ಶೌಚಗೃಹವಿಲ್ಲದಿದ್ದರೆ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ

ಕೊಳ್ಳೇಗಾಲ: ಶೌಚಗೃಹವಿಲ್ಲದಿದ್ದರೆ ಮುಖ್ಯ ಶಿಕ್ಷಕರ ವಿರುದ್ಧ ಕ್ರಮಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಶೌಚಗೃಹ ನಿರ್ಮಿಸದಿದ್ದಲ್ಲಿ ಆಯಾ ಶಾಲೆಗಳ ಮುಖ್ಯ ಶಿಕ್ಷಕರನ್ನು ನೇರ ಹೊಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎನ್.ಮಹೇಶ್ ಎಚ್ಚರಿಸಿದರು.

ತಾಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಅಡುಗೆ ಕೊಠಡಿ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶೌಚಗೃಹವಿಲ್ಲದ ಬಗ್ಗೆ ಆಯಾ ಶಾಲಾ ಮುಖ್ಯ ಶಿಕ್ಷಕರು ಗಮನಹರಿಸಿ, ಇಲಾಖೆ ಅನುದಾನ ಅಥವಾ ಸ್ಥಳಿಯ ಸಂಸ್ಥೆಗಳ ಅನುದಾನ ಬಳಕೆ ಮಾಡಿಕೊಂಡು ಕಡ್ಡಾಯವಾಗಿ ಶೌಚಗೃಹ ನಿರ್ಮಿಸಬೇಕು ಎಂದರು.

ಮಕ್ಕಳ ಶೈಕ್ಷಣಿಕ ಪ್ರಗತಿ ಜತೆಗೆ ಗುಣಮಟ್ಟದ ಬಿಸಿಯೂಟ, ಕುಡಿಯುವ ನೀರು ಹಾಗೂ ಉತ್ತಮ ಗಾಳಿ ಬೆಳಕು ನೀಡುವ ಕರ್ತವ್ಯ ಶಾಲಾ ಆಡಳಿತ ಮಂಡಳಿಗೆ ಸೇರಿದೆ. ಶಾಲಾ ಆವರಣದಲ್ಲಿ ಸ್ವಚ್ಛತೆ ಕಾಪಾಡಲೂ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಸಚಿವರು ಶಾಲಾ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಮಾಡಿದರು. ನಂತರ ಗ್ರಾಮದಲ್ಲಿ ನಿರ್ಮಿಸಿರುವ ನಾಣ್ಯ ಚಾಲಿತ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು.

ಜಿ.ಪಂ.ಸದಸ್ಯ ಎಲ್.ನಾಗರಾಜು, ಗ್ರಾ.ಪಂ.ಅಧ್ಯಕ್ಷೆ ಶಾರಧಕುಮಾರಿ, ಉಪಾಧ್ಯಕ್ಷ ನಂಜುಂಡಸ್ವಾಮಿ, ಬಿಇಒ ಚಂದ್ರಪಾಟಿಲ್, ಮುಖ್ಯ ಶಿಕ್ಷಕ ಚನ್ನಲಿಂಗಪ್ಪ ಹಾಜರಿದ್ದರು.