ರಾಯ್ಪುರ: ಮೂಢನಂಬಿಕೆಗೆ ಜೋತುಬಿದ್ದ ಪಾಲಕರು ತಮ್ಮ 5 ತಿಂಗಳ ಹೆಣ್ಣು ಮಗುವನ್ನು ಕಳೆದುಕೊಂಡಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
ಪಾಲಕರು ತಮ್ಮ 5 ತಿಂಗಳ ಹಸುಗೂಸಿಗೆ ನಾಗ ದೇವತೆಯ ಆಶೀರ್ವಾದ ಸಿಗಲಿ ಎಂದು ರಾಜನಂದಗಾಂವ್ನಲ್ಲಿ ಪೂಜೆ ಹಮ್ಮಿಕೊಂಡಿದ್ದರು. ತಮ್ಮ ಮಗುವನ್ನು ಹಾವಾಡಿಗನ ಕೈಗೆ ಒಪ್ಪಿಸಿದದರು. ಮಗುವನ್ನು ಮಲಗಿಸಿಕೊಂಡು ಪೂಜೆ ಮಾಡುತ್ತಿದ್ದ ಸಂದರ್ಭದಲ್ಲಿ ಆ ಹಾವು ಮಗುವಿಗೆ ಕಚ್ಚಿದೆ. ಆದರೆ ಆ ಹಾವಾಡಿಗ ಹಾವು ವಿಷಪೂರಿತವಲ್ಲ. ಏನೂ ಆಗುವುದಿಲ್ಲ ಎಂದು ಹೇಳುತ್ತ ಪೂಜೆಯನ್ನು ಹಾಗೇ ಸುಮಾರು ಎರಡು ತಾಸು ಮುಂದುವರಿಸಿದ್ದಾನೆ. ಯಾವಾಗ ಮಗುವಿನ ಉಸಿರಾಟ ನಿಧಾನವಾಗಲು ಶುರುವಾಯಿತೋ ಆಗ ಅದರ ಪಾಲಕರು ಭಯಗೊಂಡು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಆ ಪುಟ್ಟ ಹೆಣ್ಣುಮಗು ಮೃತಪಟ್ಟಿತ್ತು ಎನ್ನಲಾಗಿದೆ.
ಹೆಣ್ಣುಮಗು ಪದೇಪದೆ ಅನಾರೋಗ್ಯಕ್ಕೀಡಾಗುತ್ತಿತ್ತು. ಒಂದು ದಿನ ಮನೆಗೆ ಬಂದಿದ್ದ ಹಾವಾಡಿಗ ಬಿಲ್ಲು ರಾಮ್ ಮರ್ಕಮ್ ನಾಗದೇವತೆಯ ಆಶೀರ್ವಾದ ಪಡೆದರೆ ಸರಿಯಾಗುತ್ತದೆ. ಅದಕ್ಕಾಗಿ ಒಂದು ಪೂಜೆಯನ್ನು ಮಾಡಿಸಬೇಕು ಎಂದು ಹೇಳಿದ್ದ. ಅದನ್ನು ನಂಬಿದ ಪಾಲಕರು ತಮ್ಮ ಮಗುವನ್ನು ಆತನ ಬಳಿ ಕರೆದುಕೊಂಡು ಹೋಗಿದ್ದರು. ಹಾವಾಡಿಗ ಆ ಮಗುವಿಗೆ ಹಾವಿನ ಆಶೀರ್ವಾದ ಮಾಡಿಸುವ ಸಲುವಾಗಿ ಅದರ ಕುತ್ತಿಗೆಗೆ ಸುತ್ತಿದ್ದ. ಇದೇ ವೇಳೆ ಹಾವು ಕಚ್ಚಿದೆ ಎಂದು ಪಾಲಕರು ಮೂಲಗಳು ತಿಳಿಸಿವೆ. ಬಿಲ್ಲುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.