Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಸ್ನೇಹವು ಭಾವನೆಗೆ ಸಂಕೋಲೆಯಾಗದೆ ಸೇತುವೆಯಾಗಲಿ

Thursday, 07.06.2018, 3:04 AM       No Comments

ಸ್ನೇಹ ಅಮೂಲ್ಯ ಆಸ್ತಿ ನಿಜ. ಒಂಟಿತನವನ್ನು ಇಲ್ಲವಾಗಿಸಿ ಸಂತಸ ಹೆಚ್ಚಿಸುವ ಇದು ಭಾವನೆಗಳ ವಿನಿಮಯಕ್ಕೂ ಸೇತುವೆ. ಆದರೆ, ವೈಯಕ್ತಿಕ ಸ್ವಾತಂತ್ರ್ಯ, ಭಿನ್ನಾಭಿಪ್ರಾಯ ಗೌರವಿಸುವ ಮನೋಭಾವ ಇದ್ದಾಗ ಮಾತ್ರ ಸ್ನೇಹವಾಗಲಿ, ಪ್ರೇಮವಾಗಲಿ ಬಹುಕಾಲ ಬದುಕಬಲ್ಲದು ಎಂಬುದನ್ನು ಮರೆಯಬಾರದು.

ಳನೇ ತರಗತಿಯಲ್ಲಿ ಓದುತ್ತಿರುವ ನನ್ನ ಸ್ನೇಹಿತೆಯೊಬ್ಬಳ ಮಗಳು ಮಾರ್ಚ್ ತಿಂಗಳ ಒಂದು ದಿನ ತುಂಬ ಬೇಸರದಿಂದ ಮನೆಗೆ ಬಂದಳಂತೆ. ಲವಲವಿಕೆಯಿಂದಿರುವ ಹುಡುಗಿ ಆಕೆ. ಅಪ್ಪಅಮ್ಮನಿಗೆ ದಿಗಿಲು. ಏನಾಯಿತು ಎಂದು ವಿಚಾರಿಸಲು ಹೊರಟರೆ ಅಳು. ಕೊನೆಗೆ ತಿಳಿದದ್ದು ಇಷ್ಟು. ಅವಳ ಕ್ಲಾಸಿನಲ್ಲಿ ಅವಳ ಬೆಸ್ಟ್ ಫ್ರೆಂಡ್ ಒಬ್ಬಳಿದ್ದಳಂತೆ. ಎಷ್ಟು ಆಪ್ತ ಸ್ನೇಹಿತೆಯೆಂದರೆ ತರಗತಿಯಲ್ಲಿ ಕೂರುವುದು, ತಿರುಗಾಡುವುದು, ಊಟ ಮಾಡುವುದು ಎಲ್ಲ ಒಟ್ಟಿಗೇ! ಹೀಗೆ ಇವರ ಸ್ನೇಹಲೋಕ ನಳನಳಿಸುತ್ತಿರುವಾಗ ಅವತ್ತು ಮಧ್ಯಾಹ್ನದ ಊಟದ ಬಿಡುವಿನ ಒಂದು ದುರದೃಷ್ಟಕರ ಗಳಿಗೆಯಲ್ಲಿ ಆಕೆ ಇವಳ ಹತ್ತಿರ ಬಂದು, ‘ನೋಡು, ನಾವಿವತ್ತಿಂದ ಬೆಸ್ಟ್ ಫ್ರೆಂಡ್ಸ್ ಆಗಿರೋದು ಬೇಡ, ಜಸ್ಟ್ ಫ್ರೆಂಡ್ಸ್ ಆಗಿರೋಣ’ ಎಂದಳಂತೆ. ಇವಳಿಗೆ ಏನೂ ಅರ್ಥವಾಗದೇ ‘ಹಾಗಂದ್ರೆ ಏನು’ ಎಂದು ಕೇಳಿದ್ದಾಳೆ. ಅದಕ್ಕೆ ಅವಳು-‘ನೋಡು, ಬೆಸ್ಟ್ ಫ್ರೆಂಡ್ ಆದರೆ ನನಗೂ ತೊಂದರೆ ನಿನಗೂ ತೊಂದರೆ. ಜೊತೆಗೇ ಕೂರಬೇಕು, ಊಟ ಮಾಡಬೇಕು, ಎಲ್ಲವನ್ನೂ ನಿನಗೆ ಹೇಳಬೇಕು, ನಾನು ಇನ್ನೊಬ್ಬಳ ಜತೆ ಹೋದರೆ ನಿನಗೆ ಬೇಜಾರು, ನೀನು ಮತ್ತೊಬ್ಬಳ ಹತ್ತಿರ ನಗುನಗುತ್ತ ಮಾತಾಡಿದ್ರೆ ನಂಗೆ ಬೇಜಾರು. ಇವೆಲ್ಲ ಬೇಡ ಅಲ್ವಾ? ಯಾರು ಯಾರ ಹತ್ತಿರ ಬೇಕಾದರೂ ಮಾತಾಡಬಹುದು, ಯಾರು ಯಾರಿಗೂ ವರದಿ ಒಪ್ಪಿಸಬೇಕಾಗಿಲ್ಲ. ತಲೆಬಿಸಿ ಇಲ್ಲದೇ ಆರಾಮಾಗಿರಬಹುದಲ್ಲ’ ಎಂದಳಂತೆ!! ಎರಡು ದಿನ ಮುಖ ಸಪ್ಪಗೆ ಮಾಡಿಕೊಂಡಿದ್ದ ಇವಳೂ ಈಗ ‘ಹೌದಮ್ಮ, ಅವಳು ಹೇಳಿದ್ದೇ ಸರಿ ಜಸ್ಟ್ ಫ್ರೆಂಡ್ಸ್ ಆಗಿದ್ರೆ ರಗಳೆ ಇಲ್ಲ’ ಎನ್ನಲು ಶುರು ಮಾಡಿದ್ದಾಳಂತೆ!

ಈ ಘಟನೆಯನ್ನು ಕೇಳಿ ಒಂದುಕ್ಷಣ ದಂಗಾದೆ. ನಮ್ಮಂತಹವರೇ ಯೋಚನೆ ಮಾಡದಿದ್ದ ಈ ಸಂಗತಿಗಳು ನಮ್ಮ ಲೆಕ್ಕದಲ್ಲಿ ‘ಏನೂ ಅರಿಯದ’ ಈ ಕಂದಮ್ಮಗಳಿಗೆ ಹೊಳೆದದ್ದು ಹೇಗೆ ಎಂಬ ಯೋಚನೆಯಲ್ಲಿ ಬಿದ್ದೆ. ಆ ಕ್ಷಣ ಅಬ್ಬ ಎನಿಸಿದರೂ ಸಂಜೆಯಿಡೀ ಆ ಹುಡುಗಿಯ ಮಾತು ಕಾಡುತ್ತಿತ್ತು. ಅರೇ, ಯಾವ ವ್ಯಕ್ತಿತ್ವ ವಿಕಸನ ಗುರುಗಳಿಗೂ ಸರಳವಾಗಿ ತಿಳಿಸಲು ಕಷ್ಟವಾಗುವ ಈ ಸ್ನೇಹದ ಪರಿಧಿಯನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳಲ್ಲ ಆ ಬಾಲಕಿ ಎಂದು ಆಶ್ಚರ್ಯವೂ ಆಯಿತು.

‘ಸ್ನೇಹ ಅತಿ ಮಧುರ ಸ್ನೇಹ ಅದು ಅಮರ’ ಎಂಬ ಕವಿವಾಣಿ ಸತ್ಯವೇ. ರಕ್ತಸಂಬಂಧಗಳಂತೆ ಒಂದಾಗಿ ಬೆರೆತಿರುವ ಸ್ನೇಹದ ಕತೆಗಳಿವೆ. ರಕ್ತಸಂಬಂಧವನ್ನೂ ಮೀರಿದ ಸ್ನೇಹದ ಉದಾಹರಣೆಗಳಿವೆ. ಅಪರಿಚಿತ ಜನಜಂಗುಳಿಯಲ್ಲಿ ಕಂಡ ಪರಿಚಿತ ಮುಖವೊಂದು ನೀಡುವ ಸಮಾಧಾನ ತರುವ ನೆಮ್ಮದಿಯೇ ಸ್ನೇಹ. ಸಂತಸವನ್ನು ಇಮ್ಮಡಿಗೊಳಿಸುವ ಸ್ನೇಹ ನೋವಿನ ಹೊರೆಯನ್ನು ಹಗುರಗೊಳಿಸುತ್ತದೆ. ಒಬ್ಬಂಟಿಯಾಗಿ ಈ ಹುಟ್ಟು, ಬದುಕು ಸಾವಿನ ಪರಿಧಿಯನ್ನು ಪಯಣಿಸುವ ನಮಗೆ ಏಕಾಂಗಿತನದ ಅರಿವು ಬಾರದಂತೆ ಮಾಡುವಂಥವು ಸ್ನೇಹ ಮತ್ತು ಪ್ರೇಮದ ಸಂಬಂಧಗಳು. ನಾವು ಪಡೆಯಬಹುದಾದ, ಕೊಡಬಹುದಾದ ಬಲು ದುಬಾರಿ ಉಡುಗೊರೆ ಸ್ನೇಹ. ಹಾಗಾಗಿ ಸ್ನೇಹದಂತಹ ಸಂಗತಿ ನಾವೆಣಿಸಿದಷ್ಟು ಸರಳವಲ್ಲ. ಎಲ್ಲ ಶಾಶ್ವತ ಸಂಗತಿಗಳಿಗೂ ಅದರದ್ದೇ ಆದ ಬೆಲೆ ಇರುತ್ತದೆ. ಅಷ್ಟು ಸುಲಭವಾಗಿ ಯಾವ ವ್ಯಕ್ತಿಯೂ, ಯಾವ ಸಂಗತಿಯೂ ಅಮರವಾಗುವುದು ಸಾಧ್ಯವಿಲ್ಲ. ಸ್ನೇಹವೂ ಅಷ್ಟೇ. ಅದಕ್ಕೆ ಅದರದ್ದೇ ಆದ ಸೀಮಾರೇಖೆಯಿದೆ, ಮಿತಿಯಿದೆ.

ಸ್ನೇಹದ ಬಹುದೊಡ್ಡ ಅವಶ್ಯಕತೆ ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದು. ಸಂಕಷ್ಟ ಕಾಲದಲ್ಲೂ ಜತೆಯಾಗಿ ನಿಲ್ಲುವುದು. ಆಪ್ತ ಸ್ನೇಹಿತರೆಂದು ಹೇಳಿಕೊಳ್ಳುವವರು ಖುಷಿಯ ಗಳಿಗೆಗಳಲ್ಲಿ ಸೆಲ್ಪಿ ತೆಗೆದುಕೊಂಡು ಫೇಸ್​ಬುಕ್​ನಲ್ಲಿ ಹಾಕಿ ಸಂಭ್ರಮಿಸುವುದು ಸ್ನೇಹದ ಒಂದು ಭಾಗವಷ್ಟೇ. ನೈಜ ಸ್ನೇಹ ಎಂದರೆ ಅಷ್ಟೇ ಅಲ್ಲ. ನಿಜವಾದ ಗೆಳೆಯ ನಮ್ಮ ಸೋಲಿನಲ್ಲಿ ಜತೆಗಿರಬೇಕು ಅಷ್ಟೇ ಅಲ್ಲ, ನಮ್ಮ ಯಶಸ್ಸನ್ನೂ ಸಹಿಸಿಕೊಳ್ಳಬೇಕು ಎಂಬ ಮಾತು ಬಲು ಅರ್ಥಪೂರ್ಣ. ಯೂರಿಪಿಡಿಸ್ ಹೇಳಿದಂತೆ ಒಬ್ಬ ನಿಷ್ಠ ಸ್ನೇಹಿತ ಹತ್ತು ಸಾವಿರ ಸಂಬಂಧಿಗಳಿಗೆ ಸಮವಂತೆ. ಇಂತಹ ನಿಜವಾದ ಸ್ನೇಹ ಪಡೆಯುವುದಕ್ಕಿಂತ ಅದೃಷ್ಟ ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲ ಎಂದಾದರೆ ಅದು ಕಷ್ಟವೇ. ಈ ಕಾರಣಕ್ಕೇ ಒಂದು ಅತ್ಯುತ್ತಮ ಸ್ನೇಹವನ್ನು ಯಾವಾಗಲೂ ಲಾವಣಿಗಳಲ್ಲಿ ಹಾಡಿಹೊಗಳಲಾಗುತ್ತದೆ. ಕರ್ಣ-ದುರ್ಯೋಧನರ, ಕೃಷ್ಣ-ಕುಚೇಲರ ಕಥೆಯನ್ನೇ ಇಂದಿಗೂ ನಾವು ಪದೇಪದೆ ಸ್ನೇಹದ ಉದಾಹರಣೆಯಾಗಿ ಕೊಡುವುದರ ಕಾರಣವೂ ಅದೇ.

ಬಿಡಿ, ಸ್ನೇಹದ ಬಗ್ಗೆ ಬೇಕಾದಷ್ಟು ಬರೆಯುತ್ತ ಹೋಗಬಹುದು. ಆದರೆ ನಾನು ಈ ಸಲ ಈ ಬಗ್ಗೆ ಬರೆಯಲು ಕಾರಣ ಆ ಹುಡುಗಿಯ ಮಾತು. ಸ್ನೇಹದಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಎಷ್ಟು ಮುಖ್ಯವೆಂಬುದನ್ನು ಆಕೆ ಅರ್ಥಮಾಡಿಕೊಂಡಿರುವ ಹಾಗೆ ಎಲ್ಲರೂ ಅರ್ಥ ಮಾಡಿಕೊಂಡಿದ್ದರೆ ಯಾವ ಸ್ನೇಹವೂ ಹಾಳಾಗುತ್ತಿರಲಿಲ್ಲ, ಯಾವ ಹೃದಯವೂ ಒಡೆಯುತ್ತಿರಲಿಲ್ಲ. ನಿಜವಾದ ಸ್ನೇಹಿತ/ತೆ ಎಂದರೆ ನಮ್ಮನ್ನು ನಮ್ಮಷ್ಟಕ್ಕೇ ಇರುವಂತಹ ಪೂರ್ತಿ ಸ್ವಾತಂತ್ರ್ಯ ಕೊಡುವವನು/ಳು! ಏಕೆಂದರೆ ಮನುಷ್ಯನ ನೆಮ್ಮದಿಯ ಮೂಲಸೆಲೆ ಇರುವುದೇ ಸ್ವಾತಂತ್ರ್ಯದಲ್ಲಿ. ಅದನ್ನು ಕಸಿದುಕೊಳ್ಳುವ ಯಾವ ಸಂಬಂಧವೂ ಬಹುಕಾಲ ಬಾಳಲಾರದು. ಅದು ರಕ್ತಸಂಬಂಧವಿರಬಹುದು, ದಾಂಪತ್ಯವಿರಬಹುದು ಅಥವಾ ಸ್ನೇಹವೇ ಇರಬಹುದು. ನೀವು ಯಾವುದೇ ವಿಚ್ಛೇದನದ ಕೇಸನ್ನೇ ನೋಡಿ, ವೈಯಕ್ತಿಕ ಸ್ವಾತಂತ್ರ್ಯವನ್ನು ಮಟ್ಟಹಾಕಲೆತ್ನಿಸುವ ಸಂಗಾತಿಯದ್ದೇ ದೂರು ಎಲ್ಲದರಲ್ಲೂ!

