More

  ನಾಡಿಗೆ ಪಂಚಪೀಠಗಳ ಕೊಡುಗೆ ಅಪಾರ, ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ಆಶೀರ್ವಚನ* ರುದ್ರೇಶ್ವರ ದೇವಾಲಯ ಉದ್ಘಾಟನೆ

  ನೆಲಮಂಗಲ: ವೀರಶೈವ ಧರ್ಮದ ಪಂಚಪೀಠಗಳು ಜಾತಿ, ಮತ, ಪಂಥ ಭೇದವಿಲ್ಲದೆ ಸಮಾಜದ ಸರ್ವಜನಾಂಗಗಳ ಶ್ರೇಯೋಭಿವೃದ್ಧಿಗಾಗಿ ಸಂದೇಶಗಳನ್ನು ನೀಡುತ್ತಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.

  ಪಟ್ಟಣದ ಕವಾಡಿ ಮಠದಲ್ಲಿ ಗುರುವಾರ ರುದ್ರೇಶ್ವರ ದೇವಾಲಯ ಉದ್ಘಾಟನೆ, ವಿಗ್ರಹ ಪ್ರತಿಷ್ಠಾಪನೆ, ಶಿಖರ ಕಲಶಸ್ಥಾಪನೆ ಮತ್ತು ಧರ್ಮಜಾಗೃತಿ ಸಮಾರಂಭದಲ್ಲಿ ಮಾತನಾಡಿದರು.

  ಧರ್ಮ, ಸಂಸ್ಕೃತಿ ಪುನರುತ್ಥಾನಗೊಳಿಸಿದ ಜಗದ್ಗುರು ಶ್ರೀ ಗಂಗಾಧರ ಭಗವತ್ಪಾದರ ಆಶಯದಂತೆ ನಾಡಿನ ಜನತೆಗೆ ಒಳಿತಾಗಲೆಂದು ಬಯಸಿರುವ ವೀರಶೈವ ಸಮಾಜ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ದೇಗುಲ ನಿರ್ಮಿಸಿದೆ ಎಂದರು.
  ಅಧರ್ಮದ ವಿರುದ್ಧ ಧರ್ಮದ ದಂಡಯಾತ್ರೆ ಮಾಡಿದ ದೈವಿಶಕ್ತಿ ವೀರಭದ್ರ ಸ್ವಾಮಿಯಾಗಿದ್ದಾನೆ. ಸಮಾಜವನ್ನು ಅಭದ್ರಗೊಳಿಸುವ ಸಂದರ್ಭದಲ್ಲಿ ಮತ್ತೆ ಸ್ವಾಮಿ ಅವತರಿಸಬೇಕಿದೆ ಎಂದರು.

  28ನೇ ವರ್ಧಂತಿ ಮಹೋತ್ಸವದ ನಿಮಿತ್ತ ನಮಗೆ ಗುರುವಂದನೆ ಸಲ್ಲಿಸಿರುವುದು ಅತೀವ ಸಂತೋಷವನ್ನುಂಟುಮಾಡಿದೆ. ದೇವರಲ್ಲಿ ಅಪಾರ ನಂಬಿಕೆ ಶ್ರದ್ಧಾಭಕ್ತಿ ಹೊಂದಿರುವ ಸಮಾಜ ದಿನೇದಿನೆ ಅಭಿವೃದ್ಧಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
  ಜನರಲ್ಲಿ ಇಷ್ಟಲಿಂಗ ಮಹಾಪೂಜೆ ಅಭಿರುಚಿ ಹೆಚ್ಚಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ವರ್ಷಕ್ಕೆ ಒಮ್ಮೆಯಾದರೂ ಸಾಮೂಹಿಕ ಇಷ್ಟಲಿಂಗ ಪೂಜೆ ಆಯೋಜಿಸಬೇಕು. ಸಮಾಜದ ಮೇಲೆ ಅತ್ಯದ್ಭುತ ಪರಿಣಾಮವನ್ನುಂಟು ಮಾಡುವ ದಸರಾ ಮಹೋತ್ಸವ ಆಚರಣೆಗೆ ಚಿಂತನೆ ನಡೆಸಬೇಕು ಎಂದರು.

  ಶಿವಗಂಗೆ ಮೇಲಣಗವಿ ಮಠದ ಶ್ರೀ ಪಟ್ಟದ ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೇದಘೋಷ ಮೊಳಗುವಲ್ಲಿ, ಪೂಜೆ ದಾಸೋಹಗಳು ನಡೆಯುವಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಎಂದರು.

  ಇತಿಹಾಸ ಸಂಶೋಧಕ ಡಾ.ಎಂ.ಜಿ ನಾಗರಾಜು ಮಾತನಾಡಿ, ರುದ್ರನ ಪುತ್ರ ವೀರಭದ್ರನ ಕುರಿತು ಋಗ್ವೇದದಲ್ಲಿ ಉಲ್ಲೇಖವಿದ್ದರೆ, ಶಲಬೋನಿಷತ್‌ನಲ್ಲಿ ವರ್ಣಿಸಲಾಗಿದೆ. ರುದ್ರೇಶ್ವರನ ಹೆಸರಿನಲ್ಲಿ ಪೂಜಿಸಲ್ಪಡುವ ವೀರಭದ್ರಸ್ವಾಮಿ ವೀರಶೈವ ಲಿಂಗಾಯತ ಸಮುದಾಯದ ವೀರತ್ವದ ಪ್ರತೀಕ ಎಂದರು.

  ರಂಭಾಪುರಿಯ ಪೀಠದ ಗೋತ್ರಪುರುಷನಾಗಿರುವ ವೀರಭದ್ರನಿಗೆ ರಂಭಾಪುರಿ ಗುರುಪೀಠವಾಗಿದೆ. ಇಂತಹ ಗುರುಪೀಠದ ರಂಭಾಪುರಿ ಜಗದ್ಗುರುಗಳ ಅಮೃತ ಹಸ್ತದಿಂದ ವೀರಭದ್ರನ ದೇವಾಲಯ ಉದ್ಘಾಟಿಸಿರುವುದು ಅರ್ಥಪೂರ್ಣವಾಗಿದೆ ಎಂದು ಸಿದ್ಧರಬೆಟ್ಟದ ರಂಭಾಪುರಿ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

  ಗುರುವಂದನೆ ಮತ್ತು ದೇಣಿಗೆ: 28ನೇ ಪೀಠಾರೋಹಣ ವರ್ಧಂತಿ ನಿಮಿತ್ತ ಶ್ರೀಮದ್ ರಂಭಾಪುರಿ ಜಗದ್ಗುರುಗಳಿಗೆ ವೀರಶೈವ ಸಮಾಜದಿಂದ ಗುರುವಂದನೆ ಸಲ್ಲಿಸಲಾಯಿತು. ಪಟ್ಟಣದ ಅಡೇಪೇಟೆ ಗ್ರಾಮದೇವತೆ ಮರಿಯಕ್ಕ ಹಾಗೂ ಮೇಗಲಪೇಟೆ ಹನುಮಂತರಾಯಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕಾಗಿ ವೀರಶೈವ ಸಮಾಜ ಹಾಗೂ ಅರಳೆಪೇಟೆ ಬಸವೇಶ್ವರ ಯುವಕ ಸಂಘದಿಂದ ತಲಾ 2 ಲಕ್ಷ ರೂ. ದೇಣಿಗೆ ನೀಡಲಾಯಿತು. ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ ಭಕ್ತರನ್ನು ಸನ್ಮಾನಿಸಲಾಯಿತು. ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಭೇಟಿ ನೀಡಿ ದೇವರ ದರ್ಶನ ಪಡೆದರು.

  ಹಲಗೂರು ಬೃಹನ್ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೂತನ ದೇವಾಲಯದ ಧಾರ್ಮಿಕ ನೇತೃತ್ವ ವಹಿಸಿದ್ದರು. ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ, ನಿವೃತ್ತ ಲೋಕಾಯುಕ್ತ ಪಾಲಾಕ್ಷಯ್ಯ, ಟೌನ್ ಕೋ ಆಪರೇಟೀವ್ ಸೊಸೈಟಿ ಅಧ್ಯಕ್ಷ ಜಯದೇವಯ್ಯ, ಪುರಸಭೆ ಸದಸ್ಯರಾದ ಕೆ.ಎಂ.ಶಿವಕುಮಾರ್, ಎನ್.ಎನ್.ಪೂರ್ಣಿಮಾಸುಗ್ಗರಾಜು, ಲೋಲಾಕ್ಷಿ ಗಂಗಾಧರ್, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷೆ ರಾಜಮ್ಮಪ್ರಕಾಶ್, ದೇವಾಲಯ ಸಮಿತಿ ಗೌರವಾಧ್ಯಕ್ಷ ಎನ್.ಎಸ್.ನಟರಾಜು, ಅಧ್ಯಕ್ಷ ಎನ್.ಆರ್.ಜಗದೀಶ್, ಖಜಾಂಚಿ ಎನ್.ಬಿ.ದಯಾಶಂಕರ್, ಕಾರ್ಯದರ್ಶಿ ಎನ್.ಗಂಗರಾಜು, ಗೌರವ ಕಾರ್ಯದರ್ಶಿ ಎನ್.ಜಿ.ರುದ್ರಮೂರ್ತಿ, ಕಾನೂನು ಸಲಹೆಗಾರ ವಕೀಲ ಎನ್.ಎಸ್.ರಾಜು, ಸಹಕಾರ್ಯದರ್ಶಿ ಪುಟ್ಟಣ್ಣ, ಶ್ರೀ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಎನ್.ಎಸ್.ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts