10 ರನ್​ ನೀಡಿ 8 ವಿಕೆಟ್​ ಪಡೆದು ವಿಶ್ವದಾಖಲೆ ಬರೆದ ಜಾರ್ಖಂಡ್​ ಸ್ಪಿನ್ನರ್​

ಚೆನ್ನೈ: ಜಾರ್ಖಂಡ್​ನ ಎಡಗೈ ಸ್ಪಿನ್ನರ್​ ಶಹಬಾಜ್​ ನದೀಮ್​ ವಿಜಯ್​ ಹಜಾರೆ ಟ್ರೋಫಿ ಟೂರ್ನಿಯಲ್ಲಿ 10 ರನ್​ ನೀಡಿ 8 ವಿಕೆಟ್​ ಪಡೆಯುವ ಮೂಲಕ ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಅತ್ಯುತ್ತಮ ಬೌಲಿಂಗ್​ ನಿರ್ವಹಣೆಯ 2 ದಶಕಗಳ ಹಳೆಯ ದಾಖಲೆಯನ್ನು ಮುರಿದಿದ್ದು, ಹೊಸ ವಿಶ್ವದಾಖಲೆ ಸ್ಥಾಪಿಸಿದ್ದಾರೆ.

ಗುರುವಾರ ಚೆನ್ನೈನಲ್ಲಿ ರಾಜಸ್ಥಾನದ ವಿರುದ್ಧ ನಡೆದ ಪಂದ್ಯದಲ್ಲಿ ನದೀಮ್​ 10 ಓವರ್​ ಬೌಲ್​ ಮಾಡಿ 4 ಮೇಡಿನ್​ನೊಂದಿಗೆ 10 ರನ್​ ನೀಡಿ 8 ವಿಕೆಟ್​ ಪಡೆದರು (10-4-10-8). ಇವರ ಅತ್ಯುತ್ತಮ ಬೌಲಿಂಗ್​ ನಿರ್ವಹಣೆಯಿಂದ ರಾಜಸ್ಥಾನ 28.3 ಓವರ್​ಗಳಲ್ಲಿ ಕೇವಲ 73 ರನ್​ಗಳಿಗೆ ಆಲೌಟಾಗಿದೆ.

1997-98ರಲ್ಲಿ ದೆಹಲಿಯ ಎಡಗೈ ಸ್ಪಿನ್ನರ್​ ರಾಹುಲ್​ ಸಿಂಘ್ವಿ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ 15 ರನ್​ ನೀಡಿ 8 ವಿಕೆಟ್​ ಪಡೆದಿದ್ದರು. ನಂತರ ಅವರು 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂದು ಟೆಸ್ಟ್​ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಸಿಂಘ್ವಿ ಅವರ ದಾಖಲೆಯನ್ನು ನದೀಮ್​ ಮುರಿದಿದ್ದು, ನೂತನ ದಾಖಲೆ ಸ್ಥಾಪಿಸಿದ್ದಾರೆ

29 ವರ್ಷದ ನದೀಮ್​ ಇದುವರೆಗೆ 99 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 29.74ರ ಸರಾಸರಿಯಲ್ಲಿ 375 ವಿಕೆಟ್​ ಪಡೆದಿದ್ದಾರೆ. ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಅವರು 87 ಪಂದ್ಯಗಳಲ್ಲಿ 124 ವಿಕೆಟ್​ ಪಡೆದಿದ್ದಾರೆ. ಒಟ್ಟು 109 ಟಿ20 ಪಂದ್ಯಗಳಲ್ಲಿ 89 ವಿಕೆಟ್​ ಪಡೆದಿದ್ದಾರೆ.

ನದೀಮ್​ ಕೆಲವು ತಿಂಗಳ ಹಿಂದೆ ಇಂಗ್ಲೆಂಡ್​ ಪ್ರವಾಸಕ್ಕೆ ತೆರಳಿದ್ದ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದರು ಮತ್ತು ಭಾರತದ ಪ್ರವಾಸಕ್ಕೆ ಆಗಮಿಸಿದ್ದ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಭಾರತ ಎ ತಂಡದಲ್ಲಿ ಆಡಿದ್ದರು. (ಏಜೆನ್ಸೀಸ್)