ಇಲ್ಲೂ ಒಂದು ತಮಾಷೆಯಿದೆ. ವೈಯಕ್ತಿಕ ಸ್ವಾತಂತ್ರ್ಯವನ್ನು ನಾವು ಕಳೆದುಕೊಳ್ಳುವುದು ಅಥವಾ ಬೇರೆಯವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿರುವುದು ಮೊದಮೊದಲು ನಮ್ಮ ಅರಿವಿಗೇ ಬರುವುದಿಲ್ಲ! ನಾವು ಇಡುವ ಪ್ರತೀ ಹೆಜ್ಜೆಯ ಬಗ್ಗೆಯೂ ಪ್ರಶ್ನಿಸಲ್ಪಡುವುದು, ಪ್ರತೀ ಹೆಜ್ಜೆಯನ್ನೂ ಮತ್ತೊಬ್ಬರಿಗೆ ವಿವರಿಸುವುದು ಮೊದಮೊದಲು ತುಂಬ ಚೆನ್ನಾಗಿಯೇ ಕಾಣುತ್ತದೆ. ಪ್ರೀತಿಯ ಆರಂಭದ ದಿನಗಳಲ್ಲಿ ಅದು ಪ್ರೇಮದ ಉತ್ಕಟತೆಯಂತೆಯೇ ಅನಿಸುತ್ತದೆ. ಸ್ನೇಹದ ಮೊದಲ ದಿನಗಳಲ್ಲಿ ಅದು ‘ಆಹಾ, ಎಂತಹ ಕಾಳಜಿಯ ಸ್ನೇಹಿತ’ ಎನಿಸುವಂತೆ ಮಾಡುತ್ತದೆ. ಪೊಸೆಸಿವ್​ನೆಸ್​ಗೂ, ಕಾಳಜಿಗೂ ಇರುವ ತೆಳುಗೆರೆಯನ್ನು ಅಳಿಸಿಹಾಕಿದವರ ಪಾಡು ದೇವರಿಗೇ ಪ್ರೀತಿ. ಹೊಟ್ಟೆಗಿಲ್ಲದ ಹಕ್ಕಿಯನ್ನು ಪಂಜರದಲ್ಲಿ ಹಾಕಿ ಆಹಾರ ಕೊಟ್ಟರೆ ಮೊದಲ ಕೆಲವು ದಿನ ಅದು ಆರಾಮಾಗಿಯೇ ಇರುವ ಹಾಗೆ ಮೊದಮೊದಲು ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ದಿನಗಳೆದಂತೆ ಚಿನ್ನದ ಪಂಜರವೂ ಬೇಸರವಾಗಿ ಕಾಡಿನ ಸ್ವಚ್ಛಂದ ಗಾಳಿಗೆ ಹಕ್ಕಿ ಹಾತೊರೆಯುತ್ತದೆ. ಸ್ನೇಹವೂ ಹಾಗೆಯೇ! ಅತ್ಯುತ್ತಮ ಸ್ನೇಹದ ಬಗ್ಗೆ ಬಹಳ ತಪ್ಪು ಕಲ್ಪನೆಗಳಿವೆ. ಪ್ರೇಮಕ್ಕಿರುವಂತೆಯೇ! ಪ್ರತೀ ವಿಷಯವನ್ನೂ ಪರಸ್ಪರರಿಗೆ ಹೇಳಬೇಕು, ಇನ್ನೊಬ್ಬರೊಂದಿಗೆ ಸಲುಗೆಯಿಂದಿರಬಾರದು… ಹೀಗೆಯೇ ಹತ್ತು ಹಲವು ಕಟ್ಟಳೆಗಳು. ಈ ತಪ್ಪುಕಲ್ಪನೆಗಳಿಂದ ಅದನ್ನು ನಿಭಾಯಿಸುವುದು ಕಷ್ಟವಾಗಿ ಸ್ನೇಹವನ್ನು ಸಂಕೋಲೆಯನ್ನಾಗಿಸಿಕೊಳ್ಳುವವರೇ ಬಹಳ ಮಂದಿ.

ಸ್ನೇಹಿತರು ಅಮೂಲ್ಯ ಆಸ್ತಿ ನಿಜ. ಆದರೆ ಆ ಆಸ್ತಿ ನಮ್ಮೊಬ್ಬರದು ಮಾತ್ರ ಎಂದು ತಿಳಿದು ಅದನ್ನು ಕಾಪಾಡಿಕೊಳ್ಳುತ್ತೇವೆ ಎಂದು ಅವರ ಸ್ವಾತಂತ್ರ್ಯವನ್ನೇ ಹರಣಗೊಳಿಸುವುದಿದೆಯಲ್ಲ, ಅದು ಮೂರ್ಖತನ. ಎಲ್ಲರಿಗೂ ಅವರವರ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವಲ್ಲಿ ಸ್ವಾತಂತ್ರ್ಯವಿರಬೇಕು. ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳುವಲ್ಲಿ ಸ್ವಾತಂತ್ರ್ಯವಿರಬೇಕು. ಆಹಾರ, ಅಭಿರುಚಿ, ವಿಚಾರಧಾರೆ ಎಲ್ಲವೂ ಭಿನ್ನವಾಗಿದ್ದರೂ ಅದರ ಬಗ್ಗೆ ಗೌರವವಿರಬೇಕು. ನಮ್ಮ ಸ್ನೇಹಿತರ ಸ್ನೇಹಿತ ನಮಗೆ ಆಗದವನಿರಬಹುದು, ಆಗ ಕೋಪ ಮಾಡಿಕೊಂಡು ನಮ್ಮ ಸ್ನೇಹಿತರನ್ನು ಇಕ್ಕಟ್ಟಿಗೆ ಸಿಲುಕಿಸಬಾರದು. ತನ್ನ ಸ್ನೇಹಿತ ಬೇರೆಯವರೊಂದಿಗೆ ಸ್ನೇಹ ಬೆಳೆಸಿದರೆ ಅಸೂಯೆಯಿಂದ ನಿದ್ದೆಗೆಡುವವರಿದ್ದಾರೆ. ಅದು ಮೂರ್ಖತನದ ಪರಮಾವಧಿ. ಈ ಅಸೂಯೆ ಸ್ನೇಹವನ್ನೇ ಹಾಳುಮಾಡಬಹುದು. ಎಷ್ಟರ ಮಟ್ಟಿಗೆ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಕು, ಆ ಗುಟ್ಟುಗಳು ಗುಟ್ಟುಗಳಾಗಿಯೇ ಇರಬಲ್ಲವೇ, ಸಿಟ್ಟಿನ ಭರದಲ್ಲಿ ಉದ್ವೇಗದ ಮನಸ್ಸು ಸ್ನೇಹದ ವಿಶ್ವಾಸವನ್ನು ಉಳಿಸಿಕೊಳ್ಳಬಲ್ಲುದೆ ಎಂಬುದನ್ನು ಯೋಚಿಸಬೇಕು. ಸಾಮಾನ್ಯವಾಗಿ ಖೋಟಾ ವ್ಯಕ್ತಿತ್ವ ಹೊಂದಿರುವವರು, ಸ್ವಾರ್ಥಿಗಳು, ಅಸೂಯಾಪರರು ಉತ್ತಮ ಸ್ನೇಹಿತರಾಗಲಾರರು. ಒಂದುವೇಳೆ ಅವರು ಸ್ನೇಹ ಬೆಳೆಸಿದರೂ ಅದು ಸ್ವಾರ್ಥಕ್ಕೇ ಆಗಿರುತ್ತದೆ. ಕಾಲಿಗೆ ಹತ್ತಿದ ಇಂಬಳ ಗೊತ್ತೇ ಆಗದಂತೆ ನಮ್ಮ ರಕ್ತ ಹೀರುವ ಹಾಗೆ ಇಂತಹ ಸ್ನೇಹಿತರು ನಮ್ಮ ವೈಯಕ್ತಿಕ ಸ್ವಾತಂತ್ರ್ಯವಷ್ಟೇ ಅಲ್ಲ ಮಾನಸಿಕ ನೆಮ್ಮದಿಯ ಹರಣಕ್ಕೂ ಕಾರಣರಾಗುತ್ತಾರೆ. ಮೇಲ್ನೋಟಕ್ಕೆ ಸಿಹಿಯಾಗಿ ಮಾತನಾಡಿ ಒಳಗೊಳಗೆ ಹಗೆ ಸಾಧಿಸುವ ನಕಲಿ ಸ್ನೇಹಿತರ ಬಗ್ಗೆ, ಗೆದ್ದೆತ್ತಿನ ಬಾಲ ಹಿಡಿಯುವ ಅವಕಾಶವಾದಿಗಳ ಬಗ್ಗೆ ಎಚ್ಚರ ಅತ್ಯಗತ್ಯ.

ಅಂಗೈ ಮುಷ್ಟಿಯೊಳಗೆ ಪುಟಾಣಿ ಹಕ್ಕಿಮರಿಯನ್ನಿಟ್ಟುಕೊಂಡು ಅದು ಬದುಕಿದೆಯೋ ಸತ್ತಿದೆಯೋ ಎಂಬ ಜಾಣತನದ ಪ್ರಶ್ನೆ ಹಾಕಿದ ಪಂಚತಂತ್ರದ ಕಥೆಯ ವ್ಯಕ್ತಿಯ ಬಗ್ಗೆ ನಮಗೆ ಗೊತ್ತು. ಸ್ನೇಹವೂ ಹಾಗೆಯೇ. ಮುಷ್ಟಿ ಬಿಗಿಹಿಡಿದರೆ ಸಾಯುವ, ಬಿಟ್ಟುಬಿಟ್ಟರೆ ಹಾರಿಹೋಗುವ ಹಕ್ಕಿಯ ಹಾಗೆ. ಹಾಗಾಗದಂತೆ ಕಾಪಿಡುವ ಎಚ್ಚರವೇ ಸ್ನೇಹದ ಪ್ರಾಣವಾಯು. ನಿಜ ತಾನೇ?

(ಲೇಖಕರು ಉಪನ್ಯಾಸಕರು, ಕವಯಿತ್ರಿ)

Leave a Reply

Your email address will not be published. Required fields are marked *

Back To Top