More

  ನಾನು, ನೀವು ಮತ್ತು…: ಜ್ಞಾನದ ಬಲದಿಂದಲೇ ವಿಶ್ವವಿಜೇತರಾದ ಫೋರ್ಡ್

  ನಾನು, ನೀವು ಮತ್ತು...: ಜ್ಞಾನದ ಬಲದಿಂದಲೇ ವಿಶ್ವವಿಜೇತರಾದ ಫೋರ್ಡ್ಇವರು ಜಗತ್ತಿನಾದ್ಯಂತ ತಾಂತ್ರಿಕತೆಯ ಕ್ರಾಂತಿ ಹರಡಿದ ವ್ಯಕ್ತಿ. ಕಾರುಗಳು ಕೇವಲ ಶ್ರೀಮಂತರ ಶ್ರೀಮಂತಿಕೆಯ ಪ್ರದರ್ಶನದ ವಸ್ತುವಾಗಿದ್ದ ಕಾಲದಲ್ಲೇ ಮನೆಮನೆಗೂ ಕಾರು ಕಡಿಮೆ ಬೆಲೆಯಲ್ಲಿ ಸಿಗುವಂತಾಗಬೇಕು ಎಂಬ ಕನಸು ಕಂಡು ಅದನ್ನು ನನಸಾಗಿಸಲು ದಣಿವರಿಯದೇ ದುಡಿದವರು ಹೆನ್ರಿ ಫೋರ್ಡ್.

  1863 ಜುಲೈ 30ರಂದು ಅಮೆರಿಕದ ಸಾಧಾರಣ ರೈತ ಕುಟುಂಬದಲ್ಲಿ ಜನನ. ಗುಲಾಮೀಪದ್ಧತಿ ಪರ-ವಿರುದ್ಧದ ಅಮೆರಿಕದ ಆಂತರಿಕ ಯುದ್ಧ ಜೋರಾಗಿದ್ದ ಸಮಯವದು. ಚಿಕ್ಕಂದಿನಿಂದಲೇ ಉಪಕರಣಗಳೊಂದಿಗೆ ಆಟವಾಡುವುದೆಂದರೆ ಇಷ್ಟ. ಹದಿಮೂರರ ಹರೆಯದಲ್ಲೇ ಅಪ್ಪ ಕೊಟ್ಟ ಪಾಕೆಟ್ ಗಡಿಯಾರವನ್ನು ಬಿಚ್ಚಿ ಮತ್ತೆ ಜೋಡಿಸಿದ ಹುಟ್ಟಾ ಜೀನಿಯಸ್. ನೆರೆಕೆರೆಯವರು ದಂಗಾಗಿಹೋಗಿದ್ದರು ಅದನ್ನು ನೋಡಿ. ಹನ್ನೆರಡನೇ ವಯಸ್ಸಿಗೇ ಒಂದು ಸ್ಟೀಮ್ ಇಂಜಿನ್ ನೋಡಿ ಮುಂದೆ ಕುದುರೆರಹಿತ ವಾಹನ ತಯಾರಿಸುವ ಕನಸು ಕಂಡ ಹುಡುಗ. ಕಾರು ಎಲ್ಲರಿಗೂ ಅಗತ್ಯ ಎಂದುಕೊಂಡ ಫೋರ್ಡ್ ಕುದುರೆರಹಿತ ಗಾಡಿ ತಯಾರಿಸುವತ್ತ ಪೂರ್ತಿ ಗಮನ ನೀಡಿದ. 1876ರಲ್ಲಿ ತಾಯಿ ಅಕಾಲಿಕವಾಗಿ ನಿಧನರಾದರು. ತಾಯಿಯನ್ನು