ ಏಕೈಕ ಸಮಯ ನಾಗರಪಂಚಮಿ.

ಶ್ರಾವಣಮಾಸದ ಶುಕ್ಲಪಕ್ಷದ ಪಂಚಮಿ ತಿಥಿಯಂದು ನಾಗರಪಂಚಮಿ ಹಬ್ಬದ ಆಚರಣೆ. ಬೆನ್ನಿಗೆ ಹಬ್ಬಗಳ ಸಾಲನ್ನು ಕಟ್ಟಿಕೊಂಡು ಬರುವ ನಾಗರಪಂಚಮಿಗೆ ವಿಶೇಷ ಮಹತ್ವವಿದೆ. ಮಳೆಗಾಲದಲ್ಲಿ ಮಳೆನೀರು ಬಿಲಗಳಿಗೆ ತುಂಬಿಕೊಂಡಾಗ ಸಾಮಾನ್ಯವಾಗಿ ಹಾವುಗಳು ಹೊರಗೆ ಬರುತ್ತವೆ. ಅವುಗಳಿಗೆ ಇದು ಸಂತಾನಾಭಿವೃದ್ಧಿಯ ಸಮಯವೂ ಹೌದು. ಈ ಸಂದರ್ಭದಲ್ಲಿ ನಾಗರಪಂಚಮಿ ಹಬ್ಬದ ಆಚರಣೆ ಮಾಡುವ ನಮ್ಮ ಹಿರಿಯರ ವಿಚಾರ ನಿಜಕ್ಕೂ ಶ್ಲಾಘನೀಯ.

ಪೌರಾಣಿಕ ಹಿನ್ನೆಲೆಯಲ್ಲಿ ನೋಡುವುದಾದರೆ ಜನಮೇಜಯ, ತನ್ನ ತಂದೆಯನ್ನು ಕೊಂದ ತಕ್ಷಕನ ಸಂತತಿ ನಾಶವಾಗಬೇಕೆಂದು ಸರ್ಪಯಾಗ ಮಾಡಿಸುತ್ತಾನೆ. ಯಾಗಕ್ಕೆ ಅನೇಕ ಸರ್ಪಗಳು ಆಹುತಿಯಾಗುತ್ತವೆ. ಆಗ ಸರ್ಪರಾಜ ವಾಸುಕಿ ಬ್ರಹ್ಮನ ಮೊರೆಹೋಗುತ್ತಾನೆ. ತಮ್ಮ ತಾಯಿಯ ಶಾಪವೇ ಇದಕ್ಕೆಲ್ಲ ಕಾರಣ ಎಂದು ವಾಸುಕಿಗೆ ತಿಳಿಯುತ್ತದೆ. ‘ಜರಾತ್ಕಾರು ಮುನಿಗೆ ನಿನ್ನ ತಂಗಿಯನ್ನು ಕೊಟ್ಟು ಮದುವೆ ಮಾಡು. ಅವಳಿಂದ ಜನಿಸುವ ಆಸ್ತಿಕನು ನಿಮ್ಮ ಶಾಪವಿಮೋಚನೆ ಮಾಡುತ್ತಾನೆ’ ಎಂದು ಬ್ರಹ್ಮ ಹೇಳುತ್ತಾನೆ. ಇತ್ತ ಯಾಗದಲ್ಲಿ ಸರ್ಪಗಳು ಸಾಯುವುದು ನಡೆದೇ ಇರುತ್ತದೆ. ಆಗ ಜನಮೇಜಯನ ಯಾಗಶಾಲೆಗೆ ಆಸ್ತಿಕಮುನಿ ಬರುತ್ತಾನೆ. ಅವನ ಮನಃಪರಿವರ್ತನೆ ಮಾಡಿ ಯಜ್ಞ ನಿಲ್ಲಿಸುತ್ತಾನೆ. ಆಗ ಸರ್ಪಗಳ ಸಂತತಿ ಉಳಿಯುವಂತಾಗುತ್ತದೆ. ಇದೆಲ್ಲ ನಡೆದದ್ದು ಶ್ರಾವಣಮಾಸದ ಪಂಚಮಿ ದಿನದಂದು ಎನ್ನುವ ನಂಬಿಕೆ ಇದೆ. ಹಾಗಾಗಿ ನಾಗಗಳಿಗೆ ಆಸ್ತಿಕನ ವರದಾನವಾದ ಶ್ರಾವಣ ಶುದ್ಧ ಪಂಚಮಿಯನ್ನು ನಾಗರಪಂಚಮಿ ಎಂದು ಆಚರಿಸಲಾಗುತ್ತದೆ ಎಂಬುದು ಪ್ರತೀತಿ.

