ಆದಿಚುಂಚನಗಿರಿ ಮಠಕ್ಕೆ ಭಗವಾನ್ ಭೇಟಿ!

ನಾಗಮಂಗಲ: ಎಡಪಂಥೀಯ ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್ ಬುಧವಾರ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿಚುಂಚನಗಿರಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿಚಾರವಂತ, ಮಹಾನ್ ಮಾನವತಾವಾದಿ. ಅವರೊಂದಿಗೆ ಮಾತನಾಡಿದರೆ ವಿದ್ವಾಂಸರೊಂದಿಗೆ ಮಾತನಾಡಿದಷ್ಟೇ ಸಂತೋಷ ಆಗುತ್ತದೆ. ಅವರೊಂದಿಗೆ ನನಗೆ ಉತ್ತಮ ಒಡನಾಟ ಇದೆ. ಅದಕ್ಕಾಗಿ ಬಂದಿದ್ದೇನೆ. ಬಾಲಗಂಗಾಧರನಾಥ ಸ್ವಾಮೀಜಿ ಬಗ್ಗೆ ಅಪಾರ ಅಭಿಮಾನ ಹೊಂದಿದ್ದೆ ಎಂದು ತಿಳಿಸಿದರು.

ಟಿಪ್ಪು ಜಯಂತಿಗೆ ವಿರೋಧ ಮಾಡುವುದು ಸರಿಯಲ್ಲ. ಟಿಪ್ಪು ಒಬ್ಬ ಜಾತ್ಯತೀತ ರಾಜ. ತನ್ನ ಆಳ್ವಿಕೆಯಲ್ಲಿ ಎಲ್ಲ ಸಮುದಾಯವನ್ನು ಸಮಾನವಾಗಿ ಕಂಡಿದ್ದಾನೆ. ತನ್ನ ರಾಜ್ಯದ ವಿರುದ್ಧ ಇದ್ದವರನ್ನ ಮಟ್ಟ ಹಾಕಿ, ಯಾವ ಸಮುದಾಯಕ್ಕೂ ತೊಂದರೆ ಕೊಟ್ಟವನಲ್ಲ. ಉಳುವವನಿಗೆ ಭೂಮಿ ಎಂಬ ಕಾನೂನು ಜಾರಿಗೆ ತಂದಿದ್ದು ಟಿಪ್ಪು. ಅವರ ಆಡಳಿತದ 15 ಮಂದಿ ಮಂತ್ರಿಗಳಲ್ಲಿ 12 ಮಂದಿ ಹಿಂದುಗಳಿದ್ದರು ಎಂದು ಹೇಳಿದರು.

ಬಿಜೆಪಿ ರಾಜಕೀಯಕ್ಕಾಗಿ ಟಿಪ್ಪು ಜಯಂತಿಯನ್ನು ಬಳಸಿಕೊಳ್ಳುತ್ತಿದೆ. ಓಟಿಗಾಗಿ ಟಿಪ್ಪು ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಮೈಸೂರು ರಾಜರಿಗಿಂತ ಮೊದಲೇ ಟಿಪ್ಪು ಕೆಆರ್‌ಎಸ್ ಅಣೆಕಟ್ಟೆ ಕಟ್ಟಲು ಚಿಂತಿಸಿದ್ದ. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸಾಯದಿದ್ದರೆ ಅಂದೆ ಅಣೆಕಟ್ಟೆ ನಿರ್ಮಾಣ ಆಗುತ್ತಿತ್ತು. ಒಂದು ವೇಳೆ ಟಿಪ್ಪು ಕಾಲದಲ್ಲಿ ಅಣೆಕಟ್ಟೆ ನಿರ್ಮಾಣ ಆಗಿದ್ದರೆ ಕರ್ನಾಟಕ- ತಮಿಳುನಾಡಿನ ನಡುವೆ ಕಾವೇರಿ ನೀರಿನ ಸಮಸ್ಯೆಯೇ ಇರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.