ಸಿಂಧನೂರು: ಸಾಹಿತಿಗಳು ಆರೋಗ್ಯ, ಕೃಷಿ ಕುರಿತ ಪುಸ್ತಕಗಳನ್ನು ಬರೆಯುವ ಮೂಲಕ ಬೆಳಕು ಚೆಲ್ಲುವ ಕೆಲಸ ಮಾಡಬೇಕೆಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಶ್ರೀನಿಧಿ ಪ್ರಕಾಶನ ಹಾಗೂ ಚುಟುಕು ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ವಕೀಲ ಪ್ರಹ್ಲಾದ ಗುಡಿ ಅವರ ‘ಸುವರ್ಣ ಹೆಜ್ಜೆಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನಲ್ಲಿ ಅಭ್ಯಾಸ ಮಾಡಿದ ಹಲವಾರು ವಿದ್ಯಾರ್ಥಿಗಳ ಅನಿಸಿಕೆಗಳ ಒಳಗೊಂಡ ಕೃತಿಯನ್ನು ಪ್ರಹ್ಲಾದ ಗುಡಿ ಹೊರ ತಂದಿದ್ದು, ದಾಖಲೆಯಾಗಿ ಉಳಿಯಲಿದೆ ಎಂದರು.
ನ್ಯಾಕ್ ಸಮಿತಿ ನಿಯಮಗಳು ಬಹಳ ಕಠಿಣವಾಗಿವೆ. ಕಾಲೇಜ್, ಶಿಕ್ಷಣ ಸಂಸ್ಥೆಗಳನ್ನು ನಡೆಸಬೇಕಾದರೆ ಕಡ್ಡಾಯವಾಗಿ ನ್ಯಾಕ್ ಸಮಿತಿ ಅನುಮತಿ ಪಡೆಯಬೇಕಿದೆ ಎಂದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಕಾಲೇಜಿನ ಹಳೇ ವಿದ್ಯಾರ್ಥಿಗಳ ಮನದಾಳದ ಮಾತುಗಳನ್ನು ಪುಸ್ತಕ ರೂಪದಲ್ಲಿ ತಂದಿರುವುದು ಸಂತಸದ ವಿಷಯವಾಗಿದೆ ಎಂದರು.
ಎಂಎಲ್ಸಿ ಬಸನಗೌಡ ಬಾದರ್ಲಿ, ಕನ್ನಡ ವಿಭಾಗ ಮುಖಸ್ಥ ಜಾಜಿ ದೇವೇಂದ್ರಪ್ಪ ಮಾತನಾಡಿದರು. ಹಿರಿಯ ಸಾಹಿತಿ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಡಿ.ಎಚ್.ಕಂಬಳಿ, ಕೃತಿ ಲೇಖಕ ವಕೀಲ ಪ್ರಹ್ಲಾದ ಗುಡಿ, ಪ್ರಾಚಾರ್ಯರಾದ ಎಂ.ಶಿವಯ್ಯ, ಲಕ್ಷ್ಮೀದೇವಿ, ನಿರುಪಾದಪ್ಪ ಗುಡಿಹಾಳ ವಕೀಲ, ಶ್ರೀನಿಧಿ ಪ್ರಕಾಶನದ ಬೀರಪ್ಪ ಶಂಭೋಜಿ ಇದ್ದರು.