ಹಾಲಿನ ದರ ಕಡಿತಕ್ಕೆ ಆಕ್ರೋಶ

ನಾಗಮಂಗಲ: ಹಾಲು ಉತ್ಪಾದರಿಗೆ ನೀಡುವ ಹಾಲಿನ ದರ ಕಡಿತಗೊಳಿಸಿರುವ ಮನ್‌ಮುಲ್ ಕ್ರಮ ಖಂಡಿಸಿ ರೈತರು ಶುಕ್ರವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಮಂಡ್ಯ ವೃತ್ತದಲ್ಲಿ ಜಮಾಯಿಸಿದ ತಾಲೂಕಿನ ವಿವಿಧ ಗ್ರಾಮಗಳ ರೈತರು, ರೈತ ವಿರೋಧಿ ನಿಲುವು ಕೈಗೊಂಡು ಹಾಲಿನ ದರ ಕಡಿತಗೊಳಿಸುವ ಜಿಲ್ಲಾ ಹಾಲು ಒಕ್ಕೂಟದ ವಿರುದ್ಧ ಘೋಷಣೆ ಕೂಗಿ, ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಟಿ.ಮರಿಯಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಒಕ್ಕೂಟದ ತೀರ್ಮಾನವನ್ನು ಖಂಡಿಸಿದರು.

ಬಳಿಕ ಮಿನಿವಿಧಾನಸೌಧಕ್ಕೆ ತೆರಳಿ ಕೆಲಹೊತ್ತು ಧರಣಿ ನಡೆಸಿ ತಹಸೀಲ್ದಾರ್ ಎಂ. ನಂಜುಂಡಯ್ಯ ಅವರಿಗೆ ಮನವಿಪತ್ರ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು.

ಟಿ. ನಂದೀಶ್, ಸಿಂಗಾರಿಗೌಡ, ಎಸ್. ಗೋವಿಂದಯ್ಯ, ಕೆ.ಎಸ್. ಕೆಂಚೇಗೌಡ, ಪುಟ್ಟಪ್ಪ, ದೇವೇಗೌಡ, ಮರೀಗೌಡ, ಚಂದ್ರಶೇಖರ್, ಮಹೇಶ್, ಸುಜಯ್‌ಕುಮಾರ್, ದಾಸಿಕುಳ್ಳ, ಕುಮಾರ, ಶಂಕರ, ನಾಗರಾಜು, ಕರಡಹಳ್ಳಿ, ಕಲ್ಲಿನಾಥಪುರ, ಹರಳಕೆರೆ, ದಂಡಿಗನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.