More

    ಕೃಷಿ ಹುದ್ದೆ ಭರ್ತಿ ಭಾಗ್ಯ; ಹೊರಗುತ್ತಿಗೆ, ನೇರ ನೇಮಕಾತಿ ಪ್ರಕ್ರಿಯೆಗೆ ತುರ್ತು ಕ್ರಮ

    ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿದರೆ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಾಧ್ಯವಿದೆ ಎಂಬ ಅಮಿತ ವಿಶ್ವಾಸ ವ್ಯಕ್ತಪಡಿಸಿದ ನೂತನ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಇಲಾಖೆಯನ್ನು ಸಶಕ್ತ ಕ್ರಿಯಾ ಶೀಲಗೊಳಿಸಬೇಕಾದ ಅಗತ್ಯವಿದೆ ಎಂದು ‘ವಿಜಯವಾಣಿ, ದಿಗ್ವಿಜಯ ನ್ಯೂಸ್’ ಸಂವಾದದಲ್ಲಿ ದೃಢ ನಿಲುವು ಹಂಚಿಕೊಂಡರು.

    ಬೆಂಗಳೂರು: ಕೃಷಿ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳ ಪೈಕಿ ಅರ್ಧಕ್ಕೂ ಹೆಚ್ಚು ಖಾಲಿಯಿವೆ. ಈ ಪೈಕಿ ತುರ್ತು ಅಗತ್ಯದ ಹುದ್ದೆಗಳನ್ನು ನೇರ ನೇಮಕ ಅಥವಾ ಹೊರಗುತ್ತಿಗೆಯಡಿ ಭರ್ತಿ ಮಾಡಲಾಗುವುದು ಎಂದು ನೂತನ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಘೋಷಿಸಿದ್ದಾರೆ. ಕೃಷಿ ಖಾತೆ ಜವಾಬ್ದಾರಿ ವಹಿಸಿಕೊಂಡ ನಂತರ ಅಧಿಕಾರಿಗಳ ಜತೆಗೆ ಪರಿಶೀಲನಾ ಸಭೆ ನಡೆಸಿ ಸೂಕ್ತ ನಿರ್ದೇಶನ, ಸೂಚನೆಗಳನ್ನು ನೀಡಿರುವ ಸಚಿವರು, ಬುಧವಾರ ‘ವಿಜಯವಾಣಿ, ದಿಗ್ವಿಜಯ ನ್ಯೂಸ್’ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಕನಸು, ಕಲ್ಪನೆ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಆಶ್ವಾಸನೆಗಳ ಈಡೇರಿಕೆ ಕುರಿತು ಮನಬಿಚ್ಚಿ ಮಾತನಾಡಿದರು.

    ಮಂಜೂರಾದ 88,900 ಹುದ್ದೆ ಗಳಲ್ಲಿ ಶೇ.57 ಖಾಲಿಯಿವೆ. ರೈತರ ನಿರೀಕ್ಷೆಗೆ ಸ್ಪಂದಿಸಲು ಹುದ್ದೆಗಳ ಭರ್ತಿ ಅಗತ್ಯ. 3,360 ಹುದ್ದೆ ಭರ್ತಿ ಪ್ರಸ್ತಾವನೆ ಆರ್ಥಿಕ ಇಲಾಖೆ ಮುಂದಿದೆ. ನೇಮಕ ಪ್ರಕ್ರಿಯೆ ಮುಗಿಯಲು ಹೆಚ್ಚು ಸಮಯ ಬೇಕು. ಹೀಗಾಗಿ ನೇರ ಅಥವಾ ಹೊರಗುತ್ತಿಗೆಯಡಿ ನೇಮಕಕ್ಕೆ ತೀರ್ವನಿಸಿರುವೆ ಎಂದರು.

    ಕೃಷಿ ಕಾಯ್ದೆಗಳು ವಾಪಸ್ ಖಚಿತ

    ಕೃಷಿ ಜಮೀನು ರಕ್ಷಣೆ, ರೈತರ ಹಿತ ಕಾಯುವುದು ಸರ್ಕಾರದ ಆದ್ಯತೆಯಾಗಿದೆ. ಹಿಂದಿನ ಸರ್ಕಾರ ಜಾರಿಗೆ ತಂದಿರುವ ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ವಾಪಸ್ ಪಡೆಯಲಾಗುವುದು ಎಂದು ಸಚಿವರು ಖಚಿತಪಡಿಸಿದರು. ಭೂಸುಧಾರಣೆ ಕಾಯ್ದೆ 79ಎ, ಬಿ ಮತ್ತು ಸಿ ರದ್ದು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಸೇರಿ ಮೂರು ಕಾಯ್ದೆಗಳನ್ನು ಹಿಂಪಡೆಯುವ ಬಗ್ಗೆ ಪಕ್ಷದ ಪ್ರಣಾಳಿಕೆಯಲ್ಲೂ ಭರವಸೆ ನೀಡಿದ್ದೇವೆ. ಗ್ಯಾರಂಟಿಗಳ ಅನುಷ್ಠಾನದ ನಂತರ ಈ ವಿಷಯಗಳತ್ತ ಗಮನಹರಿಸಲಾಗುವುದು. ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಬೇಕಾದವರು ಕೃಷಿ ಜಮೀನು ಖರೀದಿಗೆ ಅವಕಾಶ ಲಭಿಸಿದೆ. ಇದರಿಂದಾಗಿ ಸಾಗುವಳಿ ಜಮೀನು ಪ್ರಮಾಣ ಕ್ಷೀಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಆಪತ್ತು ಎದುರಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.

    ವಾಸ್ತವಿಕ ಬೆಂಬಲ ಬೆಲೆಗೆ ವರ್ತಲ ನಿಧಿ ಸ್ಥಾಪನೆ

    ಕೃಷಿ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥಿತ ಮಾರುಕಟ್ಟೆ, ವಾಸ್ತವಿಕ ನೆಲೆಗಟ್ಟಿನಲ್ಲಿ ಬೆಂಬಲ ಬೆಲೆ ನಿಗದಿಪಡಿಸಿದರೆ ರೈತರ ಬದುಕು ಸುಧಾರಣೆಯ ಹಾದಿ ಹಿಡಿಯಲಿದೆ ಎಂದು ಚೆಲುವರಾಯಸ್ವಾಮಿ ಖಾತರಿಪಡಿಸಿದರು. ಬಿತ್ತನೆಗೆ ಮುನ್ನವೇ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸುವುದು. ಇದಕ್ಕಾಗಿ ಎರಡರಿಂದ ಮೂರು ಸಾವಿರ ಕೋಟಿ ರೂ.ಗಳ ಆವರ್ತ ನಿಧಿ ಸ್ಥಾಪನೆ, ಪ್ರತಿ ವರ್ಷ ಬೆಂಬಲ ಬೆಲೆ ಪರಿಷ್ಕರಣೆಗೆ ಅವಕಾಶ ಮಾಡಿಕೊಳ್ಳಲಾಗುವುದು. ಕನಿಷ್ಠ ಬೆಂಬಲ ಬೆಲೆಗಿಂತ ಮುಕ್ತ ಮಾರುಕಟ್ಟೆ ದರ ಕಡಿಮೆಯಾದಾಗ ಸರ್ಕಾರದ ಮಧ್ಯೆ ಪ್ರವೇಶಿಸಿ ಖರೀದಿಸುವ ಪ್ರಕ್ರಿಯೆ ಸಕಾಲಿಕಗೊಳಿಸಲಾಗುವುದು. ನಾನೊಬ್ಬನೇ ಇದೆಲ್ಲ ಮಾಡಲಾಗದು, ಸಚಿವ ಸಂಪುಟದ ಬಲವೂ ಬೇಕು. ಮುಖ್ಯಮಂತ್ರಿ ಮುಂದೆ ಉದ್ದೇಶಿತ ಪ್ರಸ್ತಾವನೆ ಮಂಡಿಸುವೆ ಎಂದು ತಿಳಿಸಿದರು.

    ಆಂಧ್ರ ಪ್ರದೇಶದ ಮಾದರಿ ಅಧ್ಯಯನ

    ಕೃಷಿ ಜಮೀನಿನ ಫಲವತ್ತತೆ, ಜಲಸಂರಕ್ಷಣೆ, ಉತ್ಪಾದಕತೆ ಹಾಗೂ ಇಳುವರಿ, ಕಡಿಮೆ ನೀರಿನಲ್ಲಿ ಹೆಚ್ಚು ನೀರಾವರಿ, ತಂತ್ರಜ್ಞಾನ ಬಳಕೆ, ಮಾರುಕಟ್ಟೆ ವ್ಯವಸ್ಥೆ ವಿಷಯದಲ್ಲಿ ಆಂಧ್ರದ ಉಪಕ್ರಮಗಳು ಅನುಕರಣೀಯ ಎಂಬ ಮಾಹಿತಿಯನ್ನು ಅಧಿಕಾರಿ ವರ್ಗ ಹಂಚಿಕೊಂಡಿದೆ. ಶೀಘ್ರ ಅಲ್ಲಿಗೆ ಭೇಟಿ ನೀಡಿ ಅಧ್ಯಯನ ಮಾಡುವೆ. ರಾಜ್ಯದ ಹವಾಗುಣಕ್ಕೆ ಹೊಂದಿಕೊಳ್ಳುವ ಅಲ್ಲಿನ ಯಶಸ್ವಿ ಮಾದರಿ ಅನುಷ್ಠಾನ ಮಾಡಬೇಕೆಂಬ ಚಿಂತನೆಯಿದೆ ಎಂದರು.

    ನಿರ್ದಿಷ್ಟ ಖಾತೆಗಾಗಿ ಲಾಬಿ ಮಾಡಿಲ್ಲ, ಅಂತಹ ಜಾಯಮಾನವೂ ನನ್ನದಲ್ಲ. ಕೃಷಿ ಖಾತೆ ಅನಿರೀಕ್ಷಿತವಾಗಿ ದೊರೆತಿದೆ. ಮೊದಲ ಪರಿಶೀಲನಾ ಸಭೆಯಲ್ಲಿ ಸವಾಲುಗಳೇನೆಂದು ಗ್ರಹಿಸಿರುವೆ. ಸಿಎಂ, ಸಂಪುಟದ ಬೆಂಬಲದಿಂದ ಸಾಧನೆ ಮಾಡಿ ತೋರಿಸುವ ಛಲ, ವಿಶ್ವಾಸವಿದೆ.

    | ಎನ್. ಚೆಲುವರಾಯಸ್ವಾಮಿ ಕೃಷಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts