ಬೆಹನ್ ಜೀ ಹೇಳಿದ್ರೆ ಮಾತ್ರ ಮತ್ತೆ ಸಂಪುಟ ಸೇರುವೆ: ಬಿಎಸ್​ಪಿ ಶಾಸಕ ಎನ್​.ಮಹೇಶ್

ರಾಯಚೂರು: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಹೇಳಿದರೆ ಮಾತ್ರ ನಾನು ಮತ್ತೆ ಸಂಪುಟ ಸೇರುತ್ತೇನೆ ಎಂದು ಬಿಎಸ್​ಪಿ ಶಾಸಕ ಹಾಗೂ ಮಾಜಿ ಸಚಿವ ಎನ್​.ಮಹೇಶ್​ ಅವರು ತಿಳಿಸಿದ್ದಾರೆ.

ಇಲ್ಲಿನ ಕಾಡ್ಲೂರು ಗ್ರಾಮದ ಪ್ರಾಥಮಿಕ ಶಾಲೆಯ ರ‌ಂಗ್ ದೇ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕ್ರಮಕ್ಕೆ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಲ್ಲಿಯವರೆಗೂ ಬಿಎಸ್​ಪಿ ಪಕ್ಷದ ಹೈಕಮಾಂಡ್​ನಿಂದ ಸಚಿವರಾಗಿ ಎಂಬ ಯಾವುದೇ ಸೂಚನೆ ಬಂದಿಲ್ಲ. ಹೈಕಮಾಂಡ್ ಹೇಳಿದರೆ ಸಚಿವನಾಗುತ್ತೇನೆ. ಸಂಪುಟದಿಂದ ಹೊರಗಿರಲು ಹೇಳಿದರೆ ಹೊರಗಿರುತ್ತೇನೆ. ಬೆಹನ್ ಜೀ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಸಚಿವನಾಗಲು ಮುಖ್ಯಮಂತ್ರಿಗಳಿಂದಲೂ ಯಾವುದೇ ಸೂಚನೆ ಸಿಕ್ಕಿಲ್ಲ ಎಂದು ಹೇಳಿದರು.

ಪ್ರಾಥಮಿಕ ಶಿಕ್ಷಣ ಇಲಾಖೆಯನ್ನು ಮುಖ್ಯಮಂತ್ರಿಗಳು ನಿರ್ವಹಿಸುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆಕರ್ಷಿತರಾಗುವುದನ್ನು ತಪ್ಪಿಸುವ ಉದ್ದೇಶದಿಂದ ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾಗುತ್ತಿವೆ. ಶಾಲೆಗಳಲ್ಲಿ ಎಲ್​ಕೆಜಿ ಆರಂಭಿಸುವುದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ತೊಂದರೆಯಾಗಲಿದೆ. ಅದಕ್ಕೆ ಸರಕಾರ ಒಂದಿಷ್ಟು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಗುಂಡ್ಲುಪೇಟೆಯಲ್ಲಿ ನಡೆದ ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ ಕುರಿತು ಮಾತನಾಡಿ, ಈಗಿನ ಸಂದರ್ಭದಲ್ಲಿ ಇದು ಅಮಾನೀಯ ಘಟನೆ. ಅವನು ಮಾನಸಿಕ ಅಸ್ವಸ್ಥ ಎಂಬ ಸರ್ಟಿಫಿಕೇಟ್ ನೀಡಲು ಗ್ರಾಮಸ್ಥರು ಯಾರು ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಮೈತ್ರಿ ಸರ್ಕಾರ ಮುಂದುವರಿಯುವ ವಿಶ್ವಾಸವಿದೆ. ಈಗ ಬೇರೆ ಯಾರೂ ರಾಜೀನಾಮೆ ನೀಡುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *