Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಇಂದಿನ ಸುಂದರ ಕ್ಷಣಗಳು ಕೈಜಾರುವ ಮುನ್ನ…

Thursday, 26.04.2018, 3:04 AM       No Comments

| ದೀಪಾ ಹಿರೇಗುತ್ತಿ

ಈ ಕ್ಷಣವನ್ನು, ಈ ದಿನವನ್ನು ಬದುಕುವುದರಲ್ಲೇ ನಿಜವಾದ ಸಾರ್ಥಕತೆ ಇದೆ. ನೆನ್ನೆಯನ್ನು ಹಳಿಯುತ್ತ, ನಾಳಿನ ಬಗ್ಗೆ ಆತಂಕ ಪಡುತ್ತ ಕೂತರೆ ವರ್ತಮಾನದ ಸುಂದರ ಸಮಯ ಕೈಜಾರಿ ಹೋಗುತ್ತದೆ. ಹಾಗಾಗುವ ಮುನ್ನವೇ ಜೀವನದೊಂದಿಗೆ ಮುಖಾಮುಖಿಯಾಗೋಣ, ಹೊಸ ಸಾಧ್ಯತೆಗಳನ್ನು ಎದುರುಗೊಳ್ಳೋಣ.

ಪ್ರಿಯತಮೆ ತುಂಬ ನಾಚುತ್ತಿದ್ದಾಳೆ. ಅವಳ ಸಂಕೋಚ ಪ್ರಿಯಕರನ ಪ್ರೀತಿಯ ಅಭಿವ್ಯಕ್ತಿಗೆ ಅಡ್ಡಿಯನ್ನುಂಟು ಮಾಡುತ್ತಿದೆ. ‘ನಮಗೆ ಬೇಕಾದಷ್ಟು ಸಮಯವಿದ್ದಿದ್ದರೆ ನಿನ್ನ ಸಂಕೋಚ ದೊಡ್ಡ ಅಪರಾಧವೇನಾಗಿರಲಿಲ್ಲ ಗೆಳತೀ’ ಎನ್ನುತ್ತಾನಾತ. ‘ನಿನ್ನ ಕಣ್ಣುಗಳನ್ನು ವರ್ಣಿಸಲು ನೂರು ವರ್ಷ ಬೇಕು, ಉಳಿದೆಲ್ಲ ಅಂಗಗಳ ಬಗ್ಗೆ ಹೇಳಲು ಇನ್ನೂ ಮೂವತ್ತು ಸಾವಿರ ವರ್ಷ! ಈ ಪರಿಯ ಹೊಗಳಿಕೆ ನಿನಗೆ ಹೆಚ್ಚೇನಲ್ಲ, ಹಾಗೆಯೇ ನನ್ನ ಪ್ರೀತಿಯೂ ಕಡಿಮೆಯೇನಲ್ಲ’ ಎನ್ನುತ್ತಾನೆ ಅವನು. ಆದರೆ ಅವನಿಗೆೆ ಕಾಲನ ನಶ್ವರತೆ ಬಗ್ಗೆ ಗೊತ್ತು. ಸಮಯದ ಹಾರುವ ರಥ ತಮ್ಮನ್ನು ಸಮೀಪಿಸುತ್ತಿರುವ ಸದ್ದನ್ನು ಬೆನ್ನ ಹಿಂದೆಯೇ ಆತ ಕೇಳಬಲ್ಲ. ‘ಅನಂತತೆಯ ಮರಳುಗಾಡಲ್ಲಿ ಸಮಯ ನಮ್ಮನ್ನು ಹೂತುಬಿಡುವ ಮುನ್ನ, ಕಾಪಿಟ್ಟುಕೊಂಡ ನಿನ್ನ ಕನ್ಯತ್ವವನ್ನು ಮಣ್ಣಿನ ಹುಳಗಳು ನಾಶಮಾಡುವ ಮುನ್ನ ಈ ಲಭ್ಯ ಸಮಯದಲ್ಲೇ ಒಂದಾಗೋಣ, ಪ್ರೀತಿಸೋಣ’ ಎಂದಾತ ಹೇಳುತ್ತಾನೆ.

ಹದಿನೇಳನೇ ಶತಮಾನದ ಖ್ಯಾತ ಇಂಗ್ಲಿಷ್ ಕವಿ ಆಂಡ್ರೂ ಮಾರ್ವೆಲ್​ನ ‘ಟು ಹಿಸ್ ಕಾಯ್ ಮಿಸ್ಟ್ರೆಸ್’ ಎಂಬ ಈ ಕವನ ಬಹು ಜನಪ್ರಿಯವಾದದ್ದು. ತರಗತಿಗಳಲ್ಲಿ ಪಠ್ಯವಾಗುತ್ತಲೇ ಇರುವ ಈ ಪದ್ಯದ ಬಗ್ಗೆ ಇಂಗ್ಲಿಷಿಗೆ ಸಂಬಂಧಪಟ್ಟ ಒಂದಲ್ಲ ಒಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಗಳು ಬರುತ್ತಲೇ ಇರುತ್ತವೆ. ಈ ಕವನದ ಬಗ್ಗೆ ಏಕೆ ಪ್ರಸ್ತಾಪಿಸಿದೆನೆಂದರೆ ಇದು ಕಾರ್ಪೆ ಡಿಯೆಮ್​ಇಅಕಉ ಈಐಉM) ಸಿದ್ಧಾಂತಕ್ಕೆ ಸಂಬಂಧಿಸಿದ್ದು. ಇದೊಂದು ಲ್ಯಾಟಿನ್ ನುಡಿಗಟ್ಟು. ಕ್ರಿಸ್ತಪೂರ್ವ 23ನೇ ಶತಮಾನದಲ್ಲಿ ಪ್ರಸಿದ್ಧ ರೋಮನ್ ಕವಿ ಹೊರೇಸ್ ತನ್ನ ಕವನವೊಂದರಲ್ಲಿ ಇದನ್ನು ಬಳಸಿದ್ದ. ಇದರರ್ಥ ದಿನವನ್ನು ಸಮರ್ಪಕವಾಗಿ ಉಪಯೋಗಿಸು, ಆನಂದಿಸು, ಕೈಲಿರುವ ಈ ಕ್ಷಣವನ್ನು ಅನುಭವಿಸು ಎಂದು. ನಾಳೆಯನ್ನು ಸಾಧ್ಯವಾದಷ್ಟು ಕಡಿಮೆ ನಂಬು ಎಂದು ಹೊರೇಸ್ ಹೇಳುತ್ತಾನೆ.

ಬದುಕು ಇನ್ನೆಲ್ಲೂ ಇಲ್ಲ, ಅದು ಈ ಕ್ಷಣ ನಿನ್ನ ಕಣ್ಣೆದುರು ಹಾರುವ ಚಿಟ್ಟೆಯ ರಂಗುರಂಗಿನ ರೆಕ್ಕೆಯಲ್ಲಿದೆ, ಈಗತಾನೇ ನೀನು ಕುಡಿಯಲು ಕೈಗೆತ್ತಿಕೊಂಡಿರುವ ಬಿಸಿಬಿಸಿ ಚಹಾದ ಕಪ್ಪಿನಿಂದ ಹೊರಬರುತ್ತಿರುವ ಹಬೆಯಲ್ಲಿದೆ ಎಂಬ ಅತ್ಯಂತ ಪುಟ್ಟ ಸತ್ಯದಿಂದ ‘ಮಾನವ ಜನ್ಮ ದೊಡ್ಡದು ಅದನು ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ’ ಎಂಬ ವಿಶಾಲಾರ್ಥದ ಮಾತಿನವರೆಗೂ ಕಾರ್ಪೆ ಡಿಯೆಮ್ಮನ್ನು ವಿಸ್ತರಿಸಬಹುದು.

ಈ ಕ್ಷಣದಲ್ಲಿ ಬದುಕುವುದು ಎಂಬುದನ್ನು ಇಂದಿನ ಯುವಜನತೆಗಿಂತ ಚೆನ್ನಾಗಿ ಆದರೆ ತಪ್ಪಾಗಿ ಅರ್ಥ ಮಾಡಿಕೊಂಡವರು ಬೇರೆ ಯಾರೂ ಇಲ್ಲವೇನೋ. ವಯಸ್ಕರು ನಿನ್ನೆಗಳನ್ನು ನೆನೆಯುತ್ತ ನಾಳೆಗಳಿಗಾಗಿ ಹೆದರುತ್ತ ವರ್ತಮಾನವನ್ನು ಕಳೆಯುತ್ತಿದ್ದರೆ ಇಂದಿನ ದಿನವನ್ನು ಕಠಿಣ ಪರಿಶ್ರಮದ ಮೂಲಕ ಸದುಪಯೋಗಪಡಿಸಿಕೊಂಡು ಬಾಳನ್ನು ಬಂಗಾರವಾಗಿಸಿಕೊಳ್ಳಬೇಕಾದ ವಿದ್ಯಾರ್ಥಿ ಸಮೂಹ ಮೊಬೈಲು, ಯೂಟ್ಯೂಬು, ಪಾರ್ಟಿ, ಐಪಿಎಲ್, ಮೇಕಪ್ಪುಗಳ ಕೊನೆಯಿರದ ರಂಗೀನ್ ದುನಿಯಾದಲ್ಲಿ ತನ್ನನ್ನ ತಾನು ಕಳೆದುಕೊಳ್ಳುತ್ತಿದೆ. ತನ್ನ ಪ್ರಮುಖ ಗುರಿಯನ್ನೇ ಮರೆತಿದೆ! ಕಾರ್ಪೆ ಡಿಯೆಮ್ಮನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದೆಂದರೆ ಇದೇನೆ!

ಇದೇ ಅರ್ಥ ಕೊಡುವ ಪದವೊಂದು ಈಗ ಆಡುಮಾತಿನಲ್ಲಿ ಸೇರಿಕೊಳ್ಳುತ್ತಿದೆ. ಅದೇ ಯೋಲೋ (ಣಔಣ ್ಗ್ಠ ಣ್ಞ್ಝ ಔಜಿಡಛಿ ಣ್ಞ್ಚ)! ನೀನು ಬದುಕಿರುವುದು ಒಂದೇ ಸಲ ಎಂಬುದು ಇದರರ್ಥ. ಈ ಪದ ನಮಗೆ ಹೊಸದೆನಿಸಿದರೂ ಪರಿಕಲ್ಪನೆ ನಮಗೆ ಹೊಸತೇನಲ್ಲ. ಅಪರೂಪಕ್ಕೆ ಗುಂಡು ಹಾಕುವವರನ್ನು ಹಿಡಿದು ಸಾಲಸೋಲ ಮಾಡಿ ಮಗಳ ಮದುವೆ ಮಾಡುವವರವರೆಗೆ ಎಲ್ಲರೂ ಅಯ್ಯೋ ಎಷ್ಟು ದಿನ ಬದುಕಿರ್ತೀವಿ, ಧಾಂಧೂಂ ಮಾಡಿಬಿಡೋಣ ಎನ್ನುವವರೇ! ಅತ್ಯಂತ ಅಪಾಯಕಾರಿ ಸಾಹಸ, ಅಪರಾಧ ಮಾಡಹೊರಡುವವರೂ ಇದೇ ನೆಪವನ್ನು ಬೆನ್ನಿಗಿಟ್ಟುಕೊಂಡಿರುತ್ತಾರೆ.

ಮತ್ತೂ ಮಜವೆಂದರೆ ಈ ಸಿದ್ಧಾಂತವನ್ನು ಕೊಳ್ಳುಬಾಕ ಸಂಸ್ಕೃತಿ ತನ್ನ ತೆಕ್ಕೆಗೆ ಎಳೆದುಕೊಂಡು ಬಿಟ್ಟಿದೆ. ಇದು ಬಹು ಅಪಾಯಕಾರಿ. ನಾಳೆಯನ್ನು ಬಲ್ಲವರಾರು, ಸಾವು ಬೆನ್ನ ಹಿಂದೆಯೇ ಇದೆ, ಇವತ್ತಿನ ದಿನವನ್ನು ಅನುಭವಿಸೋಣ ಎಂಬುದು ಜನರ ಅಭಿಪ್ರಾಯ ತಾನೇ? ಆದರೆ ಹೇಗೆ? ಹೇಗೆಂದರೆ ಶಾಪಿಂಗ್ ಹೋಗುವ ಮೂಲಕ ಎಂಬ ಮನೋಭಾವವನ್ನು ಕಂಪನಿಗಳು ಟಿವಿ ಮೂಲಕ ಹುಟ್ಟುಹಾಕಿವೆ! ಬೆಂಗಳೂರಲ್ಲಿ ನೆಲೆಸಿರುವ ನನ್ನ ಸ್ನೇಹಿತೆಯೊಬ್ಬಳ ನೆರೆಮನೆಯಾಕೆಯ ಪ್ರತಿದಿನದ ಕೆಲಸವೆಂದರೆ ಮಾಲ್ ತಿರುಗುವುದು. ಬೆಳಗಿನ ತಿಂಡಿಗೇ ಮಕ್ಕಳಿಗೆ ಬ್ರೆಡ್ ಬಿಸ್ಕತ್ತು ಕೊಟ್ಟು ಕೈಲೊಂದು ಚಾಕಲೇಟು ಹಿಡಿಸಿ ಅವರನ್ನೂ ಕಟ್ಟಿಕೊಂಡು ಕಂಡ ಕಂಡ ಮಾಲ್​ಗಳನ್ನು ಸುತ್ತುತ್ತ ಇರುವುದು! ವಾರದಲ್ಲಿ ಕನಿಷ್ಠ ಐದು ದಿನ ಹೋಗದಿದ್ದರೆ ಅವರಿಗೆ ತಿಂದ ಅನ್ನ ಕರಗುವುದಿಲ್ಲ! ಯಾವ ಮಾಲ್​ನಲ್ಲಿ ಯಾವ ಆಫರ್ ಇದೆ, ಯಾವ ಏರಿಯಾದಲ್ಲಿ ಏನು ಸೇಲ್ ಇದೆ ಎಂಬ ಎಲ್ಲ ಮಾಹಿತಿ ಅವರ ಹತ್ತಿರ ಇರುತ್ತದೆ!

ವಾರದ ಐದು, ಆರು ದಿನ ಕೆಲಸ ಮಾಡುವುದೆಂದರೆ ರೌರವ ನರಕದೊಳಗೆ ಹೋಗಿಬಂದಂತೆ ಎಂಬ ಅಭಿಪ್ರಾಯವನ್ನು ವಿಭಿನ್ನ ಬಗೆಯಲ್ಲಿ ನಮ್ಮ ಮಿದುಳಿನಲ್ಲಿ ತುಂಬುವುದಕ್ಕೆ ಕಾರಣವೇನು ಗೊತ್ತೇ? ಕೆಲಸವೆಂದರೆ ಒತ್ತಡ, ಅದರಿಂದ ಪಾರಾಗಲು ವೀಕೆಂಡ್​ನಲ್ಲಿ ಹೊರಗಡೆ ಹೋಗುವುದು, ತಿನ್ನುವುದು, ಷಾಪಿಂಗ್ ಮಾಡುವುದು ಅನಿವಾರ್ಯವೆಂಬ ಭಾವನೆ ಮೂಡಿಸಲು! ಅಲ್ಲ, ಕೋಟ್ಯಂತರ ಮಂದಿ ಕೆಲಸವಿಲ್ಲದೆ ಒದ್ದಾಡುವಾಗ ಕೆಲಸವಿರುವ ನಾವೇ ಪುಣ್ಯವಂತರೆಂದುಕೊಂಡು ಖುಷಿಯಿಂದ ಕಚೇರಿಗೆ ಹೋಗುವ ಬದಲು ಅದನ್ನು ಒತ್ತಡ ಎಂದುಕೊಳ್ಳುವವರು ಮೂರ್ಖರಲ್ಲವೇ? ಸಿಗುವ ವಾರಾಂತ್ಯದ ರಜೆಯನ್ನು ಆರಾಮಾಗಿ ನಮ್ಮ ಕೆಲಸ ಮಾಡಿಕೊಳ್ಳುತ್ತ ಕುಟುಂಬದೊಂದಿಗೆ ಮನೆಯಲ್ಲಿ ಕಳೆಯುವುದು ಎಷ್ಟು ರಿಲಾಕ್ಸಿಂಗ್ ಅಲ್ಲವೇ? ಆದರೆ ಈ ರೀತಿ ಅಂದುಕೊಳ್ಳಲು ನಮ್ಮನ್ನು ನಿಯಂತ್ರಿಸುತ್ತಿರುವ ವರ್ಚುವಲ್ ಜಗತ್ತು ಬಿಡುವುದೇ ಇಲ್ಲ. ಫೇಸ್​ಬುಕ್, ವಾಟ್ಸ್​ಆಪ್, ಟಿವಿ ಇವೆಲ್ಲವುಗಳ ಮೂಲಕ ನೆಮ್ಮದಿ ಎಂದರೆ ಇದೇ, ವಿಶ್ರಾಂತಿ ಎಂದರೆ ಹೀಗೇ ಎಂಬ ಸುಳ್ಳು ನಂಬಿಕೆಗಳನ್ನು ನಮ್ಮ ಮೇಲೆ ದಿನದಿನವೂ ಹೇರಲಾಗುತ್ತಿದೆ. ಶನಿವಾರವೆಂದರೆ ನಗುವ, ಸೋಮವಾರವೆಂದರೆ ಅಳುವ ಮುದ್ದು ಮಗುವಿನ ಚಿತ್ರ ನಿಮ್ಮ ಮೊಬೈಲ್​ಗೆ ಬಂದಿದೆ ತಾನೇ? ಈ ಚಿತ್ರವೂ ಒಂದು ದೊಡ್ಡ ಯೋಜನೆಯ ಭಾಗವೇ!

ಮತ್ತು ಟಿವಿ ಮುಂದೆ ಆರಾಮಾಗಿ ಕೂತು ಕುರುಕಲು ತಿಂಡಿ ತಿನ್ನುತ್ತ ರಿಮೋಟ್ ಕೈಯ್ಯಲ್ಲಿ ಹಿಡಿದು ನಿಮಿಷಕ್ಕೆ ನೂರು ಚಾನೆಲ್ ಬದಲಾಯಿಸುವುದು ಹೇಗೂ ಜೀವನವನ್ನು ಎಂಜಾಯ್ ಮಾಡುವುದೆಂದು ಎಲ್ಲರೂ ತಪ್ಪು ತಿಳಿದುಕೊಂಡು ಆಗಿಬಿಟ್ಟಿದೆ! ಸಮಯ ಸಿಕ್ಕಾಗಲೆಲ್ಲ ಟಿವಿಯ ಮುಂದೆ ಕೂರುವವರು, ಟಿವಿ ಮುಂದೆ ಕೂರಲೆಂದೇ ಅವಶ್ಯಕ ಕೆಲಸವನ್ನು ಬಿಟ್ಟು ಸಮಯ ಮಾಡಿಕೊಳ್ಳುವವರು ಒಟ್ಟಿನಲ್ಲಿ ಮೂರ್ಖರ ಪೆಟ್ಟಿಗೆಗೆ ದಾಸರಾಗಿರುವವರ ಸಂಖ್ಯೆ ಬಹಳ ದೊಡ್ಡದು.

ಇತ್ತೀಚೆಗೆ ವಾಟ್ಸ್​ಆಪ್​ನಲ್ಲಿ ಬಂದ ಚಿತ್ರವೊಂದು ಗಮನ ಸೆಳೆಯಿತು. ಅದು ಬಿಜೆಪಿ, ಕಾಂಗ್ರೆಸ್, ಆಪ್ ಪಕ್ಷಗಳ ವಕ್ತಾರೆಯರು ಒಟ್ಟಿಗೆ ಕತಾರ್​ನಲ್ಲಿ ರಜೆಯ ಮಜಾ ಅನುಭವಿಸುತ್ತಿರುವ ಚಿತ್ರ. ಯಾರಿಗಾದರೂ ಆಶ್ಚರ್ಯ ಸಹಜವೇ. ದೂರದರ್ಶನದ ಚರ್ಚೆಗಳಲ್ಲಿ ಹಾವು-ಮುಂಗುಸಿಗಳಂತೆ ಕಿತ್ತಾಡುವವರು ಸ್ವಂತ ಅಕ್ಕ-ತಂಗಿಯರಂತೆ ಪ್ರವಾಸ ಹೋಗಿದ್ದಾರೆ! ವೇದಿಕೆಯ ಮೇಲೆ ಒಬ್ಬರನ್ನೊಬ್ಬರು ಅತ್ಯಂತ ಕೀಳಾಗಿ ಬೈದುಕೊಳ್ಳುವ ನಮ್ಮ ರಾಜಕಾರಣಿಗಳೂ ಒಂದಲ್ಲ ಒಂದು ಸಮಯದಲ್ಲಿ ಜತೆಯಾಗಿರುತ್ತಾರೆ, ಮಾಧ್ಯಮಗಳಿಗೆ ಫೋಟೋ ಪೋಸು ಕೊಡುತ್ತಾರೆ. ಆದರೆ ನಾವು ನೀವು ಮಾತ್ರ ಇವರ ಚರ್ಚೆಗಳನ್ನು, ಭಾಷಣಗಳನ್ನು ನೋಡಿ, ಕೇಳಿ ವಾಟ್ಸ್​ಆಪ್ ಫೇಸ್ಬುಕ್​ಗಳಲ್ಲಿ ಶೇರ್ ಮಾಡುತ್ತ ಪರಸ್ಪರ ಕಿತ್ತಾಡುತ್ತ ವಿಷ ಕಾರುತ್ತಿರುತ್ತೇವೆ. ನಮ್ಮ ಜಗಳಕ್ಕೆ ಕಾರಣರಾದವರು ಮಾತ್ರ ಸದ್ದೇ ಇಲ್ಲದೆ ತಮ್ಮ ಭತ್ಯೆಯನ್ನು ಮುನ್ನೂರು ಪಟ್ಟು ಹೆಚ್ಚಿಸಿಕೊಂಡು ಒಟ್ಟಿಗೆ ಸಂಭ್ರಮಾಚರಣೆ ಮಾಡುತ್ತಿರುತ್ತಾರೆ.

ಕೈಲಿರುವ ಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳುವುದನ್ನು ಕಲಿಯುವುದು ಎಂದರೆ ಬರೀ ತಿನ್ನುವುದು, ತಿರುಗುವುದು, ಮಜಾ ಮಾಡುವುದು ಮಾತ್ರವಲ್ಲ. ಸಾವಿರ ಹೆಜ್ಜೆಗಳ ಪಯಣ ಮೊದಲ ಹೆಜ್ಜೆಯಿಟ್ಟರೆ ಮಾತ್ರ ಪ್ರಾರಂಭವಾಗುವಂತೆ ದೊಡ್ಡ ಗುರಿಯೊಂದನ್ನು ಆರಂಭಿಸಲು ಈ ಕ್ಷಣವೇ ಅತ್ಯುತ್ತಮವಲ್ಲವೇ? ಹಳೆಯದನ್ನು ಮರೆತು ಹೊಸ ಬದುಕು ಆರಂಭಿಸಲು ಈ ದಿನಕ್ಕಿಂತ ಒಳ್ಳೆಯ ದಿನ ಇನ್ಯಾವುದಿದೆ? ನಿತ್ಯ ಚಲನಶೀಲವಾಗಿರುವ ಜಗತ್ತಿನಲ್ಲಿ ನೋವು-ದುಃಖಗಳ ಹೊರೆಯನ್ನು ಇಳಿಸಿ ನಮ್ಮಿಂದ ಬದಲಾಯಿಸಲಾಗದ ಸಂಗತಿಗಳನ್ನು ಅಲ್ಲಿಯೇ ಬಿಟ್ಟು ಒಂದು ದೀರ್ಘ ಉಸಿರೆಳೆದುಕೊಂಡು ಹೊಸ ಭರವಸೆಯೊಂದಿಗೆ ಮುನ್ನಡೆಯಲು ಈ ಸಮಯವೇ ಒಳ್ಳೆಯದಲ್ಲವೇ? ಅಷ್ಟೇ ಅಲ್ಲ, ಮಾಡುವ ಕೆಲಸದಲ್ಲಿ ನಮ್ಮ ಮನಸ್ಸನ್ನು ಪೂರ್ತಿಯಾಗಿ ತೊಡಗಿಸುವುದು ಕೂಡ ಆ ಕ್ಷಣವನ್ನು ಸಮರ್ಪಕವಾಗಿ ಬಳಸಿಕೊಂಡಂತೆಯೇ! ಈ ಕ್ಷಣವೆಂದರೆ ಬದುಕಿನ ನಶ್ವರತೆಯನ್ನೂ ಅಪಾರ ಸಾಧ್ಯತೆಗಳನ್ನು ಒಟ್ಟಿಗೇ ಧ್ವನಿಸುವ ವಿಶಿಷ್ಟ ಸಮಯ. ಅದನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆನ್ನುವುದೇ ನಮ್ಮ ಬದುಕನ್ನು ನಿರ್ದೇಶಿಸುವ ಸಂಗತಿ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

Leave a Reply

Your email address will not be published. Required fields are marked *

Back To Top