ಬಹುವಾಗಿ ಹಚ್ಚಿಕೊಂಡಿದ್ದ ಹೆನ್ರಿ ಖಿನ್ನನಾದ. ಮಶಿನುಗಳೊಂದಿಗೆ ತನ್ನ ಪೂರ್ತಿ ಸಮಯ ಕಳೆಯಲಾರಂಭಿಸಿದ. ಹದಿನಾರನೇ ವಯಸ್ಸಿಗೆ ಡೆಟ್ರಾಯಿಟ್​ಗೆ ಹೋಗಿ ಅಲ್ಲಿ ಹಡಗು ಕಟ್ಟುವ ಕಾರ್ಖಾನೆಯೊಂದರಲ್ಲಿ ಸಹಾಯಕನಾಗಿ ಸೇರಿದ. ಹಲವಾರು ಕೆಲಸಗಳನ್ನು ಕಲಿಯುತ್ತ ಪದವಿ ಇಲ್ಲದೆ ಇಂಜಿನಿಯರಿಂಗ್​ನಲ್ಲಿ ಪರಿಣಿತನಾದ! 1891ರಲ್ಲಿ ಎಡಿಸನ್ ಅವರ ಜನರೇಟರ್ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಸೇರಿಕೊಂಡರು. ಎರಡೇ ವರ್ಷಗಳಲ್ಲಿ ಮುಖ್ಯ ಇಂಜಿನಿಯರ್ ಆದರು. 1896ರಲ್ಲಿ ಕುದುರೆರಹಿತ ಗಾಡಿಯೊಂದನ್ನು ತಯಾರಿಸಿದರು ಹೆನ್ರಿ. ಅದಕ್ಕೆ ‘ಕ್ವಾಡ್ರಿಸೈಕಲ್’ ಎಂದು ಹೆಸರಿಟ್ಟರು. ಗಂಟೆಗೆ ಇಪ್ಪತ್ತು ಕಿಲೋಮೀಟರ್​ಗಿಂತ ವೇಗವಾಗಿ ಅದು ಚಲಿಸುತ್ತಿರಲಿಲ್ಲ, ರಿವರ್ಸ್ ಗೇರ್ ಇರಲಿಲ್ಲ. ಆದರೂ ಏನೂ ಇಲ್ಲದಿದ್ದ ಆ ಕಾಲಕ್ಕೆ ಅದೊಂದು ಅದ್ಭುತವೇ ಆಗಿತ್ತು. ಆದರೆ ಹೆನ್ರಿಯವರ ಗುರಿ ಕ್ವಾಡ್ರಿಸೈಕಲ್​ಗಿಂತ ಬಹು ದೂರವಿತ್ತು. ಹಾಗಾಗಿ ಅದನ್ನು ಮಾರಿ ಹೊಸ ಸಂಶೋಧನೆಯಲ್ಲಿ ತೊಡಗಿಕೊಂಡರು. ಥಾಮಸ್ ಆಲ್ವಾ ಎಡಿಸನ್ ಮಾಡಿದ ಸತತ ಪ್ರಯೋಗಗಳು ಫೋರ್ಡ್ ಅವರನ್ನು ಪ್ರಭಾವಿಸಿದ್ದವು. ಎಡಿಸನ್​ರನ್ನು ಭೇಟಿಯಾದಾಗ ಅವರಾಡಿದ ಪ್ರೋತ್ಸಾಹಕ ನುಡಿಗಳು ಫೋರ್ಡ್​ರಲ್ಲಿ ಹೊಸ ಚೈತನ್ಯ ಚಿಮ್ಮಿಸಿದವು.

  1899ರಲ್ಲಿ ಡೆಟ್ರಾಯ್್ಟ ಅಟೋಮೊಬೈಲ್ ಕಂಪನಿಯನ್ನು ಫೋರ್ಡ್ ಪ್ರಾರಂಭಿಸಿದರು. ಫೋರ್ಡ್ ರೂಪಿಸಿದ 26 ಅಶ್ವಶಕ್ತಿ ಇಂಜಿನ್ ಮಾಡೆಲ್ ಯಶಸ್ವಿಯಾಗಿ ಓಡಿಸಲ್ಪಟ್ಟಿತು. ಅಂದಿನ ಪ್ರತಿಷ್ಠಿತ ರೇಸ್ ಒಂದನ್ನೂ ಗೆದ್ದಿತು. ಅಮೆರಿಕದಾದ್ಯಂತ ಹೆನ್ರಿ ಫೋರ್ಡ್ ಹೆಸರು ಮನೆಮಾತಾಯಿತು. ಇದರಿಂದ ಸ್ಪೂರ್ತಿ ಪಡೆದ ವಿಲಿಯಮ್ ಮರ್ಫಿ ಮತ್ತಿತರರು ಫೋರ್ಡ್ ಜತೆ ಸೇರಿ ಹೆನ್ರಿ ಫೋರ್ಡ್ ಕಂಪನಿ ಸ್ಥಾಪಿಸಿದರು.

  ಜಗತ್ತಿನ ಯಾವ ಸಾಧಕನೂ ಸೋಲಿನ ಘಟ್ಟ ಇಳಿಯದೇ ಗೆಲುವಿನ ಪರ್ವತವನ್ನೇರಿಲ್ಲ. ಆದರೆ ಅವರಿಗೂ ಸಾಮಾನ್ಯರಿಗೂ ವ್ಯತ್ಯಾಸವೇನೆಂದರೆ ಸೋಲಿನ ಇಳಿಜಾರಿನಲ್ಲಿ ಜಾರಿದಾಗ ಸಾಮಾನ್ಯರು ಹೆದರಿ ಎದ್ದು ವಾಪಾಸಾಗುತ್ತಾರೆ. ಅಸಾಮಾನ್ಯರು ಎಷ್ಟು ಸಲ ಜಾರಿದರೂ ಎದ್ದು ಮುನ್ನಡೆಯುತ್ತಾರೆ ಅಷ್ಟೇ. ಫೋರ್ಡ್ ಕೂಡ ಇದರಿಂದ ಹೊರತಾಗಿರಲಿಲ್ಲ. ಫೋರ್ಡ್ ಕಂಪನಿಯಿಂದ 1902ರಲ್ಲಿ ಹೊರಬಂದು 1903 ಜೂನ್ 16ರಂದು ಇಪ್ಪತ್ತೆಂಟು ಸಾವಿರ ಡಾಲರ್ ಹಣದೊಂದಿಗೆ ಫೋರ್ಡ್ ಮೋಟರ್ ಕಂಪನಿಯನ್ನು ಪ್ರಾರಂಭಿಸಿದರು. ಯಾವುದೋ ಸಮಸ್ಯೆಯಿಂದ ಇತರ ಅಟೋಮೊಬೈಲ್ ಕಂಪನಿಗಳು ಫೋರ್ಡ್ ವ್ಯವಹಾರವನ್ನು ನಿಲ್ಲಿಸುವಲ್ಲಿ ಸಫಲವಾದವು! ಹೆನ್ರಿ ನ್ಯಾಯಾಲಯದ ಬಾಗಿಲು ತಟ್ಟಿದರು. ಅಲ್ಲಿಯೂ ಯಶಸ್ಸು ಸಿಗಲಿಲ್ಲ! ಧೈರ್ಯಗೆಡದ ಹೆನ್ರಿ ನ್ಯಾಯಾಲಯಕ್ಕೆ ಮೇಲ್ಮನವಿ ಮಾಡಿಕೊಳ್ಳುತ್ತಲೇ ಇದ್ದರೆ ಹೊರತು ಸೋಲೊಪ್ಪಿಕೊಳ್ಳಲಿಲ್ಲ. ಕೊನೆಗೂ ನ್ಯಾಯಾಲಯದಲ್ಲಿ ತೀರ್ಮಾನ ಫೋರ್ಡ್ ಪರವಾಗಿ ಆಯಿತು! ಮತ್ತೆ ಫೋರ್ಡ್ ಮೋಟರ್ ಕಂಪನಿಯನ್ನು ಮುನ್ನಡೆಸಲು ನಿರ್ಧರಿಸಿದರು. 1903ರಲ್ಲಿಯೇ ಹೊಸ ಕಾರೊಂದನ್ನು ತಯಾರಿಸಿದರು. ಒಂದೇ ವರ್ಷದಲ್ಲಿ ಮಾಡೆಲ್ ಎ ಮಾದರಿಯ ಐನೂರು ಕಾರುಗಳು ರಸ್ತೆಯಲ್ಲಿ ಓಡಾಡಲು ಪ್ರಾರಂಭಿಸಿದವು! ಅದರ ಯಶಸ್ಸಿನ ನಂತರ 1908ರಲ್ಲಿ ಜಗತ್ತಿನ ಕ್ರಾಂತಿಕಾರಿ ಕಾರು ‘ಮಾಡೆಲ್ ಟಿ’ ತಯಾರಿಸಿದರು. ಬಿಸಿದೋಸೆ ಖರ್ಚಾದಂತೆ ಕಾರುಗಳು ಮಾರಾಟವಾದವು. 950 ಡಾಲರ್​ಗೆ ಮಾರಾಟವಾಗಲು ಶುರುವಾದ ಕಾರುಗಳಿಗೆ ಜನ ಮುಗಿಬಿದ್ದರು. ಆಗ ಇತರೇ ಕಾರುಗಳ ಬೆಲೆ 1800 ಡಾಲರ್ ಇತ್ತು! 1927ರಲ್ಲಿ ‘ಮಾಡೆಲ್ ಟಿ’ ಕೇವಲ 290 ಡಾಲರ್​ಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಿತ್ತು.

  ಕಾರು ಸಾಮಾನ್ಯ ವ್ಯಕ್ತಿ ಅದರಲ್ಲೂ ರೈತರ ಉಪಯೋಗಕ್ಕೆ ಲಭ್ಯವಾಗಬೇಕೆಂಬ ಹೆಬ್ಬಯಕೆ ಹೊಂದಿದ್ದರು ಹೆನ್ರಿ. ಮಹಾನ್ ವ್ಯಕ್ತಿಗಳು ಆರ್ಥಿಕ ಲಾಭವನ್ನು ಮೀರಿದ ಸಮಾಜದ ಅಭ್ಯುದಯದತ್ತ ತಮ್ಮ ಲಕ್ಷ್ಯವನ್ನಿಟ್ಟಿರುತ್ತಾರೆಂಬುದು ಫೋರ್ಡ್ ವಿಚಾರದಲ್ಲೂ ಸತ್ಯವಾಯಿತು.

  ಮೊದಲ ಚಲಿಸುವ ಅಸೆಂಬ್ಲಿ ಲೈನ್ ತಯಾರಿಸಿದವರು ಹೆನ್ರಿ. ಅಂದರೆ ಕಾರು ತಯಾರಿಕೆಯ ಬಿಡಿಭಾಗಗಳನ್ನು ಒಂದಾದ ಮೇಲೊಂದರಂತೆ ಚಲಿಸುತ್ತ ಒದಗಿಸುವ ಯಂತ್ರ. ಮೊದಲು ಒಂದು ಕಾರಿನ ಬಿಡಿಭಾಗಗಳನ್ನು ಜೋಡಿಸಿ ಕಾರು ತಯಾರಿಸಲು ಹನ್ನೆರಡು ಗಂಟೆ ಬೇಕಾಗುತ್ತಿತ್ತು. ಆದರೆ ಈ ಯಂತ್ರದಿಂದ ಅರ್ಧಗಂಟೆಯಲ್ಲಿ ಈ ಕೆಲಸ ಮುಗಿದುಹೋಗುತ್ತಿತ್ತು! ಇಂತಹ ಅಪೂರ್ವ ಯಂತ್ರವನ್ನು ಸ್ಥಾಪಿಸಿದರು ಹೆನ್ರಿ. ಇಂದು