Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ನಾವೂ ಓಡೋಣ, ಜತೆಗಾರರಿಗೂ ಶುಭ ಕೋರೋಣ

Thursday, 01.03.2018, 3:05 AM       No Comments

ಇಂದು ಬಹಳಷ್ಟು ಪಾಲಕರು ತಮ್ಮ ಮಕ್ಕಳಿಗೆ ಅವರ ತರಗತಿಯ ಬುದ್ಧಿವಂತ ಮಕ್ಕಳ ಹೆಸರು ಹೇಳಿ ಹೇಳಿ ‘ಅವರಿಗಿಂತ ನೀನು ಜಾಸ್ತಿ ಅಂಕ ತೆಗೆಯಬೇಕು’ ಎನ್ನುತ್ತ ಅನಾರೋಗ್ಯಕರ ಪೈಪೋಟಿ ಬೆಳೆಸುತ್ತಿದ್ದಾರೆ. ಅದರ ಬದಲು ಮಗುವಿನ ವೈಯಕ್ತಿಕ ಸುಧಾರಣೆಯತ್ತ ಗಮನ ಹರಿಸಿದರೆ ಆರೋಗ್ಯಕರ ಫಲಿತಾಂಶ ಸಾಧ್ಯವಲ್ಲವೇ?

ಇದ್ದಕ್ಕಿದ್ದಂತೆ ಸೈಕಲ್ ಹೊಡೆಯುವ ಹುಕಿ ಬಂದು ಖರೀದಿಸಿಯಾಯಿತು. ಬೈಕೇ ಬೇಕು ಎಂಬ ಆಸೆ ಇದ್ದರೂ ಅಪ್ಪ ‘ಒಂಭತ್ತನೆ ಕ್ಲಾಸಿಗೇ ಇವನಿಗೆ ಬೈಕು, ಮತ್ತೇನೂ ಬೇಡವಾ?’ ಎಂದು ಚೆನ್ನಾಗಿ ಉಗಿದಿದ್ದರಿಂದ ಗೇರ್ ಸೈಕಲ್ ಕೊಡಿಸಲು ಗೋಗರೆದು ಕೊಡಿಸಿಕೊಂಡ ಸುಮನ್. ದಿನವೂ ಶಾಲೆ ಬಿಟ್ಟು ಬಂದ ಮೇಲೆ ಸೈಕಲ್ ತುಳಿಯುವುದು ಹವ್ಯಾಸವೇ ಆಗಿಹೋಯಿತು. ಅವತ್ತೊಂದು ಭಾನುವಾರ ಬೆಳಗ್ಗೆ ನಿರ್ಜನ ರಸ್ತೆಯಲ್ಲಿ ಸೈಕಲ್ ತುಳಿಯುತ್ತಿದ್ದ. ಆಗಲೇ ಆತ ಸುಮನ್ ಕಣ್ಣಿಗೆ ಬಿದ್ದದ್ದು. ಸುಮನ್​ಗಿಂತ ಕಾಲು ಕಿಲೋಮೀಟರ್ ದೂರದಲ್ಲಿ ಆತ ತನ್ನ ಪಾಡಿಗೆ ತಾನು ಸೈಕಲ್​ನಲ್ಲಿ ಹೋಗುತ್ತಿದ್ದ. ತನಗಿಂತ ಆತ ಸ್ವಲ್ಪ ನಿಧಾನಕ್ಕೇ ಹೋಗುತ್ತಿದ್ದ ಎಂಬುದು ಸುಮನ್​ನ ಅರಿವಿಗೆ ಬಂತು. ಇನ್ನೊಂದು ಕಿಲೋಮೀಟರ್ ದೂರದಲ್ಲಿ ಸುಮನ್ ಮನೆಯ ಕಡೆ ತಿರುಗುವ ತಿರುವು ಇತ್ತು. ಅಷ್ಟರೊಳಗೆ ಆತನನ್ನು ದಾಟಿ ಮುಂದೆ ಹೋಗುವ ಹಠಕ್ಕೆ ಬಿದ್ದ ಈ ಹುಡುಗ, ವೇಗವಾಗಿ ಸೈಕಲ್ ತುಳಿಯಲು ಶುರುಮಾಡಿದ. ಕೆಲವೇ ನಿಮಿಷಗಳಲ್ಲಿ ಈತ ಆತನ ಹತ್ತಿರ ಇದ್ದ. ಸುಮಾರು ನೂರು ಮೀಟರ್ ಹಿಂದೆ ಇರುವಾಗ ಸುಮನ್ ಯಾವ ರೀತಿ ಸೈಕಲ್ ತುಳಿದನೆಂದರೆ ಒಲಿಂಪಿಕ್ಸ್​ನ ಫೈನಲ್ ರೇಸ್​ನಲ್ಲಿ ಬಂಗಾರದ ಪದಕಕ್ಕೆ ಸ್ಪರ್ಧಿಸುವವನ ಥರ! ಅಂತೂ ಆತನನ್ನು ಹಿಂದೆಹಾಕಿ ಮುಂದೆ ಹೋಗಿಯೇಬಿಟ್ಟ! ಒಳಗೊಳಗೇ ಇವನಿಗೆ ಖುಷಿ! ಅವನನ್ನು ರೇಸ್​ನಲ್ಲಿ ಸೋಲಿಸಿಬಿಟ್ಟೆ ಎಂದು ಉಬ್ಬಿದ. ತಾನು ಅವನೊಂದಿಗೆ ಸ್ಪರ್ಧಿಸುತ್ತಿದ್ದೇನೆ ಎಂದು ತನಗೇ ಗೊತ್ತಿಲ್ಲ ಎಂಬುದು ಆ ಕ್ಷಣಕ್ಕೆ ಸುಮನ್​ಗೆ ಮರೆತೇಹೋಗಿತ್ತು! ಈ ಸೈಕಲ್ ರೇಸ್​ನಲ್ಲಿ ಗೆದ್ದ ಚಾಂಪಿಯನ್ ಆಗಿ ಸುಮನ್ ಗಾಳಿಯಲ್ಲಿ ತೇಲುತ್ತಿರುವಾಗಲೇ ತಾನು ತನ್ನ ಮನೆಗೆ ಹೋಗುವ ಕ್ರಾಸ್​ನಿಂದ ತುಂಬ ದೂರ ಬಂದಿರುವುದು ಗೊತ್ತಾಯಿತು! ಅವನಿಗೆ ಸುಸ್ತಾಗಿತ್ತು. ಆದರೆ ಮತ್ತೆ ವಾಪಾಸು ತಿರುಗಿ ಮನೆಗೆ ಹೋಗಲೇಬೇಕಿತ್ತು. ಅನವಶ್ಯಕವಾಗಿ ಬೇಡದ ಕೆಲಸ ಮಾಡಿದೆನಲ್ಲ ಎಂದು ತನ್ನನ್ನು ತಾನು ಬೈದುಕೊಳ್ಳುತ್ತ ಸೈಕಲ್ ತಿರುಗಿಸಿ ಮನೆಕಡೆ ಹೊರಟ….

ಈಗ ಒಂದು ಕೆಲಸ ಮಾಡೋಣ. ಸುಮನ್ ಎನ್ನುವ ಹೆಸರು ತೆಗೆದು ನಮ್ಮ ನಮ್ಮ ಹೆಸರು ಹಾಕಿಕೊಳ್ಳೋಣ. ಎಲ್ಲೋ ಒಂದು ಕಡೆ ನಮಗೂ ಈ ಕತೆ ರಿಲೇಟ್ ಆಗುತ್ತದೆ ಎನಿಸುತ್ತಿದ್ದರೆ, ಹೌದು ನೀವು ಸರಿಯಾಗಿಯೇ ಯೋಚಿಸುತ್ತಿದ್ದೀರಿ. ಏಕೆಂದರೆ ನಮ್ಮ ಜೀವನದಲ್ಲೂ ಬಹಳಷ್ಟು ಬಾರಿ ಈ ರೀತಿ ಆಗುತ್ತಿರುತ್ತದೆ. ಅರ್ಥರಹಿತ ಸ್ಪರ್ಧೆಯನ್ನು ನಾವೇ ಕಲ್ಪನೆ ಮಾಡಿಕೊಂಡು ಇಲ್ಲದ ಗುರಿ ತಲುಪಲು ನಮ್ಮೆಲ್ಲ ಶಕ್ತಿಯನ್ನೂ ಉಪಯೋಗಿಸಿ ಗೆಲ್ಲಲು ಹರಸಾಹಸ ಪಡುತ್ತಿರುತ್ತೇವೆ. ಸಣ್ಣ ಮಟ್ಟದ ಒಂದು ಉದಾಹರಣೆಯನ್ನೇ ನೋಡೋಣ. ಸಂಬಂಧವಿಲ್ಲದ ಜನರೊಂದಿಗೆ ಕಾರಣವಿಲ್ಲದೆ ಸ್ಪರ್ಧೆಗಿಳಿಯುವುದು ಮತ್ತು ಅನವಶ್ಯಕ ತೊಂದರೆಗಳನ್ನು ಆಹ್ವಾನಿಸಿಕೊಳ್ಳುವುದು ಮನುಷ್ಯನ ಮೂಲಭೂತ ಮಾನಸಿಕ ಅವಸ್ಥೆಗಳಲ್ಲೊಂದು ಎಂಬುದನ್ನು ದಿನೇದಿನೆ ಸಾಬೀತು ಮಾಡುತ್ತಿರುವ ಉದಾಹರಣೆಯಿದು. ಗಾಡಿ ಓಡಿಸುವವರಿಗೆ ಅಥವಾ ಓಡಿಸುವವರೊಂದಿಗೆ ಕುಳಿತವರಿಗೆ ಇದು ಆಗಾಗ್ಗೆ ಅನುಭವಕ್ಕೆ ಬರುತ್ತಿರುತ್ತದೆ. ಮುಂದೆ ಹೋಗುವ ಬೈಕು, ಕಾರುಗಳನ್ನು ಓವರ್​ಟೇಕ್ ಮಾಡದಿದ್ದರೆ ತಾವು ಡ್ರೈವಿಂಗ್ ಕಲಿತದ್ದೇ ವ್ಯರ್ಥ ಎಂಬ ಮೂರ್ಖಭಾವನೆ ಬಹಳಷ್ಟು ಮಂದಿಯಲ್ಲಿ ಇರುತ್ತದೆ. ಈ ಗುರಿಯಿಲ್ಲದ ಹುಚ್ಚು ರೇಸಿನ ಕಾರಣಕ್ಕೇ ಆಗುವ ಅಪಘಾತಗಳು, ಸಾವುನೋವುಗಳು ಲೆಕ್ಕವಿಲ್ಲದಷ್ಟು. ಎದುರಿಗಿರುವವನ ಗುರಿ ಬೇರೆ, ನಮ್ಮ ಗಮ್ಯ ಬೇರೆ. ಆದರೂ ಅವರು ನಮ್ಮ ಪ್ರತಿಸ್ಪರ್ಧಿ ಎಂಬ ಭಾವನೆ. ದೊಡ್ಡ ಕಾರಿನವನು, ‘ಇವನೇನು ಚಿಕ್ಕ ಕಾರಿನವನು ನನ್ನನ್ನು ಓವರ್​ಟೇಕ್ ಮಾಡುವುದು…’ ಎಂದು ಹಲ್ಲು ಮಸೆಯುತ್ತ ಇನ್ನೂ ಜೋರಾಗಿ ಆಕ್ಸೆಲರೇಟರ್ ಒತ್ತುವುದೂ, ಚಿಕ್ಕ ಕಾರಿನವನು ‘ಹೇಗೆ ಆ ನನ್ಮಗನ ದೊಡ್ಡ ಕಾರನ್ನು ಹಿಂದೆ ಹಾಕಿಬಿಟ್ಟೆ’ ಎಂದು ಬೀಗುತ್ತ ಬ್ರೇಕ್ ಹಾಕುವ ಸಾಮರ್ಥ್ಯ ಇಲ್ಲದ ಕಾರನ್ನು ನೂರರ ಮೇಲೆ ಓಡಿಸುವುದೂ ಆಗುತ್ತಲೇ ಇರುತ್ತದೆ. ಓವರ್​ಟೇಕ್ ಮಾಡಲು ಹೋಗಿ ತಮ್ಮ ಹಾಗೂ ಅಮಾಯಕರ ಪ್ರಾಣದ ಜತೆ ಚೆಲ್ಲಾಟವಾಡುವವರ ಸಂಖ್ಯೆ ದಿನದಿನವೂ ಹೆಚ್ಚುತ್ತಿರುವುದು ಅಪಾಯಕಾರಿ.

ಮೇಲಿನ ನಿದರ್ಶನಗಳನ್ನು ಇನ್ನೂ ವಿಶಾಲವಾಗಿ ನೋಡಿದಾಗ ಅನ್ನಿಸುವುದು- ನಾವೂ ಈ ಅನವಶ್ಯಕ ರೇಸ್​ನಲ್ಲಿ ಇದ್ದೇವೆ; ಅಷ್ಟೇ ಅಲ್ಲ ನಮ್ಮ ಅಮೂಲ್ಯ ಸಮಯ-ಶ್ರಮವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸಹೋದ್ಯೋಗಿಗಳು, ಒಡಹುಟ್ಟಿದವರು, ಸ್ನೇಹಿತರು, ನೆರೆಹೊರೆಯವರು, ಸಂಬಂಧಿಕರು ಎಲ್ಲರಿಗಿಂತ ಈ ಬದುಕಿನಲ್ಲಿ ಮುಂದೆ ಓಡಬೇಕೆಂದು ಬಯಸುತ್ತೇವೆ. ಅವರೆಲ್ಲರಿಗಿಂತ ಯಶಸ್ಸು ಪಡೆಯಬೇಕೆಂದು, ದೊಡ್ಡ ಮನುಷ್ಯರಾಗಬೇಕೆಂದು ಹಗಲಿರುಳೂ ಊಟ ನಿದ್ರೆ ಬಿಟ್ಟು ದುಡಿಯುತ್ತೇವೆ. ಹಣದ ಹಿಂದೆ ಓಡುತ್ತೇವೆ. ಆದರೆ ಆ ಓಟದಲ್ಲಿ ನಮ್ಮ ಶಾಂತಿಯನ್ನು ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಸೈಕಲ್ ರೇಸ್​ನಲ್ಲಿ ಮುಂದೆ ಹೋದ ಹುಡುಗ ತನ್ನ ಮನೆಯ ದಾರಿ ದಾಟಿ ಮುಂದೆ ಹೋದ ಹಾಗೆಯೇ ನಾವೂ ಬದುಕಿನ ಅಮೂಲ್ಯ ಸಂಗತಿಗಳನ್ನು ಕಳೆದುಕೊಳ್ಳುತ್ತೇವೆ. ಕೆಲವು ಸಲ ಬೇರೆಯವರ ಜತೆ ಯುದ್ಧ ಮಾಡಲು ಹೋಗಿ ನಮ್ಮ ಬದುಕಿನ ಗಮ್ಯಗಳನ್ನೇ ಮರೆತುಬಿಟ್ಟು ಬೇಡದ ಸಂಗತಿಗಳಲ್ಲೇ ವ್ಯಸ್ತರಾಗಿಬಿಡುತ್ತೇವೆ.

