ಶ್ರೀ ಸೌಮ್ಯಕೇಶವಸ್ವಾಮಿ ಬ್ರಹ್ಮರಥೋತ್ಸವ

ನಾಗಮಂಗಲ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಸೌಮ್ಯಕೇಶವಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು.

ಗುರುವಾರ ಮಧ್ಯಾಹ್ನ 1.30ರ ಅಭಿಜಿನ್ ಲಗ್ನದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು. ದೇಗುಲದ ಆವರಣದ ಸುತ್ತ ರಥದ ಮೆರವಣಿಗೆ ನಡೆಯಿತು. ತಮಿಳುನಾಡು, ಕೇರಳ ಸೇರಿ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ರಥೋತ್ಸವ ಕಣ್ತುಂಬಿಕೊಂಡು ಸೌಮ್ಯಕೇಶವನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬ್ರಹ್ಮರಥೋತ್ಸವ ಅಂಗವಾಗಿ ಕಳೆದ ಐದು ದಿನಗಳಿಂದ ಶ್ರೀ ಸೌಮ್ಯಕೇಶವಸ್ವಾಮಿಗೆ ಅಂಕುರಾರ್ಪಣೆ, ಗರುಡ ಪ್ರತಿಷ್ಠೆ, ಅಭಿಷೇಕ ಶೇಷವಾಹನೋತ್ಸವ, ಗಜವಾಹನೋತ್ಸವ ಸೇರಿ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದವು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಮಾ.22ರಂದು ಗರುಡೋತ್ಸವ ಹಾಗೂ ಶಯನೋತ್ಸವ. ಮಾ.23ರಂದು ಅಶ್ವವಾಹನೋತ್ಸವ, ಅವಭೃತಸ್ನಾನ, ಚೂರ್ಣಾಭಿಷೇಕ ಮತ್ತು ಹನುಮಂತೋತ್ಸವ ಹಾಗೂ ಮಾ.24ರಂದು ಮಹಾಭಿಷೇಕ ಮತ್ತು ದ್ವಾದಶಾರಾಧನೆಯೊಂದಿಗೆ 9 ದಿನಗಳ ಬ್ರಹ್ಮೋತ್ಸವಕ್ಕೆ ತೆರೆ ಬೀಳಲಿದೆ.

Leave a Reply

Your email address will not be published. Required fields are marked *