ತವರಿನಲ್ಲಿ ಹಬ್ಬದ ಆಚರಣೆ

ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ಹಬ್ಬಕ್ಕೆ ವಿಶೇಷ ಮನ್ನಣೆ. ಅಣ್ಣ, ತಂಗಿಯರ ಬಾಂಧವ್ಯವನ್ನು ಬೆಸೆಯುವ ನಾಗರಪಂಚಮಿಯನ್ನು ತವರಿನಲ್ಲಿಯೇ ಆಚರಿಸಬೇಕು ಎನ್ನುವುದು ಎಲ್ಲ ಹೆಣ್ಣುಮಕ್ಕಳ ಕನಸು. ಆನಂದಕಂದರು ಬರೆದ ಹಾಡು, ‘ಪಂಚಮಿ ಹಬ್ಬಾ ಉಳದಾವ ದಿನಾ ನಾಕ…ಬರಲಿಲ್ಲ ಯಾಕೋ ನಮ್ಮಣ್ಣ ಕರೀಲಾಕ.’ ಇದು ಎಲ್ಲ ಹೆಣ್ಣುಮಕ್ಕಳ ಮನದ ಮಾತು. ಅಣ್ಣ, ತಮ್ಮಂದಿರು ಹಬ್ಬಕ್ಕೆ ಇನ್ನೂ ನಾಲ್ಕಾರು ದಿನ ಇರುವಾಗಲೇ ಅಕ್ಕ, ತಂಗಿಯರನ್ನು ಕರೆಯಲು ಬರುತ್ತಾರೆ. ಪತಿಯ ಒಪ್ಪಿಗೆ ಪಡೆದು ಹೆಣ್ಣುಮಕ್ಕಳು ತವರಿಗೆ ತೆರಳುತ್ತಾರೆ. ಹಿಂದೆ ಪಾರ್ವತಿಯನ್ನು ಹಬ್ಬಕ್ಕೆ ತವರಿಗೆ ಕರೆತರಲು ಹೋದ ಪರ್ವತರಾಜ ಶಿವನ ನಿರಾಕರಣೆಯಿಂದ ಸಿಟ್ಟಾಗುತ್ತಾನೆ. ‘ಮಂಗಳಗೌರಿಯ ಮಾರಿಕೊಟ್ಟೇವಾ ನಿಮ್ಮನೆಗೆ’ ಎಂದು ಪಾರ್ವತಿಯ ತಂದೆ ಗರ್ಜಿಸುತ್ತಾನೆ. ಮಾವನಿಗೆ ಹೆದರಿ ಪರಶಿವ ಪತ್ನಿಯನ್ನು ತೌರು ಮನೆಗೆ ಕಳುಹಿಸುತ್ತಾನೆ. ಸಂತಸದಿಂದ ತವರಿಗೆ ಬಂದು ಪಂಚಮಿ ಹಬ್ಬ ಮಾಡುತ್ತಾಳೆ ಪಾರ್ವತಿ. ಜಗನ್ಮಾತೆಗೇ ಬಿಡದ ತವರಿನ ಮೋಹ ನಮ್ಮಂತಹ ಸಾಮಾನ್ಯರಿಗೆ ಬಿಟ್ಟೀತಾ?

ತವರಿಗೆ ಬಂದ ಹೆಣ್ಣುಮಕ್ಕಳು ತಾಯಿ, ತಂಗಿ, ಅತ್ತಿಗೆಯರ ಜತೆ ಸೇರಿ ಹಬ್ಬದ ತಯಾರಿಯಲ್ಲಿ ತೊಡಗುತ್ತಾರೆ. ತಂಬಿಟ್ಟು, ಶೇಂಗಾ ಉಂಡಿ ತಯಾರಿಯ ಸಂಭ್ರಮ ಆರಂಭವಾಗುತ್ತದೆ. ಜೋಳ ಹುರಿದು ಅರಳು ಮಾಡುವುದು, ಅವುಗಳನ್ನು ಬೀಸಿ ಅರಳಿಟ್ಟು ಮಾಡುವುದು, ಅರಳಿನ ಉಂಡಿ, ನವಣೆ ಉಂಡಿ, ದಾಣಿ ಉಂಡಿ ಹೀಗೆ ತರಹೇವಾರಿ ಸಿಹಿಗಳೂ, ಜತೆಗೆ ಚಕ್ಕುಲಿ, ಅವಲಕ್ಕಿ ಚೂಡಾಗಳೂ ತಯಾರಾಗುತ್ತವೆ. ಹೆಣ್ಣುಮಕ್ಕಳು ಕೈತುಂಬ ಬಳೆ ಇಟ್ಟುಕೊಳ್ಳುವುದ ರೊಂದಿಗೆ ನಾಗರಪಂಚಮಿ ಹಬ್ಬ ಆರಂಭವಾಗುತ್ತದೆ. ಅಣ್ಣ, ತಮ್ಮ ಇದ್ದವರು ಹೊಸ ಬಳೆ ತೊಟ್ಟುಕೊಳ್ಳಲೇಬೇಕು.

ವಾರಗಟ್ಟಲೆ ಸಂಭ್ರಮ

ನಾಗರಪಂಚಮಿ ಇಲ್ಲಿ ಒಂದು ದಿನದ ಹಬ್ಬವಲ್ಲ. ಸಾಮಾನ್ಯವಾಗಿ ಮೂರು ದಿನಗಳ ಕಾಲ ಆಚರಿಸಲಾಗುತ್ತದೆಯಾದರೂ ಹಬ್ಬದ ಸಂಭ್ರಮ ವಾರಗಟ್ಟಲೆ ಇರುತ್ತದೆ. ಮೊದಲಿಗೆ ರೊಟ್ಟಿ ಪಂಚಮಿ, ಮರುದಿನ ನಾಗರ ಚೌತಿ, ಅದರ ಮರುದಿನ ನಾಗರ ಪಂಚಮಿ.

ರೊಟ್ಟಿ ಪಂಚಮಿ ದಿನ ಮಹಿಳೆಯರು ಎಳ್ಳು ಹಚ್ಚಿ ತಯಾರಿಸಿದ ರೊಟ್ಟಿ, ಚಪಾತಿ, ಕಡ್ಲೆಕಾಳು ಪಲ್ಯ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ತಂಬಿಟ್ಟು, ಶೇಂಗಾ, ಕಡ್ಲೆ ಚಟ್ನಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು, ಬಂಧು ಬಳಗ ಸ್ನೇಹಿತರು, ಮನೆಯವರೊಂದಿಗೆ ಹಂಚಿಕೊಂಡು ಸಂಭ್ರಮಿಸುತ್ತಾರೆ.

ನಾಗರಚೌತಿಯ ದಿನ ಕಲ್ಲಿನ ನಾಗನಿಗೆ, ಬಾಗಿಲು ಚೌಕಟ್ಟಿನ ಬದಿಗೆ ಮಣ್ಣಿನಲ್ಲಿ ಬರೆದ ನಾಗನಿಗೆ, ಪೂಜೆ ಮಾಡಿ, ಬೆಲ್ಲದ ನೀರನ್ನು ಒಣಕೊಬ್ಬರಿ ಗಿಟುಕದಲ್ಲಿ ಹಾಕಿಕೊಂಡು ಅಣ್ಣ, ತಮ್ಮಂದಿರ ಹೆಸರು ಹೇಳಿ ಹಾಕುತ್ತಾರೆ. ನೆನೆಗಡಲೆ, ತಂಬಿಟ್ಟು, ಎಳ್ಳು-ಬೆಲ್ಲದ ಚಿಗುಳಿ ನೈವೇದ್ಯ ಮಾಡುತ್ತಾರೆ. ಬೆಲ್ಲದ ನೀರು ಹಾಕಿ ಆ ನೆನೆದ ಕೊಬ್ಬರಿ ಗಿಟುಕದಲ್ಲಿ ದಾರ ಕಟ್ಟಿ ತಿರುಗಿಸುತ್ತ, ಬೋಳಬಗುರಿ ಆಡುವ ಮಕ್ಕಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಂದು ಹೆಣ್ಣುಮಕ್ಕಳು ತಮ್ಮ ಸೋದರರಿಗಾಗಿ ಉಪವಾಸ ಇರುತ್ತಾರೆ. ಆ ದಿನ ಹುತ್ತದಿಂದ ಮಣ್ಣು ತಂದು ಮಣ್ಣಿನ ನಾಗಪ್ಪನನ್ನು ಮಾಡುತ್ತಾರೆ.

ಮರುದಿನ ನಾಗರಪಂಚಮಿ. ಗಂಡಸರು, ಹೆಂಗಸರು ಎಲ್ಲರೂ ನಾಗಪ್ಪನಿಗೆ ಹಾಲು ಹಾಕುತ್ತಾರೆ. ಜತೆಗೆ ಹುರಿಗಡಲೆ, ಜೋಳದ ಅರಳು, ಎಳೆಯ ಹುಣಸೆ ಕಾಯಿ, (ಅವುಗಳನ್ನು ನಾಗರಕಟ್ಟಾ ಎಂದು ಕರೆಯುವುದು ವಾಡಿಕೆ) ಉಪ್ಪು ಏರಿಸಿ ಕಜ್ಜಿ, ತುರಿಕೆ, ತದ್ದು ಮುಂತಾದ ಚರ್ಮ ರೋಗಗಳು ಬಾರದಂತೆ ಕಾಪಾಡು ಎಂದು ಬೇಡಿಕೊಳ್ಳುತ್ತಾರೆ. ನಾಗರಚೌತಿಯಂದು ಮನೆಯೊಳಗೆ ಬರುವಂತೆ ಮುಖ ಮಾಡಿದ ನಾಗನ ರಂಗೋಲಿ ಬಾಗಿಲು ಮುಂದಿದ್ದರೆ, ಮರುದಿನ ಪಂಚಮಿ ಹೊರಗೆ ಹೋಗುವ ನಾಗಪ್ಪನ ರಂಗೋಲಿ ಹಾಕುವುದು ಪದ್ಧತಿ. ಪಂಚಮಿಯ ದಿನ ಅಡುಗೆಯಲ್ಲಿ ಹೆಂಚಿನಲ್ಲಿ ಸುಡುವುದು, ಎಣ್ಣೆಯಲ್ಲಿ ಕರಿಯುವುದು ನಿಷಿದ್ಧ. ಆದ್ದರಿಂದ ಹಬೆಯಲ್ಲಿ ಬೇಯಿಸಿದ ಸಿಹಿ ಕಡುಬು, ಖಾರದ ಕಡಬುಗಳು ವಿಶೇಷ. ಎಲ್ಲರೂ ಊಟ ಮಾಡಿ, ತಾಂಬೂಲ ಮೆಲ್ಲುತ್ತ, ಉಯ್ಯಾಲೆ ಆಡಿ ಸಂತೋಷಪಡುತ್ತಾರೆ.

ಹೆಣ್ಣುಮಕ್ಕಳ ಸಂಭ್ರಮ ಹೀಗಿದ್ದರೆ, ಗಂಡು ಮಕ್ಕಳು ನಿಂಬೆಹಣ್ಣು ಉರುಳಿಸುವ, ಚಕ್ಕಡಿ ಗಾಲಿ ಉರುಳಿಸುವ, ಮಲ್ಲಕಂಬ ಏರುವ ಮುಂತಾದ ಆಟಗಳನ್ನು ಆಡಿ ಖುಷಿ ಪಡುತ್ತಾರೆ. ಸಾರ್ವಜನಿಕವಾಗಿ ದೊಡ್ಡ ದೊಡ್ಡ ಮರಗಳಿಗೆ ಕಟ್ಟಿದ ಹಗ್ಗದ ಜೋಕಾಲಿ, ಮೆಟ್ಟಿಲು ಜೋಕಾಲಿ, ತಿರುಗಣಿ ಜೋಕಾಲಿಗಳಲ್ಲಿ ಗಂಡು, ಹೆಣ್ಣು ಭೇದವಿಲ್ಲದೆ ಎಲ್ಲರೂ ಜೀಕಿ ಸಂಭ್ರಮಿಸುತ್ತಾರೆ. ಮರಗಳ ಮೇಲೆ ಕಟ್ಟಿದ ತಂಬಿಟ್ಟು, ಕೊಬ್ಬರಿಯನ್ನು, ಜೋಕಾಲಿಯಲ್ಲಿ ಜೀಕಿ, ಹಿಡಿಯುವ ಸ್ಪರ್ಧೆಯೂ ಇರುತ್ತದೆ.

ಕೊಬ್ರಿಕುಬುಸ ಹಂಚುವುದು

ಇಷ್ಟಾದ ಮೇಲೆ ಹಬ್ಬ ಮುಗಿಯಿತು ಎನ್ನುವಂತಿಲ್ಲ. ಇದು ತಿಂಗಳುಗಟ್ಟಲೆ ಜಾರಿಯಲ್ಲಿರುತ್ತದೆ. ತಮ್ಮ ಬಂಧು-ಮಿತ್ರರ ಮನೆಗಳಿಗೆ ‘ಕೊಬ್ರಿಕುಬಸ ಒಯ್ಯುವುದು’ ಎಂಬ ಪದ್ಧತಿ ಇದೆ. ಬಗೆಬಗೆಯ ಲಾಡು, ಅರಳು, ಕೊಬ್ರಿಯ ಬಟ್ಟಲುಗಳು, ಹೊಸ ಬಟ್ಟೆ ಮುಂತಾದ ಉಡುಗೊರೆಗಳನ್ನು ಕೊಟ್ಟು ಬರುವುದು ವಿಶೇಷ. ಸುತ್ತಮುತ್ತಲಿನ, ದೂರದ ಊರುಗಳಿಗೆ ಹೋಗಿ ಕೊಟ್ಟುಬರುವುದು ಅನನ್ಯ ಸಂಪ್ರದಾಯ. ಇದ್ದೂರಲ್ಲೂ ಒಬ್ಬರಿಗೊಬ್ಬರು ಕೊಬ್ರಿಕುಬಸ ಕೊಡುವ ಸಂಪ್ರದಾಯ ಸಂಭ್ರಮದಿಂದ ನಡೆಯುತ್ತದೆ.

ಆಧುನಿಕತೆಯ ಹೆಸರಿನಲ್ಲಿ ಎಲ್ಲ ಹಬ್ಬಗಳ ಸಂಭ್ರಮ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ನಾಗರಪಂಚಮಿಯ ಹಬ್ಬದ ಸಂಭ್ರಮವೂ ಕಡಿಮೆಯಾಗುತ್ತಿದೆ. ಆದರೆ, ಉತ್ತರ ಕರ್ನಾಟಕದಲ್ಲಿ ಈ ಹಬ್ಬದ ಸಂಭ್ರಮ ಇನ್ನೂ ಉಳಿದುಕೊಂಡಿದೆ ಎನ್ನಬಹುದು.