ಬಿಎಸ್​ಪಿ ಸಂಘಟನೆಗಾಗಿ ನನ್ನ ರಾಜೀನಾಮೆ

ಬೆಂಗಳೂರು: ತಾವು ಬಿಎಸ್​ಪಿ ಪಕ್ಷ ಸಂಘಟನೆ ಹಾಗೂ ಚಳವಳಿ ಮಾಡಬೇಕೆಂಬ ದೃಷ್ಟಿಯಿಂದ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ ಎನ್. ಮಹೇಶ್ ತಿಳಿಸಿದರು.

ಸಿಎಂ ಕುಮಾರಸ್ವಾಮಿ ಅವರಿಗೆ ರಾಜೀನಾಮೆ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಬಗ್ಗೆ ತಮಗೆ ಯಾವುದೇ ಬೇಸರವಿಲ್ಲ. ರಾಜೀನಾಮೆಯಿಂದ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂಬುದು ಸುಳ್ಳು. ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಸರ್ಕಾರ ಅಬಾಧಿತ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಸಹಕಾರದಿಂದಲೇ ನಾನು ಕೊಳ್ಳೇಗಾಲ ಕ್ಷೇತ್ರದಲ್ಲಿ ಜಯಗಳಿಸಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗುವ ಭಾಗ್ಯವೂ ದೊರೆಯಿತು. ಆದರೆ, ಈ ದೊಡ್ಡ ಖಾತೆ ನನ್ನ ಪಕ್ಷ ಸಂಘಟನೆ ಹಾಗೂ ಚಳವಳಿಯನ್ನು ನುಂಗಿ ಹಾಕುತ್ತದೆ ಎಂಬುದು ನನಗೆ ತಿಳಿದಿರಲಿಲ್ಲ. ಈಗ ಅದರ ಅರಿವಾಗುತ್ತಿದೆ. ಮಂತ್ರಿ ಸ್ಥಾನಕ್ಕಿಂತ ನನ್ನ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ನಾನು ಗೆಲುವು ಸಾಧಿಸಲು ಕಾರಣವಾಗಿರುವ ಪಕ್ಷವನ್ನು ರಾಜ್ಯಾದ್ಯಂತ ಬಲಪಡಿಸುವುದು ಮುಂದಿರುವ ಹೆಗ್ಗುರಿ. ಇದರ ಸಾಧನೆಗೆ ರಾಜೀನಾಮೆ ನೀಡಿದ್ದೇನೆ. ಈ ಸಂಬಂಧ ನನಗೆ ಎಳ್ಳಷ್ಟೂ ಬೇಸರವಿಲ್ಲ, ಎಂದು ತಿಳಿಸಿದರು.

ಸರ್ಕಾರಕ್ಕೆ ಬೆಂಬಲ

ಕುಮಾರಸ್ವಾಮಿ ಇರುವ ತನಕ ನಾನು ಸರ್ಕಾರಕ್ಕೆ ಬೆಂಬಲ ನೀಡುತ್ತೇನೆ. ನಾನು ಯಾವುದೇ ರೀತಿಯಲ್ಲಿ ಶಿಕ್ಷಣ ಇಲಾಖೆಯನ್ನು ಕಡೆಗಣಿಸಿಲ್ಲ. ಯಾವ ವೈಫಲ್ಯವೂ ಇಲ್ಲ. ನಾನು ಏನು ಕೆಲಸ ಮಾಡಿದ್ದೇನೆ ಎಂಬುದು ಮುಂದೆ ಇಲಾಖೆ ಜವಾಬ್ದಾರಿ ವಹಿಸುವವರಿಗೆ ತಿಳಿಯುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಜೆಡಿಎಸ್​ನಲ್ಲಿ ಉಸಿರುಗಟ್ಟುವ ವಾತಾವರಣ ಇಲ್ಲವೇ ಇಲ್ಲ. ಆ ಪಕ್ಷದ ವರಿಷ್ಠರು ನನ್ನನ್ನು ಅತ್ಯಂತ ಪ್ರೀತಿಯಿಂದ ನಡೆಸಿಕೊಂಡಿದ್ದಾರೆ. ಖುದ್ದು ರಾಜೀನಾಮೆ ಕೊಡಲು ಹೋದಾಗಲೂ ಕುಮಾರಸ್ವಾಮಿ ರ್ಚಚಿಸೋಣವೆಂದು ಹೇಳಿದ್ದಾರೆಂದರು.

ಉಪಚುನಾವಣೆಯಲ್ಲಿ ಜೆಡಿಎಸ್​ಗೆ ಬೆಂಬಲ

ಉಪಚುನಾವಣೆಯಲ್ಲಿ ನಾನು ಜೆಡಿಎಸ್ ಬೆಂಬಲಿಸು ತ್ತೇನೆ. 2019ರ ಚುನಾವಣೆಯಲ್ಲಿ ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ. ನನ್ನ ಹಾಗೂ ಮುಖ್ಯಮಂತ್ರಿ ಸಂಬಂಧ ಉತ್ತಮವಾಗಿಯೇ ಇರುತ್ತದೆ. ನನ್ನ ಬಗ್ಗೆ ಕುಮಾರಸ್ವಾಮಿ ಅಪಾರ ಪ್ರೀತಿ ಹೊಂದಿದ್ದಾರೆ. ರಾಜೀನಾಮೆಗೆ ಮಹಾಘಟಬಂಧನ ಕಾರಣ ಅಲ್ಲವೇ ಅಲ್ಲ ಎಂದು ಮಹೇಶ್ ಸ್ಪಷ್ಟಪಡಿಸಿದರು.

ದಲಿತ ಮತ ಕೈತಪ್ಪುವ ಭೀತಿಯಲ್ಲಿ ಜೆಡಿಎಸ್

ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಮೈತ್ರಿಯ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಹೋಗುತ್ತಿದೆ ಎಂಬ ನಿರೀಕ್ಷೆಯಲ್ಲಿರುವಾಗಲೇ ಬಿಎಸ್​ಪಿಯ ಎನ್.ಮಹೇಶ್ ನಡೆ ಮೈತ್ರಿ ಪಕ್ಷ ಜೆಡಿಎಸ್​ಗೆ ಆಘಾತ ಉಂಟು ಮಾಡಿದೆ.

ರಾಜ್ಯದಲ್ಲಿ 3 ಲೋಕಸಭೆ ಹಾಗೂ 2 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಹೊಸ್ತಿಲಲ್ಲೇ ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ದಲಿತ ಮತಗಳು ಜೆಡಿಎಸ್​ನಿಂದ ದೂರ ಸರಿಯುವ ಆತಂಕ ಎದುರಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಎಸ್​ಪಿ ಮೈತ್ರಿಕೂಟ ಏರ್ಪಟ್ಟಿದ್ದ ರಿಂದ ಜೆಡಿಎಸ್​ಗೆ ದಲಿತ ಮತಗಳು ಗಮನಾರ್ಹ ಸಂಖ್ಯೆಯಲ್ಲಿ ಬಂದಿದ್ದವು ಎಂಬುದನ್ನು ಚುನಾವಣೆ ಬಳಿಕ ಸ್ವತಃ ಜೆಡಿಎಸ್ ಒಪ್ಪಿಕೊಂಡಿತ್ತು. ಅಲ್ಲದೆ, ಅತಂತ್ರ ವಿಧಾನಸಭೆ ನಿರ್ವಣವಾದಾಗ ಕಾಂಗ್ರೆಸ್​ನಿಂದ ಜೆಡಿಎಸ್​ಗೆ ಸರ್ಕಾರ ರಚನೆಗೆ ಆಹ್ವಾನ ಕೊಟ್ಟಾಗಲೂ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಮಹತ್ವದ ಪಾತ್ರವಹಿಸಿದ್ದರು. ಸಿಎಂ ಆಗಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುವಾಗ ಮಾಯಾವತಿ ಭಾಗವಹಿಸಿದ್ದರು. ಆ ಮೂಲಕ ದೇಶದಲ್ಲಿ 2019ರ ಲೋಕಸಭಾ ಚುನಾವಣೆಗೆ ಮಹಾಘಟಬಂಧನ ರಚನೆ ಕನಸು ಚಿಗುರೊಡೆದಿತ್ತು. ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಪಂಚರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿಗೆ ಮಾಯಾವತಿ ಹಿಂದೇಟು ಹಾಕಿದ್ದಾರೆ. ಇದರ ಪರಿಣಾಮವೇ ಮಹೇಶ್ ರಾಜೀನಾಮೆ ಎನ್ನಲಾಗಿದೆ.

ಈಗಾಗಲೇ ಬಡ್ತಿ ಮೀಸಲಾತಿ ವಿಚಾರದಲ್ಲಿ ಜೆಡಿಎಸ್ ದಲಿತರ ವಿರೋಧವಾಗಿದೆ ಹಾಗೂ ಸರ್ಕಾರಿ ಕಾಮಗಾರಿಗಳಲ್ಲಿ 50 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಟೆಂಡರ್​ಗಳಲ್ಲಿ ದಲಿತರಿಗೆ ಮೀಸಲಾತಿ ಕೊಡಬೇಕೆಂಬ ಕಾಯ್ದೆ ಅಂಗೀಕಾರವಾಗಿದ್ದರೂ ದಲಿತರಿಗೆ ಆದ್ಯತೆ ಕೊಡುತ್ತಿಲ್ಲ ಎಂಬ ಅಪಸ್ವರ ಬಲವಾಗಿದೆ. ಇಂತಹ ಅಪಸ್ವರಗಳ ಮಧ್ಯೆಯೇ ಸಚಿವ ಸ್ಥಾನಕ್ಕೆ ಮಹೇಶ್ ರಾಜಿನಾಮೆ ನೀಡಿರುವುದು ಸದ್ಯ ಐದು ಕ್ಷೇತ್ರಗಳ ಉಪ ಚುನಾವಣೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ದಲಿತ ಮತಗಳು ಜೆಡಿಎಸ್​ನಿಂದ ದೂರ ಸರಿಯುತ್ತವೆ ಎಂದೇ ಹೇಳಲಾಗುತ್ತಿದೆ.

ಬಿಜೆಪಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತೇ?

ಮಹಾಘಟಬಂಧನಕ್ಕೆ ಬೀಜಾಂಕುರವಾಗಿದ್ದ ಕರ್ನಾಟಕದಲ್ಲಿ ಮೈತ್ರಿ ಬಿರುಕು ಕಾಣಿಸಿಕೊಂಡು ಸರ್ಕಾರ ಪತನವಾಗಬೇಕೆಂಬ ಬಿಜೆಪಿ ನಿರೀಕ್ಷೆ ಯಂತೆಯೇ ನಡೆಯುತ್ತಿರುವುದು ರೊಟ್ಟಿ ಜಾರಿ ತುಪ್ಪಕ್ಕೆ ಬೀಳುತ್ತಿರುವ ಸನ್ನಿವೇಶ ಎಂದೇ ಬಣ್ಣಿಸಲಾಗುತ್ತಿದೆ.

ಮಹಾಘಟಬಂಧನದಿಂದ ಮತ್ತೆ ಎನ್​ಡಿಎ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂಬುದನ್ನು ಸ್ವತಃ ಪ್ರತಿಪಕ್ಷಗಳ ನಾಯಕರೇ ಒಪು್ಪತ್ತಾರೆ. ಆದರೆ, ಇದರಿಂದ ಬಿಜೆಪಿಯ ಸ್ವಂತ ಸಂಖ್ಯೆಯಲ್ಲಿ ಕೆಲವು ವ್ಯತ್ಯಾಸವಾಗ ಬಹುದು ಎಂಬ ಆತಂಕ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಪ್ರಧಾನಿ ಮೋದಿಯವರಿಗಿತ್ತು. ಇದೇ ಕಾರಣಕ್ಕೆ ಮಹಾಘಟಬಂಧನವನ್ನು ಒಡೆಯಲು ರಾಜ್ಯದಲ್ಲಿ ಸರ್ಕಾರ ಪತನಗೊಳ್ಳಬೇಕು. ಕಾಂಗ್ರೆಸ್ ಜತೆ ಸಖ್ಯದಿಂದ ಯಾವುದೇ ಪ್ರಾದೇಶಿಕ ಪಕ್ಷಕ್ಕೆ ನೆಮ್ಮದಿಯಿಲ್ಲ ಎಂಬುದನ್ನು ನಿರೂಪಿಸಬೇಕಿತ್ತು.

ಇದೇ ಕಾರಣಕ್ಕೆ, ಸಿಎಂ ಎಚ್.ಡಿ.ಕುಮಾರ ಸ್ವಾಮಿ ಅವರ ‘ಮುಳ್ಳಿನ ಹಾಸಿಗೆ ಮೇಲೆ ಮಲಗಿದ್ದೇನೆ’, ‘ವಿಷಕಂಠನಾಗಿದ್ದೇನೆ’ ಎಂಬ ಹೇಳಿಕೆಗಳು ಹಾಗೂ ಕಣ್ಣೀರಧಾರೆಯನ್ನು ಕಾಂಗ್ರೆಸ್ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಪ್ರಬಲವಾಗಿ ಬಿಂಬಿಸಲಾಗಿತ್ತು. ಇತ್ತೀಚೆಗೆ ಮಧ್ಯ ಪ್ರದೇಶ, ರಾಜಸ್ಥಾನ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ನಿಂದ ಬಿಎಸ್​ಪಿ, ಎಸ್​ಪಿ ದೂರಾಗುವುದರ ಜತೆಗೆ, ಮಹಾ ಘಟಬಂಧನ ಸಾಧ್ಯವಾಗುವ ಮಾತಲ್ಲ ಎಂಬ ಸಿಪಿಐಎಂ ನಿಲುವು ಕಾಂಗ್ರೆಸ್​ನ್ನು ಒಬ್ಬಂಟಿಯಾಗಿಸುವ ಸೂಚನೆ ನೀಡಿದೆ. ಇದೆಲ್ಲಕ್ಕೆ ಕಲಶಪ್ರಾಯವೆಂಬಂತೆ ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಪಾಲುದಾರ ಬಿಎಸ್​ಪಿ ಸಚಿವ ರಾಜೀನಾಮೆ ನೀಡಿರುವುದು. ಇದು ಬಿಜೆಪಿ ಪಾಳೆಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಮಹಾಘಟಬಂಧನ ಮುರಿಯುವುದರಿಂದ ದೇಶಾದ್ಯಂತ ಬಿಜೆಪಿಗೆ ಸುಮಾರು 25 ಸ್ಥಾನ ಹೆಚ್ಚಳವಾಗುವ ಲೆಕ್ಕ ಹಾಕಲಾಗಿದೆ.

ಜೆಡಿಎಸ್​ಗೆ ಮತ್ತೊಂದು ಸಚಿವ ಸ್ಥಾನ

ಸಚಿವ ಸ್ಥಾನಕ್ಕೆ ಬಿಎಸ್​ಪಿಯ ಎನ್.ಮಹೇಶ್ ರಾಜೀನಾಮೆ ನೀಡಿದ್ದರಿಂದ ಪರೋಕ್ಷ ಲಾಭ ಜೆಡಿಎಸ್​ನವರಿಗೆ ಸಿಕ್ಕಂತಾಗಿದೆ. ಮಹೇಶ್​ರಿಂದ ತೆರವಾದ ಸ್ಥಾನವೂ ಸೇರಿ ಎಂಟು ಸಚಿವ ಸ್ಥಾನಗಳು ಖಾಲಿ ಉಳಿದಿವೆ. ಈ ಮೂಲಕ ಜೆಡಿಎಸ್​ನ ಮತ್ತೊಬ್ಬ ಶಾಸಕರಿಗೆ ಸಚಿವ ಸ್ಥಾನ ಒಲಿಯಲಿದೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಒಟ್ಟು 34 ಸಚಿವ ಸ್ಥಾನಗಳ ಪೈಕಿ ಜೆಡಿಎಸ್​ಗೆ ಮುಖ್ಯಮಂತ್ರಿ ಹುದ್ದೆ ಸೇರಿ 12 ಸ್ಥಾನ ಹಾಗೂ ಕಾಂಗ್ರೆಸ್​ಗೆ ಡಿಸಿಎಂ ಹುದ್ದೆ ಸೇರಿ 22 ಸ್ಥಾನಗಳ ಹಂಚಿಕೆಯಾಗಿತ್ತು. ಆ ಪೈಕಿ ಬಿಎಸ್​ಪಿ ಶಾಸಕ ಎನ್.ಮಹೇಶ್ ಸೇರಿ ಜೆಡಿಎಸ್ 11 ಸ್ಥಾನಗಳಿಗೆ ಹಾಗೂ ಕಾಂಗ್ರೆಸ್​ನಲ್ಲಿ ಪಕ್ಷೇತರ ಶಾಸಕ ಆರ್.ಶಂಕರ್ ಸೇರಿ 16 ಸ್ಥಾನ ಭರ್ತಿಯಾಗಿತ್ತು. ಹೀಗಾಗಿ ಕಾಂಗ್ರೆಸ್​ನ ಆರು ಹಾಗೂ ಜೆಡಿಎಸ್​ನ ಒಂದು ಖಾಲಿ ಇತ್ತು. ಈಗ ಇನ್ನೊಂದು ಸ್ಥಾನ ಸಿಗುವುದರಿಂದ ಮುಸ್ಲಿಂ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್​ಗೆ ಕೊಟ್ಟರೆ, ಇನ್ನೊಂದು ಸ್ಥಾನಕ್ಕೆ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ, ಡಾ. ಅನ್ನದಾನಿ, ಎಚ್. ವಿಶ್ವನಾಥ್, ಬಿ. ಸತ್ಯನಾರಾಯಣ ರೇಸ್​ನಲ್ಲಿದ್ದಾರೆ.

ರಾಜ್ಯ ಸರ್ಕಾರದ ಒಂದು ವಿಕೆಟ್ ಪತನವಾಗಿದ್ದು, ಅದಾಗಿಯೇ ಬಿದ್ದುಹೋದರೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ನಾವಾಗಿಯೇ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ. ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ಸರ್ಕಾರ ಅದಾಗಿಯೇ ಬಿದ್ದು ಹೋಗುತ್ತದೆ ಎಂಬ ನಮ್ಮ ಮಾತು ನಿಜವಾಗುತ್ತಿದೆ. ಆಗ ಅತಿ ದೊಡ್ಡ ಪಕ್ಷವಾದ್ದರಿಂದ ಸರ್ಕಾರ ರಚಿಸಲಾಗಿತ್ತು. ಯಾರೂ ಬರದಿದ್ದರಿಂದ ಯಡಿಯೂರಪ್ಪ ಗೌರವಯುತವಾಗಿ ರಾಜೀನಾಮೆ ಕೊಟ್ಟಿದ್ದರು. ಈ ಬೆಳವಣಿಗೆ ನೋಡಿದರೆ ಸರ್ಕಾರ ಹೆಚ್ಚು ದಿನ ಉಳಿಯಲ್ಲ.

| ಡಿ.ವಿ. ಸದಾನಂದಗೌಡ ಕೇಂದ್ರ ಸಚಿವ

ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸಲಹೆ ಮೇರೆಗೆ ಎನ್.ಮಹೇಶ್ ರಾಜೀನಾಮೆ ಕೊಟ್ಟಿರಬಹುದು. ಅಂಗೀಕಾರಕ್ಕೆ ಮುನ್ನ ರ್ಚಚಿಸುವೆ. ಬಿಎಸ್ಪಿ ನಾಯಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಈ ಬೆಳವಣಿಗೆಯಿಂದ ಸರ್ಕಾರಕ್ಕೆ ಧಕ್ಕೆ ಇಲ್ಲ.

| ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ

ಮಹೇಶ್ ರಾಜೀನಾಮೆ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬಿಎಸ್ಪಿ ಸಂಘಟನೆಯ ಸಲುವಾಗಿ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. ಜೆಡಿಎಸ್ ಹಾಗೂ ಬಿಎಸ್ಪಿ ನಡುವಿನ ಮೈತ್ರಿ ಅದು.

| ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ

ಎನ್.ಮಹೇಶ್ ರಾಜೀನಾಮೆ ಬಗ್ಗೆ ನನಗೇನೂ ಗೊತ್ತಿಲ್ಲ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಬಹುಶಃ ರಾಷ್ಟ್ರೀಯ ಮಟ್ಟದ ತೀರ್ವನವಾಗಿ ರಾಜೀನಾಮೆ ನೀಡಿರಬಹುದು.

| ಎಚ್.ಡಿ.ರೇವಣ್ಣ ಸಚಿವ

ಬಿಎಸ್​ಪಿ ಸಂಘಟನೆಗಾಗಿ ನನ್ನ ರಾಜೀನಾಮೆ

Leave a Reply

Your email address will not be published. Required fields are marked *