‘ನಾಗರಹಾವು’ ಬಗ್ಗೆ ಶಿವಣ್ಣ ಹೇಳಿದ್ದೇನು?

ಬೆಂಗಳೂರು: ಹೊಸ ಅವತರಣಿಕೆಯ ನಾಗರಹಾವು ಸಿನಿಮಾವನ್ನು ನಟ ಶಿವರಾಜ್​ಕುಮಾರ್​ ಅವರು ಇಂದು ನರ್ತಕಿ ಚಿತ್ರಮಂದಿರದಲ್ಲಿ ವೀಕ್ಷಿಸಿದರು. ಸಿನಿಮಾ ನೋಡಿ ಹೊರ ಬಂದ ಅವರು ಚಿತ್ರದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಅವರು, “ಹಾವಿನ ದ್ವೇಷ 12 ವರ್ಷ ಅಂತಾರೆ. ನಾನು 12ನೇ ವರ್ಷದಲ್ಲಿ ಈ ಸಿನಿಮಾ‌ ನೋಡಿದ್ದೆ. ಈಗ 40 ವರ್ಷದ ಹಿಂದಿನ ಸಿನಿಮಾವನ್ನು ಪುನಃ ಹೊಸ ಮಾದರಿಯಲ್ಲಿ ನೋಡಿದ್ದು ತುಂಬಾ ಸಂತೋಷವಾಯಿತು. ಚಿತ್ರವನ್ನೂ ಈ ಹಂತಕ್ಕೆ ರೂಪಿಸಿದ ಕಲಾವಿದರು, ತಂತ್ರಜ್ಞರ ಪ್ರಯತ್ನವನ್ನು ನಾವು ಮೆಚ್ಚಲೇಬೇಕು. ವಿಷ್ಣುವರ್ಧನ್ ಅವರ ಅಭಿನಯ ನಿಜಕ್ಕೂ ಅದ್ಭುತ,” ಎಂದರು.

” ಅಪ್ಪಾಜಿಯವರ ಬಭ್ರುವಾಹನ, ಸತ್ಯ ಹರಿಶ್ಚಂದ್ರ ಕೂಡ ಇದೇ ರೀತಿ ಹೊಸ ಅವತರಣಿಕೆಯಲ್ಲಿ ಬಿಡುಗಡೆ ಆಗಿತ್ತು,” ಎಂದೂ ಅವರು ನೆನಪಿಸಿಕೊಂಡರು.

ಇಂದು ಭಾನುವಾರವಾಗಿದ್ದ ಕಾರಣ ನಾಗರಹಾವು ಸಿನಿಮಾ ವೀಕ್ಷಣೆಗೆ ಪ್ರೇಕ್ಷರು ಸಾಗರೋಪಾದಿಯಲ್ಲಿ ಚಿತ್ರಮಂದಿರಗಳಿಗೆ ಆಗಮಿಸಿದ್ದರು. ನರ್ತಕಿ ಚಿತ್ರಮಂದಿರದ ಬಳಿ ಜನ ಸಾಗರವೇ ಸೇರಿತ್ತು. ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ವಿಷ್ಣು ಸ್ಮಾರಕ ಆಗೋವರೆಗೆ ಬಿಡುವುದಿಲ್ಲ

ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಎದುರಾಗಿರುವ ಅಡೆತಡೆಗಳ ಕುರಿತು ಮಾತನಾಡಿದ ಶಿವರಾಜ್​ಕುಮಾರ್​, ” ವಿಷ್ಣುವರ್ಧನ್​ ಅವರ ಸ್ಮಾರಕ ಆಗಲೇಬೇಕು. ಈ ಬಗ್ಗೆ ನಾನು ಮೊದಲಿಂದಲೂ ಹೋರಾಟ ಮಾಡಿದ್ದೇನೆ. ಸ್ಮಾರಕ ಆಗೋವರೆಗೂ ನಾನು ಬಿಡುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.