ಲಕ್ಷ ಲಕ್ಷ ವಾಹನಗಳು ತ್ವರಿತವಾಗಿ ತಯಾರಾಗುವುದರ ಹಿಂದೆ ಈ ಚಲಿಸುವ ಅಸೆಂಬ್ಲಿ ಲೈನ್ ಆವಿಷ್ಕಾರವಿದೆ. ಇದರಿಂದ ಸಮಯ ಮಾತ್ರವಲ್ಲ, ಹಣದ ಉಳಿತಾಯವೂ ಆಗುತ್ತಿತ್ತು. ಎಷ್ಟು ಕಡಿಮೆ ಮೊತ್ತಕ್ಕೆ ಕಾರುಗಳು ತಯಾರಾಗುತ್ತವೆಯೋ ಅಷ್ಟು ಅವುಗಳ ಜನಪ್ರಿಯತೆ ಹೆಚ್ಚುತ್ತದೆ ಎಂಬುದು ಫೋರ್ಡ್ ನಂಬಿಕೆಯಾಗಿತ್ತು. ಜತೆಗೆ ಕಾರುಗಳ ಉತ್ಪಾದನೆಯೂ ಹೆಚ್ಚುತ್ತಿತ್ತು. ಫೋರ್ಡ್ ಮಾಡೆಲ್ ಟಿ 1908ರ ಕ್ಯಾಲೆಂಡರ್ ವರ್ಷದಲ್ಲಿ ಹತ್ತು ಸಾವಿರ ಕಾರುಗಳು ಮಾರಾಟವಾಗಿ ಇಪ್ಪತ್ತನೇ ಶತಮಾನದ ಪ್ರಭಾವೀ ಕಾರು ಎನಿಸಿಕೊಂಡಿತು.

  ಹೆನ್ರಿ ಫೋರ್ಡ್ ಮನುಷ್ಯರ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟಿದ್ದರು. ತಂಡದಲ್ಲಿ ಪ್ರತಿಭಾಶಾಲಿಗಳಿದ್ದಷ್ಟೂ ಯಶಸ್ಸಿಗೆ ಹತ್ತಿರ ಹೋದಂತೆ ಎಂದವರು ಹೇಳುತ್ತಿದ್ದರು. ಇತರೆಡೆಗಳಲ್ಲಿ ಎರಡು ಅಥವಾ ಹೆಚ್ಚೆಂದರೆ ಮೂರು ಡಾಲರ್ ವೇತನ ಇದ್ದರೆ ಇವರು ಉದ್ಯೋಗಿಗಳಿಗೆ ದಿನಕ್ಕೆ ಐದು ಡಾಲರ್​ನಷ್ಟು ಸಂಬಳ ಕೊಡುತ್ತಿದ್ದರು. ಒಂಬತ್ತು ಗಂಟೆಯ ದಿನದ ಕೆಲಸವನ್ನು ಎಂಟು ಗಂಟೆಗೆ ಇಳಿಸಿದರು! ಈಗಿನ ಲೆಕ್ಕದಲ್ಲಿ ಅದು 130 ಡಾಲರ್! ಅಂದರೆ ದಿನಕ್ಕೆ 9000 ರೂಪಾಯಿ! ಇಡೀ ಮಾರುಕಟ್ಟೆ ತಲ್ಲಣಿಸಿಹೋಗಿತ್ತು ಆಗ! 1914 ಜನವರಿ 5ರಂದು ಹೆನ್ರಿ ಐದು ಡಾಲರ್ ಘೊಷಣೆ ಮಾಡಿದ ಮಾರನೇ ದಿನ ಹತ್ತು ಸಾವಿರ ಮಂದಿ ಕಂಪನಿ ಸೇರಲು ಬಂದರು! ಅದನ್ನು ಅವರು ‘ವೆಲ್​ಫೇರ್ ಕ್ಯಾಪಿಟಲಿಸಮ್ ಅಥವಾ ‘ಸಾಮಾಜಿಕ ಇಂಜಿನಿಯರಿಂಗ್’ ಎಂದು ಕರೆದರು.

  ಕಡಿಮೆ ಬೆಲೆಯಲ್ಲಿ ವಸ್ತುವನ್ನು ಖರೀದಿಸಿ ಹೆಚ್ಚಿನ ಬೆಲೆಯಲ್ಲಿ ಮಾರುವುದು ವ್ಯವಹಾರ ಅಲ್ಲ ಎಂದು ಅವರು ನಂಬಿದ್ದರು. ಒಳ್ಳೆಯ ಮೊತ್ತ ನೀಡಿ ಖರೀದಿಸಿ ಅದನ್ನು ಉತ್ತಮಗೊಳಿಸಿ ಜನರಿಗೆ ಲಭ್ಯವಾಗುವಂತೆ ಮಾರಾಟ ಮಾಡುವುದು ವ್ಯವಹಾರ. ‘ನೀವು ಉತ್ತಮವಾದುದನ್ನು ತಯಾರಿಸುತ್ತಿದ್ದೀರಿ ಎಂದರೆ ಜಗತ್ತಿನಾದ್ಯಂತ ಅದು ಲಭ್ಯವಿರಬೇಕು’ ಎಂದವರು ಹೇಳುತ್ತಿದ್ದರು. ಲಾಭಕ್ಕಿಂತ ಮೊದಲು ಸೇವೆ ಬರಬೇಕು ಎಂಬುದು ಅವರ ತತ್ತ್ವ, ಆದರ್ಶವಾಗಿತ್ತು. ಲಾಭ ವ್ಯವಹಾರದ ಮುಖ್ಯ ಉದ್ದೇಶ ನಿಜ, ಆದರೆ ಕೇವಲ ಅದೇ ಅಲ್ಲ. ಸೇವೆಯೂ ಅಷ್ಟೇ ಮುಖ್ಯ. ಪ್ರಾಮಾಣಿಕತೆ, ಜನರ ಬಗ್ಗೆ, ಪರಿಸರದ ಬಗ್ಗೆ ಕಳಕಳಿ ಇವೆಲ್ಲ ಮೌಲ್ಯಗಳಿದ್ದರೆ ವ್ಯವಹಾರದ ಉಪ ಉತ್ಪನ್ನವಾಗಿ ಲಾಭ ತನ್ನಿಂದ ತಾನೇ ಬರುತ್ತದೆ ಎಂದು ಅವರು ಹೇಳುತ್ತಿದ್ದರು. ಜಗತ್ತಿನ ಬಹುತೇಕ ಜನರಿಗೆ ಬ್ಯಾಂಕಿಂಗ್ ಮತ್ತು ಅರ್ಥವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆಂದು ಗೊತ್ತಿಲ್ಲ. ಗೊತ್ತಾದರೆ ನಾಳೆ ಬೆಳಗಾಗುವುದರೊಳಗೆ ಕ್ರಾಂತಿ ಆಗಿಬಿಡುತ್ತದೆಂದು 1922ರಲ್ಲಿಯೇ ಹೇಳಿದ್ದರು. ನಿಜ, ನಾವೆಲ್ಲ ಆರ್ಥಿಕ ಅನಕ್ಷರಸ್ಥರು. ಸರ್ಕಾರಗಳ ಯಾವುದೋ ಹಗರಣ ನಮ್ಮ ಹಣವನ್ನು, ಬದುಕನ್ನು ಹೇಗೆ ಪ್ರಭಾವಿಸಬಲ್ಲುದೆಂಬ ಜ್ಞಾನ ನಮಗಿಲ್ಲ ಎಂಬುದು ಇಂದಿಗೂ ಸತ್ಯವೇ!

  ಅಷ್ಟೇ ಅಲ್ಲ ಬರೀ ಲಾಭದತ್ತ ಮುಖ ಮಾಡುವ ಬಂಡವಾಳಶಾಹಿತ್ವವನ್ನು ಅವರು ಇಷ್ಟಪಡುತ್ತಿರಲಿಲ್ಲ. ಜನರ ಕಲ್ಯಾಣಕ್ಕಾಗಿ ಸಂಪತ್ತು ಇರಬೇಕು ಎಂಬುದು ಅವರ ಚಿಂತನೆಯಾಗಿತ್ತು. 1947 ಏಪ್ರಿಲ್ 7ರಂದು ಫೋರ್ಡ್ ಮೃತರಾದರು. ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ 1888ರಲ್ಲಿ ಕ್ಲಾರಾ ಜೇನ್ ಜತೆ ವಿವಾಹವಾಯಿತು. ಗಿರಣಿಯೊಂದನ್ನು ನಡೆಸುತ್ತ, ವ್ಯವಸಾಯವನ್ನೂ ಮಾಡುತ್ತ ಸಂಶೋಧನೆ ನಡೆಸುತ್ತಿದ್ದ ಸಮಯವದು. ಇವರ ವೈವಾಹಿಕ ಜೀವನ ಅನ್ಯೋನ್ಯವಾಗಿತ್ತು. ಇವರ ಒಬ್ಬನೇ ಮಗ ಎಡ್ಸೆಲ್ ಸೌಮ್ಯ ಸ್ವಭಾವದ ಹುಡುಗ. ತಾನು ಅನುಭವಿಸಿದ ಕಷ್ಟಗಳನ್ನು ಮಗನೂ ಅನುಭವಿಸಿ ಗಟ್ಟಿಯಾಗಬೇಕೆಂದು ಮಗನ ಮೇಲೆ ಒತ್ತಡ ಹಾಕುತ್ತಿದ್ದರು. ಕಂಪನಿ ಜವಾಬ್ದಾರಿ ಕೊಟ್ಟರೂ ಕೊನೆಯ ಮಾತು ತನ್ನದೇ ಆಗಬೇಕೆಂಬ ಹಠವಿತ್ತು. ‘ಮಾಡೆಲ್ ಟಿ’ಯಲ್ಲಿ ಯಾವ ಬದಲಾವಣೆಗೂ ಹೆನ್ರಿ ಒಪ್ಪಲಿಲ್ಲ. ಆದರೆ ಎಡ್ಸೆಲ್ ಫೋರ್ಡ್ ಕ್ಯಾನ್ಸರ್​ನಿಂದ 1943ರಲ್ಲಿ ತೀರಿಕೊಂಡರು. ಹೆನ್ರಿ ಮಗನ ಸಾವಿನಿಂದ ಕುಸಿದು ಹೋದರು. ಅದನ್ನು ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ ಕೂಡ. ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾದರೂ ಎಂದೂ ಮದ್ಯ ಕುಡಿಯದ, ಸಿಗರೇಟು ಸೇದದ ಹೆನ್ರಿ ಸರಳ ಆಹಾರ ಸೇವಿಸುವ ಸರಳವ್ಯಕ್ತಿಯಾಗಿಯೇ ಉಳಿದರು.

  ‘ಕೆಲವರು ಅದೃಷ್ಟದಿಂದ ಯಶಸ್ವಿಯಾಗುತ್ತಾರೆ. ಆದರೆ ಬಹಳಷ್ಟು ಮಂದಿ ಯಶಸ್ವಿಯಾಗಬೇಕೆಂದು ತೀರ್ವನಿಸಿದ್ದರಿಂದ ಗೆಲ್ಲುತ್ತಾರೆ’ ಎಂಬುದು ಹೆನ್ರಿ ಫೋರ್ಡ್ ಮಾತು. ಅವರ ಬದುಕೇ ಅದಕ್ಕೊಂದು ಅತ್ಯುತ್ತಮ ಉದಾಹರಣೆ.

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts