More

    ನಚಿಕೇತನ ನಿಲಯ ಉಳಿಸಲು 1.36 ಕೋಟಿ ರೂ.ವೆಚ್ಚದಲ್ಲಿ ನವೀಕರಣ

    ಕೋಲಾರ: ಜಿಲ್ಲೆಯ ಅಭಿವೃದ್ಧಿಗೆ ಟಿ.ಚನ್ನಯ್ಯ ಅವರು ನೀಡಿರುವ ಕೊಡುಗೆಗಳಲ್ಲಿ ಒಂದಾಗಿರುವ ನಚಿಕೇತನ ನಿಲಯವನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ 1.36 ಕೋಟಿ ರೂ.ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

    ನಚಿಕೇತನ ವಿದ್ಯಾರ್ಥಿ ನಿಲಯ ದುರಸ್ತಿ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಟಿ.ಚನ್ನಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ದಲಿತ, ಶೋಷಿತರ ಶೈಕ್ಷಣಿಕ ಬೆಳವಣಿಗೆಗಾಗಿ ನಚಿಕೇತನ ನಿಲಯ ಸ್ಥಾಪಿಸಿದ್ದರು. ಈ ಹಾಸ್ಟೆಲ್‌ನಲ್ಲಿ ಓದಿದವರು ಸರ್ಕಾರದ ಉನ್ನತ ಹುದ್ದೆಗಳಲ್ಲಿ, ವಿವಿಧ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಧನೆಯ ಹಿಂದೆ ಟಿ.ಚನ್ನಯ್ಯ ಅವರ ಶ್ರಮವಿದೆ. ಅವರ ಕಾಲದಲ್ಲಿ ನಿರ್ಮಾಣವಾಗಿರುವ ವಿದ್ಯಾರ್ಥಿನಿಲಯವನ್ನು ಈ ನೆಲದಲ್ಲಿ ಶಾಶ್ವತವಾಗಿ ಉಳಿಸಬೇಕಿದೆ ಎಂದರು.

    ಟಿ.ಚನ್ನಯ್ಯ ಅವರು ಸ್ಯಾನಿಟೋರಿಯಂ, ಜಿಲ್ಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದಾರೆ. ಕೋಲಾರ ನಗರದ ನಿರ್ಮಾತೃ ಆಗಿ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಾಧನೆ ಸಮಾಜದಲ್ಲಿ ಶಾಶ್ವತವಾಗಿ ಉಳಿಸಲು ಪ್ರತಿಯೊಬ್ಬರು ಸಹಕಾರ ಅಗತ್ಯವಾಗಿದ್ದು, ಅವರ ಹಾದಿಯಲ್ಲೆ ಜಿಲ್ಲೆಯನ್ನು ಅಭಿವೃದ್ಧಿಸಲು ಪ್ರಯತ್ನ ಮಾಡುತ್ತೇನೆ ಎಂದರು.

    ಸಂಸದರಾಗಿ ಆಯ್ಕೆಯಾದ ನಂತರದ ದಿನಗಳಲ್ಲಿ ನಚಿಕೇತನ ನಿಲಯದ ವಿದ್ಯಾರ್ಥಿಗಳು ಸಮಸ್ಯೆಗಳ ಬಗ್ಗೆ ತಮ್ಮ ಗಮನಕ್ಕೆ ತಂದಿದ್ದರು. ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ಪರಿಶೀಲಿಸಿ ದುರಸ್ತಿಗೆ ಅಂದಾಜುಪಟ್ಟಿ ಸಿದ್ಧಪಡಿಸುವಂತೆ ಸೂಚಿಸಲಾಗಿತ್ತು. ಕಟ್ಟಡ ದುರಸ್ತಿಗೆ 1.36 ಕೋಟಿ ರೂ. ಅನುದಾನ ಮೀಸಲಿಟ್ಟು ಅಲ್ಪಾವಧಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗಿದೆ ಎಂದರು.

    ಶಾಸಕ ಕೆ. ಶ್ರೀನಿವಾಸಗೌಡ ಮಾತನಾಡಿ, ಟಿ. ಚನ್ನಯ ಅವರ ಶ್ರಮದಿಂದ ನಗರದಲ್ಲಿ ಒಳಚರಂಡಿ ಸಂಪರ್ಕ ಕಂಡಿತ್ತು. ನಂತರ ತಾವು ಶಾಸಕರಾದ ಸಂದರ್ಭದಲ್ಲಿ ವಿವಿಧ ಭಾಗಗಳಿಗೆ ಯುಜಿಡಿ ಕಾಮಗಾರಿಯನ್ನು ಮುಂದುವರಿಸಿದ್ದನ್ನು ಸ್ಮರಿಸಿದರಲ್ಲದೆ ಜಿಲ್ಲೆಗೆ ಅಪಾರ ಕೊಡುಗೆ ನೀಟಿರುವ ಚನ್ನಯ್ಯ ಅವರ ಮಗ ಬಾಲಾಜಿ ಚನ್ನಯ್ಯ ಹಿಂದೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಜನ ಸೋಲಿಸಿದರು. ಆದರೆ ಅವರ ಋಣದಲ್ಲಿ ನಾವೆಲ್ಲ ಇದ್ದೇವೆ ಎಂಬ ಯೋಚನೆ ಮತದಾರರಿಗೆ ಬರಲಿಲ್ಲ ಎಂದು ವಿಷಾಧಿಸಿದರು.

    ಜಿಲ್ಲಾಧಿಕಾರಿ ಜೆ.ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ರಾಜಣ್ಣ, ಸಹಾಯಕ ನಿರ್ದೇಶಕ ಬಾಲಾಜಿ, ನಗರಸಭೆ ಆಯುಕ್ತ ಆರ್.ಶ್ರೀಕಾಂತ್, ನಗರಸಭೆ ಸದಸ್ಯರಾದ ರಾಕೇಶ್, ಅಂಬರೀಷ್ ಹಾಜರಿದ್ದರು.

    ಹಾಸ್ಟೆಲ್ ದುರಸ್ತಿ ಕಾಮಗಾರಿಯನ್ನು ಪ್ರತಿ 15 ದಿನಗಳಿಗೊಮ್ಮೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಕಳಪೆ ಗುಣಮಟ್ಟದ ಕಂಡುಬಂದರೆ ಗುತ್ತಿಗೆದಾರ ಸೇರಿ ಎಂಜನಿಯರ್‌ಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು.
    ಕೆ. ಶ್ರೀನಿವಾಸಗೌಡ, ಶಾಸಕ ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts