10 ದಿನಗಳ ಜಾತ್ರೆಗೆ ತೆರೆ

ನಾಗಮಂಗಲ: ತಾಲೂಕಿನ ಹೊಣಕೆರೆ ಹೋಬಳಿಯ ಸೋಮನಹಳ್ಳಿ ಅಮ್ಮನವರ ಕ್ಷೇತ್ರದಲ್ಲಿ 10 ದಿನ ನಡೆದ ಶ್ರೀ ಸೌಮ್ಯಕೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಭಾನುವಾರ ವಿಜೃಂಭಣೆಯ ರಥೋತ್ಸವದೊಂದಿಗೆ ತೆರೆ ಕಂಡಿತು.
ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ್ ಎಂ.ವಿ.ರೂಪಾ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ, ಭಕ್ತರು ಜಯಘೋಷ ಕೂಗಿದರು. ಹಣ್ಣು-ಜವನ ಎಸೆದು ಭಕ್ತಿ-ಭಾವ ತೋರಿದರು. ಆಬಾಲವೃದ್ಧರಾದಿಯಾಗಿ ಭಕ್ತರು ರಥ ಎಳೆದು ಹರಕೆ ತೀರಿಸಿದರು. ನಂತರ ನಡೆದ ವಸಂತೋತ್ಸವದೊಂದಿಗೆ ಜಾತ್ರೆಗೆ ತೆರೆ ಬಿದ್ದಿತು. ಅವಾಮೃತ ಬಳಿಕ ಅಶ್ವಾರೋಹಣ ಉತ್ಸವದೊಂದಿಗೆ ಸೌಮ್ಯಕೇಶ್ವರಿ ಮೂರ್ತಿಯನ್ನು ಮೂಲಸ್ಥಾನ ಕಟ್ಟೆಮನೆ ಚಿಣ್ಯಕ್ಕೆ ಕೊಂಡೊಯ್ಯಲಾಯಿತು.
ಕೊಂಡೋತ್ಸವ: ಜಾತ್ರಾ ಮಹೋತ್ಸವದ ಅಂಗವಾಗಿ 12 ಹಳ್ಳಿಗಳ ತತ್ತಿನ ಗ್ರಾಮಸ್ಥರಿಂದ ಕೊಂಡೋತ್ಸವ ನಡೆಯಿತು.
ಫೆ.22 ರಂದು ಸೋಮನಹಳ್ಳಿ ಅಮ್ಮನವರ ಜಾತ್ರಾ ಮಹೋತ್ಸವ ಆರಂಭಗೊಂಡಿತ್ತು. ಕಟ್ಟೆಮನೆ ಚಿಣ್ಯ ಗ್ರಾಮ ಸೇರಿದಂತೆ ಗಂಗನಹಳ್ಳಿ, ಅಲ್ಪಹಳ್ಳಿ, ಹೊಣಕೆರೆ, ಸೋಮನಹಳ್ಳಿ ಗ್ರಾಮಸ್ಥರಿಂದ ಸಾಂಪ್ರದಾಯಿಕ ಹಾಗೂ ಧಾರ್ಮಿಕ ವಿಧಿವಿಧಾನಗಳನುಸಾರ ವಿಶೇಷ ಪೂಜಾ ಕೈಂಕರ್ಯಗಳು ಪ್ರತಿದಿನ ಜರುಗಿದವು. ಮಾ.1ರಂದು ಮಧ್ಯಾಹ್ನ ಅಮ್ಮನವರ ಮೂಲ ದೇವಸ್ಥಾನ ಕಟ್ಟೆಮನೆ ಚಿಣ್ಯದಿಂದ ಮೆರವಣಿಗೆ ಬಳಿಕ ಹೊಣಕೆರೆ ಗ್ರಾಮಸ್ಥರಿಂದ ಕೊಂಡೋತ್ಸವ, ಓಕುಳಿ ಹಾಗೂ ಸಂಜೆ ಮಡೆ ಉತ್ಸವ ನಡೆಯಿತು.
ಮಾ.2 ರಂದು ಬೆಳಗ್ಗೆ ಚೀಣ್ಯ ಗ್ರಾಮದ ಅಮ್ಮನವರ ಮೂರ್ತಿಗೆ ಅಶ್ವಾರೋಹಣ ಉತ್ಸವದೊಂದಿಗೆ ವಿಶೇಷ ಪೂಜೆ ನಡೆಯಿತು. ನಂತರ ಚಿಣ್ಯ, ಸೋಮನಹಳ್ಳಿ, ಅಲ್ಪಹಳ್ಳಿ, ಗಂಗನಹಳ್ಳಿ, ವಡ್ಡರಹಳ್ಳಿ ಸೇರಿದಂತೆ 12 ಹಳ್ಳಿಗಳ ಗ್ರಾಮಸ್ಥರಿಂದ ಮಧ್ಯಾಹ್ನ ಕೊಂಡೋತ್ಸವ ಜರುಗಿತು. ಸುತ್ತಮುತ್ತಲ ಗ್ರಾಮಗಳ ನೂರಾರು ಮಹಿಳೆಯರು ತಂಬಿಟ್ಟಿನ ಆರತಿ, ಮಡೆ ಅನ್ನ ತಂದು ನೈವೇದ್ಯ ಸಮರ್ಪಿಸಿದರು.
ತಾಲೂಕು, ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಕೊಂಡೋತ್ಸವವನ್ನು ಕಣ್ತುಂಬಿಕೊಂಡರು. ಮುನ್ನೆಚ್ಚರಿಕೆಯಾಗಿ ಆಂಬುಲೆನ್ಸ್ ಸಹಿತ ತಾತ್ಕಾಲಿಕ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲಾಗಿತ್ತು. ಅಹಿತಕರ ಘಟನೆಗಳು ಸಂಭವಿಸದಂತೆ ಸರ್ಕಲ್ ಇನ್ಸ್‌ಪೆಕ್ಟರ್ ನಂಜಪ್ಪ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.