More

    ಎರಡು ದಶಕಗಳ ಸಂಕಷ್ಟಕ್ಕೆ ಮುಕ್ತಿ, ನಾಡಾ ಆಲೂರು ರಸ್ತೆಗೆ ಫೇವರ್ ಫಿನಿಶ್ ಡಾಂಬರು

    ನಾಡಾಗುಡ್ಡೆಯಂಗಡಿ
    ಎರಡು ದಶಕದಿಂದ ರಸ್ತೆ ದುರಸ್ತಿಗೆ ಮಾಡಿದ ಹೋರಾಟ ಕೊನೆಗೂ ಫಲಕೊಟ್ಟಿದೆ. ಪ್ರತಿಭಟನೆ ಹೋರಾಟ, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ರಸ್ತೆ ಈಗ ಫೇವರ್ ಫಿನಿಶ್ ಡಾಂಬರಿನೊಂದಿಗೆ ಅಭಿಗವೃದ್ಧಿಗೊಂಡಿದೆ.! ಇನ್ನೊಂದು ಕಿ.ಮೀ.ರಸ್ತೆಯಾದರೆ ಸಂಚಾರ ಲೀಲಾಜಾಲವಾಗಲಿದೆ.

    ಬೈಂದೂರು ತಾಲೂಕು ನಾಡಾ -ಆಲೂರು ರಸ್ತೆ ಎರಡು ದಶಕದಿಂದ ಹೊಂಡಗುಂಡಿಯಿಂದ ಕೂಡಿತ್ತು. ರಸ್ತೆ ನವೀಕರಣಕ್ಕೆ ನಾಗರಿಕರು ಒತ್ತಾಯಿಸಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಇದರಿಂದ ಸಂಚಾರ ದುಸ್ತರವಾಗಿ ವಾಹನ ಚಾಲನೆ ಎಂಬುದು ಸಾಹಸವಾಗಿತ್ತು. ಬಸ್ ಪ್ರಯಾಣಿಕರಂತೂ ಸೀಟಿಗೆ ಪಟ್ಟಿಕಟ್ಟಿಕೊಂಡು ಕೂರುವ ಸ್ಥಿತಿಯಿತ್ತು. ಅದೆಷ್ಟೋ ದ್ವಿಚಕ್ರ ಸವಾರರು ಹೊಂಡ ತಪ್ಪಿಸುವ ಭರದಲ್ಲಿ ಬಿದ್ದು ಆಸ್ಪತ್ರೆ ಸೇರಿದ್ದರು.

    ನಾಡಾ ರೈಲ್ವೆ ಸೇತುವೆಯಿಂದ 3.5 ಕಿ.ಮೀ. ರಸ್ತೆ ಸದ್ಯ ಫೇವರ್ ಫಿನಿಶ್ ಆಗಿದೆ. ವಾರಾಹಿ ನೀರಾವರಿ ಯೋಜನೆಯ 80 ಲಕ್ಷ ರೂ. ಅನುದಾನದಲ್ಲಿ 3.5 ಕಿ.ಮೀ. ಅಗಲ ರಸ್ತೆ ನಾಜೂಕಾಗಿ ಗುಣಮಟ್ಟದಿಂದ ನಿರ್ಮಾಣಗೊಂಡಿದೆ. ಒಟ್ಟಾರೆ ಹೊಂಡಾಗುಂಡಿ ರಸ್ತೆಗೆ ಮುಕ್ತಿ ಸಿಕ್ಕಿದ್ದರಿಂದ ನಾಗರಿಕರು ಖುಷಿಯಾಗಿದ್ದು, ಇನ್ನುಳಿದ ಒಂದು ಕಿ.ಮೀ. ರಸ್ತೆ ಆದಷ್ಟು ಬೇಗ ನವೀಕರಿಸುವಂತೆ ಒತ್ತಾಯಿಸಿದ್ದಾರೆ. ಈ ರಸ್ತೆ ಅವ್ಯವಸ್ಥೆ ಕುರಿತು ವಿಜಯವಾಣಿ ಸರಣಿ ವರದಿ ಮೂಲಕ ಗಮನ ಸೆಳೆದಿತ್ತು.

    ಅತಿ ಹೆಚ್ಚು ಟ್ರೋಲ್ ಆಗಿತ್ತು: ಅತೀ ಹೆಚ್ಚು ಪ್ರತಿಭಟನೆ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆದ ರಸ್ತೆ ನಾಡಾ ಆಲೂರು ರಸ್ತೆ. ಕಳೆದ ಎರಡು ದಶಕದಿಂದ ಹೊಂಡಗುಂಡಿ ಮುಕ್ತ ರಸ್ತೆಗಾಗಿ ಸಾರ್ವಜನಿಕರು ಅತಿ ಹೆಚ್ಚು ಬಾರಿ ಪ್ರತಿಭಟನೆ ನಡೆಸಿದ್ದರು. ರಸ್ತೆ ಬಂದ್ ಮಾಡಿ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಮಾಡಿದ್ದರು. ಪ್ರತಿಭಟನೆ ನಿರತ ನಾಗರಿಕರ ಕಣ್ಣೊರೆಸುವ ಸಲುವಾಗಿ ರಸ್ತೆ ನಿರ್ಮಾಣದ ಭರವಸೆ ನೀಡಿದ್ದು, ಬಿಟ್ಟರೆ ರಸ್ತೆ ಮಾತ್ರ ಆಗಲೇ ಇಲ್ಲ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಕೂಡ ನಾಡಾ -ಆಲೂರು ರಸ್ತೆ ಗಮನ ಸೆಳೆದಿತ್ತು. ಚುನಾವಣೆಯಲ್ಲಿ ಗೆಲ್ಲಲಿ ಸೋಲಲಿ, ನಾಡಾ ಆಲೂರು ರಸ್ತೆ ಮಾಡಿ ಕೊಡುವುದಾಗಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ವಾಗ್ದಾನ ನೀಡಿದ್ದು, ಕೊನೆಗೂ ಆಲೂರು ನಾಡಾ ರಸ್ತೆ ಪೇವರ್‌ಫಿನಿಶ್ ಡಾಂಬರು ರಸ್ತೆಯಾಗಿ ನಿರ್ಮಾಣವಾಗಿದೆ.

    ಎರಡು ದಶಕದ ಬೇಡಿಕೆಯಾದ ನಾಡಾ ಆಲೂರು ರಸ್ತೆ ಸಮಸ್ಯೆ ಬಗೆಹರಿಸಿದ್ದೇನೆ. ಕರ್ನಾಟಕ ನೀರಾವರಿ ವಾರಾಹಿ ನೀರಾವರಿ ಯೋಜನೆ (ಕೆಎನ್‌ಎಂಎಲ್) ಅನುದಾನದಲ್ಲಿ ಪೇವರ್ ಫಿನಿಶ್ ರಸ್ತೆ ನಿರ್ಮಿಸಲಾಗಿದ್ದು, ಗ್ರಾಮ ಪಂಚಾಯಿತಿ ಚುನಾವಣೆ ನಂತರ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಡಸ್‌ವೈ) ಮೂಲಕ ಬಂಟ್ವಾಡಿಯಿಂದ ಗುಡ್ಡಮ್ಮಾಡಿ ರಸ್ತೆ ಹರ್ಕೂರು ಮೂರು ಕೈವರೆಗೆ 7 ಕೋಟಿ ರೂ. ಅನುದಾನದಲ್ಲಿ ಒಟ್ಟು 7ಕಿ.ಮೀ. ರಸ್ತೆ ಅಭಿವೃದ್ಧಿ ಮಾಡಲಾಗುತ್ತದೆ. ಚುನಾವಣೆ ನಂತರ ಟೆಂಡರ್ ಮುಗಿದು, ತಕ್ಷಣ ಕೆಲಸ ಆರಂಭಿಸಲಾಗುತ್ತದೆ.
    – ಬಿ.ಎಂ.ಸುಕುಮಾರ್ ಶೆಟ್ಟಿ, ಶಾಸಕ, ಬೈಂದೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts