Tuesday, 11th December 2018  

Vijayavani

Breaking News

ದೋಸ್ತಿ ಮೇಲೆ ಜಂಬೂಸವಾರಿ

Friday, 12.10.2018, 3:06 AM       No Comments

ಬೆಂಗಳೂರು: ದಸರಾ ಜಂಬೂಸವಾರಿಗೆ ಮೊದಲೇ ರಾಜ್ಯ ರಾಜಕಾರಣದಲ್ಲಿ ‘ಗಜ’ ಕಂಪನವಾಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ರಾಜ್ಯ ಬಿಎಸ್​ಪಿಯ ಏಕೈಕ ಶಾಸಕ ಎನ್.ಮಹೇಶ್ ಅವರು ಗುರುವಾರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ನಾಯಕಿ ಮಾಯಾವತಿ ಅವರು ಮಹಾಘಟಬಂಧನದಿಂದ ಒಂದು ಹೆಜ್ಜೆ ಆಚೆ ಇಟ್ಟು ಕಾಂಗ್ರೆಸ್ ವಿರುದ್ಧ ಕೆಂಡಾಮಂಡಲವಾಗಿರುವ ಸಂದರ್ಭದಲ್ಲೇ ಮಹೇಶ್ ಕೈಗೊಂಡಿರುವ ಈ ನಿರ್ಧಾರ ಹತ್ತಾರು ರಾಜಕೀಯ ವಿಶ್ಲೇಷಣೆಗೆ ದಾರಿ ಮಾಡಿಕೊಟ್ಟಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸಕ್ಕೆ ಎರಡು ದಿನ ಬಾಕಿ ಇರುವಾಗಲೇ ಈ ಬೆಳವಣಿಗೆ ನಡೆದಿರುವುದರಿಂದ ಮೈತ್ರಿಪಕ್ಷಗಳೂ ಕಕ್ಕಾಬಿಕ್ಕಿಯಾಗಿವೆ. ಉಪ ಚುನಾವಣೆ, ಸಂಪುಟ ವಿಸ್ತರಣೆ, 2019ರ ಲೋಕಸಭಾ ಚುನಾವಣೆ ಪೂರ್ವ ಮೈತ್ರಿ, ಆಂತರಿಕ ತಿಕ್ಕಾಟದಂತಹ ವಿಚಾರದಲ್ಲಿ ಕಲಸುಮೇಲೋಗರವಾಗಿರುವಾಗಲೇ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಗೆದ್ದು ಕುಮಾರಸ್ವಾಮಿ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸ್ಥಾನ ಪಡೆದಿದ್ದ ಮಹೇಶ್ ಗುರುವಾರ ಸಂಜೆ ಮುಖ್ಯಮಂತ್ರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಮುನ್ನ ಬಿಎಸ್ಪಿ ನಾಯಕಿ ಮಾಯಾವತಿಯವರು ಕುಮಾರಸ್ವಾಮಿ ಜತೆ ದೂರವಾಣಿಯಲ್ಲಿ ರ್ಚಚಿಸಿ ರಾಜೀನಾಮೆ ಅಂಗೀಕರಿಸುವಂತೆ ಕೋರಿದ್ದರು. ಸಚಿವರಾದ ಪುಟ್ಟರಂಗಶೆಟ್ಟಿ ಹಾಗೂ ಮಹೇಶ್ ಕೆಲ ದಿನಗಳ ಹಿಂದಷ್ಟೇ ಕಿತ್ತಾಡಿಕೊಂಡಿದ್ದರು.

ಮಾಯಾಜಾಲದ ಲೆಕ್ಕಾಚಾರ

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಎನ್.ಮಹೇಶ್ ಅವರಿಗೆ ಮಾಯಾವತಿ ಸೂಚನೆ ನೀಡಿದ್ದರೆಂದು ತಿಳಿದುಬಂದಿದೆ. ಅ.3ರಂದು ಕಾಂಗ್ರೆಸ್ ಅನ್ನು ಹಿಗ್ಗಾಮುಗ್ಗಾ ಟೀಕಿಸಿದ್ದ ಮಾಯಾವತಿ ಮಹಾಘಟಬಂಧನದಿಂದ ಹೊರ ಬಂದಿದ್ದರು. ರಾಜ್ಯದಲ್ಲಿರುವ ಮೈತ್ರಿ ಸರ್ಕಾರದಲ್ಲಿ ಬಿಎಸ್ಪಿ ಕೂಡ ಪಾಲುದಾರನಾದ ಕಾರಣಕ್ಕೂ, ಇಲ್ಲೂ ಆ ನಿರ್ಣಯ ಪರಿಣಾಮ ಬೀರಬಹುದೆಂದು ಅಂದಾಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ 2019ರ ಲೋಕಸಭೆ ಚುನಾವಣೆಗೆ ಒಟ್ಟಾಗಿ ಹೋಗಬೇಕೆಂಬ ಉದ್ದೇಶದಿಂದ ಮಹಾಘಟಬಂಧನ್ ರಚನೆಯಾಗಿತ್ತು. ಈ ಪರಿಕಲ್ಪನೆ ರೂಪುಗೊಂಡಿದ್ದೇ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ವೇದಿಕೆಯಲ್ಲಿ ಎಂಬುದು ವಿಶೇಷ.

ಅಂದು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕಿಕ್ಕಿರಿದು ಸೇರಿದ ಜನರ ಸಮ್ಮುಖದಲ್ಲಿ ಮಾಯಾವತಿಯವರ ಕೈಯನ್ನು ತಾವೇ ಎತ್ತಿ ‘ನಾವು ಜೋಡಿ’ ಎಂಬಂತೆ ಬಿಂಬಿಸಿದ್ದು ಇನ್ನೂ ಜನರ ಮನಸ್ಸಲ್ಲಿದೆ. ಜತೆಗೆ ಹಣೆ ಹಣೆ ತಾಗಿಸಿ, ನಾವು ನೀವೂ ಒಟ್ಟಾಗಿರೋಣ ಎಂದು ಆತ್ಮೀಯತೆ ತೋರಿದ್ದರು. ಇದೆಲ್ಲ ನಡೆದು ಐದು ತಿಂಗಳು ಕಳೆಯುವುದರೊಳಗೆ ಸಂಬಂಧ ಹಳಸಿದೆ. ಮೈತ್ರಿ ಸರ್ಕಾರದ ಪಾಲುದಾರಿಕೆಯಿಂದ ಬಿಎಸ್ಪಿ ಹಿಂದೆ ಸರಿದಿದೆ. 2018ರ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಬಿಎಸ್​ಪಿ ಕಣಕ್ಕಿಳಿದಿತ್ತು.

ರಾಹುಲ್​ಗೆ ಆಘಾತ

ಅ.13ಕ್ಕೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಾರ್ಯಕ್ರಮ ನಿಶ್ಚಯವಾಗಿದೆ. ಅವರು ಬೆಂಗಳೂರಿಗೆ ಆಗಮಿಸುವ 48 ಗಂಟೆ ಮುನ್ನ ಸಮ್ಮಿಶ್ರ ಸರ್ಕಾರದ ಒಂದು ವಿಕೆಟ್ ಪತನವಾಗಿರುವುದು ಕಾಂಗ್ರೆಸ್ ಪಾಲಿಗಂತು ಸುಲಭವಾಗಿ ಅರಗಿಸಿಕೊಳ್ಳಲಾಗದ ವಿಚಾರವಾಗಿದೆ.

ಶಿಕ್ಷಣ ಸಚಿವರ್ಯಾರು?

ಪ್ರಮುಖ ಮತ್ತು ಪ್ರಭಾವಿ ಶಿಕ್ಷಣ ಖಾತೆಗೆ ಈಗ ಹೊಸ ಆಕಾಂಕ್ಷಿಗಳು ದೃಷ್ಟಿ ನೆಟ್ಟಿದ್ದಾರೆ. ಕಾಂಗ್ರೆಸ್ ಕೂಡ ಬೇರೆ ಖಾತೆ ಕೊಟ್ಟು ಶಿಕ್ಷಣವನ್ನು ತಾನು ಪಡೆದುಕೊಳ್ಳುವ ಚಿಂತನೆಯಲ್ಲಿದೆ.

ಮಂತ್ರಿ ಸ್ಥಾನಕ್ಕಿಂತ ಜನರ ಸಮಸ್ಯೆಗೆ ಸ್ಪಂದಿಸುವುದು ಮುಖ್ಯ. ಪಕ್ಷ ಬಲಪಡಿಸಲು ರಾಜೀನಾಮೆ ನೀಡಿದ್ದೇನೆ. ಉಪ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸುತ್ತೇನೆ. ಕುಮಾರಸ್ವಾಮಿ ಇರುವ ತನಕ ನಾನು ಸರ್ಕಾರಕ್ಕೆ ಬೆಂಬಲ ನೀಡುತ್ತೇನೆ.

| ಮಹೇಶ್ ನಿಕಟಪೂರ್ವ ಶಿಕ್ಷಣ ಸಚಿವ

ಸರ್ಕಾರದ ಮೇಲೇನು ಪರಿಣಾಮ

# ಮಹೇಶ್ ರಾಜೀನಾಮೆ ಯಿಂದ ತಕ್ಷಣಕ್ಕೆ ಸರ್ಕಾರದ ಮೇಲೆ ಯಾವುದೇ ಪರಿಣಾಮವಿಲ್ಲ.

# ಮಾಯಾವತಿ ಸೂಚಿಸಿದರಷ್ಟೇ ಸರ್ಕಾರ ಬೆಂಬಲಿತ ಶಾಸಕರ ಸಂಖ್ಯೆ ಒಂದು ಸ್ಥಾನ ಕುಸಿಯಲಿದೆ.

# ಒಂದು ವೇಳೆ ಕಾಂಗ್ರೆಸ್​ನಲ್ಲಿ ಇರುವ ಅತೃಪ್ತ ಶಾಸಕರು ಗುಳೆ ಹೊರಟು ನಂಬರ್ ಗೇಮ್ ರಾಜಕೀಯ ಆರಂಭವಾದರೆ ಮಹೇಶ್ ರಾಜೀನಾಮೆ ಮೈತ್ರಿ ಸರ್ಕಾರಕ್ಕೆ ದುಬಾರಿಯಾಗಲಿದೆ.

# ಮಹೇಶ್ ಹೊರತು ಇನ್ನಿಬ್ಬರು ಪಕ್ಷೇತರರು ಇರುವ ಕಾರಣ ಮತ್ತೆ ಸರ್ಕಾರ ರಚಿಸಬೇಕೆಂಬ ಬಿಜೆಪಿಯ ನಂಬರ್​ಗೇಮ್ ಲೆಕ್ಕಾಚಾರಕ್ಕೆ ಈ ಬೆಳವಣಿಗೆ ಉತ್ತಮ ವೇದಿಕೆಯಾಗಿದೆ.

# ಮಹೇಶ್ ರಾಜೀನಾಮೆಯಿಂದ ಸಮ್ಮಿಶ್ರ ಸರ್ಕಾರದಲ್ಲಿ ಒಂದಷ್ಟು ಗಲಿಬಿಲಿಯಾಗಿದೆ, ಮತ್ತೆ ಹೊಸಬರಿಗೆ ಜವಾಬ್ದಾರಿ ನೀಡಿ ಅವರು ಇಲಾಖೆ ತಿಳಿದುಕೊಳ್ಳುವುದಕ್ಕೆ ಇನ್ನಷ್ಟು ಸಮಯ ಹಿಡಿಯಲಿದೆ.

ಮೈತ್ರಿ ಭವಿಷ್ಯವೇನು?

# ಬಿಎಸ್ಪಿ, ಸರ್ಕಾರದಿಂದ ಹೊರಹೋಗಿದ್ದರಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೇನು ದೊಡ್ಡ ನಷ್ಟವಿಲ್ಲ.

# ಮುಂದಿನ ಉಪ ಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಬಿಎಸ್ಪಿ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಮೈತ್ರಿ ಪಕ್ಷಕ್ಕೆ ಒಂದು ಅಡೆತಡೆಯೇ.

# ಮಾಯಾವತಿ ರಾಜೀನಾಮೆ ಸೂಚನೆ ರಾಜ್ಯದಲ್ಲಿ ಒಂದು ಸಮುದಾಯಕ್ಕೆ ಸಂದೇಶ ನೀಡಿದಂತಾಗಿದೆ. ಅದು ಸರ್ಕಾರದ ವಿರುದ್ಧ ಎಂದು ಹೇಳಬೇಕಿಲ್ಲ.

ಬಿಜೆಪಿ ಲೆಕ್ಕಾಚಾರ?

# ಘಟಬಂಧನದಿಂದ ಪ್ರಾದೇಶಿಕ ಪಕ್ಷಕ್ಕೆ ನೆಮ್ಮದಿಯಿಲ್ಲ ಎಂಬುದು ಸಾಬೀತಾದ ತೃಪ್ತಿ

# ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಲ ತಗ್ಗಿಸುವ ಕಾರ್ಯತಂತ್ರಕ್ಕೆ ಬಲ

# ಕರ್ನಾಟಕದ ಸಂದೇಶವನ್ನು ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಳಸಿಕೊಳ್ಳುವುದು

Leave a Reply

Your email address will not be published. Required fields are marked *

Back To Top