ಹಾಗಂತ ಯಶಸ್ಸು ಬೇಡವೇ? ನಾವು ಏನನ್ನಾದರೂ ಸಾಧಿಸುವುದು ಬೇಡವೇ ಎಂದರೆ ಖಂಡಿತ ಬೇಕು. ಮಾನವ ಜನ್ಮ ದೊಡ್ಡದು; ಅದನ್ನು ಹಾಳು ಮಾಡಿಕೊಳ್ಳಬಾರದು ಎಂಬ ಪ್ರಜ್ಞೆ ಎಲ್ಲರಿಗೂ ಇರಬೇಕು. ಯಾವಾಗ ನಾವು ಬೇರೆಯವರಿಗಿಂತ ಮುಂದೆ ಹೋಗಲು, ಬೇರೆಯವರಿಗಿಂತ ಯಶಸ್ವಿಗಳು ಎಂದು ತೋರಿಸಿಕೊಳ್ಳಲು ಬಯಸುತ್ತೇವೆಯೋ ಆಗಲೇ ನಿಜವಾದ ಸಮಸ್ಯೆ ಶುರುವಾಗುವುದು. ಏಕೆಂದರೆ ಈ ಸ್ಪರ್ಧೆಯೆನ್ನುವುದು ಮುಗಿಯದ ವೃತ್ತ. ನೀವು ಯಾವ ಕಾರು ತೆಗೆದುಕೊಂಡರೂ ನಿಮಗಿಂತ ಉತ್ತಮ ಕಾರು ಹೊಂದಿರುವವರು ಇದ್ದೇ ಇರುತ್ತಾರೆ. ಎಷ್ಟೇ ದುಡ್ಡು ಸಂಪಾದಿಸಿದರೂ ಅದನ್ನು ತಿಂಗಳ ಖರ್ಚು ಎಂದುಕೊಂಡಿರುವವರು ಸಿಗುತ್ತಾರೆ. ಇನ್ನು ಸೆಲೆಬ್ರಿಟಿಯಾಗಿಬಿಟ್ಟಿರಾ? ನಿಮ್ಮನ್ನು ಗುರುತೇಹಿಡಿಯದ ಸ್ಥಳಗಳೇ ಜಗತ್ತಿನಲ್ಲಿ ತುಂಬಿರುತ್ತವೆ ಮತ್ತು ಜಗತ್ತೇ ಗುರುತಿಸುವಂತಹ ಸೆಲೆಬ್ರಿಟಿಗಳು ಬೇಕಾದಷ್ಟು ಜನರಿದ್ದಾರೆ!!

ಯಶಸ್ಸು ಎಂದರೆ ಬೇರೆಯವರಿಗಿಂತ ನಮ್ಮ ಪ್ರದರ್ಶನ ಉತ್ತಮವಾಗಿರುವುದು ಎಂಬುದು ಸಾಮಾನ್ಯ ಭಾವನೆ. ಆದರೆ ಅದು ಎಲ್ಲ ಸಂದರ್ಭದಲ್ಲೂ ನಿಜವಾಗಿರುವುದಿಲ್ಲ. ಮೊದಲ ರ್ಯಾಂಕ್ ಪಡೆಯುವ ಮಗು ಎರಡನೇ ರ್ಯಾಂಕ್ ಪಡೆವ ಮಗುವಿಗಿಂತ ಅಂಕ ಹೆಚ್ಚು ಗಳಿಸಿರಬೇಕು. ಅಂದರೆ ಎರಡನೇ ರ್ಯಾಂಕ್ ಪಡೆದ ಮಗುವಿನ ಅಂಕಗಳ ಮೇಲೆ ಮೊದಲ ರ್ಯಾಂಕ್ ನಿರ್ಧಾರಿತವಾಗುತ್ತದೆ. ಮತ್ತೊಬ್ಬರ ಅಂಕ ಕಡಿಮೆಯಾಗಲಿ ಎಂದು ಮನಸ್ಸು ಹಾರೈಸತೊಡಗುತ್ತದೆ. ಇಂದು ನಮ್ಮ ಪಾಲಕರು ತಮ್ಮ ಮಕ್ಕಳಿಗೆ ಅವರ ತರಗತಿಯ ಬುದ್ಧಿವಂತ ಮಕ್ಕಳ ಹೆಸರು ಹೇಳಿ ಹೇಳಿ ಅವರಿಗಿಂತ ನೀನು ಜಾಸ್ತಿ ಅಂಕ ತೆಗೆಯಬೇಕು ಎನ್ನುತ್ತ ಅನಾರೋಗ್ಯಕರ ಪೈಪೋಟಿ ಬೆಳೆಸುತ್ತಿದ್ದಾರೆ. ಅದರ ಬದಲು ಮಗುವಿನ ವೈಯಕ್ತಿಕ ಸುಧಾರಣೆಯತ್ತ ಗಮನ ಹರಿಸಿದರೆ ಆರೋಗ್ಯಕರ ಫಲಿತಾಂಶ ಸಾಧ್ಯ.

ಬದುಕಿನ ಸತ್ಯಗಳೂ ಇಷ್ಟೇ ಸರಳ! ನಿನ್ನೆಯದಕ್ಕಿಂತ ಇವತ್ತಿನ ದಿನವನ್ನು ನಾನು ಸಮರ್ಪಕವಾಗಿ ಬಳಸಿಕೊಂಡರೆ ಅದು ನನ್ನ ಯಶಸ್ಸು. ನಮ್ಮನ್ನು ನಾವು ದಿನದಿನವೂ ಉತ್ತಮಪಡಿಸಿಕೊಳ್ಳುತ್ತ ಹೋಗಬೇಕೆಂಬುದೇ ಜಗತ್ತಿನ ಎಲ್ಲ ಸಾಧಕರೂ ಹೇಳಿರುವ ಕಿವಿಮಾತು. ಎಡಿಸನ್ ತಾನು ಕಂಡುಹಿಡಿಯಬೇಕಾದ ಬಲ್ಬ್​ಗೆ

ಯಾವ ಲೋಹವನ್ನು ಉಪಯೋಗಿಸಲಿ ಎಂದು ತಲೆಕೆಡಿಸಿಕೊಂಡು ಒಂದು ದಿನ ಚಿನ್ನದ ತಂತಿ, ಇನ್ನೊಂದು ದಿನ ಬೆಳ್ಳಿಯದು, ಮತ್ತೊಂದು ದಿನ ತಾಮ್ರದ್ದನ್ನು ಉಪಯೋಗಿಸುತ್ತ ದಿನದಿನವೂ ಪ್ರಯೋಗ ಮಾಡುತ್ತ ಹೋದ. ಕೊನೆಗೊಂದು ದಿನ ಸಾವಿರಾರು ಪ್ರಯೋಗಗಳ ನಂತರ ಟಂಗಸ್ಟನ್ ಬಳಸಿ ಜಗತ್ತನ್ನೇ ಬೆಳಗುವ ಬಲ್ಬ್ ಕಂಡುಹಿಡಿದ. ದಿನವೂ ತನ್ನನ್ನು ತಾನು ಉತ್ತಮಪಡಿಸಿಕೊಂಡಿದ್ದಕ್ಕೆ ಆತ ಸಾಧನೆಯ ಶಿಖರವೇರಿದ. ಮಧ್ಯೆ ಒಂದು ದಿನ ಬೇಸರವಾಗಿ ತಾನು ಬೇರೆ ಯಾರೋ ವಿಜ್ಞಾನಿಯ ಜತೆ ಸ್ಪರ್ಧೆ ಮಾಡಲು ಹೊರಟು, ಮಾಡಿದ ಕೆಲಸ ಅರ್ಧಕ್ಕೆ ಬಿಟ್ಟು ಬೇರೆ ಮಾಡಲು ಹೊರಟಿದ್ದರೆ ನಾವು ಎಡಿಸನ್ ಹೆಸರನ್ನೇ ಕೇಳಿರುತ್ತಿರಲಿಲ್ಲ!

ಹಾಗಾಗಿ ನಮ್ಮ ಪಾಲಿಗೆ ಬಂದದ್ದನ್ನು ಸ್ವೀಕರಿಸಿ ನಮ್ಮ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಪ್ರಯತ್ನಿಸೋಣ. ಬೇರೆಯವರನ್ನು ಸೋಲಿಸಲು ಅಲ್ಲ, ನಿನ್ನೆಗಿಂತ ಇಂದು ಇಂದಿಗಿಂತ ನಾಳೆ ನಮ್ಮನ್ನು ನಾವು ಉತ್ತಮಗೊಳಿಸಿಕೊಳ್ಳಲು! ಬದುಕಿನ ಓಟದಲ್ಲಿ ಓಡೋಣ, ನಮ್ಮ ಜತೆಗಾರರಿಗೂ ಶುಭ ಕೋರೋಣ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

Leave a Reply

Your email address will not be published. Required fields are marked *

Back To Top