ಮಂಡ್ಯ: ಬೇರೆ ಭಾಷೆಗಿಂತ ಕನ್ನಡದಲ್ಲಿ ಮಾತನಾಡಿದಾಗ ಮಾತ್ರ ಅದು ಹೃದಯಕ್ಕೆ ತಟ್ಟುತ್ತದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್.ಇಂದ್ರೇಶ್ ಹೇಳಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಚಂದನವಾಹಿನಿ ಸಹಯೋಗದಲ್ಲಿ ಆಯೋಜಿಸಿದ್ದ ಮಧುರ ಮಧುರವೀ ಮಂಜುಳ ಗಾನ ಮಾದರಿಯ ನಾವಾಡುವ ನುಡಿಯೇ ಕನ್ನಡ ನುಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಕನ್ನಡವನ್ನು ಮಾತನಾಡಬೇಕು. ಮನೆಯಲ್ಲಿ ಕನ್ನಡ ಕೃತಿಗಳನ್ನು ಸಂಗ್ರಹಿಸಿಟ್ಟುಕೊಂಡು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಈ ಸಮ್ಮೇಳನವು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಯಲಿದೆ. ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಅವರ ಬೆಂಬಲವಾಗಿ ನಾವು ಸಮ್ಮೇಳನದುದ್ದಕ್ಕೂ ನಿಲ್ಲುತ್ತೇವೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಮನೆಯಲ್ಲಿಯೇ ಇರುವ ಸೂಕ್ತ ಪ್ರತಿಭೆಯನ್ನು ಹೊರತರುವ ಕಾರ್ಯಕ್ರಮ ಇದಾಗಿದೆ. ಕನ್ನಡ ಐಕ್ಯತೆಯ ಸಂಕೇತವಾದ ಸಾಹಿತ್ಯ ಸಮ್ಮೇಳನ. ಮಂಡ್ಯ ನಗರದ ಹೊರವಲಯದಲ್ಲಿ ಡಿಸೆಂಬರ್ 20, 21 ಮತ್ತು 22 ರಂದು ನಡೆಯುತ್ತಿರುವುದು ಸಂತಸ ತಂದಿದೆ. ಇದನ್ನು ಹಬ್ಬದ ರೀತಿಯಲ್ಲಿ ಸಡಗರದಿಂದ ಹಾಗೂ ಸಂಭ್ರಮದಿಂದ ನಮ್ಮ ಮನೆಯ ಹಬ್ಬದ ರೀತಿಯಲ್ಲಿ ಆಚರಿಸೋಣ ಎಂದು ಕರೆ ನೀಡಿದರು.
ಮಂಡ್ಯ ಜಿಲ್ಲೆಗೆ ಕನ್ನಡ ಸಾಹಿತ್ಯ ಸಮ್ಮೇಳನ ದೊರಕಿರುವುದು ಪುಣ್ಯದ ವಿಷಯ. ಅಪ್ಪಟ ದೇಸಿ ಸಂಸ್ಕೃತಿ ಇರುವ ಮಂಡ್ಯ ಜಿಲ್ಲೆ, ಅತಿಥಿ ಸತ್ಕಾರ ಮತ್ತು ಹೃದಯ ಶ್ರೀಮಂತಿಕೆಗೆ ಹೆಸರುವಾಸಿಯಾಗಿದೆ. ಬೆಲ್ಲ ಹಾಗೂ ಸಕ್ಕರೆ ರೀತಿ ಈ ಸಮ್ಮೇಳನದಲ್ಲಿ ಸೇವೆ ಮಾಡುವ ಅವಕಾಶ ನಮ್ಮೆಲ್ಲರಿಗೂ ಸಿಕ್ಕಿದೆ. ನೀರು ಕೇಳಿದರೆ ಪಾನಕ ನೀಡುವ ನಮ್ಮ ಜನರ ಬಗ್ಗೆ ಒಂದು ಸೊಗಡಿದೆ. ಹಾಗಾಗಿ ಎಲ್ಲರ ಸಹಕಾರ ನಮ್ಮ ಸಮ್ಮೇಳನಕ್ಕಿರಲಿ ಎಂದು ಮನವಿ ಮಾಡಿದರು.
ಸಾಹಿತಿ ನರಹಳ್ಳಿ ಬಾಲಸುಬ್ರಮಣ್ಯ ಮಾತನಾಡಿ, ಕನ್ನಡ ಮನಸ್ಸು, ಪ್ರಜ್ಞೆ ಹಾಗೂ ಕನ್ನಡ ತನವನ್ನು ಉತ್ತೇಜಿಸುವ ರೀತಿಯಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಕನ್ನಡ ಮನಸ್ಸುಗಳನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಚಟುವಟಿಕೆ ಆಗುತ್ತಿದೆ. ಸ್ಥಳೀಯ ಕಲಾವಿದರನ್ನು ಗುರುತಿಸವ ಮೂಲಕ ಅವರನ್ನು ಉತ್ತೇಜಿಸಿ ಪ್ರೋತ್ಸಾಹಿಸುವುದು ಮುಖ್ಯವಾಗಲಿ. ಪಂಪ ಓದುವ ಕವಿಯಾದರೆ, ಕುಮಾರವ್ಯಾಸ ಹಾಡುವ ಕವಿಯಾಗಿ ಕಾಣುತ್ತಾರೆ. ಹಾಡುವುದೇ ಜನಪದದಿಂದ ಬಂದಿದ್ದು ಎಂದರೆ ಅತಿಶಯೋಕ್ತಿಯಲ್ಲ ಎಂದು ಅಭಿಪ್ರಾಯ ಪಟ್ಟರು.
ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸಂಗೀತ ನಿರ್ದೇಶಕ ಸಾಧು ಕೋಕಿಲಾ, ಸಾಹಿತಿ ಕೆ.ಸತ್ಯನಾರಾಯಣ, ಕಸಾಪ ಗೌರವ ಕಾರ್ಯದರ್ಶಿಗಳಾದ ಪದ್ಮಿನಿ ನಾಗರಾಜ್, ರಾಮಲಿಂಗಶೆಟ್ಟಿ, ಕಾರ್ಯದರ್ಶಿ ಪಟೇಲ್ ಪಾಂಡು, ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಹುಸ್ಕೂರು ಕೃಷ್ಣೇಗೌಡ, ಪಣ್ಣೇದೊಡ್ಡಿ ಹರ್ಷ, ಖಜಾಂಚಿ ಬಿ.ಎಂ.ಅಪ್ಪಾಜಪ್ಪ ಇತರರಿದ್ದರು.